ವಿಶ್ವದಲ್ಲಿ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿರುವ ಪ್ರಮುಖ ಆರೋಗ್ಯ ಸವಾಲುಗಳಲ್ಲಿ ಕ್ಯಾನ್ಸರ್ ಮುಂಚೂಣಿಯಲ್ಲಿದೆ. ಜಗತ್ತಿನಾದ್ಯಂತ ಪ್ರತಿ ಐದು ಜನರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಬಾರಿಗೆ ಒಳಗಾಗುವ ಭೀತಿ ಎದುರಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಜಾಗತಿಕ ಸ್ಥಿತಿಗತಿ ವರದಿ-2026 ಎಚ್ಚರಿಸಿದೆ.
ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಸಹಯೋಗದೊಂದಿಗೆ ಬಿಡುಗಡೆ ಮಾಡಲಾದ ಇತ್ತೀಚಿನ ವರದಿಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿ ವರ್ಷ 2.6 ಕೋಟಿ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸುಮಾರು ಒಂದು ಕೋಟಿ ಮಂದಿ ಈ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ.
ಈ ಮಾರಕ ಕಾಯಿಲೆಯ ನಿಯಂತ್ರಣಕ್ಕೆ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮುಂಬರುವ 2050 ರ ವೇಳೆಗೆ ವಾರ್ಷಿಕ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಸುಮಾರು 3.5 ಕೋಟಿಗೆ ತಲುಪಲಿದೆ ಎಂದು ವರದಿ ಅಂದಾಜಿಸಿದೆ. ಇದರಿಂದಾಗಿ ಜಾಗತಿಕ ಆರೋಗ್ಯ ರಕ್ಷಣಾ ವ್ಯವಸ್ಥೆಗಳ ಮೇಲೆ ಭರಿಸಲಾಗದ ಆರ್ಥಿಕ ಹೊರೆ ಬೀಳಲಿದೆ. ಕ್ಯಾನ್ಸರ್ ರೋಗದಿಂದಾಗಿ ರೋಗಿಗಳು ಮಾತ್ರವಲ್ಲದೆ ಅವರ ಇಡೀ ಕುಟುಂಬವು ತೀವ್ರ ಶಾರೀರಿಕ, ಮಾನಸಿಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಪ್ರಸ್ತುತ ಲಕ್ಷಾಂತರ ಜನರಿಗೆ ಗುಣಮಟ್ಟದ ಚಿಕಿತ್ಸೆ ಸರಿಯಾದ ಸಮಯಕ್ಕೆ ಲಭ್ಯವಾಗುತ್ತಿಲ್ಲ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
