ದೆಹಲಿ: ಶಾಲೆಗಳಲ್ಲಿ ಮೂಲಭೂತ ನೈರ್ಮಲ್ಯ ಮತ್ತು ಸ್ವಚ್ಛತಾ ಸೌಲಭ್ಯಗಳಿಲ್ಲದ ಮಕ್ಕಳ ಸಂಖ್ಯೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನಿಸೆಫ್ (UNICEF) ಜಂಟಿ ಮೇಲ್ವಿಚಾರಣಾ ಕಾರ್ಯಕ್ರಮದ (JMP) ವರದಿ ಬಹಿರಂಗಪಡಿಸಿದೆ.
‘ಶಾಲೆಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆಯ ಪ್ರಗತಿ 2015-2025’ (Progress on drinking water, sanitation and hygiene in schools 2015-2025) ಹೆಸರಿನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಜಗತ್ತಿನಾದ್ಯಂತ ಶಾಲೆಗಳಲ್ಲಿ ಸರಿಯಾದ ನೈರ್ಮಲ್ಯ ಸೌಲಭ್ಯಗಳಿಲ್ಲದ ಒಟ್ಟು ಮಕ್ಕಳ ಪೈಕಿ ಐದನೇ ಒಂದು ಭಾಗದಷ್ಟು ಮಕ್ಕಳು ಭಾರತದಲ್ಲೇ ಇದ್ದಾರೆ.
ಪ್ರಪಂಚದಾದ್ಯಂತ ಶಾಲೆಗಳಲ್ಲಿ ಯಾವುದೇ ರೀತಿಯ ನೈರ್ಮಲ್ಯ ವ್ಯವಸ್ಥೆಯಿಲ್ಲದ ಮಕ್ಕಳ ಸಂಖ್ಯೆ 24.4 ಕೋಟಿಯಷ್ಟಿದ್ದು, ಇದರಲ್ಲಿ ಸುಮಾರು 5 ಕೋಟಿ ಮಕ್ಕಳು ಭಾರತದವರಾಗಿದ್ದಾರೆ. ಇನ್ನು ದೇಶದ ಶಾಲೆಗಳಲ್ಲಿ ಸರಿಸುಮಾರು 2.2 ಕೋಟಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ನೈರ್ಮಲ್ಯ ಸೇವೆಗಳು ತಲುಪುತ್ತಿಲ್ಲ ಎಂದು ವರದಿ ಎಚ್ಚರಿಸಿದೆ.
ಇದರೊಂದಿಗೆ, ಕುಡಿಯುವ ನೀರಿನ ಕೊರತೆಯೂ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ದೇಶದಲ್ಲಿ 1.2 ಕೋಟಿ ಮಕ್ಕಳಿಗೆ ಶಾಲೆಗಳಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಜಾಗತಿಕವಾಗಿ ಕುಡಿಯುವ ನೀರಿನ ವಂಚಿತ ಪ್ರತಿ 20 ಮಕ್ಕಳಲ್ಲಿ ಒಬ್ಬರು ಭಾರತೀಯರಾಗಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ವರದಿ ಮುನ್ನೆಲೆಗೆ ತಂದಿದೆ.
