Wednesday, June 19, 2024

ಸತ್ಯ | ನ್ಯಾಯ |ಧರ್ಮ

ನಾನೇಕೆ ಬಿಜೆಪಿ ವಿರುದ್ಧವೇ ಇಷ್ಟೊಂದು ವಿಡಿಯೋ ಮಾಡುತ್ತಿದ್ದೇನೆ?

“ಹೀಗೆ ಒಬ್ಬಿಬ್ಬರಿಗೆ ನನಗೆ ಅನ್ನಿಸಿದಾಗ ವಿವರಣೆ ನೀಡುವುದರ ಹೊರತಾಗಿ ಏನೂ ಮಾಡಲಾಗದ ಅಶಕ್ತಳು ನಾನು… ಯಾವತ್ತೋ ಒಂದು ದಿನ ನಾನೂ ಬಲಿಪಶುವಾಗಿ ಬಲಿಯಾಗಲಿದ್ದೇನೆ. ಇರಲಿ ಬಿಡಿ… ಅದು ಸಂಭವಿಸುವವರೆಗಾದರೂ ನಾನು ನನ್ನ ನೋವು ಮತ್ತು ಒಂಟಿತನವನ್ನು ದಾಖಲಿಸುತ್ತಾ ಹೋಗುತ್ತೇನೆ.” ಎನ್ನುತ್ತಾರೆ ತುಳಸಿ ಚಂದು. ಹೈದರಬಾದ್‌ ಮೂಲದ ಸ್ವತಂತ್ರ ಪತ್ರಕರ್ತರಾದ ಇವರ ನೋವಿನ ಆಳ ನಮ್ಮಂತವರ ನಿಲುವಿಗೆ ನಿಲುಕರಾದ್ದು. ಅವರ ಮೇಲೆ ಇತ್ತೀಚೆ ನಡೆದ ಆನ್ಲೈನ್‌ ದಾಳಿಯ ಹಿನ್ನಲೆಯಲ್ಲಿ ಅವರು ತನಗಿಂತಲೂ ತನ್ನ ದೇಶ ಸಾಗುತ್ತಿರುವ ದಿಕ್ಕಿನತ್ತ ನೋವಿನಿಂದ ನೋಡುತ್ತಾ ಬರೆದಿದ್ದಾರೆ. ಇದು ಅವರು ಮೂಲತಃ ತೆಲುಗಿನಲ್ಲಿ ಬರೆದಿದ್ದ ಬರೆಹದ ಕನ್ನಡ ಅನುವಾದ

ಯಾಕೆ ನಾನು ಬಿಜೆಪಿಯ ವಿರುದ್ಧವೇ ಇಷ್ಟೊಂದು ವಿಡಿಯೋಗಳನ್ನು ಮಾಡುತ್ತಿದ್ದೇನೆ? ತಮ್ಮ ಸ್ವಂತ ಮುಖವನ್ನು ತೋರಿಸದವರು ಫೇಕ್‌ ಅಕೌಂಟ್‌ ಮಾಡಿಕೊಂಡು ಕಮೆಂಟುಗಳಲ್ಲಿ, ಇನ್‌ಬಾಕ್ಸಿನಲ್ಲಿ ಅಸಹ್ಯಕರ ಸಂದೇಶಗಳನ್ನು ಕಳುಹಿಸುತ್ತಿದ್ದರೂ ನಾನ್ಯಾಕೆ ಈ ಕೆಲಸ ಮಾಡುತ್ತಿದ್ದೇನೆ? ಇಂಡಿಪೆಂಡೆಂಟ್‌ ಜರ್ನಲಿಸ್ಟ್‌ ಎಂದು ಕರೆದುಕೊಳ್ಳುವ ನಾನು ಬಿಜೆಪಿಯನ್ನು ಪ್ರಶ್ನಿಸುವ ವಿಡಿಯೋಗಳನ್ನೇ ಯಾಕೆ ಹೆಚ್ಚು ಹೆಚ್ಚು ಮಾಡುತ್ತಿದ್ದೇನೆ?

ನಾನು ಮಾಡಿರುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಅವುಗಳಲ್ಲಿ ನಾನು ಎಮ್‌ಐಎಮ್‌ ಕೂಡಾ ಬಿಜೆಪಿಯಂತಹದ್ದೇ ಪಕ್ಷ ಎಂದು ಹೇಳಿದ್ದೇನೆ. ಬಿಜೆಪಿಯನ್ನು ನಾನು ಏಕೆ ವಿರೋಧಿಸುತ್ತೇನೆ ಎನ್ನುವುದನ್ನು ಕೂಡಾ ಹೇಳಿದ್ದೇನೆ. ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳುವುದೆಂದರೆ ಜನರನ್ನು ಸಮನಾಗಿ ಕಾಣದಿರುವುದು ಎಂದೇ ಅರ್ಥ. ಬಿಜೆಪಿ ಮತ್ತು ಎಮ್‌ಐಎಮ್‌ ಎರಡರ ಡಿಎನ್‌ಎ ಒಂದೇ. ಬಿಜೆಪಿ ಒಂದು ದೊಡ್ಡ ದೇಹವಾದರೆ ಎಮ್‌ಐಎಮ್‌ ಅದರ ಬಾಲದಂತೆ.

ಜನರ ನಡುವೆ ದ್ವೇಷವನ್ನು ಪ್ರಚೋದಿಸುವುದಕ್ಕಿಂತಲೂ ಹೆಚ್ಚಿನ ಅಪಾಯವನ್ನು ಒಂದು ದೇಶಕ್ಕೆ ಯಾರೂ ಮಾಡಲು ಸಾಧ್ಯವಿಲ್ಲ. ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುವುದಾಗಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ದಿನದಿಂದ ಬಹುಸಂಖ್ಯಾತ ಧರ್ಮವು ಅಲ್ಪಸಂಖ್ಯಾತ ಧರ್ಮವನ್ನು ಮೂಲೆಗೆ ತಳ್ಳುತ್ತಿರುವುದು ವಿಶಾಲ ಎದೆಯ ರಾಜಕಾರಣದ ಗುರುತಿರಬಹುದೇ? ವಾಜಪೇಯಿ ಇಂತಹ ರಾಜಕಾರಣವನ್ನು ಮಾಡಿರಲಿಲ್ಲ. ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವುದು ನಿಮ್ಮ ಉದ್ದೇಶವಾಗಿದ್ದಲ್ಲಿ ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದಿತ್ತು. ಹಾಗಿದ್ದರೆ ನೀವು ಜಾತಿ ನಿರ್ಮೂಲನೆಗೆ ಕೈಗೊಂಡ ಕ್ರಮಗಳು ಯಾವುವು? ಬುಡಕಟ್ಟು ಸಮುದಾಯದ ರಾಷ್ಟ್ರಪತಿ, ಒಬಿಸಿ ಪ್ರಧಾನಿ ಇರುವ ರಾಷ್ಟ್ರದಲ್ಲಿ ಧರ್ಮ ರಾಜಕಾರಣ ಏಕೆ ಬೇಕು? ಧರ್ಮದ ಹೆಸರು ಹೇಳದೆ ನಿಮಗೆ ಏಕೆ ಒಂದೇ ಒಂದು ರಾಜ್ಯವನ್ನು ಕೂಡಾ ಗೆಲ್ಲಲು ಸಾಧ್ಯವಾಗುತ್ತಿಲ್ಲ?

ಹಿಂದೂ ಪಕ್ಷವೇ ಅಧಿಕಾರದಲ್ಲಿರುವಾಗ… 80 ಕೋಟಿ ಹಿಂದೂಗಳಲ್ಲಿ ಅಭದ್ರತೆಯ ಭಾವ ಹುಟ್ಟಿಸಿದವರು ಯಾರು? 75 ವರ್ಷಗಳಲ್ಲಿ ಇಲ್ಲದ ಅಭದ್ರತೆ ಈಗ ಹುಟ್ಟಿತೆ? ದೆಹಲಿಯಲ್ಲಿ ಒಬ್ಬ ಮುಸ್ಲಿಂ ಹಿಂದೂವನ್ನು ಕೊಂದರೆ ಅದನ್ನು ಕೊಲೆಯನ್ನಾಗಿ ನೋಡಲಾಗುವುದಿಲ್ಲ. ಅದನ್ನು ಹಿಂದೂಗಳ ಮೇಲೆ ಎಸಗಲಾದ ದಾಳಿಯನ್ನಾಗಿ ನೋಡಲಾಗುತ್ತದೆ. ಪ್ರತಿದಿನ ನೂರಾರು ಹಿಂದೂ ಹುಡುಗಿಯರು ಅವರ ಗಂಡಂದಿರು, ತಂದೆಯರು, ಸಹೋದರರು ಮತ್ತು ಪ್ರೇಮಿಗಳು ಅಪರಿಚಿತ ವ್ಯಕ್ತಿಗಳಿಂದ ಕೊಲ್ಲಲ್ಪಡುತ್ತಿದ್ದರೆ, ಈ ಕುರಿತು ಅವರು ಏಕೆ ಮಾತನಾಡುವುದಿಲ್ಲ? ದೇಶದಲ್ಲಿ ಉಗ್ರವಾದ ಇರಬಾರದು. ಹಾಗೆಂದು ನಿಮ್ಮ ಸ್ನೇಹಿತನನ್ನೋ, ನನ್ನ ಪಕ್ಕದ ಮನೆಯ ಸಾಧಾರಣ ಮುಸ್ಲಿಮನನ್ನೋ ದೋಷಿಗಳನ್ನಾಗಿ ತೋರಿಸುವುದು ಸರಿಯೇ? ಈಗ ಬೇರೆ ದೇಶಗಳಲ್ಲೂ ಹಿಂದೂಗಳಿದ್ದಾರೆ ಅಲ್ಲಿ ಏನಾದರೂ ಒಬ್ಬ ಹಿಂದೂ ಕ್ರೈಂ ನಡೆಸಿದಾಗ ಆ ದೇಶದ ಜನರು ಹಿಂದೂಗಳೆಲ್ಲರನ್ನೂ ಅಪರಾಧಿಗಳನ್ನಾಗಿ ನೋಡಿದರೆ ಆಗ ನಮಗೆ ಏನನ್ನಿಸುತ್ತದೆ? ಈ ದೇಶದಲ್ಲಿ ನಡೆಯುವ ಪ್ರತಿ ಘಟನೆಯೂ ಏಕೆ ಧಾರ್ಮಿಕ ಆಯಾಮವನ್ನು ಪಡೆಯುತ್ತಿದೆ? ಬಾಲಸೋರ್‌ ಎನ್ನುವಲ್ಲಿ ರೈಲು ಅಪಘಾತವಾದಾಗ ಅಂದು ಶುಕ್ರವಾರ ಮತ್ತು ಹಳಿಯ ಪಕ್ಕದಲ್ಲೇ ಮಸೀದಿ ಇತ್ತು ಎಂದು ಸುದ್ದಿ ಹರಿಯಬಿಡಲಾಯಿತು. ಆದರೆ ಅದು ಮಸೀದಿಯಾಗಿರಲಿಲ್ಲ ಬದಲಿಗೆ ಅದೊಂದು ಇಸ್ಕಾನ್‌ ಮಂದಿರವಾಗಿತ್ತು. ಕಡೆಗೆ ಆ ಸ್ಟೇಷನ್‌ ಮಾಸ್ಟರ್‌ ಮುಸ್ಲಿಂ ಆಗಿದ್ದ ಕಾರಣ ಆಕ್ಸಿಡೆಂಟ್‌ ಆಯಿತು ಎಂದರು. ಆದರೆ ಸ್ಟೇಷನ್‌ ಮಾಸ್ಟರ್‌ ಮೊಹಾಂತಿ ಎನ್ನುವ ಹೆಸರಿನವರಾಗಿದ್ದರು ಎಂದು ರೈಲ್ವೇ ಇಲಾಖೆ ಸ್ಪಷ್ಟನೆ ನೀಡಬೇಕಾಗಿ ಬಂತು. ಇಷ್ಟೆಲ್ಲ ಆದ ಮೇಲೂ ಇದು ಅಲ್ಲಿಗೇ ನಿಲ್ಲಲಿಲ್ಲ ಮತ್ತೆ ಇಂಜಿನಿಯರ್‌ ಮುಸ್ಲಿಂ ಎನ್ನಲಾಯಿತು. ಇದನ್ನೂ ಸುಳ್ಳು ಎನ್ನಲು ಮತ್ತೆ ರೇಲ್ವೆ ಇಲಾಖೆ ಸ್ಪಷ್ಟೀಕರಣ ನೀಡಬೇಕಾಯಿತು. ಅಂದ್ರೆ ಒಂದು ವಿಷಯಕ್ಕೆ ಇಷ್ಟು ಸಲ ಧಾರ್ಮಿಕ ದೃಷ್ಟಿಕೋನ ನೀಡಿ ಇಷ್ಟು ಸಲ ಅಪಪ್ರಚಾರ ಮಾಡುತ್ತಾರೆಂದರೆ ಜನರ ಮೆದುಳಿನಲ್ಲಿ ಹೊಕ್ಕಿರುವ ವಿಷದ ಪ್ರಮಾಣ ಎಷ್ಟಿರಬಹುದು? ಇಂದು ಪರಿಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ ಸಣ್ಣ ಮಕ್ಕಳೂ ಧರ್ಮದ ಕುರಿತು ಮಾತನಾಡತೊಡಗಿದ್ದಾರೆ. ಹಾಗಾದರೆ ದೇಶವನ್ನು ಈ ಸ್ಥಿತಿ ತಳ್ಳಿದವರು ಯಾರು? ಧರ್ಮದ ವಿಷಯದಲ್ಲಿ ಮುಂದಿನ ಪೀಳಿಗೆಗಳ ಭವಿಷ್ಯವನ್ನು ಕತ್ತಲೆಗೆ ದೂಡಲಾಗಿದೆ. ಈ ದ್ವೇಷದ ಕಿಚ್ಚಿನಲ್ಲಿ ಸುಟ್ಟು ಹೋಗುವುದು ನಮ್ಮದೇ ಮಕ್ಕಳಲ್ಲವೆ? ನಾವು ನಮ್ಮ ದೇಶವನ್ನು ಸಿರಿಯಾ, ಅಫ್ಘಾನಿಸ್ಥಾನ, ಪಾಕಿಸ್ಥಾನದಂತಹ ದೇಶಗಳ ಸಾಲಿನಲ್ಲಿ ನೋಡಬೇಕೆ? ಕುಟುಂಬಗಳಲ್ಲಿ ಮತ್ತು ಮಕ್ಕಳ ಮನಸ್ಸಿನಲ್ಲಿ ಬಿತ್ತಲಾದ ದ್ವೇಷದ ಪರಿಣಾಮ ಏನು ಎನ್ನುವುದನ್ನು ಆಡಳಿತಗಾರರು ಯೋಚಿಸಿದ್ದಾರೆಯೇ? ಅವರು ಯೋಚಿಸುವುದು ಇಂದಿನ ದ್ವೇಷ ನಾಳೆ ಎಷ್ಟು ಮತಗಳನ್ನು ತರಲಿದೆಯೆನ್ನುವುದನ್ನು ಮಾತ್ರ. ಅಲ್ಲಿಗೆ ಅವರ ಆಲೋಚನೆ ನಿಂತು ಹೋಗುತ್ತದೆ. ದೇಶದಲ್ಲಿ ಮತ್ತೊಂದು ಚುನಾವಣೆ ಬರುತ್ತದೆ!

ಇಂದು ನಮಗೆ ಬೇಕಿರುವುದು ಅಮೇರಿಕಾ, ಚೈನಾ ದೇಶಗಳ ಜೊತೆ ಸ್ಪರ್ಧಿಸಬಲ್ಲ ದೇಶವಲ್ಲ. ಹಾಗಿದ್ದರೆ ನಮಗೆ ಬೇಕಿರುವುದು ಹಿಂದೂರಾಷ್ಟ್ರವಲ್ಲವೆ? ಹಾಗಾದರೆ ಹಿಂದೂ ರಾಷ್ಟ್ರವಾದರೆ ಏನಾಗುತ್ತದೆ? ವಿದೇಶದಲ್ಲಿರುವ ರಾಜಕಾರಣಿಗಳ ಮಕ್ಕಳು ಮ್ತತೆ ಇಲ್ಲಿ ಬಂದು ನೆಲೆಸುತ್ತಾರೆಯೇ? ಒಬ್ಬ ಜನಸಾಮನ್ಯನ ಪರಿಸ್ಥಿತಿ ಬದಲಾಗುತ್ತದೆಯೇ? ಹೆಚ್ಚೆಂದರೆ ಶಾಲಾ ಮಕ್ಕಳ ಪಠ್ಯದ ಸಿಲಬಸ್‌ ಬದಲಾಗಬಹುದು. ಇಂಗ್ಲಿಷ್‌ ಕಡಿಮೆಯಾಗಿ ಅದರ ಜಾಗದಲ್ಲಿ ಸಂಸ್ಕೃತ ಹಿಂದಿ ಬಂದು ಕೂರಬಹುದು. ಅದು ನಡೆದಲ್ಲಿ ನಾವು ಸಣ್ಣ ಸಣ್ಣ ವಿಷಯಗಳನು ಓದುವುದಕ್ಕೂ ಹೊರದೇಶಕ್ಕೆ ಹೋಗಬೇಕಾಗಿ ಬರಬಹುದು. ಇದೇನಾ ನಮಗೆ ಬೇಕಿರುವುದು?

ನಾವು ಜಾತಿಧರ್ಮದ ಬೇಧವಿಲ್ಲದ ದೇಶವನ್ನು ಕಟ್ಟಬೇಕೋ ಅಥವಾ ಇವುಗಳ ಹೆಸರಿನಲ್ಲಿ ಪರಸ್ಪರ ಕಚ್ಚಾಡುವ ಜನರ ದೇಶವನ್ನು ಕಟ್ಟಬೇಕೋ? ಕೇರಳದಲ್ಲಿ 32 ಸಾವಿರ ಹೆಣ್ಣುಮಕ್ಕಳು ಐಸಿಸ್‌ ಸೇರಿದರೆ? ಹಾಗೆ ಸೇರಿದ್ದರೆ ಅಷ್ಟೇ ಹೆಣ್ಣು ಮಕ್ಕಳು ಕಾಣೆಯಾದ ಬಗ್ಗೆ ಮಿಸ್ಸಿಂಗ್‌ ಕೇಸ್‌ ದಾಖಲಾಗಬೇಕಿತ್ತಲ್ಲವೆ? ಗುಜರಾತಿನಲ್ಲಿ 40 ಸಾವಿ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಆಂಧ್ರ, ತೆಲಂಗಾಣದಲ್ಲೂ ಸಾವಿರಾರು ಹೆಣ್ಣುಮಕ್ಕಳು ಕಾಣೆಯಾಗುತ್ತಾರೆ. ಅವರೆಲ್ಲ ಏನಾದರು? ಕೇರಳದಲ್ಲಿ ಈವರೆಗೆ ಕೇವಲ ಮೂರು ಕೇಸುಗಳು ದಾಖಲಾಗಿವೆ. ಎಂದರೆ ಉಳಿದ 31,997 ಪ್ರಕರಣಗಳು ಸುಳ್ಳು. ಅಷ್ಟೊಂದು ಜನರು ಸೇರಿದ್ದೇ ಆಗಿದ್ದಲ್ಲಿ ಎಷ್ಟು ಪೋಷಕರು ಈ ಕುರಿತು ಜನರ ಮುಂದೆ ಬರಬೇಕಿತ್ತಲ್ಲವೆ? ಬಂದಿಲ್ಲ ಎಂದ ಮೇಲೆ ಯಾಕೆ ಇಂತಹ ಪ್ರಚಾರ? ಆಜಾದ್‌ ಕಾಶ್ಮೀರ ಸಮಸ್ಯೆ ಕಾಶ್ಮೀರದಲ್ಲಿದೆ. ಅಲ್ಲಿನ ಸಾಮಾನ್ಯ ಹಿಂದೂ ಮುಸ್ಲಿಮರು ಹೊಡೆದಾಡಿಕೊಳ್ಳುತ್ತಿಲ್ಲ. ಭಯೋತ್ಪಾದಕರು ಜನಸಾಮಾನ್ಯರಿಗಿಂತ ಭಿನ್ನ. ಇಂತಹ ಮನಸ್ಥಿತಿಯ ಧರ್ಮವನ್ನು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಂಡ, ಇತರ ಧರ್ಮದವರನ್ನು ಅತಿಯಾಗಿ ದ್ವೇಷಿಸುವ ಜನರು ಹಿಂದೂ, ಕ್ರಿಶ್ಚಿಯನ್ನರಲ್ಲೂ ಇದ್ದಾರೆ. ಇದು ವ್ಯಕ್ತಿಗಳ ಸಮಸ್ಯೆ. ಇಲ್ಲಿ ಏಕೆ ರಾಜಕೀಯ ತರುತ್ತಿದ್ದೀರಿ ಎನ್ನುವುದು ಜನರ ಪ್ರಶ್ನೆಯಾಗಿದೆ. ಇದೇ ಹಿಂದೂ ಪರವೆಂದು ಹೇಳಿಕೊಳ್ಳುವ ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್‌ ಪರ ನೀತಿಗಳು ಮತ್ತು ಭರವಸೆಯ ಮೂಲಕ ಅಧಿಕಾರ ಹಿಡಿದಿದೆ. ಎಂದರೆ ಎಲ್ಲಿ ಯಾರು ಬಹುಮತ ಹೊಂದಿದ್ದಾರೋ ಅವರನ್ನು ಧ್ರುವೀಕರಿಸಿ ಅಧಿಕಾರಕ್ಕೆ ಬರುವುದು ಇವರ ತಂತ್ರ. ಹಾಗಿದ್ದರೆ ನಾವು ಬಯಸಿದ್ದು ಇದನ್ನೇ?

ಅಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದೆ. ಇತ್ತ ಪ್ರಧಾನಿಯವರ ಬಾಯಿಯಿಂದ ಕನಿಷ್ಠ ಶಾಂತಿ ಕಾಪಾಡಿ ಎನ್ನುವ ಹೇಳಿಕೆ ಕೂಡಾ ಬಂದಿಲ್ಲ. ಕೊರೋನಾ ಸಮಯದಲ್ಲಿ ಟಿವಿಯಲ್ಲಿ ಪದೇಪದೇ ಬರುತ್ತಿದ್ದ ಇವರು ಕನಿಷ್ಟ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಾದರೂ ಆ ಜನರೊಡನೆ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಬಹುದಿತ್ತಲ್ಲವೆ? ಯಾಕೆ ಹೇಳುತ್ತಿಲ್ಲ? ಅಲ್ಲಿ ಸಾಯುತ್ತಿರುವುದು ಕೇವಲ ಮತಾಂತರಿತ ಕ್ರಿಶ್ಚಿಯ್ನನರು ಮಾತ್ರವಲ್ಲ. ಮೈತೇಯಿ ಹಿಂದೂಗಳೂ ಸಾಯುತ್ತಿದ್ದಾರೆ. ಮೈತೇಯಿ ಹಿಂದೂಗಳ ಆಸ್ತಿಗಳನ್ನೂ ನಾಶಪಡಿಸಲಾಗುತ್ತಿದೆ. ಇದನ್ನು ಹಿಂದೂ ದೃಷ್ಟಿಯಿಂದ ನೋಡಿದರೂ ಈ ವಿಷಯದ ಕುರಿತು ಪ್ರಧಾನಿ ಮಾತನಾಡಬೇಕಿತ್ತು. ಕಡೇಪಕ್ಷ ಬುಡಕಟ್ಟು ಸಮುದಾಯದವರೇ ಆದ ರಾಷ್ಟ್ರಪತಿಯವರಿಂದಲಾದರೂ ಈ ಮಾತನ್ನು ಹೇಳಿಸಬಹುದಿತ್ತು. ಯಾಕೆ ಹೇಳಿಸಲಿಲ್ಲ? ನನಗೆ ಗೊತ್ತು ನಾನು ಇದನ್ನು ಕೇಳಿದರೂ, ನಿಮ್ಮ ದೃಷ್ಟಿಯಲ್ಲಿ ನಾನು ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋಧಿಯಾಗುತ್ತಿದ್ದೇನೆ. ಆದರೆ ಇದನ್ನೆಲ್ಲ ಸತ್ತಂತಿರುವ ಕಾಂಗ್ರೆಸ್‌ ಪಕ್ಷದ ಬಳಿ ಕೇಳಲು ಸಾಧ್ಯವೆ? ಅಧಿಕಾರದಲ್ಲಿರುವವರನ್ನೇ ಅಲ್ಲವೆ ನಾವು ಇದನ್ನೆಲ್ಲ ಕೇಳಬೇಕಿರುವುದು?

ಪತ್ರಕರ್ತರಾದ ತುಳಸೀ ಚಂದು

ಹೋಗಲಿ ದೇಶದ ಬಹುಸಂಖ್ಯಾತರಿಗಾಗಿಯಾದರೂ ಈ ಸರ್ಕಾರ ಏನು ಮಾಡಿದೆ? ಧರ್ಮದ ಕಾರಣಕ್ಕಾಗಿ ಈ ಸರ್ಕಾರವನ್ನು ಆರಿಸಿ ಯಾವುದಾದರೂ ಜನಸಾಮಾನ್ಯನ ಬಳಿ ಇಷ್ಟು ವರ್ಷಗಳಲ್ಲಿ ನಿನಗೆ ದೊರೆತ ಮೂರು ದೊಡ್ಡ ಪ್ರಯೋಜನಗಳ ಕುರಿತು ಹೇಳು ಎಂದರೆ ಅವನು ಏನು ಹೇಳುತ್ತಾನೆ?

ಪೆಟ್ರೋಲ್‌ ಮತ್ತೆ ಗ್ಯಾಸ್‌ ವಿಷಯ ಬಿಡಿ… ಈಗ ತೆರಿಗೆ ಪರಿಧಿಗೆ ಒಳಪಡದ ವಸ್ತುಗಳು ಎಷ್ಟಿವೆ?

ರೈಲುಗಳಲ್ಲಿ ಜನಸಾಮಾನ್ಯರು ಪ್ರಯಾಣಿಸುವ ಜನರಲ್‌ ಬೋಗಿಗಳ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಪಿಂಚಣಿಯನ್ನು ಕೂಡಾ ವಿವಿಧ ಕಡಿತಗಳ ಮೂಲಕ ನೇರವಾಗಿ ಸಂಗ್ರಹಿಸುತ್ತಿದ್ದಾರೆ.

ಹೊಸ ಕೈಗಾರಿಕೆಗಳನ್ನು ಕಟ್ಟದಿದ್ದರೆ ಬೇಡ. ಇರುವವುಗಳನ್ನು ಕೂಡಾ ಏಕೆ ಮಾರುತ್ತಿದ್ದೀರಿ ಎಂದು ಕೇಳಲೇಬೇಕಲ್ಲವೆ? ಇದು ಒಬ್ಬ ನಾಗರಿಕನಿಗೆ ಇರುವ ಕನಿಷ್ಟ ಹಕ್ಕಲ್ಲವೆ? ನಿಮಗೂ ಕೇಳುವ ಹಕ್ಕಿದೆ ಆದರೆ ನೀವು ಕೇಳುವುದಿಲ್ಲ. ಕೇವಲ ನನಗಿರುವ ಹಕ್ಕನ್ನು ಬಳಸಿಕೊಂಡರೆ ನಾನು ಹಿಂದೂ ವಿರೋಧಿಯೇ?

ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು ಗುಜರಾತ್ ಮಾದರಿಯನ್ನು ನೋಡಿಯೇ ಹೊರತು ಧರ್ಮವನ್ನು ನೋಡಿಯಲ್ಲ. ಧರ್ಮದ ಹೆಸರಿನಲ್ಲಿ ಮತ ಕೇಳುವುದಿದ್ದರೆ 2014ರಲ್ಲಿ ಆಡ್ವಾಣಿಯವರನ್ನು ತೋರಿಸಿ ಮತ ಕೇಳಿರುತ್ತಿದ್ದರು. ಆದರೆ ಅವರು ಹೇಳಿದ್ದು ಗುಜರಾತ್ ಪ್ರಕಾಶಿಸುತ್ತಿದೆ. ಗುಜರಾತಿನ ಹಾಗೆ ಭಾರತವೂ ಪ್ರಕಾಶಿಸಬೇಕೆಂದರೆ ಮೋದಿ ಬರಬೇಕು ಎಂದು.

ಸರಿ, ಮೋದಿ ಬಂದರು. ಕಪ್ಪು ಹಣ ಬಂತೇ? ನೋಟ್‌ ಬ್ಯಾನ್‌ ನಂತರ ಮತ್ತೆ ಕಪ್ಪುಹಣ ಪತ್ತೆಯಾಗಲೇ ಇಲ್ಲವೆ? ಈಗ 2,000 ಮುಖಬೆಲೆಯ ನೋಟುಗಳನ್ನು ಮತ್ತೆ ಅಮಾನ್ಯಗೊಳಿಸಲಾಗಿದೆ. ಮತ್ತೆ ಒಬ್ಬೊಬ್ಬರ ಅಕೌಂಟಿಗೆ ಹದಿನೈದು ಲಕ್ಷ ಹಾಕುವ ಮಾತು ಎಲ್ಲಿಗೆ ಹೋಯಿತು? ಹೀಗೆಲ್ಲ ಯಾರೂ ಕೇಳಬಾರದು ಅಲ್ಲವೆ? ಕೇಳಿದರೆ, ದೇಶದ್ರೋಹಿ ರಾಷ್ಟ್ರ ವಿರೋಧಿ ಮತ್ತು ದೇಶದ್ರೋಹಿ ಹಿಂದೂ ವಿರೋಧಿ.

ಜಿಎಸ್ಟಿಯಿಂದಾಗಿ ಕೇಂದ್ರದ ಆದಾಯ ಹೆಚ್ಚಾಗಿದೆ. ಆದರೆ ಕೈಗಾರಿಕೆಗಳು ಮುಚ್ಚಿಹೋಗಿವೆ. ಸಣ್ಣ ಉದ್ಯಮಗಳು ನಷ್ಟದಲ್ಲಿವೆ. ನೀವು ಸಣ್ಣ ಹೋಟೆಲ್ಲಿನಲ್ಲಿ ಇಡ್ಲಿ ತಿಂದರೂ ಜಿಎಸ್ಟಿ ಹೇರಲಾಗುತ್ತಿದೆ.

ನಾವು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದರು. ಇಂದು ಪ್ರತಿಯೊಂದು ಸರ್ಕಾರಿ ಇಲಾಖೆಯಲ್ಲಿ ಸಾವಿರಾರು ಉದ್ಯೋಗಗಳು ಖಾಲಿಯಿವೆ. ನಮ್ಮ ದೇಶದ ನೈಸರ್ಗಿಕವಾದ ದೊಡ್ಡ ಜನಸಂಖ್ಯೆಯ ಸಾಮರ್ಥ್ಯದ ಆಧಾರದ ಮೇಲೆ, ದೊಡ್ಡ ಕಂಪನಿಗಳು ಶಿಕ್ಷಣಕ್ಕೆ ನಾವು ನೀಡುತ್ತಿರುವ ಪ್ರಾಮುಖ್ಯತೆಯನ್ನು ನಗದೀಕರಿಸಲು ಅಗ್ಗದ ಕಾರ್ಮಿಕರನ್ನು ಹುಡುಕಿಕೊಂಡು ಇಲ್ಲಿಗೆ ಬಂದಿವೆ. ಇದರಿಂದಾಗಿ ಖಾಸಗಿ ಉದ್ಯೋಗಗಳು ಹೆಚ್ಚಾಗಿವೆ. ಆದರೆ ಸರ್ಕಾರಿ ಉದ್ಯೋಗಗಳು? ಇಂದು ದೇಶದಲ್ಲಿ ನಾವು ನಿರುದ್ಯೋಗಿಗಳು ಎಂದು 29 ಕೋಟಿ ಜನರು ಸರ್ಕಾರದಲ್ಲಿ ನೋಂದಾಯಿಸಿಕೊಂಡಿದ್ದಾರೆ.? ಇದಕ್ಕೆ ನೋಂದಾಯಿಸಿಕೊಳ್ಳದವರನ್ನು ಸೇರಿಸಿದರೆ ಈ ಸಂಖ್ಯೆ ಎಲ್ಲಿಗೆ ತಲುಪಬಹುದು?

ಕೆಲವೇ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದಾಗಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಹೆಚ್ಚಾಗಿದೆ. ಇಷ್ಟು ಎತ್ತರಕ್ಕೇರಿರುವ ಆ ಇಬ್ಬರು ಕೈಗಾರಿಕೋದ್ಯಮಿಗಳಿಗೆ ಏನಾದರೂ ಆದರೆ, ದೇಶದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇದಕ್ಕೆ ಯಾರು ಜವಬ್ದಾರರು?

ಗ್ಯಾಸ್‌ ಮತ್ತು ಪೆಟ್ರೋಲ್‌ ಬೆಲೆಯೇರಿಕೆ ಯಾರ ಮೇಲೆ ಪರಿಣಾಮ ಬೀರಿದೆ? ನೀವು ಹಳ್ಳಿಗಳಿಗೆ ಹೋದಾಗ ಅಷ್ಟೊಂದು ಸೌದೆ ಏಕೆ ರಾಶಿ ಹಾಕಿಕೊಂಡಿದ್ದೀರಿ ಎಂದು ಅಲ್ಲಿನ ಮಹಿಳೆಯರ ಬಳಿ ಕೇಳಿ. ಅವರು ಈ ಪ್ರಶ್ನೆಗೆ ಉತ್ತರಿಸುತ್ತಾರೆ.

ಸುಮ್ಮನೆ ಒಮ್ಮೆ ನಿಮ್ಮ ಫೋನ್‌ ನೋಡಿ. ಅದರಲ್ಲಿ ಮೋದಿಯಿಂದಾಗಿ ದೇಶ ಪ್ರಕಾಶಿಸುತ್ತಿದೆ ಎನ್ನುವ ಬಿಜೆಪಿ ಐಟಿ ಸೆಲ್ಲಿನ ಎಷ್ಟು ಸಂದೇಶಗಳಿವೆ ಎನ್ನುವುದನ್ನು ಗಮನಿಸಿ. ಹಾಗೆಯೇ ಇತರ ಧರ್ಮಗಳ ವಿರುದ್ಧ ದ್ವೇಷ ಸಾರುವ ಸಂದೇಶಗಳೆಷ್ಟಿವೆ ಎನ್ನುವುದನ್ನೂ ಗಮನಿಸಿ.

ಈಗ ಆಫೀಸುಗಳಿಗೆ ಹೊಸದಾಗಿ ಕೆಲಸಕ್ಕೆ ಸೇರುವವರು ತಮ್ಮ ಕ್ವಾಲಿಫಿಕೇಷನ್‌ ಕುರಿತು ಯೋಚಿಸುವುದಿಲ್ಲ. ಅವರು ತಮ್ಮ ಅಕ್ಕಪಕ್ಕದವರ ಸಿದ್ಧಾಂತ ಮತ್ತು ಧರ್ಮಗಳ ಕುರಿತು ತಲೆಕೆಡಿಸಿಕೊಳ್ಳತೊಡಗಿದ್ದಾರೆ. ಅವರು ಮುಸ್ಲಿಂ ಆಗಿರಲಿ, ಕ್ರಿಶ್ಚಿಯನ್‌ ಆಗಿರಲಿ ಹಿಂದೂಗಳು ಅವರನ್ನು ದ್ವೇಷಿಸುತ್ತಾರೆ. ತಲೆಗೆ ಸ್ಕಾರ್ಫ್‌ ಧರಿಸಿದವರನ್ನು ಕಂಡರೆ ಒಬ್ಬ ಹಿಂದೂ ಅಥವಾ ಕ್ರಿಶ್ಚಿಯನ್‌ ಹೆದರಿ ಹೋಗುತ್ತಾನೆ. ನಮ್ಮ ಸ್ನೇಹಿತರಲ್ಲಿನ ಆ ಅಭದ್ರತೆಗೆ ಯಾರು ಕಾರಣ? ಅದರ ಅಗತ್ಯವೇನಿದೆ?

ಹೋಗಲಿ ದೇವಾಲಯಗಳ ವಿಷಯದಲ್ಲಿ ಏನು ಮಾಡಿದರು? ಅಯೋಧ್ಯೆಯಲ್ಲಿನ ರಾಮಂದಿರವೊಂದೇ ಅಲ್ಲ ಈ ದೇಶದಲ್ಲಿರುವುದು. ಅಷ್ಟೇ ವಿಶಿಷ್ಟವಾಗಿರುವ ರಾಮನ ದೇವಸ್ಥಾನ ಕಡಪ ಜಿಲ್ಲೆಯ ವೊಂಟಿಮಿಟ್ಟದಲ್ಲಿದೆ. ಭದ್ರಾದ್ರಿ ರಾಮ ದೇವಸ್ಥಾನವಿದೆ… ಇಲ್ಲಿಗೆ ಯಾವ ಸಹಾಯ ಮಾಡಿದರು? ಒಂದು ದೇವಸ್ಥಾನ ತೋರಿಸುತ್ತಾ ದೇಶದಲ್ಲಿನ ಅಷ್ಟೂ ದೇವಸ್ಥಾನಗಳನ್ನು ನಾಶಪಡಿಸುತ್ತಿರುವವರು ಯಾರು?

ಇಂದು ಪರಿಸ್ಥಿತಿ ಎಷ್ಟು ಶೋಚನೀಯವೆಂದರೆ ಹಿಂದೆ ಜನ ಸಾಮಾನ್ಯ ಹಿಂದೂಗಳು ಸರ್ಕಾರದ ವಿರುದ್ಧ ಪ್ರತಿಭಟಿಸಿ ಬೀದಿಗಿಳಿದು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದರು. ಈಗ ಯಾರಾದರೂ ಅಂತಹ ಧೈರ್ಯ ಮಾಡಿದರೆ, ಹಿಂದೂವಾಗಿ ಹುಟ್ಟಿ ಹಿಂದೂಗಳನ್ನು ಪ್ರಶ್ನಿಸಿದರೆ, ನೀವು ದೇಶದ್ರೋಹಿ ಅಥವಾ ಹಿಂದೂ ದ್ರೋಹಿ. ನಿಮ್ಮ ಮಗ/ಪತ್ನಿ ಮುಸ್ಲಿಂ, ನೀವು ಕನ್ವರ್ಟೆಡ್ ಕ್ರಿಶ್ಚಿಯನ್ ಎನ್ನಲಾಗುತ್ತದೆ…

ಇಂದಿನ ಯುವಕರ ಮೆದುಳುಗಳು (ದೊಡ್ಡ ಮನುಷ್ಯರ ಮಕ್ಕಳಲ್ಲ) ಉತ್ತಮ ಭವಿಷ್ಯದ ಕುರಿತಾಗಲಿ, ವೈಜ್ಞಾನಿಕ ದೃಷ್ಟಿಕೋನದ ಕುರಿತಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರು ತಾವು ನಂಬುವ ಮತ್ತು ಅವರನ್ನು ಪ್ರಚೋದಿಸುತ್ತಿರುವ ಧರ್ಮವನ್ನು ರಕ್ಷಿಸುವ ಹಂತಕ್ಕೆ ಬಂದಿದ್ದಾರೆ. ಲಕ್ಷಾಂತರ ಮೆದುಳುಗಳು ಧರ್ಮದ ಸುತ್ತಲೇ ಸುತ್ತುತ್ತಿರುವಾಗ ಇದಕ್ಕೆ ಕಾರಣವಾಗುತ್ತಿರುವ ಒಂದೆರಡು ಮತಾಂಧ ಪಕ್ಷಗಳನ್ನು ಪ್ರಶ್ನಿಸುವುದು ಕಷ್ಟ… ಮತ್ತದು ಅಪಾಯಕಾರಿ ಎನ್ನುವುದು ಸಹ ನನಗೆ ಗೊತ್ತು. ಈ ದಾರಿ ಎಷ್ಟು ಅಪಾಯಕರವಾದುದು ಎನ್ನುವುದರ ಅರಿವು ನನಗಿದೆ. ಒಂದಲ್ಲ ಒಂದು ದಿನ ಅಮಾಯಕ ಯುವಕನೊಬ್ಬ ತಾನು ಪ್ರೀತಿಸುವ ಪಕ್ಷ ಹುಟ್ಟು ಹಾಕಿದ ದ್ವೇಷವನ್ನು ಕತ್ತಿಯಾಗಿಯೋ, ಬುಲೆಟ್‌ ಮಾರ್ಪಾಡು ಮಾಡಿಕೊಂಡು ನನ್ನ ಮೇಲೆ ಎರಗಲಿದ್ದಾನೆ ಎನ್ನುವುದರ ಅರಿವೂ ಇದೆ… ಹಾಗೆಂದು ಕೋಟ್ಯಂತರ ಯುವಕರು ಮತಾಂಧತೆಯ ಜಾರು ಹಾದಿಯಲ್ಲಿ ಸಾಗುವುದನ್ನು ನೋಡಿಕೊಂಡು ಸುಮ್ಮನಿರುವುದು ನನ್ನಿಂದ ಸಾಧ್ಯವಿಲ್ಲ. ಹೀಗಾಗಿಯೇ ನನ್ನ ಮಿತಿಯಲ್ಲಿ ಸಾಧ್ಯವಿರುವುದನ್ನು ನಾನು ಮಾಡುತ್ತಿದ್ದೇನೆ. ಯಾವುದೇ ದೇಶಕ್ಕೆ ದ್ವೇಷ ಬಹಳ ಅಪಾಯಕಾರಿಯೆನ್ನುವುದನ್ನು ಹೇಳಿದ್ದಕ್ಕಾಗಿ ನನ್ನನ್ನು ದ್ವೇಷಿಸಲಾಗುತ್ತಿದೆ. ನನ್ನ ಫೋಟೊಗಳನ್ನು ಮಾರ್ಫಿಂಗ್‌ ಮಾಡಲಾಗುತ್ತಿದೆ. ನನ್ನ ಕುರಿತು ಬಾಯಿಗೆ ಬಂದಂತೆ ಮಾತನಾಡಲಾಗುತ್ತಿದೆ. ಇರಲಿ ಬಿಡಿ… ನಾನು ಯಾವುದೇ ಪಕ್ಷದ ಬೆಂಬಲಿಗಳಲ್ಲದ ಕಾರಣ ನನ್ನನ್ನು ರಕ್ಷಿಸಲು ಯಾವುದೇ ಪಕ್ಷ ಮುಂದೆ ಬರುವುದಿಲ್ಲ. ನನ್ನ ಜಾತಿ ಯಾವುದು ಎಂದು ಯಾರಿಗೂ ತಿಳಿದಿಲ್ಲದ ಕಾರಣ ಜಾತಿ ಸಮಾಜ ನನ್ನ ಜತೆಗಿರುವುದಿಲ್ಲ. ಯಾವುದೇ ಗುಂಪು ನನ್ನ ಪರವಾಗಿ ನಿಲ್ಲುವುದಿಲ್ಲ. ಸರ್ಕಾರ ನೀಡುವ ಪತ್ರಕರ್ತರ ಗುರುತಿನ ಚೀಟಿ ಸೇರಿದಂತೆ ನನ್ನ ಬಳಿ ಯಾವುದೇ ಗುರುತು ಚೀಟಿಯೂ ಇಲ್ಲ.

ಹೀಗೆ ಒಬ್ಬಿಬ್ಬರಿಗೆ ನನಗೆ ಅನ್ನಿಸಿದಾಗ ವಿವರಣೆ ನೀಡುವುದರ ಹೊರತಾಗಿ ಏನೂ ಮಾಡಲಾಗದ ಅಶಕ್ತಳು ನಾನು… ಯಾವತ್ತೋ ಒಂದು ದಿನ ನಾನೂ ಬಲಿಪಶುವಾಗಿ ಬಲಿಯಾಗಲಿದ್ದೇನೆ. ಇರಲಿ ಬಿಡಿ… ಅದು ಸಂಭವಿಸುವವರೆಗಾದರೂ ನಾನು ನನ್ನ ನೋವು ಮತ್ತು ಒಂಟಿತನವನ್ನು ದಾಖಲಿಸುತ್ತಾ ಹೋಗುತ್ತೇನೆ.

ತುಳಸಿ ಚಂದು, ಜೂನ್ 24, 2023

Related Articles

ಇತ್ತೀಚಿನ ಸುದ್ದಿಗಳು