Saturday, July 26, 2025

ಸತ್ಯ | ನ್ಯಾಯ |ಧರ್ಮ

ರೈತರನ್ನು ಏಕೆ ಶತ್ರುಗಳನ್ನಾಗಿ ಮಾಡುತ್ತಿದ್ದೀರಿ?: ಪಂಜಾಬ್ ವಿರುದ್ಧ ಸುಪ್ರೀಂ ಅಸಹನೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಪ್ರತಿ ವರ್ಷ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಡೆಯಲು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಿದೆ.

ಈ ಸಂದರ್ಭದಲ್ಲಿ ಪಂಜಾಬಿನಲ್ಲಿ ಬೆಳೆ ತ್ಯಾಜ್ಯ ಸುಡುವ ಕುರಿತು ಆ ರಾಜ್ಯ ನೀಡಿರುವ ವರದಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಹನೆ ವ್ಯಕ್ತಪಡಿಸಿದೆ. ರೈತರನ್ನು ಯಾಕೆ ಶತ್ರುಗಳನ್ನಾಗಿ ತೋರಿಸಲಾಗುತ್ತಿದೆ ಎಂದು ಕೋರ್ಟ್ ಅಸಹನೆ ವ್ಯಕ್ತಪಡಿಸಿದೆ.

ಇಲ್ಲಿ ಪ್ರತಿ ಬಾರಿ ರೈತರನ್ನು ಏಕೆ ವಿಲನ್‌ಗಳಾಗಿ ತೋರಿಸಲಾಗುತ್ತಿದೆ. ನಾವು ಅವರನ್ನು ಈ ನ್ಯಾಯಾಲಯದಲ್ಲಿ ವಿಚಾರಣೆ ಮಾಡುತ್ತಿಲ್ಲ. ರೈತರು ಬೆಳೆ ತ್ಯಾಜ್ಯವನ್ನು ಸುಡಲು ಹಲವು ಕಾರಣಗಳಿರಬಹುದು. ನೀವು (ಪಂಜಾಬ್ ಸರ್ಕಾರ) ಬೆಳೆ ತ್ಯಾಜ್ಯದ ಯಾಂತ್ರೀಕೃತ ನಾಶದ ಪ್ರಕ್ರಿಯೆಯನ್ನು ಏಕೆ 100 ಪ್ರತಿಶತ ಉಚಿತ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಹರ್ಯಾಣ ಸರ್ಕಾರದಿಂದ ಸಲಹೆ ಪಡೆಯಿರಿ ಎಂದು ಕೋರ್ಟ್‌ ಸೂಚಿಸಿದೆ.

ಬೆಳೆ ತ್ಯಾಜ್ಯವನ್ನು ಸುಡುವುದನ್ನು ತಪ್ಪಿಸಲು ಹರ್ಯಾಣ ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಹೇಳಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೆಹಲಿ ಮತ್ತು ಅದರ ನೆರೆಯ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ‌

ಕಳೆದ ಆರು ವರ್ಷಗಳಿಂದ ನವೆಂಬರ್‌ ತಿಂಗಳಿನಲ್ಲಿ ದೆಹಲಿ ಹೆಚ್ಚು ಕಲುಷಿತ ನಗರವೆಂದು ಗುರುತಿಸಿಕೊಳ್ಳುತ್ತಿದೆ. ಈ ಸಮಸ್ಯೆಯನ್ನು ತಡೆಯುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕೋರ್ಟ್ ಹೇಳಿತು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುಡುವ ಕುರಿತು ವರದಿ ಸಲ್ಲಿಸುವಂತೆ ದೆಹಲಿ ಮತ್ತು ಯುಪಿ ಸರ್ಕಾರಗಳಿಗೆ ನ್ಯಾಯಾಲಯ ಸೂಚಿಸಿದೆ. ಆ ಬಳಿಕ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page