Wednesday, June 26, 2024

ಸತ್ಯ | ನ್ಯಾಯ |ಧರ್ಮ

ಅನಂಗನ  ಕಿಚ್ಚಿಗೆ ಕಾವಿ ಕುಣಿದಾಗ…

ಮನುಷ್ಯನ ಮೂಲ ಪ್ರವೃತ್ತಿಯಾದ ಕಾಮವಾಂಛೆಯನ್ನು ಅವರು ಮೀರಲು ಸಾಧ್ಯವೇ ಎಂಬ ಸಣ್ಣ ಅನುಮಾನವೂ ಇವರಿಗೆಲ್ಲಾ ಬರುತ್ತಿಲ್ಲ ಯಾಕೆ? ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಗೃಹಸಚಿವರು ಒಟ್ಟಿನಲ್ಲಿ ಇಡೀ ಸರಕಾರವೇ ಶಿವಮೂರ್ತಿ ಸ್ವಾಮಿಗಳ ಪರ ನಿಂತಿದೆ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ತುಟಿಪಿಟಕ್ ಅಂದಿಲ್ಲ. ಮಹಿಳಾ ಹೋರಾಟಗಾರರ ಧ್ವನಿಯೂ ಅತ್ಯಂತ ಕ್ಷೀಣವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಮಾತಾಡುವವರೇ ಇಲ್ಲದಂತಾಗಿದೆ. ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಟಿ ನಡೆಸಿ ಮುರುಘಾ ಮಠಾಧೀಶರಿಗೆ ಬೆಂಬಲ ಸೂಚಿಸಿದ್ದಾರೆ!…  ಮುರುಘಾ ಮಠದ ಸ್ವಾಮೀಜಿಗಳ ಮೇಲಿನ ಲೈಂಗಿಕ ಹಗರಣದ ಆರೋಪದ ಹಿನ್ನೆಲೆಯಲ್ಲಿ ಬಹಳ ಮುಖ್ಯವಾದ ಪ್ರಶ್ನೆಗಳನ್ನು ಎತ್ತಿದ್ದಾರೆ ಲೇಖಕರೂ ಕೃಷಿಕರೂ ಆಗಿರುವ ಉಷಾ ಕಟ್ಟೆಮನೆ.

ಅಪ್ರಾಪ್ತ ಬಾಲಕಿಯರನ್ನು ತಮ್ಮ ಲೈಂಗಿಕ ಲಾಲಸೆಗೆ ಬಳಸಿಕೊಂಡರೆಂಬ ಆರೋಪ  ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಮೇಲೆ ಬಂದಾಗ ಅದು ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ದೊಡ್ಡ ಸುದ್ದಿಯಾಯ್ತು. ಅದರ ಬಗ್ಗೆ ನಾನಾ ಆಯಾಮಗಳಲ್ಲಿ ಚರ್ಚೆ ನಡೆಯಿತು. ಅಲ್ಲಿ ನಡೆದ ಚರ್ಚೆಗಳಲ್ಲಿ ಕೆಲವು ಜನ ‘ ಈ ವಯಸ್ಸಿನಲ್ಲಿ ಸ್ವಾಮಿಗಳು ಹಾಗೆ ಮಾಡಲು ಸಾಧ್ಯವಿಲ್ಲ’ ಎಂಬ ರೀತಿಯಲ್ಲಿ ತಣ್ಣಗೆ ವಕಾಲತು ಮಾಡತೊಡಗಿದರು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಕೇವಲ ಸಂಭೋಗ ಕ್ರಿಯೆ ನಡೆದರೆ ಮಾತ್ರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸುವುದಿಲ್ಲ. ಬಲವಂತವಾಗಿ ಮುಟ್ಟುವುದು, ಮುತ್ತಿಡುವುದು, ಲೈಂಗಿಕ ಸನ್ನೆಗಳನ್ನು ರವಾನಿಸುವುದು. ಲೈಂಗಿಕ ಹಾವಭಾವಗಳು ಎಲ್ಲವೂ ಕೂಡಾ ಲೈಂಗಿಕತೆಯ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಎದುರಿಗಿರುವ ವ್ಯಕ್ತಿಯಿಂದ ವಿರೋಧ ವ್ಯಕ್ತವಾದರೆ ಅದು ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ, ಲೈಂಗಿಕ ಸಂಬಂಧಗಳಲ್ಲಿ ಪರಸ್ಪರ ಒಪ್ಪಿಗೆಯಿಲ್ಲದೆ ಮುಂದುವರಿದರೆ ಅದು ಲೈಂಗಿಕ ಅತ್ಯಾಚಾರವೇ ಆಗುತ್ತದೆ. ಅದು ಪತ್ನಿಯೇ ಆಗಿದ್ದರೂ ಕೂಡಾ. ಹಾಗಿರುವಾಗ,  ತಮ್ಮ ಅಶ್ರಯದಾತರಾದ ಸ್ವಾಮೀಜಿಯವರೇ ತಮ್ಮನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ ಎಂದು ಬಾಲಕಿಯರೇ ಆರೋಪಿಸುತ್ತಿರುವಾಗ ನಾಗರೀಕ ಸಮಾಜಕ್ಕೆ ಸ್ವಾಮೀಜಿಯ ಬಗ್ಗೆ ಸಣ್ಣದೊಂದು ಸಂಶಯವಾದರೂ ಮೂಡಬೇಕಲ್ಲವೇ? ಪೊರೆಯಬೇಕಾದ ಕೈಗಳೇ ಕತ್ತು ಹಿಸುಕಲು ಹೊರಟರೆ?

ಅವರು ಪ್ರಗತಿಪರ ಸ್ವಾಮೀಜಿಗಳಾದ ಕಾರಣ ಜನಸಾಮಾನ್ಯರಿಗೆ, ಅವರ ಭಕ್ತರಿಗೆ. ಅಭಿಮಾನಿಗಳಿಗೆ ಅವರ ಮೇಲೆ ಬಂದಿರುವ ಅರೋಪವನ್ನು ನಂಬಲು ಸಾಧ್ಯವಾಗುತ್ತಿಲ್ಲ. ರಾಜಕಾರಣಿಗಳೂ ಮಾತನಾಡುತ್ತಿಲ್ಲ. ಯಾಕೆಂದರೆ ಪಕ್ಷಾತೀತವಾಗಿ ಅವರಿಗೆಲ್ಲಾ ಬಹುಸಂಖ್ಯಾತ ಲಿಂಗಾಯಿತ ಮತಬ್ಯಾಂಕಿನ ಮೇಲೆ ಕಣ್ಣಿದೆ. ಆದರೆ ಸಮಾಜದ ಮಾದರಿ ವ್ಯಕ್ತಿತ್ವಗಳಾದ ಸಾಹಿತಿಗಳ, ಕಲಾವಿದರ, ಬುದ್ಧಿಜೀವಿಗಳ ಬುದ್ಧಿ ಎಲ್ಲಿ ಅಡಗಿದೆ? ಮನುಷ್ಯನ ಮೂಲ ಪ್ರವೃತ್ತಿಯಾದ ಕಾಮ ವಾಂಛೆಯನ್ನು ಅವರು ಮೀರಲು ಸಾಧ್ಯವೇ ಎಂಬ ಸಣ್ಣ ಅನುಮಾನವೂ ಇವರಿಗೆಲ್ಲಾ ಬರುತ್ತಿಲ್ಲ ಯಾಕೆ? ಯಾಕೆಂದರೆ ಇತ್ತೀಚೆಗೆ ಬ್ರಹ್ಮಚರ್ಯವನ್ನು ವೈಭವಿಕರಿಸಲಾಗುತ್ತಿದೆ. ಅದು ಶ್ರೇಷ್ಟ ಗುಣ ಎಂಬ ನರೇಶನ್ ಹುಟ್ಟಿಕೊಂಡಿದೆ. ಅವರನ್ನು ದೇವಮಾನವರ ಸ್ಥಾನದಲ್ಲಿಟ್ಟು ನೋಡಲಾಗುತ್ತಿದೆ. ವ್ಯಕ್ತಿ ಆರಾಧನೆ ಜನರ ವಿವೇಚನ ಶಕ್ತಿಯನ್ನು ಮಸುಕಾಗಿಸುತ್ತದೆ.

ನಿಜ. ಮುರುಘಾ ಶ್ರೀಗಳು ಸಮಾಜ ಸುಧಾರಣೆಗಾಗಿ ಶ್ರಮಿಸಿದ, ಸಮಸಮಾಜದ ಕನಸು ಕಾಣುತ್ತಿರುವ, ಬಸವಾದಿ ಶರಣರ ಹಾದಿಯಲ್ಲಿ ಮುನ್ನಡೆಯುತ್ತಿರುವ ವಿರಕ್ತ ಮಠದ ಸ್ವಾಮೀಜಿ. ಮುರುಘಾ ಮಠವು 17ನೇ ಶತಮಾನದಲ್ಲಿ ಆರಂಭವಾದ ಮಠ. ಆ ಮಠದ ಪರಂಪರೆಯಂತೆ ಇವರು ತಮ್ಮನ್ನು ತಾವು ಜಗದ್ಗುರುಗಳು ಎಂದು ಕರೆಸಿಕೊಳ್ಳಲಿಲ್ಲ, ಶರಣಸಂಸ್ಕೃತಿಯ ವಿನಯವಂತಿಕೆಯಿಂದ ತಮ್ಮನ್ನು ‘ಶರಣ’ ಎಂದೇ  ಕರೆದುಕೊಂಡರು. ಬೆಳ್ಳಿ ಸಿಂಹಾಸನದ ಮೇಲೆ ಕುಳಿತುಕೊಳ್ಳಲಿಲ್ಲ, ಅಡ್ಡಪಲ್ಲಕ್ಕಿಯನ್ನು ತಿರಸ್ಕರಿಸಿದರು. ಸಮಾಜದ ಎಲ್ಲಾ ವರ್ಗದ ಜನರನ್ನು ಮಠದೊಳಗೆ ಕರೆತಂದರು.

ಇನ್ನು, ವಯಸ್ಸಿನ ಬಗ್ಗೆ ಹೇಳುವುದಾದರೆ ಅವರ ಈಗಿನ ವಯಸ್ಸು 64. ಆರೋಗ್ಯವಂತ ಮನುಷ್ಯನೊಬ್ಬ ಸೆಕ್ಸ್ ಅನ್ನು ನಿರಾಕರಿಸುವಂತ ವಯಸ್ಸೇನೂ ಅಲ್ಲ. ಅಲ್ಲದೆ  2018ರಲ್ಲಿ ನಡೆದ ಸಮೀಕ್ಷೆಯೊಂದರ  ಪ್ರಕಾರ 65 ರಿಂದ 80 ವಯಸ್ಸಿನ ಗಂಡು ಹೆಣ್ಣಿನಲ್ಲಿ ಪ್ರತಿಶತ ನಲ್ವತ್ತು ಮಂದಿ ಲೈಂಗಿಕವಾಗಿ ಕ್ರಿಯಾಶೀಲರಾಗಿರುತ್ತಾರೆ ಮತ್ತು ಶೇಕಡಾ 54 ರಷ್ಟು ಜನ ಗುಣಾತ್ಮಕವಾದ ಬದುಕಿಗೆ ಸೆಕ್ಸ್ ಬಹಳ ಮುಖ್ಯವೆಂದು ಹೇಳುತ್ತಾರೆ. ಆದರೆ ಇಲ್ಲಿ ಪ್ರಶ್ನೆ ಇರುವುದು ಅರುವತ್ತನಾಲ್ಕು ವಯಸ್ಸಿನ ವ್ಯಕ್ತಿಯೊಬ್ಬ 15-16 ವಯಸ್ಸಿನ ಬಾಲಕಿಯರ ಜೊತೆ ಲೈಂಗಿಕ ಸಂಬಂಧಕ್ಕೆ ಮುಂದಾದರೆ ಅದು ಅಸಹಜ. ಚೈಲ್ಡ್ ಅಬ್ಯೂಸ್ ಎಂಬುದೊಂದು ಮಾನಸಿಕ ಕಾಯಿಲೆ. ಸೆಕ್ಸ್ ಹಾರ್ಮೋನ್ ಗಳು ಹೆಚ್ಚು ಕ್ರಿಯಾಶೀಲವಾಗಿದ್ದ ಕಾಲಘಟ್ಟದಲ್ಲಿ ಸಂಯಮದಿಂದ ಇದ್ದ ವ್ಯಕ್ತಿ ಇಳಿ ವಯಸ್ಸಿನಲ್ಲಿ ಲೈಂಗಿಕ ತೃಷೆಗಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಾನೆ ಎಂದರೆ ಅಲ್ಲೇನೋ ಸಮಸ್ಯೆ ಇದೆ ಎಂದು ಭಾಸವಾಗುತ್ತದೆ. ಉದಾತ್ತ ವ್ಯಕ್ತಿಯಲ್ಲಿರುವ ಒಂದೇ ಒಂದು ದೌರ್ಬಲ್ಯ ಆತನನ್ನು ಪತನದಂಚಿಗೆ ತಂದು ನಿಲ್ಲಿಸಬಹುದು. ಅಂತಹ ಒಂದು ದೌರ್ಬಲ್ಯ ಸ್ವಾಮಿಗಳಲ್ಲಿತ್ತೇ? ಶಿವಮೂರ್ತಿ ಸ್ವಾಮೀಜಿಯವರು ಪೀಠವೇರಿದ್ದು 1991ರಲ್ಲಿ ಅಂದರೆ ತಮ್ಮ 33ನೇ ವಯಸ್ಸಿನಲ್ಲಿ. ಈಗ 64ರ ಪರಿಪಕ್ವಗೊಂಡ ಪ್ರೌಢ ವಯಸ್ಸು. ಅಂದು ಜಾರಿ ಬೀಳದವರು ಅಥವಾ ಸಿಕ್ಕಿಬೀಳದವರು ಇಂದು ಬಿದ್ದರೇಕೆ? ಅಥವಾ ಯಾರಾದರೂ ಕಾಲುಕೊಟ್ಟು ಕೆಡವಿದರೆ? ಆ ನಿಟ್ಟಿನಲ್ಲೂ ತನಿಖೆ ನಡೆಯಬೇಕಾಗಿದೆ.

ಈ ಸಂದರ್ಭದಲ್ಲೇ 2014ರಲ್ಲಿ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯ ಮೇಲೆ ಬಂದ ಅತ್ಯಾಚಾರದ ಆರೋಪವೂ ನೆನಪಿಗೆ ಬರುತ್ತದೆ. ಅಲ್ಲಿಯ ಪ್ರಕರಣದಲ್ಲಿ ಕೂಡಾ ಸಂತ್ರಸ್ತೆ ಎದುರು ಹಾಕಿಕೊಂಡದ್ದು ಸಾಮಾನ್ಯ ಸ್ವಾಮೀಜಿಯನ್ನಲ್ಲ. ನೂರಾರು ವರ್ಷ ಇತಿಹಾಸವಿರುವ, ಶಂಕರಾಚಾರ್ಯರ ಪಾದುಕೆಗಳು ತಮ್ಮಲ್ಲಿದೆಯೆಂದು ಹೇಳಿಕೊಳ್ಳುವ, ತನ್ನನ್ನು ತಾನು ಗೋಕರ್ಣ ಮಂಡಲಾಧೀಶ್ವರ ಎಂದು ಕರೆಸಿಕೊಳ್ಳುವ, ದಂತ ಸಿಂಹಾಸನದ ಮೇಲೆ ಆಸೀನರಾಗುವ ಅಧಿಕಾರ ಪೀಠದ ಸ್ವಾಮೀಜಿಯನ್ನು. ಅಲ್ಲಿ ಏನಾಯ್ತು? ಅರೋಪಿ ಬಲಾಢ್ಯ ಮತ್ತು ಪ್ರಭಾವಶಾಲಿಯಾಗಿದ್ದ ಕಾರಣ ಪ್ರತಿ ದೂರು ದಾಖಲಿಸಿದ ದೂರುದಾರ ಸಂತ್ರಸ್ತೆಯನ್ನೇ ಸುಮಾರು ಒಂದು ತಿಂಗಳ ಕಾಲ ಕಾರಾಗೃಹಕ್ಕೆ ತಳ್ಳಲಾಗಿತ್ತು. ಅದೇ ಸ್ವಾಮೀಜಿಯ ಮೇಲೆ ಇನ್ನೊಂದು ಅತ್ಯಾಚಾರ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು. ಆದ್ರೆ ಇವತ್ತಿನವರೆಗೂ ಸ್ವಾಮೀಜಿಯ ಬಂಧನವಾಗಿಲ್ಲ. ಪ್ರಕರಣದ ಬಗ್ಗೆ ಸರಿಯಾದ ತನಿಖೆಯೂ ಆಗಿಲ್ಲ. ಹತ್ತಾರು ಜಡ್ಜ್ ಗಳು ಈ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ!.

ಅದಕ್ಕೆ ಕಾರಣಗಳೇನು ಎಂದು ನೋಡಿದರೆ ನಿಚ್ಚಳವಾಗಿ ಕಾಣುವುದು ಅಧಿಕಾರದ ಜಾತಿ ರಾಜಕಾರಣ. ಮಠದ ಕೃಪಾಶಯದಲ್ಲಿ ನಡೆಯುವ ಅರ್ಥಿಕ ವ್ಯವಹಾರಗಳು ಮತ್ತು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲ್ಪಡುವ ಪತ್ರಿಕೋದ್ಯಮದ ಸ್ವಜನ ಪಕ್ಷಪಾತ. ಅದರಿಂದ ಉದ್ಭವಿಸಿದ ಸಾಮಾಜಿಕ ನಿಷ್ಕಾಳಜಿ.

ನಿಜ. ಆ ಪ್ರಕರಣದಲ್ಲಿ ಸಂತ್ರಸ್ತೆ ಪ್ರೌಢ ವಯಸ್ಕಳಾಗಿದ್ದಳು. ತಾನು ವಶೀಕರಣಕ್ಕೆ ಒಳಗಾಗಿದ್ದೆ ಎಂದು ಆಕೆ ಎಷ್ಟೇ ವಾದಿಸಿದ್ದರೂ ಅದು ಪರಸ್ಪರ ಸಮ್ಮತದ ಸೆಕ್ಸ್ ಆಗಿತ್ತು ಎಂದೇ ಪರಿಗಣಿಸಲಾಗಿತ್ತು. ಆದ್ರೆ ಪೀಠಾಧಿಪತಿಯೊಬ್ಬ ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿಯೂ ಆ ಪೀಠದಲ್ಲಿ ಮುಂದುವರೆಯುತ್ತಿರುವುದನ್ನು ಈ ಸಮಾಜ ಪ್ರಶಿಸಲೇ ಇಲ್ಲ. ಮಕ್ಕಳನ್ನು ಏಕಾಂತಕ್ಕೆ ಕರೆಸಿಕೊಳ್ಳುವ ‘ ಕನ್ಯಾ ಸಂಸ್ಕಾರ’ ವಿಧಿಯಲ್ಲಿ ಏನು ನಡೆಯುತ್ತದೆಯೆಂದು ಅರಿಯುವ ಪ್ರಯತ್ನ ಮಾಡಲೇ ಇಲ್ಲ. ಅಲ್ಲೂ ಇಲ್ಲೂ ಎಲ್ಲವೂ ಸರದಿ ಪ್ರಕಾರವೇ! ಇದಕ್ಕೆ ಪೀಠಕ್ಕೆ ಹತ್ತಿರದವರು ಪೂರಕವಾಗಿ ನಡೆದುಕೊಳ್ಳುತ್ತಾರೆ. ಅಂದರೆ ಈ ಸಮಾಜ, ಈ ನ್ಯಾಯವ್ಯವಸ್ಥೆ, ಈ ಕುಟುಂಬ ಪದ್ಧತಿ ಎಲ್ಲವೂ ಪುರುಷ ಪಕ್ಷಪಾತಿ ಎಂಬುದು ಸಾಬೀತಾದಂತೆ, ಅಲ್ಲವೇ?

 ಆದರೆ ಇಲ್ಲಿ ಈ ಬಾಲಕಿಯರು ಎಳೆಯರು. ಲೈಂಗಿಕತೆಯ ಬಗ್ಗೆ ಮೇಲ್ಪದರಿನ ಅರಿವಷ್ಟೇ ಉಳ್ಳವರಾಗಿದ್ದರು. ಹಾಗೆ ಹೇಳಲೂ ಕಾರಣವಿದೆ. ಅವರು ಹೈಸ್ಕೂಲ್ ವಿದ್ಯಾರ್ಥಿನಿಯರು. ಮೇಲಾಗಿ ಬಡವರು. ಮಠದ ಕಣ್ಣಳತೆಯಲ್ಲಿದ್ದವರು. ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಆಗದಂತಹ ವಾತಾವರಣ. ಅಂತಹುದರಲ್ಲಿ ಸಹಮತದ ಸೆಕ್ಸ್ ಎಂಬುದಕ್ಕೆ ಆಸ್ಪದವೇ ಇಲ್ಲ. ಕಾನೂನಿನ ಅಡಿಯಲ್ಲಿ 16 ನೇ ವರ್ಷಕ್ಕೆ ಪರಸ್ಪರ ಸಮ್ಮತದ ಸೆಕ್ಸ್ ಮಾನ್ಯವಾದರೂ 15-16 ವರ್ಷದ ಬಾಲಕಿಯೊಬ್ಬಳು 64 ವರ್ಷದ ಒಬ್ಬ ವ್ಯಕ್ತಿಯ ಜೊತೆ ಲೈಂಗಿಕ ಸಂಪರ್ಕಕ್ಕೆ ಹಾತೊರೆಯುವುದು ಸಾಧ್ಯವೇ? ಅಂತಹ ಆಕರ್ಷಣೆ ಆ ಕಾವಿಧಾರಿಯಲ್ಲಿ ಏನಿದೆ?

ಇನ್ನು ಮಠದ ಮಾಜಿ ಆಡಳಿತಗಾರ ಆ ಬಾಲಕಿಯರಿಗೆ ಆಮಿಷವೊಡ್ಡಿ ಪುಸಲಾಯಿಸಿ ಸ್ವಾಮಿಗಳ ವಿರುದ್ಧ ಷಡ್ಯಂತರ ಹೆಣಿದಿರಬಹುದು ಎಂಬ ವಾದವೂ ಇದೆ. ಹಾಗೆ ವಾದಿಸುವವರು ಆ ಬಾಲಕಿಯರ ಜಾಗದಲ್ಲಿ ತಮ್ಮ ಮಕ್ಕಳನ್ನೋ ತಮ್ಮ ತಂಗಿಯರನ್ನೋ ಇಟ್ಟು ನೋಡಲಿ. ಆಗ ಆ ಬಾಲಕಿಯರು  ವಿವರಿಸಿದ ಲೈಂಗಿಕ ಹಿಂಸೆಯ ವಿವರಗಳು ಕಲ್ಪಿತ ಕಥೆ ಎಂದು ಎದೆ ಮುಟ್ಟಿ ಹೇಳಲಿ ನೋಡುವಾ. ಆ ಮಹಿಳಾ ವಾರ್ಡನ್ ಸೇರಿದಂತೆ ಉಳಿದ ನಾಲ್ಕು ಜನರ ಪಾತ್ರ ಇದರಲ್ಲಿ ಏನಿತ್ತು? ಒಂದು ತಿಂಗಳ ಕಾಲ ಆ ಬಾಲಕಿಯರನ್ನು ಮಾಜಿ ಅಡಳಿತಗಾರ ತನ್ನ ಮನೆಯಲ್ಲಿಟ್ಟುಕೊಂಡದ್ದು ಯಾಕೆ? ಮಕ್ಕಳು ಎಲ್ಲೆಲ್ಲೋ ಅಲೆದಾಡಿ ಮೈಸೂರಿನ ಒಡನಾಡಿ ಸಂಸ್ಥೆಯನ್ನು ಸೇರಿದ್ದು ಹೇಗೆ ಎಂಬುದು ತನಿಖೆಯಿಂದಷ್ಟೇ ಹೊರ ಬೀಳಬೇಕು ಅಲ್ಲವೇ?. ನಿರ್ಭೀತ ವಾತಾವರಣದಲ್ಲಿ ಅನುನಯದಿಂದ ಕೇಳಿದರೆ ಮಕ್ಕಳು ನಿಜವನ್ನೇ ಬಿಚ್ಚಿಡುತ್ತಾರೆ. ಯಾಕೆಂದರೆ ಅವರಿನ್ನೂ ಹೈಸ್ಕೂಲ್ ಮೆಟ್ಟಲು ದಾಟದ ಎಳೆಯರು. ಪುರುಷ ಮನಸ್ಥಿತಿಯೇ ಹಾಗೆ. ಅದು ಹೆಣ್ಮಕ್ಕಳನ್ನು ತಮ್ಮ ಸ್ವಾರ್ಥ ಲಾಲಸೆಗಳಿಗೆ ಮೆಟ್ಟಲುಗಳಾಗಿ ಬಳಸಿಕೊಳ್ಳುತ್ತದೆ; ಬಲಿ ಕೇಳಿದರೆ ಅವರ ಮೇಲೆ ಕತ್ತಿ ಎತ್ತಿಯೇ ಬಿಡುತ್ತದೆ.

ಹೋರಿಸ್ವಾಮಿ ಸಂದರ್ಭದಲ್ಲಿ ಇಡೀ ಪತ್ರಿಕೋದ್ಯಮ ಅವರ ಪರವಾಗಿತ್ತು. ಸ್ವತಃ ವಿಶ್ವೇಶ್ವರ ಭಟ್ಟರೇ ಮಠದ ಮಾಧ್ಯಮ ಸಲಹೆಗಾರರಾಗಿದ್ದರು. ನಿವೃತ್ತ ಐಪಿಎಸ್ ಅಧಿಕಾರಿ ಟಿ ಮಡಿಯಾಳ್ ಮಠದ ಉಸ್ತುವಾರಿಯ ಹೊಣೆ ಹೊತ್ತಿದ್ದರು. ಈಗಲೂ ಪಕ್ಷಬೇಧ ಮರೆತು ರಾಜಕಾರಣಿಗಳು ಮುರುಘ ಮಠಾಧೀಶರ ಪರ ನಿಂತಿದ್ದಾರೆ ಇಲ್ಲವೇ ಮೌನಕ್ಕೆ ಶರಣಾಗಿದ್ದಾರೆ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಗೃಹಸಚಿವರು ಒಟ್ಟಿನಲ್ಲಿ ಇಡೀ ಸರಕಾರವೇ ಶಿವಮೂರ್ತಿ ಸ್ವಾಮಿಗಳ ಪರ ನಿಂತಿದೆ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ತುಟಿಪಿಟಕ್ ಅಂದಿಲ್ಲ. ಮಹಿಳಾ ಹೋರಾಟಗಾರರ ಧ್ವನಿಯೂ ಅತ್ಯಂತ ಕ್ಷೀಣವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಮಾತಾಡುವವರೇ ಇಲ್ಲದಂತಾಗಿದೆ. ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಟಿ ನಡೆಸಿ ಮುರುಘಾ ಮಠಾಧೀಶರಿಗೆ ಬೆಂಬಲ ಸೂಚಿಸಿದ್ದಾರೆ!

ಮೊನ್ನೆ ಮಂಗಳವಾರ ಸಂತ್ರಸ್ತ ಬಾಲಕಿಯರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಭಾರತೀಯ ದಂಡ ಸಂಹಿತೆಯ 164 ಸೆಕ್ಷನ್ ಅಡಿ ಅವರ ಹೇಳಿಕೆಗಳನ್ನು ಪಡೆಯಲಾಗಿದೆ. ನ್ಯಾಯಾಧೀಶರಾದ ಅನಿತಾಕುಮಾರಿ ಇಬ್ಬರೂ ಮಕ್ಕಳಿಂದ ಪ್ರತ್ಯೇಕವಾಗಿ  ಐದು ಘಂಟೆಗಳ ಕಾಲ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಅದರ ವಿಡಿಯೋ ರೆಕಾರ್ಡಿಂಗ್ ಕೂಡಾ ಮಾಡಲಾಗಿದೆ. ಮಕ್ಕಳ ಹೇಳಿಕೆಯನ್ನು ಆಧರಿಸಿ ಮ್ಯಾಜಿಸ್ಟ್ರೇಟ್, ಆರೋಪಿಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಲು ಆದೇಶ ನೀಡಬೇಕಿತ್ತು. ಆದರೆ ನೀಡಿಲ್ಲ. ಅವರು ಆರಾಮವಾಗಿಯೇ ಮಠದಲ್ಲಿ ಓಡಾಡಿಕೊಂಡಿದ್ದಾರೆ. ಪೋಕ್ಸೋ ಕಾಯ್ದೆ ಮತ್ತು ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಾಗಿ ಐದು ದಿನಗಳೇ ಕಳೆದಿವೆ. ಜನಸಾಮಾನ್ಯರನ್ನಾದರೆ ದೂರು ದಾಖಲಾದ ತಕ್ಷಣವೇ ಬಂಧಿಸುವ ಶಕ್ತಿ ಈ ಕಾಯ್ದೆಗಿದೆ. ಇವೆರಡೂ ಜಾಮೀನು ರಹಿತ ಕೇಸುಗಳೇ. ಅಂದರೆ ಬಲಾಢ್ಯರಿಗೊಂದು ಕಾನೂನು ದುರ್ಬಲರಿಗೆ ಇನ್ನೊಂದು ಕಾನೂನು ಎಂಬುದಿದೆಯೇ?.

ಪೋಲಿಸರು ತಮ್ಮನ್ನು ಬಂಧಿಸದಂತೆ ಶಿವಮೂರ್ತಿ ಸ್ವಾಮಿಗಳು  ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಅದು ಸೆಪ್ಟಂಬರ್ ಒಂದರಂದು ಅಂದರೆ ಇಂದು ವಿಚಾರಣೆಗೆ ಬಂದಿದ್ದು ಅದನ್ನು ನಾಳೆಗೆ ಮುಂದೂಡಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ನ್ಯಾಯಾಲಯದ ಮೇಲೆಯೂ ಧಾರ್ಮಿಕ ಮತ್ತು ರಾಜಕೀಯ ಒತ್ತಡ ಬಂದರೆ? ನ್ಯಾಯಾಲಯಗಳು ವಿಳಂಬ ನೀತಿಯನ್ನು ಅನುಸರಿಸಿದರೆ? ತಪ್ತ ನಾಗರಿಕ ಸಮಾಜ ಅಡವಿ ನ್ಯಾಯದ ಕಡೆಗೆ ವಾಲಬೇಕೇ? ಹಾಗಾಗಬಾರದು.

ಈಗ ನಾವು ಆಶಿಸುವುದು ಇಷ್ಟೇ. ಎಲ್ಲಾ ಬಣ್ಣವನ್ನೂ ಮಸಿ ನುಂಗಿತು ಎಂಬ ಗಾದೆಯಂತೆ ಆಗಬಾರದು.ಶಿವಮೂರ್ತಿ ಶರಣರು ‘ಸಮರಕ್ಕೂ ಸಿದ್ಧ’ ಎಂದು ತೋಳೇರಿಸದೆ ಕಾನೂನಿಗೆ ತಲೆಬಾಗಿ ತಮ್ಮ ಸ್ಥಾನವನ್ನು ತ್ಯಜಿಸಲಿ. ಅಗ್ನಿಪರೀಕ್ಷೆಗೆ ಒಳಪಟ್ಟು ಮತ್ತೆ ಪರಿಶುದ್ಧರಾಗಿ ಹೊರಬರಲಿ.

. ಉಷಾ ಕಟ್ಟೆಮನೆ, ಲೇಖಕರು, ಕೃಷಿಕರು\

Related Articles

ಇತ್ತೀಚಿನ ಸುದ್ದಿಗಳು