Saturday, March 15, 2025

ಸತ್ಯ | ನ್ಯಾಯ |ಧರ್ಮ

ಕಾವೇರಿ ಹೋರಾಟದ ಅಖಾಡದಿಂದ ಬಿಜೆಪಿ ದಿಢೀರ್ ನಾಪತ್ತೆಯಾದದ್ದು ಏಕೆ?

ಇಷ್ಟು ದಿನ ಕಾವೇರಿ ಪರವಾಗಿ ಬಿಜೆಪಿ ಬೊಬ್ಬೆ ಹಾಕಿದ್ದಾಗಲಿ, ರೈತರ ಪರ ಮೊಸಳೆ ಕಣ್ಣೀರು ಸುರಿಸಿದ್ದಾಗಲಿ ಎಲ್ಲವೂ ರಾಜಕೀಯ ನಾಟಕ ಅನ್ನೋದಕ್ಕೆ ಇಲ್ಲಿವೆ ಎರಡು ಕಾರಣಗಳು- ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

ಕಾವೇರಿ ವಿವಾದದ ಆರಂಭದಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡು ರಾಜ್ಯಾದ್ಯಂತ ಹೋರಾಟಕ್ಕಿಳಿದಿದ್ದ ಬಿಜೆಪಿ ಇದೀಗ, ಕಾವೇರಿ ವಿಚಾರದಿಂದ ದಿಢೀರ್ ನಾಪತ್ತೆಯಾಗಿದೆ. ಇವತ್ತಿಗೂ ಕಾವೇರಿಗಾಗಿ ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಪರಿಶೀಲನಾ ಅರ್ಜಿ ಸಲ್ಲಿಸಿ ಕಾನೂನು ಸಮರ ನಡೆಸುತ್ತಿದೆ. ಇತ್ತೀಚೆಗಷ್ಟೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಪ್ರಾಧಿಕಾರವನ್ನೇ ರದ್ದು ಮಾಡುವಂತೆ ಕೋರಿದೆ. ಅಕ್ಟೋಬರ್ 13ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದೆ. ಕಾವೇರಿ ಕಾವು ಇಷ್ಟೆಲ್ಲ ಬಿಸಿ ಇದ್ದಾಗ್ಯೂ ಬಿಜೆಪಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕೆ ಎರಡು ಕಾರಣಗಳಿವೆ.

1. ಕಾವೇರಿ ವಿವಾದವನ್ನು ಆರಂಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವೆಂಬಂತೆ ಬಿಂಬಿಸಲು ಬಿಜೆಪಿ ಯತ್ನಿಸಿತು. ಆದರೆ, ರಾಜ್ಯ ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ನಿಧಾನಕ್ಕೆ ಈ ಸಂಗತಿ ಬಯಲಿಗೆ ಬಂದುದಲ್ಲದೇ, ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದು ರೈತರಿಗೆ ಮತ್ತು ಹೋರಾಟಗಾರರಿಗೆ ಮನವರಿಕೆಯಾಯ್ತು. ಪ್ರಧಾನಿಯ ಮಧ್ಯಪ್ರವೇಶಕ್ಕೆ ಕೂಗು ಹೆಚ್ಚಾಯ್ತು. ಕರ್ನಾಟಕದ ಸಂಸದರ ಮೌನದ ಬಗ್ಗೆ ಆಕ್ರೋಶ ಕೇಳಿಬಂತು. ರಾಜ್ಯದಲ್ಲಿರುವ ಒಟ್ಟು 28 ಸಂಸದರ ಪೈಕಿ ಬಿಜೆಪಿಯವರೇ 25 ಸಂಸದರಿದ್ದಾರೆ. ಯಾವಾಗ ಕಾವೇರಿ ಹೋರಾಟ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಸಂಸದರ ವಿರುದ್ಧ ತಿರುಗಿಕೊಳ್ಳಲಾರಂಭಿಸಿತೋ, ಆಗ ಬಿಜೆಪಿ ಮೆತ್ತಗೆ ಹೋರಾಟದ ಅಖಾಡದಿಂದ ಹಿಂದೆ ಸರಿಯಿತು.

2. ಇನ್ನು ಎರಡನೇ ಅತಿಮುಖ್ಯ ಕಾರಣವೆಂದರೆ, ಬಿಜೆಪಿಯ ಆದ್ಯತೆ. ಬಿಜೆಪಿ ಯಾವತ್ತಿಗೂ ನಾಡು-ನುಡಿಯ ಹಿತದ ಬಗ್ಗೆ ಚಿಂತಿಸಿದ ಪಕ್ಷವಲ್ಲ. ಹಿಂದಿ ರಾಷ್ಟ್ರ ಭಾಷೆ; ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕಿಲ್ಲ; ಕನ್ನಡಿಗರ ನಂದಿನಿಯನ್ನು ಗುಜರಾತಿನ ಅಮೂಲ್‌ನ ಜೊತೆ ವಿಲೀನ; ಕರ್ನಾಟಕದ ಬ್ಯಾಂಕ್‌ಗಳನ್ನು ಉತ್ತರ ಭಾರತೀಯರ ವಶಕ್ಕೆ ಒಪ್ಪಿಸಿದ್ದು……. ಹೀಗೆ ಹೈಕಮಾಂಡ್ ಸಂಸ್ಕೃತಿಗೆ ಬಲಿಯಾಗಿ ಕರ್ನಾಟಕದ ಪ್ರಾದೇಶಿಕ ಅಸ್ಮಿತೆಯನ್ನು ಬಲಿಕೊಡುವಂತಹ ಕೆಲಸಗಳಲ್ಲೆ ಅದು ನಿರತವಾಗಿತ್ತು. ಕಾವೇರಿ ವಿವಾದ ಉಲ್ಬಣಿಸಿದಾಗಲೂ ಅದು ನಾಡಿನ ರೈತರ ಮೇಲಿನ ಕಾಳಜಿಗಿಂತ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆನ್ನುವ ರಾಜಕೀಯ ಕಾರಣಕ್ಕೆ ಹೋರಾಟ ರೂಪಿಸಿತು. ಆದರೆ ಯಾವತ್ತಿಗೂ ಬಿಜೆಪಿಯ ಆದ್ಯತೆ ಧಾರ್ಮಿಕ ಕೋಮುವಾದ ಮತ್ತು ದ್ವೇಷ ಬಿತ್ತುವುದು. ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಕೋಲಾರದಲ್ಲಿ ಉಂಟಾದ ಗಲಭೆಗಳು ಬಿಜೆಪಿಯ ಆದ್ಯತೆಗೆ ಹೇಳಿ ಮಾಡಿಸಿದ ಪ್ರಕರಣಗಳಾಗಿದ್ದವು. ಯಾವಾಗ ಸಮುದಾಯಗಳ ನಡುವೆ ದ್ವೇಷ ಬಿತ್ತುವಂತಹ ಕೋಮುವಾದಿ ವಿಷಯಗಳು ಸಿಕ್ಕವೋ, ಆಗ ಕಾವೇರಿ ಕಾಳಜಿ ಬಿಜೆಪಿಗೆ ಬೇಡವಾಯ್ತು. ಅಷ್ಟೊತ್ತಿಗಾಗಲೇ ಹೋರಾಟ ಕೇಂದ್ರ ಸರ್ಕಾರದ ವಿರುದ್ಧವೇ ತಿರುಗಿದ್ದರಿಂದ, ಕಾವೇರಿಯಿಂದ ಕಾಲ್ಕಿತ್ತ ಬಿಜೆಪಿ ಕೋಮುಗಲಭೆಗಳ ವಿವಾದಗಳಲ್ಲಿ ಬ್ಯುಸಿಯಾಗಿದೆ. 

ಇಷ್ಟು ದಿನ ಕಾವೇರಿ ಪರವಾಗಿ ಬಿಜೆಪಿ ಬೊಬ್ಬೆ ಹಾಕಿದ್ದಾಗಲಿ, ರೈತರ ಪರ ಮೊಸಳೆ ಕಣ್ಣೀರು ಸುರಿಸಿದ್ದಾಗಲಿ ಎಲ್ಲವೂ ರಾಜಕೀಯ ನಾಟಕ ಅನ್ನೋದಕ್ಕೆ ಇದಕ್ಕಿಂತ ನಿದರ್ಶನಗಳು ಬೇಕೆ?

ಮಾಚಯ್ಯ ಎಂ ಹಿಪ್ಪರಗಿ

ಇದನ್ನೂ ಓದಿ : ಒಗ್ಗಟ್ಟಿನ ಕಾಲಕ್ಕೆ ಬಿಕ್ಕಟ್ಟು ಸೃಷ್ಟಿ; ಪ್ರತಿಪಕ್ಷಕ್ಕೆ ಚುನಾವಣೆಯತ್ತ ದೃಷ್ಟಿ

ಆತ್ಮ ವಂಚಕ ರಾಜಕಾರಣಿಗಳಿಂದ ಕಾವೇರಿ ರಾಜಕಾರಣ

Related Articles

ಇತ್ತೀಚಿನ ಸುದ್ದಿಗಳು

You cannot copy content of this page