Thursday, March 6, 2025

ಸತ್ಯ | ನ್ಯಾಯ |ಧರ್ಮ

ಮನ್ನಾರ್‌ನಲ್ಲಿ ಅದಾನಿಯ ಪವನ ಶಕ್ತಿ ಯೋಜನೆಯನ್ನು ಶ್ರೀಲಂಕಾದ ಜನರು ಏಕೆ ವಿರೋಧಿಸಿದರು?

  • ಪರಿಸರವಾದಿಗಳ ತೀವ್ರ ವಿರೋಧದ ನಂತರ ಶ್ರೀಲಂಕಾದ ಉತ್ತರದಲ್ಲಿ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಪ್ರಸ್ತಾವಿತ ಪವನ ವಿದ್ಯುತ್ ಯೋಜನೆ ಸ್ಥಗಿತಗೊಂಡಿದೆ.
  • ಯೋಜನೆಯು ಪರಿಸರದ ಮೇಲೆ ಬೀರುವ ಕೆಟ್ಟ ಪರಿಣಾಮಗಳು ಹಾಗೂ ಸ್ಪರ್ಧಾತ್ಮಕ ಬಿಡ್ಡಿಂಗ್ ನಡೆಸದೆ ಅದಾನಿಗೆ ಈ ಒಪ್ಪಂದವನ್ನು ನೀಡಲಾಗಿರುವುದರಿಂದ ಸ್ಥಳೀಯ ಪರಿಸರ ಸಂಸ್ಥೆಗಳು ಕಂಪನಿಯ ವಿರುದ್ಧ ಐದು ಮೊಕದ್ದಮೆಗಳನ್ನು ಹೂಡಿದವು.
  • ಮೋಂಗಾಬೆಯಲ್ಲಿ ಪ್ರಕಟವಾದ ಮಲಕಾ ರೋಡ್ರಿಗೋ ಅವರ Adani withdraws from controversial wind power project ಲೇಖನದ ಕನ್ನಡಾನುವಾದ

ಗೌತಮ್ ಅದಾನಿಯ ಗ್ರೀನ್ ಎನರ್ಜಿ ಲಿಮಿಟೆಡ್ ಅಥವಾ AGEL ಉತ್ತರ ಶ್ರೀಲಂಕಾದಲ್ಲಿ ಕೈಗೊಳ್ಳಲು ಮುಂದಾಗಿದ್ದ ಪವನ ವಿದ್ಯುತ್ ಯೋಜನೆಯ ಎರಡನೇ ಹಂತದಿಂದ ಹಿಂದೆ ಸರಿದಿದೆ. ಶ್ರೀಲಂಕಾದ ಉತ್ತರದಲ್ಲಿರುವ ಮನ್ನಾರ್‌ನಲ್ಲಿ 52 ಪವನ ಟರ್ಬೈನ್‌ಗಳನ್ನು ಸ್ಥಾಪಿಸುವ ಮೂಲಕ 250 MW ವಿದ್ಯುತ್ ಉತ್ಪಾದಿಸಲು ಯೋಜಿಸಲಾಗಿದ್ದ ಈ ಯೋಜನೆಯು‌ ಪರಿಸರದ ಮೇಲೆ ಗಂಭೀರ ಪರಿಣಾಮಗಳಿಂದಾಗಿ, ಮಾತ್ರವಲ್ಲದೆ ಇದರಲ್ಲಿ ನಡೆದಿರುವ ಹಣಕಾಸಿನ ಅಕ್ರಮಗಳ ಆರೋಪಗಳಿಂದಾಗಿ ಆರಂಭದಿಂದಲೂ ತೀವ್ರ ವಿರೋಧವನ್ನು ಎದುರಿಸಿತ್ತು.

ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನವು ನಿರ್ಣಾಯಕ ಅಗತ್ಯವಾಗಿದೆ, ಆದರೆ ಸೂಕ್ಷ್ಮ ಮನ್ನಾರ್ ಪ್ರದೇಶಕ್ಕೆ ಸಂಭಾವ್ಯ ಪರಿಸರ ಹಾನಿಯನ್ನು ಈ ಯೋಜನೆ ಉಂಟು ಮಾಡುತ್ತದೆ ಎಂಬ ಕಾರಣದಿಂದ ಶ್ರೀಲಂಕಾದ ಪರಿಸರವಾದಿಗಳು ಇದನ್ನು ವಿರೋಧಿಸಿದರು. ಇದಕ್ಕೂ ಹೆಚ್ಚಾಗಿ, ಯಾವುದೇ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ನಡೆಸದೆ ಈ ಒಪ್ಪಂದವನ್ನು ಅದಾನಿಗೆ ನೀಡಿರುವ ವಿಧಾನದ ಬಗ್ಗೆ ಕಳವಳಗಳು ಹುಟ್ಟಿಕೊಂಡಿದ್ದವು.

ವಂಕಲೈ ರಾಮ್ಸರ್ ವೆಟ್‌ಲ್ಯಾಂಡ್ ಬಳಿ ಈಗಾಗಲೇ ಸ್ಥಾಪಿಸಲಾಗಿರುವ ಪವನ ವಿದ್ಯುತ್ ಸ್ಥಾವರದಿಂದ ವಿದ್ಯುತ್ ವಿತರಿಸುವ ವಿದ್ಯುತ್ ತಂತಿಗಳಿಗೆ ಸಿಕ್ಕಿಹಾಕಿಕೊಂಡು ಅನುಮಾನಾಸ್ಪವಾಗಿ ಸಾವನ್ನಪ್ಪಿರುವ ಬ್ರಾಹ್ಮಿನಿ ಹದ್ದುಗಳು. ಚಿತ್ರ ಕೃಪೆ: ಗಯೋಮಿನಿ ಪನಗೋಡ.

ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ನೇತೃತ್ವದ ಹಿಂದಿನ ಸರ್ಕಾರವು AGEL ಜೊತೆ ಒಪ್ಪಂದ ಮಾಡಿಕೊಂಡಿದ್ದು, 20 ವರ್ಷಗಳ ಕಾಲ ಪ್ರತಿ ಯೂನಿಟ್‌ಗೆ 0.82 ಡಾಲರ್ ವಿದ್ಯುತ್ ಖರೀದಿ ಬೆಲೆಯನ್ನು ನಿಗದಿಪಡಿಸಿತ್ತು. ಈ ದರವು ಸಾಮಾನ್ಯವಾಗಿ ಸ್ಥಳೀಯ ಕಂಪನಿಗಳು ನೀಡುವ ದರಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. “ಇದು ಸುಮಾರು 70% ರಷ್ಟು ಹೆಚ್ಚಳವಾಗಿದ್ದು, ತನಿಖೆ ನಡೆಸಬೇಕಾದ ಹಗರಣ ನಡೆದಿರುವ ಒಪ್ಪಂದವಾಗಿದೆ” ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟ ವರ್ಗೀಕರಣಶಾಸ್ತ್ರಜ್ಞ ಮತ್ತು IUCN ನ ಪ್ರಭೇದಗಳ ಉಳಿವು ಆಯೋಗದ ಮಾಜಿ ಉಪಾಧ್ಯಕ್ಷ ರೋಹನ್ ಪೆಥಿಯಾಗೊಡ ಹೇಳಿದ್ದಾರೆ.

ಕಾನೂನು ಹೋರಾಟಗಳು

ಈ ಯೋಜನೆಯ ವಿರುದ್ಧ ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಸೊಸೈಟಿ , ಪರಿಸರ ನ್ಯಾಯ ಕೇಂದ್ರ ಮತ್ತು ಪರಿಸರ ಪ್ರತಿಷ್ಠಾನ ಲಿಮಿಟೆಡ್ ಸೇರಿದಂತೆ ಸ್ಥಳೀಯ ಪರಿಸರ ಸಂಸ್ಥೆಗಳು ಐದು ಮೊಕದ್ದಮೆಗಳನ್ನು ಹೂಡಿದ್ದವು.

ಜನವರಿಯಲ್ಲಿ, ಹೊಸ ಸರ್ಕಾರವು ಹೆಚ್ಚಿನ ವಿದ್ಯುತ್ ದರವನ್ನು ಉಲ್ಲೇಖಿಸಿ ಆರಂಭಿಕ ಒಪ್ಪಂದವನ್ನು ರದ್ದುಗೊಳಿಸುವ ಮತ್ತು ಅದರ ನಿಯಮಗಳು ಮತ್ತು ಷರತ್ತುಗಳನ್ನು ಮರು ಮಾತುಕತೆ ನಡೆಸುವ ಬಯಕೆಯನ್ನು ವ್ಯಕ್ತಪಡಿಸಿತು. ಪರಿಸರವಾದಿಗಳು ಈ ನಿರ್ಧಾರವನ್ನು ಸ್ವಾಗತಿಸಿದರು, ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ನಂಬಿದ್ದರು. ಆದಾಗ್ಯೂ, ಯೋಜನೆಯನ್ನು ಸ್ವತಃ ರದ್ದುಗೊಳಿಸಲಾಗಿಲ್ಲ, ಸುಂಕ ಒಪ್ಪಂದವನ್ನು ಮಾತ್ರ ರದ್ದುಗೊಳಿಸಲಾಗಿದೆ ಎಂದು AGEL ಸ್ಪಷ್ಟಪಡಿಸಿತ್ತು.

ಕಡಿಮೆ ವಿದ್ಯುತ್ ಖರೀದಿ ದರದ ಕುರಿತು ಮರು ಮಾತುಕತೆ ನಡೆಸಿದ ನಂತರ ಯೋಜನೆಯು ಮುಂದುವರಿಯಲಿದೆ ಎಂದು ಸರ್ಕಾರಿ ವಕ್ತಾರೆ ನಲಿಂದಾ ಜಯತಿಸ್ಸಾ ನಂತರ ದೃಢಪಡಿಸಿದರು. ಆದಾಗ್ಯೂ, ಎರಡು ವಾರಗಳ ನಂತರ, AGEL ಯೋಜನೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ಘೋಷಿಸಿತು, ಈ ನಿರ್ಧಾರವು ಸರ್ಕಾರದ ನಿಲುವಿನಿಂದ ಪ್ರಭಾವಿತವಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ.

ಶ್ರೀಲಂಕಾ ಎರಡು ದಶಕಗಳಿಗೂ ಹೆಚ್ಚು ಕಾಲ ಪವನ ಶಕ್ತಿಗಾಗಿ ಕೆಲಸ ಮಾಡುತ್ತಿದೆ, ಮನ್ನಾರ್‌ನಲ್ಲಿ ಥಂಬಪವಾನಿ ಎಂದು ಕರೆಯಲ್ಪಡುವ ಮೊದಲ ದೊಡ್ಡ ಪ್ರಮಾಣದ ಪವನ ವಿದ್ಯುತ್ ಸ್ಥಾವರವನ್ನು 2020 ರಲ್ಲಿ ಕಾರ್ಯಾರಂಭ ಮಾಡಲಾಯಿತು. 30 ಪವನ ಟರ್ಬೈನ್‌ಗಳನ್ನು ಒಳಗೊಂಡಿರುವ ಈ ಸೌಲಭ್ಯವು ಪ್ರಸ್ತುತ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ 20 ಟರ್ಬೈನ್‌ಗಳನ್ನು ಯೋಜಿಸಿದ್ದರೆ, ಮನ್ನಾರ್ ಪವನ ವಲಯವು 100 ಗೋಪುರಗಳನ್ನು ಮೀರುತ್ತಿತ್ತು.

ಅದಾನಿ ಗ್ರೂಪ್ ಒಟ್ಟು 442 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ವಾಗ್ದಾನ ಮಾಡಿತ್ತು, ಮತ್ತು ಈಗಾಗಲೇ 5 ಮಿಲಿಯನ್ ಡಾಲರ್ ಅನ್ನು ಪೂರ್ವ ಅಭಿವೃದ್ಧಿ ಚಟುವಟಿಕೆಗಳಲ್ಲಿ ಖರ್ಚು ಮಾಡಲಾಗಿದೆ. ಫೆಬ್ರವರಿ 15 ರಂದು, ಅದಾನಿ ಗ್ರೂಪ್‌ ಈ ಯೋಜನೆಯಿಂದ ಹೊರಬರುವ ನಿರ್ಧಾರವನ್ನು ಔಪಚಾರಿಕವಾಗಿ ಘೋಷಿಸಿತು. ಒಂದು ಹೇಳಿಕೆಯಲ್ಲಿ, “ನಾವು ಈ ಯೋಜನೆಯಿಂದ ಗೌರವಯುತವಾಗಿ ಹಿಂದೆ ಸರಿಯುತ್ತೇವೆ. ನಾವು ತಲೆಬಾಗುತ್ತಿದ್ದಂತೆ, ಶ್ರೀಲಂಕಾ ಸರ್ಕಾರವು ಯಾವುದೇ ಅಭಿವೃದ್ಧಿ ಅವಕಾಶವನ್ನು ಕೈಗೊಳ್ಳಲು ನಾವು ಯಾವಾಗಲೂ ಲಭ್ಯವಿರುತ್ತೇವೆ ಎಂದು ನಾವು ಪುನರುಚ್ಚರಿಸಲು ಬಯಸುತ್ತೇವೆ,” ಎಂದು ಅದಾನಿ ಗ್ರೂಪ್ಸ್‌ ಹೇಳಿಕೆ ನೀಡಿತ್ತು.

ಕಿರಿದಾದ ಭೂಪ್ರದೇಶದಿಂದ ಮುಖ್ಯ ಭೂಭಾಗಕ್ಕೆ ಸಂಪರ್ಕ ಹೊಂದಿದ ದುರ್ಬಲ ಪರ್ಯಾಯ ದ್ವೀಪವಾದ ಮನ್ನಾರ್‌ಗೆ ಇಂತಹ ದೊಡ್ಡ ಅಭಿವೃದ್ಧಿಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಪರಿಸರವಾದಿಗಳು ವಾದಿಸುತ್ತಾರೆ. “ಒಂದು ವೇಳೆ ಈ ಯೋಜನೆಯು ನಿರ್ಮಾಣವಾದರೆ, ದ್ವೀಪದ ಸಾಮರ್ಥ್ಯವನ್ನು ಮೀರುತ್ತದೆ” ಎಂದು ಪೆಥಿಯಗೌಡ ಹೇಳಿದ್ದಾರೆ.

ಮನ್ನಾರ್ ಬೆಳೆಯುತ್ತಿರುವ ಪ್ರವಾಸೋದ್ಯಮ ಕೇಂದ್ರ ಮಾತ್ರವಲ್ಲದೆ, ಪ್ರಾಚೀನ ಕಡಲತೀರಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ ಶ್ರೀಲಂಕಾದ ಪ್ರಮುಖ ಪಕ್ಷಿ ವಲಸೆ ಕಾರಿಡಾರ್ ಕೂಡ ಆಗಿದೆ. ಮಧ್ಯ ಏಷ್ಯಾದ ಫ್ಲೈವೇ ಉದ್ದಕ್ಕೂ ಕೊನೆಯ ಭೂಪ್ರದೇಶವಾಗಿ, ಈ ಪ್ರದೇಶವು ಜಾಗತಿಕವಾಗಿ ಅಳಿವಿನಂಚಿನಲ್ಲಿರುವ 20 ಜಾತಿಗಳು ಸೇರಿದಂತೆ ಲಕ್ಷಾಂತರ ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ ಎಂದು ಅವರು ಹೇಳಿದರು.

ವಲಸೆ ಹಕ್ಕಿಗಳ ಕುರಿತು ಉಪಗ್ರಹ ಟ್ರ್ಯಾಕಿಂಗ್ ಸಂಶೋಧನೆ ನಡೆಸಿರುವ ಕೊಲಂಬೊ ವಿಶ್ವವಿದ್ಯಾಲಯದ ಸಂಪತ್ ಸೆನೆವಿರತ್ನೆ , ಮನ್ನಾರ್‌ನ ಜಾಗತಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. “ಇಲ್ಲಿ ಚಳಿಗಾಲ ಕಳೆಯಲು ಬರುವ ಕೆಲವು ಪಕ್ಷಿಗಳು ಆರ್ಕ್ಟಿಕ್ ವೃತ್ತದವರೆಗೆ ತಮ್ಮ ವಾಸಸ್ಥಾನವನ್ನು ಹೊಂದಿವೆ” ಎಂದು ಅವರು ಹೇಳಿದರು. ಈ ಪಕ್ಷಿಗಳು ಮನ್ನಾರ್ ಪರ್ಯಾಯ ದ್ವೀಪವನ್ನು ಎಷ್ಟು ವ್ಯಾಪಕವಾಗಿ ಅವಲಂಬಿಸಿವೆ ಎಂಬುದನ್ನು ಅವರ ಸಂಶೋಧನೆ ತೋರಿಸಿದೆ.

ಟರ್ಬೈನ್‌ಗೆ ಹಕ್ಕಿಗಳು ಡಿಕ್ಕಿ ಹೊಡೆಯುವುದನ್ನು ಕಡಿಮೆ ಮಾಡಲು ಪಕ್ಷಿ ಮೇಲ್ವಿಚಾರಣಾ ರಾಡಾರ್‌ನಂತಹ ಕ್ರಮಗಳನ್ನು ಪ್ರಸ್ತಾಪಿಸಲಾಗಿದ್ದರೂ, ವಿದ್ಯುತ್ ವಿತರಿಸುವ ವಿದ್ಯುತ್ ಮಾರ್ಗಗಳು, ವಿಶೇಷವಾಗಿ ಮನ್ನಾರ್‌ನಲ್ಲಿ ಪ್ರಮುಖ ಆಕರ್ಷಣೆಯಾದ ಫ್ಲೆಮಿಂಗೊಗಳಂತಹ ಪ್ರಭೇದಗಳಿಗೆ ದೊಡ್ಡ ಬೆದರಿಕೆಯಾಗಿವೆ. ವಂಕಲೈ ರಾಮ್ಸರ್ ವೆಟ್‌ಲ್ಯಾಂಡ್ ಬಳಿ ಈಗಾಗಲೇ ಸ್ಥಾಪಿಸಲಾಗಿರುವ ಪವನ ವಿದ್ಯುತ್ ಸ್ಥಾವರದಿಂದ ವಿದ್ಯುತ್ ವಿತರಿಸುವ ವಿದ್ಯುತ್ ಮಾರ್ಗಗಳಲ್ಲಿ ಅನುಮಾನಾಸ್ಪದವಾಗಿ ಹಕ್ಕಿಗಳ ಗರಿಗಳು ಬಿದ್ದಿರುವುದು ಅವುಗಳ ಸಾವನ್ನು ಸಾಬೀತುಪಡಿಸುತ್ತವೆ.

ಪ್ರಕೃತಿ ಆಧಾರಿತ ಪ್ರವಾಸೋದ್ಯಮ

ಮನ್ನಾರ್‌ನ ಪರಿಸರ ವ್ಯವಸ್ಥೆಯ ಮಹತ್ವವನ್ನು ಗಮನಿಸಿದರೆ, ಈ ಪ್ರದೇಶವು ದೊಡ್ಡ ಪ್ರಮಾಣದ ಕೈಗಾರಿಕಾ ಯೋಜನೆಗಳಿಗಿಂತ ಹೆಚ್ಚಾಗಿ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪೂರಕವಾಗಿದೆ ಎಂದು ಪರಿಸರ ಸಂರಕ್ಷಣಾ ತಜ್ಞರು ಎಂದು ಹೇಳುತ್ತಾರೆ. “ಮನ್ನಾರ್‌ನ ಶ್ರೀಮಂತ ಜೀವವೈವಿಧ್ಯತೆ ಮತ್ತು ಐತಿಹಾಸಿಕ ಮೌಲ್ಯವು ಪ್ರಕೃತಿ ಸ್ನೇಹಿ ಪ್ರವಾಸೋದ್ಯಮಕ್ಕೆ ಸೂಕ್ತವಾಗಿದೆ, ಇದು ಸ್ಥಳೀಯ ಸಮುದಾಯಕ್ಕೂ ಪ್ರಯೋಜನವನ್ನು ನೀಡುತ್ತದೆ,” ಎಂದು ಪೆಥಿಯಗೌಡ ಹೇಳುತ್ತಾರೆ.

ಮನ್ನಾರ್ ವನ್ಯಜೀವಿ ಪ್ರಿಯರ ಸ್ವರ್ಗವಾಗಿದ್ದು, ಈಗಾಗಲೇ ಪಕ್ಷಿವೀಕ್ಷಣೆ ತಾಣವಾಗಿ ಜನಪ್ರಿಯತೆಯನ್ನು ಗಳಿಸಿದೆ. ಚಿತ್ರ ಕೃಪೆ: ಮೇವನ್ ಪಿಯಾಸೇನ.

AGEL ಹಿಂದೆ ಸರಿದಿರುವುದರಿಂದ, ಶ್ರೀಲಂಕಾ ಈಗ ತನ್ನ ನವೀಕರಿಸಬಹುದಾದ ಇಂಧನ ಮಹತ್ವಾಕಾಂಕ್ಷೆಗಳನ್ನು ಪರಿಸರ ಸಂರಕ್ಷಣೆಯೊಂದಿಗೆ ಸಮತೋಲನಗೊಳಿಸುವ ಸವಾಲನ್ನು ಎದುರಿಸುತ್ತಿದೆ. ಆದಾಗ್ಯೂ, ಶ್ರೀಲಂಕಾದಲ್ಲಿ ಹೆಚ್ಚಿನ ಪವನ ವಿದ್ಯುತ್ ಸಾಮರ್ಥ್ಯವನ್ನು ಹೊಂದಿರುವ ಇತರ ತಾಣಗಳಿವೆ ಮತ್ತು ಶ್ರೀಲಂಕಾದ ಪರಿಸರವಾದಿಗಳು ಪರಿಸರದ ವೈವಿಧ್ಯತೆಯಲ್ಲಿ ಶ್ರೀಮಂತವಾಗಿರುವ ಮನ್ನಾರ್ ಅನ್ನು ಸುಸ್ಥಿರವಲ್ಲದ ಪವನ ವಿದ್ಯುತ್ ಸ್ಥಾವರ ಯೋಜನೆಗಳಿಂದ ರಕ್ಷಿಸುತ್ತೇವೆ ಎಂಬ ಆಶಯವನ್ನು ಹೊಂದಿದ್ದಾರೆ.

ಇದು ಮೋಂಗಾಬೆಯಲ್ಲಿ ಪ್ರಕಟವಾದ ಮಲಕಾ ರೋಡ್ರಿಗೋ ಅವರ Adani withdraws from controversial wind power project ಲೇಖನದ ಕನ್ನಡಾನುವಾದವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page