Friday, June 14, 2024

ಸತ್ಯ | ನ್ಯಾಯ |ಧರ್ಮ

ಚುನಾವಣಾ ಬಾಂಡ್‌: ಖರೀದಿದಾರರ ಹೆಸರು, ಯಾವ ಪಕ್ಷಕ್ಕೆ ಎಷ್ಟೆಷ್ಟು ದೇಣಿಗೆ ನೀಡಲಾಗಿದೆ ಎನ್ನುವುದನ್ನು ಮೂರು ವಾರಗಳ ಒಳಗೆ ಬಹಿರಂಗಪಡಿಸಿ – ಸುಪ್ರೀಂ

ಚುನಾವಣಾ ಬಾಂಡ್ ಯೋಜನೆಯನ್ನು ‘ಅಸಾಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಯೋಜನೆಯು ಸಂವಿಧಾನದ 19 (1) (ಎ) ವಿಧಿಯಡಿ ‘ಮಾಹಿತಿ ಹಕ್ಕು’ ಮತ್ತು ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಉಲ್ಲಂಘಿಸುತ್ತದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ನ್ಯಾಯಪೀಠ ಹೇಳಿದೆ.

Why did the Supreme Court strike down the Electoral Bonds: ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸುವ ತೀರ್ಪನ್ನು ನೀಡಿದೆ.

ಈ ಕೂಡಲೇ ಚುನಾವಣಾ ಬಾಂಡುಗಳ ವಿತರಣೆಯನ್ನು ನಿಲ್ಲಿಸಿ, ಈ ಯೋಜನೆಯಡಿ ರಾಜಕೀಯ ಪಕ್ಷಗಳು ಸ್ವೀಕರಿಸಿದ ದೇಣಿಗೆಗಳ ವಿವರಗಳನ್ನು ಭಾರತದ ಚುನಾವಣಾ ಆಯೋಗದೊಂದಿಗೆ ಹಂಚಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ನಿರ್ದೇಶನ ನೀಡಿದೆ. ಸರ್ಕಾರ ಈ ಹಿಂದೆ ಚುನಾವಣಾ ಬಾಂಡ್‌ಗಳನ್ನು ಹಂಚುವ ಅಧಿಕಾರವನ್ನು SBI ಗೆ ನೀಡಿತ್ತು. ಈ ಆದೇಶದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ವೆಬ್ಸೈಟಿನಲ್ಲಿ ಇದುವರೆಗೆ ವಿತರಿಸಲಾದ ಎಲ್ಲಾ ಚುನಾವಣಾ ಬಾಂಡುಗಳ ಮಾಹಿತಿಯನ್ನು ಪ್ರಕಟಿಸಬೇಕಾಗುತ್ತದೆ. ಉದಾಹರಣೆಗೆ, ಯಾರು ಎಷ್ಟು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದರು, ಯಾವ ರಾಜಕೀಯ ಪಕ್ಷವು ಎಷ್ಟು ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಿತು ಮತ್ತು ಯಾವ ದಾನಿಯಿಂದ ಈ ಚುನಾವಣಾ ಬಾಂಡ್‌ಗಳನ್ನು ಪಡೆದರು, ಎನ್ನುವ ಈ ಎಲ್ಲಾ ವಿವರಗಳನ್ನು ನೀಡಬೇಕಾಗುತ್ತದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು 2024ರ ಮಾರ್ಚ್ 13ರೊಳಗೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಿದ ದೇಣಿಗೆಗಳ ಡೇಟಾವನ್ನು ಪ್ರಕಟಿಸುವಂತೆ ಭಾರತದ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ನ್ಯಾಯಾಲಯವು ಎರಡು ಪ್ರತ್ಯೇಕ ಆದರೆ ಸರ್ವಾನುಮತದ ತೀರ್ಪುಗಳನ್ನು ನೀಡಿತು. ತೀರ್ಪನ್ನು ಪ್ರಕಟಿಸಿದ ಸಿಜೆಐ, “ಅರ್ಜಿಗಳು ಕೆಲವು ಪ್ರಶ್ನೆಗಳನ್ನು ಕೇಳಿದ್ದವು- ಚುನಾವಣಾ ಬಾಂಡ್ ಯೋಜನೆ ಆರ್ಟಿಕಲ್ 19 (1) (ಎ) ಅಡಿಯಲ್ಲಿ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆಯೇ. ಮತ್ತು ಅನಿಯಮಿತ ಕಾರ್ಪೊರೇಟ್ ಧನಸಹಾಯವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ತತ್ವಗಳನ್ನು ಉಲ್ಲಂಘಿಸುತ್ತದೆಯೇ?

ಮಾಹಿತಿ ಹಕ್ಕು ಉಲ್ಲಂಘನೆ: ಸುಪ್ರೀಂ ಕೋರ್ಟ್ ತೀರ್ಪು

“ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಹಕ್ಕು ನಾಗರಿಕರಿಗೆ ಇದೆ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿವೆ. ಮಾಹಿತಿ ಹಕ್ಕನ್ನು ವಿಸ್ತರಿಸುವ ಪ್ರಮುಖ ಅಂಶವೆಂದರೆ ಇದು ರಾಜ್ಯದ ವ್ಯವಹಾರಗಳಿಗಷ್ಟೇ ಸೀಮಿತವಾಗಿರದೆ ಅದು ಭಾಗವಹಿಸುವ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಮಾಹಿತಿಯನ್ನು ಸಹ ಒಳಗೊಂಡಿದೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಂಬಂಧಿತ ಘಟಕಗಳಾಗಿವೆ ಮತ್ತು ಚುನಾವಣಾ ಆಯ್ಕೆಗಳಿಗೆ ರಾಜಕೀಯ ಪಕ್ಷಗಳಿಗೆ ದೊರೆತ ಧನಸಹಾಯದ ಬಗ್ಗೆ ಮಾಹಿತಿ ಅತ್ಯಗತ್ಯ. ಹಣ ಮತ್ತು ಮತದಾನದ ನಡುವಿನ ಸಂಬಂಧವು ರಾಜಕೀಯ ನಿಧಿದಾರರಿಗೆ ಸರ್ಕಾರಗಳ ಒಳಗೆ ಹಸ್ತಕ್ಷೇಪಕ್ಕೆ ಅವಕಾಶ ನೀಡುತ್ತದೆ… ಈ ಹಸ್ತಕ್ಷೇಪವು ನೀತಿ ನಿರೂಪಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋರ್ಟ್‌ ಹೇಳಿದೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲೆ ಕಾರ್ಪೊರೇಟ್ ನಿಧಿಯ ಪರಿಣಾಮ

ಚುನಾವಣಾ ಬಾಂಡ್ ಯೋಜನೆಯ ಕಲಂ 7 (4) (1) ರಲ್ಲಿ ಅಳವಡಿಸಿಕೊಂಡ ಕ್ರಮಗಳು ಕನಿಷ್ಠ ನಿರ್ಬಂಧಿತ ಕ್ರಮಗಳಾಗಿವೆ ಎಂದು ಸಾಧಿಸಲು ಒಕ್ಕೂಟಕ್ಕೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. “ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳಿಗೆ ತಿದ್ದುಪಡಿ ಮತ್ತು ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29 ಸಿ ಕಾರ್ಯವಿಧಾನಕ್ಕೆ ಅನುಗುಣವಾಗಿಲ್ಲ… ಆದ್ದರಿಂದ, ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಕರೆಯಬೇಕು. ಕಂಪನಿಗಳ ಕಾಯ್ದೆಯ ತಿದ್ದುಪಡಿಯನ್ನು (ನೇರ ಕಾರ್ಪೊರೇಟ್ ರಾಜಕೀಯ ಧನಸಹಾಯವನ್ನು ಅನುಮತಿಸುವುದು) “ಅಸಾಂವಿಧಾನಿಕ” ಎಂದು ಕರೆದ ಸಿಜೆಐ, ಇದು “ದೇಣಿಗೆಗಳ ಬದಲಿಗೆ ಸಿಗುವ ಲಾಭದ” ಬಗ್ಗೆ ಮಾಹಿತಿ ಪಡೆಯುವ ನಾಗರಿಕರ ಹಕ್ಕನ್ನು ಉಲ್ಲಂಘಿಸಿದೆ ಎಂದು ಕೋರ್ಟ್‌ ಹೇಳಿದೆ.

“ನಮ್ಮ ತೀರ್ಮಾನದಲ್ಲಿ, ಕಂಪನಿಗಳ ಕಾಯ್ದೆಯ ಸೆಕ್ಷನ್ 182ಗೆ ತಿದ್ದುಪಡಿ ಅನಗತ್ಯ. ಸಾಮಾನ್ಯ ಜನರಿಗಿಂತ ಕಂಪನಿಯು ರಾಜಕೀಯ ಪ್ರಕ್ರಿಯೆಯ ಮೇಲೆ ಹೆಚ್ಚು ಗಂಭೀರ ಪ್ರಭಾವ ಬೀರುತ್ತದೆ. ಕಂಪನಿಗಳಿಂದ ಬರುವ ರಾಜಕೀಯ ಧನಸಹಾಯವು ಸಂಪೂರ್ಣವಾಗಿ ವಾಣಿಜ್ಯ ವಹಿವಾಟುಗಳಾಗಿವೆ. ಕಂಪನಿಗಳ ಕಾಯ್ದೆಯ ಸೆಕ್ಷನ್ 182ರ ತಿದ್ದುಪಡಿಯು ಕಂಪನಿಗಳು ಮತ್ತು ಸಾಮಾನ್ಯ ಜನರನ್ನು ಸಮಾನವಾಗಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಕಂಪನಿಗಳ ಕಾಯ್ದೆಗೆ ತಿದ್ದುಪಡಿ ತರುವ ಮೊದಲು, ನಷ್ಟದಲ್ಲಿರುವ ಕಂಪನಿಗಳು ರಾಜಕೀಯ ದೇಣಿಗೆ ನೀಡಲು ಸಾಧ್ಯವಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. “ಕಂಪನಿಗಳ ಕಾಯ್ದೆಯ ಸೆಕ್ಷನ್ 182ರ ತಿದ್ದುಪಡಿಯು ನಷ್ಟದಲ್ಲಿರುವ ಕಂಪನಿಗಳು ರಾಜಕೀಯ ನಿಧಿಗೆ ಬದಲಾಗಿ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯನ್ನು ಪರಿಹರಿಸುವುದಿಲ್ಲ. ಕಂಪನಿಗಳ ಕಾಯ್ದೆಯ ಸೆಕ್ಷನ್ 182 ರ ತಿದ್ದುಪಡಿಯು ನಷ್ಟದಲ್ಲಿರುವ ಮತ್ತು ಲಾಭದಾಯಕ ಕಂಪನಿಗಳ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ.” ಎಂದೂ ತೀರ್ಪು ಹೇಳಿದೆ.

ಚುನಾವಣಾ ಬಾಂಡ್ ವಿತರಿಸದಂತೆ SBI ಗೆ ಸುಪ್ರೀಂ ಸೂಚನೆ

ಚುನಾವಣಾ ಬಾಂಡ್‌ಗಳ ವಿತರಣೆಯನ್ನು ತಕ್ಷಣ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸೂಚಿಸಿದೆ. ಏಪ್ರಿಲ್ 12, 2019ರ ಮಧ್ಯಂತರ ಆದೇಶದಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 6ರೊಳಗೆ ಒದಗಿಸಬೇಕು. ಬಾಂಡ್ ನಗದೀಕರಿಸಿದ ದಿನಾಂಕ ಮತ್ತು ಅದರ ಮೌಲ್ಯ ಸೇರಿದಂತೆ ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡಿನ ವಿವರಗಳನ್ನು SBI ಬಹಿರಂಗಪಡಿಸಬೇಕಾಗುತ್ತದೆ. ಚುನಾವಣಾ ಆಯೋಗವು ಈ ವಿವರಗಳನ್ನು ಮಾರ್ಚ್ 13, 2024ರೊಳಗೆ ತನ್ನ ವೆಬ್ಸೈಟಿಲ್ಲಿ ಪ್ರಕಟಿಸಲಿದೆ.

“15 ದಿನಗಳ ಸಿಂಧುತ್ವ ಮುಗಿದಿಲ್ಲದ, ಆದರೆ ರಾಜಕೀಯ ಪಕ್ಷಗಳು ಇನ್ನೂ ನಗದೀಕರಿಸದ ಚುನಾವಣಾ ಬಾಂಡುಗಳನ್ನು ರಾಜಕೀಯ ಪಕ್ಷವು ಖರೀದಿದಾರರಿಗೆ ಹಿಂದಿರುಗಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಂತರ SBI ಬಾಂಡ್ ಮೊತ್ತವನ್ನು ಖರೀದಿದಾರರಿಗೆ ಮರುಪಾವತಿಸುತ್ತದೆ. ಚುನಾವಣಾ ಬಾಂಡ್ ಯೋಜನೆಯನ್ನು ಜನವರಿ 2, 2018ರಂದು ಅಧಿಸೂಚನೆ ಹೊರಡಿಸಲಾಯಿತು. ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಗಳಿಗೆ ಪರ್ಯಾಯವಾಗಿ ಇದನ್ನು ಪರಿಚಯಿಸಲಾಯಿತು.

ಆದರೆ ಇದುವರೆಗೆ ಸಾವಿರಾರು ಕೋಟಿ ಮೊತ್ತವನ್ನು ಅಕ್ರಮವಾಗಿ ದೇಣಿಗೆಯಾಗಿ ಪಡೆದ ಪಕ್ಷಗಳು ಅದನ್ನು ಹಿಂದಿರುಗಿಸಲಿವೆಯೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಊರು ಸೂರೆ ಹೋದ ನಂತರ ದಿಡ್ಡಿ ಬಾಗಿಲು ಹಾಕಿದಂತಹ ಇಂತಹ ಕ್ರಮಗಳಿಂದ ದೇಶದ ಜನರಿಗೆ ಎಷ್ಟರಮಟ್ಟಿಗೆ ಪ್ರಯೋಜನವಾಗಲಿದೆ ಎನ್ನುವುದನ್ನು ಕಾಲವೇ ಹೇಳಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು