Monday, February 23, 2026

ಸತ್ಯ | ನ್ಯಾಯ |ಧರ್ಮ

ಛಲವಾದಿ ನಾರಾಯಣಸ್ವಾಮಿ ಯಾಕೆ ರಾಜೀನಾಮೆ ಕೊಟ್ಟಿಲ್ಲ?: ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ಚುನಾವಣೆಯಲ್ಲಿ ಅಂಬೇಡ್ಕರ್ ಅವರ ಸೋಲಿಗೆ ಸಾವರ್ಕರ್ ಅವರೇ ಕಾರಣ ಎಂಬ ಬಗ್ಗೆ ನಾನು ದಾಖಲೆ ನೀಡಿದ ಮೇಲೂ ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಇನ್ನೂ ಯಾಕೆ ರಾಜೀನಾಮೆ ನೀಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೇವಲ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ನನ್ನನ್ನು ಬಯ್ಯುವುದಕ್ಕಾಗಿಯೇ ಛಲವಾದಿ ಅವರನ್ನು ಆ ಸ್ಥಾನದಲ್ಲಿ ಇರಿಸಿದ್ದಾರೆ ಎಂದು ಟೀಕಿಸಿದರು.

ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಂಡ ಮೇಲೆಯೇ ಅವರಿಗೆ ಆ ಸ್ಥಾನಮಾನ ಸಿಕ್ಕಿದೆ ಮತ್ತು ಅವರು ನಮ್ಮನ್ನು ಬಯ್ಯುವುದನ್ನು ನಿಲ್ಲಿಸಿದ ದಿನವೇ ಅವರ ಸ್ಥಾನಮಾನ ಕಸಿದುಕೊಳ್ಳಲಾಗುತ್ತದೆ ಎಂದು ಪ್ರಿಯಾಂಕ್ ಲೇವಡಿ ಮಾಡಿದರು. ತಮ್ಮ ಸವಾಲಿನಂತೆ ದಾಖಲೆ ಕೊಟ್ಟರೂ ರಾಜೀನಾಮೆ ನೀಡದ ಛಲವಾದಿ ಅವರ ಮಾತಿಗೆ ಈಗ ಬೆಲೆಯೇ ಇಲ್ಲ ಎಂದು ಅವರು ಹೇಳಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಛಲವಾದಿ ನಾರಾಯಣಸ್ವಾಮಿ ಅವರು, “ನಾನೇಕೆ ರಾಜೀನಾಮೆ ಕೊಡಲಿ? ನಾನು ನಿಮ್ಮ ಕುಟುಂಬದ ಜಹಗೀರ್‌ನಲ್ಲಿ ಇಲ್ಲ” ಎಂದು ತಿರುಗೇಟು ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ನೀಡಿರುವ ದಾಖಲೆಗಳು ಇಂಗ್ಲಿಷ್ ಭಾಷೆಯಲ್ಲಿದ್ದು, ಅರ್ಥವಾಗದಿದ್ದರೆ ಇಂಗ್ಲಿಷ್ ಬರುವವರಿಂದ ಕೇಳಿ ತಿಳಿದುಕೊಳ್ಳಲಿ ಎಂದು ಅವರು ಲೇವಡಿ ಮಾಡಿದರು.

ನಾನು ಸಾಕಷ್ಟು ವಿಚಾರಗಳನ್ನು ನುಂಗಿಕೊಂಡಿದ್ದೇನೆ, ಕೆಣಕಿದರೆ ಕುಟುಕುತ್ತೇನೆ ಎಂದು ಎಚ್ಚರಿಕೆ ನೀಡಿದ ಛಲವಾದಿ, ಪ್ರಿಯಾಂಕ್ ಖರ್ಗೆ ಅವರು ಎಂದಾದರೂ ದಲಿತರ ಪರ ಹೋರಾಟ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಪ್ರಿಯಾಂಕ್ ಅವರು ಕೇವಲ ಅಪ್ಪನ ನೆರಳಿನಲ್ಲಿ ಅಧಿಕಾರ ಅನುಭವಿಸುತ್ತಿರುವ ಪಿತ್ರಾರ್ಜಿತ ರಾಜಕಾರಣಿ, ಆದರೆ ನನ್ನದು ಸ್ವಯಾರ್ಜಿತ ರಾಜಕಾರಣ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page