Saturday, June 15, 2024

ಸತ್ಯ | ನ್ಯಾಯ |ಧರ್ಮ

ಬಡವರ ಬಗ್ಗೆ ಯಾಕಿಷ್ಟು ದ್ವೇಷ?!

ಬಡವರಿಗೆ ನೀಡುವ ಉಚಿತಗಳು ಬಿಟ್ಟಿ ಭಾಗ್ಯಗಳಲ್ಲ; ಭಿಕ್ಷೆಯಲ್ಲ. ಅವು ಅವರ ಹಕ್ಕು. ಹಸಿದವರಿಗೆ ಅನ್ನವೇ ದೇವರು. ಸರ್ವೋದಯ ಬಯಸುವ ಯಾವುದೇ ಒಂದು ಚುನಾಯಿತ ಸರಕಾರ ತನ್ನ ನಾಡಿನ ಬಡವರನ್ನು, ದುರ್ಬಲರನ್ನು ತಾಯಿ ಮಮತೆಯಿಂದ ನೋಡಿಕೊಳ್ಳಬೇಕು – ಶ್ರೀನಿವಾಸ ಕಾರ್ಕಳ

“When there is not enough to eat, people starve to death. It is better to have half the people to die, so that the other half can eat their fill” (ತಿನ್ನಲು ಸಾಕಷ್ಟು ಲಭ್ಯವಿಲ್ಲದಿದ್ದಾಗ ಜನರು ಹಸಿವಿನಿಂದ ಸಾಯುತ್ತಾರೆ. ಅರ್ಧದಷ್ಟು ಜನಸಂಖ್ಯೆ ಸಾಯುವುದೇ ಒಳ್ಳೆಯದು. ಆಗ ಉಳಿದ ಅರ್ಧ ಜನಸಂಖ್ಯೆ ಹೊಟ್ಟೆ ತುಂಬ ತಿನ್ನಬಹುದು) ಎಂದು ಚೀನಾದ ಮಾಜಿ ಅಧ್ಯಕ್ಷ ಮಾವೋ ಹಿಂದೊಮ್ಮೆ ಹೇಳಿದ್ದನಂತೆ. ಇನ್ಫೋಸಿಸ್ ಸ್ಥಾಪಕರಲ್ಲೊಬ್ಬರಾದ ಮೋಹನದಾಸ್ ಪೈ ಮತ್ತು ಅವರ ಸಂಗಡಿಗರು ನಿನ್ನೆಯಿಂದ ಈ ದೇಶದ ಬಡವರ ವಿರುದ್ಧ ನಡೆಸುತ್ತಿರುವ ಅಭಿಯಾನವನ್ನು ನೋಡಿದಾಗ ಯಾಕೋ ಮಾವೋನ ಈ ಮಾತುಗಳು ನೆನಪಾದವು.

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಹೊಸ ಸರಕಾರ ರಾಜ್ಯದ ಬಡವರನ್ನು ಗಮನದಲ್ಲಿರಿಸಿಕೊಂಡು ಅನ್ನಭಾಗ್ಯ, ಮನೆಯ ಒಡತಿಯರಿಗೆ ಆರ್ಥಿಕ ನೆರವು, ಜನರಿಗೆ ಉಚಿತ ವಿದ್ಯುತ್, ನಿರುದ್ಯೋಗಿ ಪದವೀಧರರಿಗೆ ಮತ್ತು ಡಿಪ್ಲೊಮಾದಾರರಿಗೆ ಆರ್ಥಿಕ ನೆರವು, ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಹೀಗೆ ಕೆಲವೊಂದು ಉಚಿತಗಳನ್ನು ಜಾರಿಗೊಳಿಸಲು ಹೊರಟಿದ್ದು, ಇದರ ಬಗ್ಗೆ ಸಹಜವಾಗಿಯೇ ಬಿಜೆಪಿಯ ಮಂದಿ ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂಬ ಮಾತಿನಂತೆ ಟೀಕೆ ಲೇವಡಿ ಮಾಡಲಾರಂಭಿಸಿದ್ದಾರೆ (ಇವರ ಅಸಹನೆ ಉಚಿತಗಳ ಬಗ್ಗೆ ಅಲ್ಲ, ಕಾಂಗ್ರೆಸ್ ಬಗ್ಗೆ ಎಂಬುದು ರಹಸ್ಯವೇನೂ ಅಲ್ಲ).

ಹಸಿವಿನ ಅರಿವಿಲ್ಲದ ಮೋಹನದಾಸ ಪೈ ನಿನ್ನೆಯಿಂದ “I am tax payer, My tax is for development of nation, not for free distribution” (ನಾನು ತೆರಿಗೆ ಪಾವತಿಸುವವ, ನನ್ನ ತೆರಿಗೆ ದೇಶದ ಅಭಿವೃದ್ಧಿಗೇ ಹೊರತು ಉಚಿತಗಳ ವಿತರಣೆಗಲ್ಲ) ಎಂಬ ಟ್ವಿಟರ್ ಅಭಿಯಾನ ಆರಂಭಿಸಿದ್ದು ಅದಕ್ಕೆ 37 ಸಾವಿರ ಕ್ಕೂ ಅಧಿಕ ಮಂದಿ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ!

ಭಿಕ್ಷುಕ ಕೂಡಾ ತೆರಿಗೆ ತೆರುತ್ತಾನೆ

ಮೋಹನದಾಸ್ ಪೈಯವರ ಹೇಳಿಕೆಯಲ್ಲಿಯೇ ಎಂತಹ ಅವಿವೇಕ, ದುರಹಂಕಾರ ಮತ್ತು ಬೂಟಾಟಿಕೆಯ ಮಾತುಗಳಿವೆ ನೋಡಿ. ಇಲ್ಲಿ ‘ನಾನು ಟ್ಯಾಕ್ಸ್ ಪೇಯರ್’ ಎನ್ನುತ್ತಾರೆ ಅವರು. ಧ್ವನಿ ಹೇಗಿದೆ ಎಂದರೆ, ಶ್ರೀಯುತ ಪೈ ಮಾತ್ರ ತೆರಿಗೆ ಪಾವತಿಸುವವರು!

ಹಾಗೆ ನೋಡಿದರೆ, ಈ ದೇಶದಲ್ಲಿ ತೆರಿಗೆ ಪಾವತಿಸದ ಪ್ರಜೆಗಳು ಯಾರಿದ್ದಾರೆ? ಒಬ್ಬ ಭಿಕ್ಷುಕ ಕೂಡಾ ಒಂದು ಪ್ಯಾಕೆಟ್ ಪಾರ್ಲೆಜಿ ಬಿಸ್ಕಿಟ್ ಖರೀದಿಸಿದರೆ ಅದಕ್ಕೆ ಆತ ತೆರಿಗೆ ಪಾವತಿಸುತ್ತಾನೆ. ಸಂವೇದನಾಹೀನ ಜಿ ಎಸ್ ಟಿ ಪದ್ಧತಿ ಜಾರಿಗೆ ಬಂದ ಮೇಲೆ ಹಾಲು, ಮೊಸರು, ಮಜ್ಜಿಗೆಯಿಂದ ಹಿಡಿದು ಪ್ರತಿಯೊಂದಕ್ಕೂ ತೆರಿಗೆ ವಿಧಿಸಲಾಗಿದೆ. ಈ ತೆರಿಗೆಗಳಿಂದ ಯಾತನೆ ಅನುಭವಿಸಿದ್ದು, ಕಳೆದುಕೊಂಡದ್ದು ಈ ದೇಶದ ಶ್ರೀಸಾಮಾನ್ಯರು. ‘ಆಕ್ಸ್ ಫಾಮ್’ ಸಂಸ್ಥೆ ತನ್ನ ವರದಿಯಲ್ಲಿ ‘ದೇಶದ ಒಟ್ಟು ಜಿ ಎಸ್ ಟಿ ಸಂಗ್ರಹದಲ್ಲಿ ಮೂರನೇ ಎರಡರಷ್ಟು ಬರುವುದು ಬಡವರಿಂದ, ಅದೇ ಹೊತ್ತಿನಲ್ಲಿ ಈ ದೇಶದ 1% ಧನಿಕರು ದೇಶದ 40% ಆಸ್ತಿಯ ಒಡೆಯರಾಗಿದ್ದಾರೆ’ ಎಂದಿದೆ.

ಇದೇ ಮೋಹನದಾಸ್ ಪೈಯವರು ಕಾರ್ಪೋರೇಟ್ ಬಳಗಕ್ಕೆ ಸೇರಿದವರು. ಉದ್ಯಮಗಳಿಗೆ ಕಡಿಮೆ ದರದಲ್ಲಿ ಭೂಮಿ, ತೆರಿಗೆ ರಜೆ, ತೆರಿಗೆ ರಿಯಾಯಿತಿ, ಎಸ್ ಇ ಝಡ್ ನ ಅನುಕೂಲಗಳು ಹೀಗೆ ಸರಕಾರಗಳು ಕೊಡುವ ರಿಯಾಯಿತಿಗಳು ಒಂದೆರಡಲ್ಲ. ಇವುಗಳಿಂದ ದೇಶದ ಬೊಕ್ಕಸಕ್ಕಾಗುವ ನಷ್ಟ ಅಪಾರ. 2019 ರಲ್ಲಿ ಕಾರ್ಪೋರೇಟ್ ತೆರಿಗೆ ರಿಯಾಯಿತಿಯಿಂದ 1.84 ಲಕ್ಷ ಕೋಟಿ ರೆವಿನ್ಯೂ ನಷ್ಟವಾಗಿತ್ತು. 2021 ರಲ್ಲಿ ಬ್ಯಾಂಕುಗಳು ಉದ್ಯಮಿಗಳ 2.02 ಲಕ್ಷ ಕೋಟಿ ರುಪಾಯಿ ರೈಟ್ ಆಫ್ ಮಾಡಿದ್ದವು. 2014 ರಿಂದ 2021 ರ ವರೆಗೆ ಅಂದರೆ ಏಳು ವರ್ಷಗಳಲ್ಲಿ ಬ್ಯಾಂಕುಗಳು 10.7 ಲಕ್ಷ ಕೋಟಿ ರುಪಾಯಿ ರೈಟ್ ಆಫ್ ಮಾಡಿದ್ದವು. ಈ ಅನುಕೂಲಗಳು ದೇಶದ ಬಡವರಿಗೆ ದೊರೆಯುತ್ತವೆಯೇ?

ಪ್ರತಿಮೆಗಳಿಗೆ, ಸೆಂಟ್ರಲ್ ವಿಸ್ಟಾ, ಪ್ರಧಾನಿಗಳ ಐಷಾರಾಮಿ ವಿಮಾನಗಳು, ಪ್ರಧಾನಿಗಳ ರೋಡ್ ಶೋಗಳಿಗೆ ಸರಕಾರಿ ಖಜಾನೆಯಿಂದ ಮಾಡುವ ಖರ್ಚುಗಳ ಬಗ್ಗೆ ಪೈಯಂತಹ ಬಿಜೆಪಿ ಬೆಂಬಲಿಗರಿಗೆ ಆಕ್ಷೇಪವಿಲ್ಲ. ಅವರಿಗೆ ಆಕ್ಷೇಪ ಇರುವುದು ಬಡವರಿಗೆ ಕೊಡುವ ಹತ್ತು ಕಿಲೋ ಅಕ್ಕಿಯ ಬಗ್ಗೆ, ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣದ ಅವಕಾಶದ ಬಗ್ಗೆ, ಬೆಲೆ ಏರಿಕೆಯಿಂದ ತತ್ತರಿಸಿರುವ ದಿನಗಳಲ್ಲಿ ಬಡ ಮನೆಗಳ ಯಜಮಾನಿಯರಿಗೆ ತಿಂಗಳಿಗೆ ನೀಡುವ ಜುಜುಬಿ 2000 ರುಪಾಯಿ ಆರ್ಥಿಕ ನೆರವಿನ ಬಗ್ಗೆ!

ಅನ್ನಭಾಗ್ಯ ಎಂಬ ಜೀವದಾಯಿನಿ

ಈ ದೇಶದಲ್ಲಿ ಎಲ್ಲ ಸುಖಸೌಲಭ್ಯಗಳನ್ನೂ ಬಿಲಿಯಾಧಿಪತಿಗಳೇ ಅನುಭವಿಸುತ್ತಿರುವ ಹೊತ್ತಿನಲ್ಲಿ ಕೆಲವಾದರೂ ಸರಕಾರಗಳು ಬಡ ಜನರ ಹೊಟ್ಟೆಯ ಹಸಿವಿನ ಬಗ್ಗೆ ಗಂಭೀರವಾಗಿ ಯೋಚಿಸ ತೊಡಗಿದ್ದು ತೀರಾ ಇತ್ತೀಚಿನ ವರ್ಷಗಳಲ್ಲಿ. ಬಡವರಿಗೆ ನೆರವಾಗುವ ಅನ್ನಭಾಗ್ಯದಂತಹ ಕಾರ್ಯಕ್ರಮವನ್ನು ಮೊದಲು ಆರಂಭಿಸಿದ್ದು ನೆರೆಯ ತಮಿಳುನಾಡು. ಆ ಕಾರ್ಯಕ್ರಮ ಬಡವರ ಆರ್ಥಿಕ ಸ್ಥಿತಿಯಲ್ಲಿ ಎಂತಹ ಅದ್ಭುತ ಬದಲಾವಣೆಯನ್ನು ತಂದಿತು ಎಂಬುದನ್ನು ಸ್ಮರಿಸುತ್ತಾ ಅನ್ನಭಾಗ್ಯದ ಬಗ್ಗೆ ಹಿರಿಯ ಚಿಂತಕ ಸುರೇಶ್ ಕಂಜರ್ಪಣೆ ಹೀಗೆ ಹೇಳುತ್ತಾರೆ –

“ಉಚಿತ ಅಥವಾ subsidized ಅಕ್ಕಿ ನೀಡಿದ ಮೊದಲ ರಾಜ್ಯ ತಮಿಳುನಾಡು. ಆಗಲೂ ಈ ಬಿಟ್ಟಿಭಾಗ್ಯದ ಬಗ್ಗೆ ಟೀಕೆ, ಲೇವಡಿ ಬಂದಿತ್ತು. ಆದರೆ ಮತಗಳು ಹರಿದು ಬಂದದ್ದು ಮಾತ್ರಾ ಅಲ್ಲ; ಹತ್ತು ಹಲವು ಅಧ್ಯಯನಗಳು ಹೇಗೆ ಇದು ಬಡವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿತು ಎಂದು ಸಿದ್ಧ ಮಾಡಿವೆ. ಈ ಅಕ್ಕಿ ಪಡೆದವರು ಅದರ ಒಂದಂಶ ಮಾರಿಕೊಳ್ಳುತ್ತಾರೆ ಎಂಬ ಟೀಕೆಯೂ ಬಂತು.

ಆಗ (ಪ್ರಾಯಶಃ) ಜಯಲಲಿತಾ ನೀಡಿದ ಉತ್ತರ ಗಮನಾರ್ಹ. ಆಕೆ ಹೇಳಿದರೆನ್ನಲಾದ ಮಾತುಗಳು ಸುಮಾರಾಗಿ ಇಷ್ಟು:

ಅಕ್ಕಿ ಕೊಳ್ಳುವ ಚಿಂತೆ (ಈಗಿನ ದರದಲ್ಲಿ ಅಂದಾಜು ₹1500/-, 30 kg ಗೆ) ನೀಗಿದರೆ, ಆ ಮನೆಯ ಸಣ್ಣ ಪುಟ್ಟ ಆಸೆ, ಅವಶ್ಯಕತೆಗಳಿಗೆ ವೆಚ್ಚ ಮಾಡುವ ಧೈರ್ಯ ಮನೆಯಾಕೆಗೆ ಬರುತ್ತೆ.  ಒಂದು ಹೇರ್ ಕ್ಲಿಪ್, ಬಳೆ, ಮಗುವಿಗೆ ಸಂತೆಯ ಅಗ್ಗದ ಫ್ರಾಕು, ಒಂದು ಪುಟ್ಟ ಆಟಿಕೆ ಕಾರು; ಹಬ್ಬಕ್ಕೊಂದು ಅಗ್ಗದ ಸೀರೆ – ಹೀಗೆ.

ಈ ಚಿನ್ನ ಚಿನ್ನ ಆಸೆಗಳನ್ನು ಹತ್ತಿಕ್ಕಿ ಬದುಕುವ ಬಗೆ ಮಧ್ಯಮ ವರ್ಗಕ್ಕೆ ಅರ್ಥವಾಗದು. ಹತ್ತು ರುಪಾಯಿ ಖರ್ಚು‌ಮಾಡಲೂ ತಡೆಯುವ ಅಭದ್ರ ಭವಿಷ್ಯದ ಚಿಂತೆ ಸೃಷ್ಟಿಸುವ ದುಃಖ ಉಳ್ಳವರಿಗೆ ಅರ್ಥವಾಗದು.  ಅಕ್ಕಿಯ ಬಾಬ್ತು ಉಳಿಸಿದ ಕಾಸು ಇಂಥಾ ಕುಶಿಗಳಿಗೆ ವೆಚ್ಚವಾಗಲಿ, ಪರವಾಗಿಲ್ಲ.

ಅನ್ನ ಭಾಗ್ಯ ಮನೆಯಾಕೆ, ಮಕ್ಕಳ ಪುಟ್ಟ ಆಸೆಗಳ ಈಡೇರಿಕೆಗೆ ಸಹಾಯವಾದರೆ ಒಳ್ಳೆಯದೇ.

ತಮಿಳುನಾಡಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಇದೇ ಅಕ್ಕಿ ಯಲ್ಲಿ ತಿಂಡಿ ತಿನಿಸು ಮಾಡಿ‌ಮಾರುತ್ತಾರಂತೆ! ಈ ಬಗ್ಗೆ ಕೊಂಕು ತೆಗೆದಾಗಲೂ ಸರಕಾರ, “ಮಾಡಲಿ ಬಿಡಿ, ಉತ್ಪಾದನಾ ವೆಚ್ಚಕಡಿಮೆಯಾಗುತ್ತೆ!” ಎಂದು ಹೇಳಿತಂತೆ.

ಈ ಆರ್ಥಿಕ, ಮಾನಸಿಕ ಸಂಗತಿಗಳನ್ನು ಸಿದ್ಧು ಸರಕಾರ ಅನ್ನ ಭಾಗ್ಯದ ವಿಸ್ತೃತ ಲಾಭಗಳೆಂದು ಪರಿಗಣಿಸಬೇಕು”

ಲಾಭಗಳು ಒಂದೆರಡಲ್ಲ

ಅನ್ನಭಾಗ್ಯದಂತಹ ಯೋಜನೆಗಳು ಏಕಕಾಲಕ್ಕೆ ಅನೇಕ ಸಕಾರಾತ್ಮಕ ಬೆಳವಣಿಗೆಗಳಿಗೆ ಕಾರಣವಾಗುತ್ತವೆ. ಒಂದೆಡೆಯಲ್ಲಿ ಅದು ರೈತರಿಗೆ ಲಾಭದಾಯಕ ಬೆಲೆ ತಂದುಕೊಡುವ ‘ರೈತಭಾಗ್ಯ’ವಾದರೆ, ಇನ್ನೊಂದೆಡೆಯಲ್ಲಿ ಬಡವರ ಹಸಿವನ್ನು ನೀಗಿಸುವುದು ಮಾತ್ರವಲ್ಲ, ಅವರ ಕೈಯಲ್ಲಿ ಒಂದಿಷ್ಟು ಹಣ ಉಳಿಯುವಂತೆಯೂ ಮಾಡುತ್ತದೆ.

ನನಗೇ ಗೊತ್ತಿರುವ ನಿಜಕತೆಯೊಂದನ್ನು ಹೇಳುತ್ತೇನೆ. ನಾಲ್ವರು ಹೆಂಗಸರು ಮಾತ್ರ ಇರುವ ಬಡವರ ಮನೆಯದು. ಯಜಮಾನ ತೀರಿಕೊಂಡಿದ್ದಾನೆ. ಯಜಮಾನಿ ಮತ್ತು ಆಕೆಯ ಮೂವರು ಹೆಣ್ಣುಮಕ್ಕಳು ಅಲ್ಲಿರುವುದು. ವಯಸ್ಸು ನಲವತ್ತು ದಾಟಿದರೂ ಇಬ್ಬರಿಗೆ ಮದುವೆಯಾಗಿಲ್ಲ. ಒಬ್ಬಳು ಮದುವೆಯಾಗಿಯೂ ತವರಿಗೆ ವಾಪಸಾದವಳು. ನಾಲ್ವರೂ ಬೀಡಿ ಸುತ್ತಿ ಮತ್ತು ಅಲ್ಲಿ ಇಲ್ಲಿ ಮನೆಗೆಲಸ ಮಾಡಿ ಸಿಕ್ಕ ಹಣದಲ್ಲಿ ಬದುಕುತ್ತಾರೆ. ಗಳಿಸಿದ ಸಂಪಾದನೆ ಹೊಟ್ಟೆಯ ಹಸಿವು ನೀಗಿಸಲು ಅಲ್ಲಿಂದಲ್ಲಿಗೆ ಸಾಲುತ್ತಿತ್ತು ಅಷ್ಟೇ.

ಬೀಳುವ ಹಂತದಲ್ಲಿದ್ದ ಮನೆ ದುರಸ್ತಿ ಮಾಡಲು ಅವರು ಸುಮಾರು ಒಂದು ಲಕ್ಷ ಸಾಲ ಮಾಡ ಬೇಕಾಯಿತು. ಸಾಲ ಮಾಡಿದರು. ಮನೆ ಕಟ್ಟಿದರು. ಆದರೆ ಸಂಪಾದನೆ ಹೆಚ್ಚಿಲ್ಲದ ಕಾರಣ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಆಗುತ್ತಿರಲಿಲ್ಲ. ಸಾಲ ನೀಡಿದವರು ಪೀಡಿಸುತ್ತಿದ್ದರು, ನಿತ್ಯ ಅವಮಾನಿಸುತ್ತಿದ್ದರು.

ಇಂತಹ ಹೊತ್ತಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು (2013). ಅನ್ನಭಾಗ್ಯ ಜಾರಿಗೆ ತಂದರು. ಉಚಿತ ಅಕ್ಕಿಯ ಕಾರಣ ಊಟದ ಚಿಂತೆ ನೀಗಿತು. ಹಾಗಾಗಿ ಸಂಪಾದಿಸಿದ ಹಣವನ್ನು ಸಾಲ ಮರುಪಾವತಿಗೆ ಬಳಸುವುದು ಸಾಧ್ಯವಾಯಿತು. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ಹೊತ್ತಿಗಾಗುವಾಗ ಅವರ ಸಾಲವೂ ಮುಗಿದಿತ್ತು. ಸಾಲದ ಭಯವಿಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುವುದು ಆ ಬಡ ಕುಟುಂಬಕ್ಕೆ ಸಾಧ್ಯವಾಗಿತ್ತು.

ಭಿಕ್ಷೆಯಲ್ಲ ಹಕ್ಕು

2019 ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ ‘ನ್ಯಾಯ ಯೋಜನೆ’ಯ ಹಿಂದೆ ಇದ್ದುದೂ ಇದೇ ಆಶಯ. ಧನಿಕರು ಹಣವನ್ನು ಕೂಡಿಡುತ್ತಾರೆ. ಆದರೆ, ಬಡವರ ಕೈಯಲ್ಲಿ ಇರಿಸಿದ ಹಣ ಅದು ಅಲ್ಲೇ ಉಳಿಯುವುದಿಲ್ಲ. ಅವರು ಅಂಗಡಿಯಿಂದ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಾರೆ. ಆಗ ವಸ್ತುಗಳಿಗೆ ಬೇಡಿಕೆ ಉಂಟಾಗುತ್ತದೆ. ಆ ಬೇಡಿಕೆಯನ್ನು ಪೂರೈಸಲು ಕೈಗಾರಿಕೆಗಳು ಕೆಲಸ ಮಾಡಬೇಕಾಗುತ್ತದೆ. ಅರ್ಥ ವ್ಯವಸ್ಥೆಯ ಚಕ್ರ ತಿರುಗಲಾರಂಭಿಸುತ್ತದೆ. ಒಂದೆಡೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಯಾದರೆ, ಇನ್ನೊಂದೆಡೆ ಸರಕಾರಕ್ಕೆ ಹೆಚ್ಚು ಹೆಚ್ಚು ತೆರಿಗೆಯೂ ಬರಲಾರಂಭಿಸುತ್ತದೆ. ಬಡವರಿಗೆ ಕೊಡುವ ಹಣ ಅಂತಿಮವಾಗಿ ನಾಡಿನ ಆರೋಗ್ಯವನ್ನು, ಉತ್ಪಾದಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಸಾಧಿಸಿ ಖಜಾನೆಗೇ ಮರಳುತ್ತದೆ.

ಇಷ್ಟಕ್ಕೂ ಜನಸಾಮಾನ್ಯರ ತೀರಾ ಅಗತ್ಯಗಳಿಗೆ ನೆರವಾಗುವ ಇಂತಹ ಸೌಲಭ್ಯಗಳಿಗೆ ಆಗುವ ಖರ್ಚಾದರೂ ಎಷ್ಟು? ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳುವ ಪ್ರಕಾರ, ಕರ್ನಾಟಕದಿಂದ ಜಿ ಎಸ್ ಟಿ ಮೂಲಕ ಒಕ್ಕೂಟ ಸರಕಾರವು ಸಂಗ್ರಹಿಸುವುದು ವಾರ್ಷಿಕ 4 ಲಕ್ಷ ಕೋಟಿ ರುಪಾಯಿ. ಆದರೆ ರಾಜ್ಯಕ್ಕೆ ಅದು ಮರಳಿಸುವುದು ಕೇವಲ 50 ಸಾವಿರ ಕೋಟಿ. ಕರ್ನಾಟಕ ಸರಕಾರದ ಬಜೆಟ್ ಗಾತ್ರ 3 ಲಕ್ಷ ಕೋಟಿಗೂ ಅಧಿಕ. ಈಗ ಹೊಸ ಸರಕಾರವು ಕೊಡಲು ಹೊರಟ ಉಚಿತಗಳಿಗೆ ತಗಲುವ ಖರ್ಚು ವಾರ್ಷಿಕ ಕೇವಲ 50 ಸಾವಿರ ಕೋಟಿ  ರುಪಾಯಿ.

ಬಡವರೂ ಈ ದೇಶದ ತೆರಿಗೆದಾರರು. ಬಡವರಿಗೆ ನೀಡುವ ಉಚಿತಗಳು ಬಿಟ್ಟಿ ಭಾಗ್ಯಗಳಲ್ಲ; ಭಿಕ್ಷೆಯಲ್ಲ. ಅವು ಅವರ ಹಕ್ಕು. ಹಸಿದವರಿಗೆ ಅನ್ನವೇ ದೇವರು. ಸರ್ವೋದಯ ಬಯಸುವ ಯಾವುದೇ ಒಂದು ಚುನಾಯಿತ ಸರಕಾರ ತನ್ನ ನಾಡಿನ ಬಡವರನ್ನು, ದುರ್ಬಲರನ್ನು ತಾಯಿ ಮಮತೆಯಿಂದ ನೋಡಿಕೊಳ್ಳಬೇಕು.

ಅನ್ನ ಭಾಗ್ಯದ ಜತೆಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನೂ ಮತ್ತೆ ಪುನಶ್ಚೇತನಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಸಿದ್ಧರಾಮಯ್ಯ ಅವರು ಬಡತನವನ್ನು ಕಂಡುಂಡು ಬೆಳೆದವರು. ಅವರಿಗೆ ಹಸಿವು ಅಂದರೆ ಏನೆಂದು ಗೊತ್ತಿದೆ, ಬಡವರ ಕಷ್ಟಗಳ ಅರಿವಿದೆ. ಹಾಗಾಗಿಯೇ ಅವರು ಇಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದು ಮೆಚ್ಚಬೇಕಾದ ಕೆಲಸ.

ಶ್ರೀನಿವಾಸ ಕಾರ್ಕಳ

ಲೇಖಕರು

ಇದನ್ನೂ ಓದಿhttps://peepalmedia.com/may-sahitya-mela/http://ಮೇ ಸಾಹಿತ್ಯ ಮೇಳವೆಂಬ ಅರಿವಿನ ಪ್ರವಾಹದಲ್ಲಿ…

Related Articles

ಇತ್ತೀಚಿನ ಸುದ್ದಿಗಳು