Home ಅಂಕಣ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ದೇವರಾಜು ಅರಸು ಯಾಕೆ ಭಿನ್ನ (ವಿ.ಎಲ್‌.ನರಸಿಂಹಮೂರ್ತಿ ಅವರ ಲೇಖನ)

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ದೇವರಾಜು ಅರಸು ಯಾಕೆ ಭಿನ್ನ (ವಿ.ಎಲ್‌.ನರಸಿಂಹಮೂರ್ತಿ ಅವರ ಲೇಖನ)

0

ಇಂದು ರಾಜ್ಯ ಕಂಡ ಧೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರ ಪುಣ್ಯಸ್ಮರಣೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೇವರಾಜ ಅರಸು ಯಾಕೆ ಭಿನ್ನವಾಗಿ ನಿಲ್ಲುತ್ತಾರೆ ಎನ್ನುವುದಕ್ಕೆ ಅರಸು ನೀಡಿದ ಜನಪರವಾದ ಆಡಳಿತ, ಸಾಮಾಜಿಕ ನ್ಯಾಯದ ಬಗೆಗಿನ ಬದ್ಧತೆಯಿಂದಾಗಿ ಅತೀ ಹಿಂದುಳಿದ ಸಮುದಾಯಗಳಿಗೆ ಸಿಕ್ಕ ಪ್ರಾತಿನಿಧ್ಯ, ಇದರ ಜೊತೆಗೆ ಸ್ವಾತಂತ್ರ್ಯ ಬಂದ ನಂತರದ ಇಪ್ಪತ್ತೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಮೇಲ್ಜಾತಿಗಳ ಪ್ರಾಬಲ್ಯವನ್ನು ಮುರಿದಿದ್ದು ಎನ್ನುವ ಕಾರಣಗಳು ಕಣ್ಮುಂದೆ ಬರುತ್ತವೆ.
ಹಳೆ ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಮೈಸೂರು ಒಡೆಯರ ‘ಅರಸು’ ಸಮುದಾಯ ರಾಜ್ಯದ ಪ್ರಬಲ ಜಾತಿಗಳ ಗುಂಪಿಗೆ ಸೇರಿದ್ದಲ್ಲ. ರಾಜ್ಯವನ್ನಾಳಿದ ಸಮುದಾಯದಿಂದ ಬಂದಿದ್ದರೂ, ಮೈಸೂರು ಅರಸರ ಸಂಬಂಧಿಕರಾಗಿದ್ದರೂ ದೇವರಾಜ ಅರಸು ಆಗರ್ಭ ಶ್ರೀಮಂತರಾಗಿರಲಿಲ್ಲ. ಮೈಸೂರು ಅರಸರು ಮನಸ್ಸು ಮಾಡಿದ್ದರೆ ಕಡಿಮೆ ಜನಸಂಖ್ಯೆ ಇರುವ ತಮ್ಮ ಜನಾಂಗದವರನ್ನು ಆಯಕಟ್ಟಿನ ಜಾಗಗಳಲ್ಲಿ ಇಟ್ಟುಕೊಂಡು ಶ್ರೀಮಂತರನ್ನಾಗಿ ಮಾಡಬಹುದಿತ್ತು. ಆದರೆ ಅದ್ಯಾಕೊ ಮೈಸೂರು ಅರಸರು ಹಾಗೆ ಮಾಡಲಿಲ್ಲ. ತಮ್ಮ ಸಮುದಾಯದವರಿಗೆ ಬರಿ ಗುಮಾಸ್ತರು, ಲೆಕ್ಕಾಧಿಕಾರಿಗಳ ತರದ ಸಣ್ಣ ಪುಟ್ಟ ಕೆಲಸಗಳನ್ನ ಕೊಟ್ಟಿದ್ದರು.
ಮೈಸೂರು ಅರಸರು ಬ್ರಿಟೀಷರ ಅಧಿನದಲ್ಲಿದ್ದರೂ ಬ್ರಿಟೀಷರ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ವಿರುದ್ಧವಾಗಿರಲಿಲ್ಲ.
ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗ ಅದರ ನಾಯಕತ್ವ ವಹಿಸಿದ್ದ ಮೇಲ್ಜಾತಿಯ ನಾಯಕರು ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಡಳಿತದ ಹೆಸರಿನಲ್ಲಿ ಮೈಸೂರು ಅರಸರ ಜಾಗವನ್ನು ಆಕ್ರಮಿಸಿಕೊಂಡರು. ಮೊದಲು ವಕ್ಕಲಿಗ‌ ನಾಯಕತ್ವದ ಹಿಡಿತದಲ್ಲಿದ್ದ ರಾಜ್ಯದ ಅಧಿಕಾರ ಭಾಷಾವಾರು ಪ್ರ್ಯಾಂತಗಳ ಮರುವಿಂಗಡಣೆಯಿಂದಾಗಿ ಹೈದರಾಬಾದ್, ಮುಂಬಯಿ ಪ್ರಾಂತ್ಯಗಳಲ್ಲಿ ಪ್ರಬಲವಾಗಿದ್ದ ಲಿಂಗಾಯತ ಸಮುದಾಯದ ಜೊತೆಗೆ ಹಂಚಿಕೆಯಾಯಿತು.
ಅಪಾರವಾದ ಭೂಒಡೆತನ ಹೊಂದಿದ್ದ ಲಿಂಗಾಯತ ಮತ್ತು ವಕ್ಕಲಿಗ ಭೂಮಾಲೀಕರ ಆಣತಿಯಂತೆ ಮತ ಚಲಾಯಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದ ಭೂರಹಿತ ದಲಿತ, ಹಿಂದುಳಿದ ವರ್ಗಗಳಿಗೆ ಅಧಿಕಾರದ ಹತ್ತಿರಕ್ಕೆ ಸುಳಿಯುವುದಕ್ಕೂ ಸಾಧ್ಯವಿರಲಿಲ್ಲ.
ಕಾಂಗ್ರೇಸ್ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಪ್ರಬಲವಾಗಿದ್ದ ಮೇಲುಜಾತಿಗಳ ಪ್ರಾಬಲ್ಯವನ್ನು ಮುರಿದು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುತ್ತಿದ್ದ ಇಂದಿರಾಗಾಂಧಿಯವರಿಗೆ ಕರ್ನಾಟಕದಲ್ಲಿ ಕಂಡಿದ್ದೆ ದೇವರಾಜ ಅರಸರು.
ಇಂದಿರಾಗಾಂಧಿಯವರ ಮೂಲಕ 1972ರಲ್ಲಿ ಮುಖ್ಯಮಂತ್ರಿಯ ಹುದ್ದೆಗೆ ದೇವರಾಜ ಅರಸರು ಆಯ್ಕೆಯಾಗುವ ಮೂಲಕ ಮೈಸೂರು ಅರಸರ ಜಾಗ ಆಕ್ರಮಿಸಿಕೊಂಡಿದ್ದ ವಕ್ಕಲಿಗ ಮತ್ತು ಲಿಂಗಾಯತ ನಾಯಕರ ಜಾಗ ಖಾಲಿ ಮಾಡಿಸಿ ಆ ಜಾಗವನ್ನು ಆಕ್ರಮಿಸಿಕೊಂಡರು.
ಇನ್ನು ಕಾಂಗ್ರೇಸಿನಲ್ಲಿದ್ದ ಲಿಂಗಾಯತ ಮತ್ತು ವಕ್ಕಲಿಗ ನಾಯಕರಿಗೆ ‘ಪೊಲಿಟಿಕಲ್ ಇಮೇಜ್’ ಇಲ್ಲದ, ಪ್ರಬಲ ಸಮುದಾಯ ಹಿನ್ನಲೆಯಿಲ್ಲದ ಅರಸರ ಬಗ್ಗೆ ಅಸಡ್ಡೆಯಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅರಸು ತಮ್ಮ ರಾಜಕೀಯ ಚಾಣಾಕ್ಷತನವನ್ನು ತೋರಿಸಿದರು.
ಅರಸು ಅಧಿಕಾರಕ್ಕೆ ಬರುವ ಮೂಲಕ ವಕ್ಕಲಿಗ ಮತ್ತು ಲಿಂಗಾಯತರನ್ನು ರಾಜಕೀಯವಾಗಿ ಬಗ್ಗು ಬಡಿದರು ಎನ್ನುವ ವಿಷಯವನ್ನು ಚರ್ಚೆಸುವವರು ಮರೆಯುವ ವಿಷಯವೆಂದರೆ ಅರಸು ಅವರ ‘ಸೋಷಿಯಲ್‌ ಇಂಜಿನಿಯರಿಂಗ್’ಗೆ ಕೇವಲ ದಲಿತ, ಹಿಂದುಳಿದ‌ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಮಾತ್ರವಲ್ಲದೆ‌ ವಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಭೂರಹಿತರು, ಬಡವರು ಬೆಂಬಲವಾಗಿ ನಿಂತಿದ್ದರು ಎನ್ನುವುದನ್ನು. ಸ್ವಾತಂತ್ರ್ಯ ಪೂರ್ವದಿಂದಲೂ ಮೇಲ್ಜಾತಿಗಳ ಭೂಮಾಲೀಕ ಶ್ರೀಮಂತರು ತಮ್ಮ ಜಾತಿಗಳು ಸೇರಿದಂತೆ ಎಲ್ಲಾ ಜಾತಿಗಳ ಬಡವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಭೂಮಾಲೀಕರ ಮೇಲೆ ಅವಲಂಬಿತರಾಗಿದ್ದ ಜನ ಅವರಿಗೆ ಎದುರಾಗಿ ಓಟು ಮಾಡುವ ಧೈರ್ಯ ತೋರುತ್ತಿರಲಿಲ್ಲ.
ಅರಸು ಅಧಿಕಾರಕ್ಕೆ ಬಂದ ಮೇಲೆ ಏಳು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳುವುದಕ್ಕೆ ಜಾಗ ಕೊಡುವ ಮೂಲಕ ಎಲ್ಲ ಜಾತಿಯ ಬಡವರಿಗೆ ಸೂರು ಕಲ್ಪಿಸುವುದಕ್ಕೆ ಮುಂದಾದರು, ಮುಂದುವರೆದು ಭೂಸುಧಾರಣೆ ಕಾಯ್ದೆ ತಂದು ‘ಉಳುವವನೆ ಹೊಲದೊಡೆಯ’ ಎನ್ನುವ ಘೋಷಣೆಯನ್ನು ನಿಜ ಮಾಡಲು ಪ್ರಯತ್ನಿಸಿದರು. ಭೂ ಸುಧಾರಣೆ ಕಾಯಿದೆ ಅರಸು ನಿರೀಕ್ಷೆ ಮಾಡಿದಷ್ಟು ಯಶಸ್ವಿಯಾಗದಿದ್ದರೂ ಬಡವರಿಗೆ ಭೂಮಾಲೀಕರ ಬಗ್ಗೆ ಇದ್ದ ಭಯವನ್ನು ದೂರಮಾಡಿತು. ದಲಿತ ಸಮುದಾಯಕ್ಕೆ ಸೇರಿದ ಬಿ. ಬಸವಲಿಂಗಪ್ಪನವರನ್ನು ಕಂದಾಯ ಮಂತ್ರಿ ಮಾಡಿದ್ದ ಅರಸು ಭೂ ನ್ಯಾಯ ಮಂಡಳಿಗಳ ಮೂಲಕ ಮೇಲ್ಜಾತಿಯ ಭೂಮಾಲೀಕರಿಗೆ ಭಯ ಹುಟ್ಟಿಸಿದ್ದರು.
ಇನ್ನು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವ ಮೂಲಕ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡಿ ಮೇಲುಜಾತಿಗಳ ಪ್ರಾಬಲ್ಯ ಕಡಿಮೆಯಾಗಲು ಕಾರಣವಾದರು.
ತಾವು ಅಂದುಕೊಂಡಿದ್ದನ್ನು ಸಾಧಿಸುವುದಕ್ಕಾಗಿ ಭ್ರಷ್ಟಾಚಾರ, ಗುಂಡಾಗಿರಿ ಬಳಸುತ್ತಿದ್ದರು ಎನ್ನುವ ಆರೋಪ ಇದ್ದರೂ ಪ್ರಬಲ ಜಾತಿಗಳಿಂದ ತಮಗೆ ರಕ್ಷಣೆ ಕೊಡಬಲ್ಲ ಶಕ್ತಿ ಅರಸರಿಗೆ ಇದೆ ಎನ್ನುವ ಕಾರಣಕ್ಕಾಗಿ ಬಡವರು ಅರಸರ ಪರ ಗಟ್ಟಿಯಾಗಿ ನಿಂತರು.
ಮೇಲುಜಾತಿಯವರ ಹಿಡಿತವನ್ನು ತಪ್ಪಿಸಲು ಅರಸರಂತಹ ಹಿಂದುಳಿದ ಸಮುದಾಯದ ನಾಯಕನನ್ನು ಬೆಳೆಸಿದ ಇಂದಿರಾಗಾಂಧಿಯವರಿಗೆ ಅರಸು ಬೆಳೆದ ಪರಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನೊಂದು ಕಡೆ ಮೇಲ್ಜಾತಿಗಳನ್ನು ಎದುರಿಸುವ ಅನಿವಾರ್ಯತೆ ಇದ್ದದ್ದರಿಂದ ಇಂದಿರಾಗಾಂಧಿಯವರ ಬೆಂಬಲದಿಂದಲೇ ಇಷ್ಟೆಲ್ಲ ಬದಲಾವಣೆಗಳನ್ನು ಮಾಡಲು ಸಾಧ್ಯ ಎಂದು ಅರಸು ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು.
ಅರಸು ಅವರಿಗೆ ಸಂಜಯಗಾಂಧಿಯ ಕಾರಣಕ್ಕೆ ಇಂದಿರಾಗಾಂಧಿಯವರ ಜೊತೆಗೆ ಉಂಟಾದ ಬಿರುಕಿನ ನಂತರ ತಮ್ಮನ್ನು ತಾವು ಸ್ವತಂತ್ರ ನಾಯಕನನ್ನಾಗಿ ಬಿಂಬಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದಿರಾ ಮತ್ತು ಕಾಂಗ್ರೇಸ್ ಇಮೇಜಿನಿಂದ ಹೊರಬಂದು ತಮ್ಮನ್ನು ತಾವು establish ಮಾಡಿಕೊಳ್ಳುವಷ್ಟು ಆಯಸ್ಸು ಅರಸರಿಗೆ ಉಳಿಯಲೂ ಇಲ್ಲ.
ಸಾಮಾಜಿಕ ನ್ಯಾಯದ ಬಗ್ಗೆ ಅರಸರಿಗೆ ಇದ್ದ ಬದ್ಧತೆಯ ಕಾರಣಕ್ಕೆ ಸಣ್ಣ ಸಣ್ಣ ಸಮುದಾಯಗಳಿಂದ ಬಂದ ಯುವಕರು ವಿಧಾನಸೌಧದ ಮೆಟ್ಟಿಲು ಹತ್ತುವಂತಾಗಿತ್ತು. ಅರಸರು ಗುರುತಿಸಿ ಬೆಳೆಸಿದ ಮೇಲುಜಾತಿಗಳ ಬಡವರು, ಹಿಂದುಳಿದ ವರ್ಗಗಳ ನಾಯಕರು ಬಿಟ್ಟರೆ ಇವತ್ತಿಗೂ ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳ ಎರಡನೇ ಹಂತದ ನಾಯಕತ್ವ ಬೆಳೆದಿಲ್ಲ.
ಬ್ರಾಹ್ಮಣರ ಹಿಡಿತದಲ್ಲಿರುವ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ್ ಶೇಕಡಾ ಅರವತ್ತಕ್ಕೂ ಹೆಚ್ಚು ಜನಸಂಖ್ಯೆ ಇರುವ ನೂರಕ್ಕೂ ಹೆಚ್ಚು ಸಣ್ಣ ಸಣ್ಣ ದಲಿತ, ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯವನ್ನೇ ಕೊಟ್ಟಿಲ್ಲ.
ಇವತ್ತು ಮೇಲ್ಜಾತಿಗಳ ಪ್ರಬಲರು ಮಾತ್ರ ಅಧಿಕಾರ ನಡೆಸಲು ಸಾಧ್ಯ ಎನ್ನುವ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಎಲ್ಲ ಜಾತಿಯ ಬಡವರೂ ಸೇರಿದಂತೆ ದಲಿತ, ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡಿ ಸಾಮಾಜಿಕ ಚಲನೆಗೆ ಕಾರಣರಾಗಿದ್ದ ಅರಸರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ.

ವಿ ಎಲ್‌ ನರಸಿಂಹಮೂರ್ತಿ

You cannot copy content of this page

Exit mobile version