Thursday, January 8, 2026

ಸತ್ಯ | ನ್ಯಾಯ |ಧರ್ಮ

ಗೃಹ ಇಲಾಖೆಯಲ್ಲಿ ಡಿಸಿಎಂ ಹಸ್ತಕ್ಷೇಪವೇಕೆ?: ಬಳ್ಳಾರಿ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಹೆಚ್.ಡಿ.ಕೆ ಕಿಡಿ

ಬಳ್ಳಾರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವುದನ್ನು ಎಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ. “ಪೊಲೀಸ್ ಅಧಿಕಾರಿಗಳ ಸಭೆ ನಡೆಸಲು ಡಿಸಿಎಂಗೆ ಅಧಿಕಾರ ಕೊಟ್ಟವರು ಯಾರು? ರಾಜ್ಯದಲ್ಲಿರುವುದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ?” ಎಂದು ಅವರು ಪ್ರಶ್ನಿಸಿದರು. ಗೃಹ ಇಲಾಖೆಯಲ್ಲಿ ಡಿಸಿಎಂ ಅವರ ಹಸ್ತಕ್ಷೇಪವು ಅಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರವಾಗಿದೆ ಎಂದು ಅವರು ಆರೋಪಿಸಿದರು.

ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸಿರುವುದು ಆತಂಕಕಾರಿ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಅಂತಿಮ ವಿಧಿವಿಧಾನ ಮಾಡಲು ಅವಕಾಶ ನೀಡದೆ ತರಾತುರಿಯಲ್ಲಿ ಸುಟ್ಟು ಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಾಕ್ಷ್ಯ ನಾಶಪಡಿಸಲು ಮತ್ತು ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಕುಮಾರಸ್ವಾಮಿ ದೂರಿದರು. ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಯು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಶಾಸಕರ ವಿರುದ್ಧ ದೂರು ನೀಡುತ್ತಿರುವಾಗ ಈ ಸಮಿತಿಯಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ತಮ್ಮ ಹೇಳಿಕೆಗಳನ್ನು ಲಘುವಾಗಿ ಪರಿಗಣಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ ಅವರು, “ಮೊದಲು ಗುರುಮಠಕಲ್ ಕ್ಷೇತ್ರಕ್ಕೆ ನಿಮ್ಮ ಕುಟುಂಬದ ಕೊಡುಗೆ ಏನು ಎಂಬುದನ್ನು ನೋಡಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುವ ಮೊದಲು ನಿಮ್ಮ ಕ್ಷೇತ್ರದ ಸ್ಥಿತಿಗತಿಯನ್ನು ಗಮನಿಸಿ,” ಎಂದು ಕುಟುಕಿದರು. ಪೋಸ್ಟ್ ಮಾರ್ಟಂ ವೇಳೆ ಇಬ್ಬರು ವೈದ್ಯರನ್ನು ನಿಯೋಜಿಸಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಅವರು, ಇದು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಎಂದು ವ್ಯಂಗ್ಯವಾಡಿದರು.

ಹಳೆಯ ಮೈತ್ರಿ ದಿನಗಳನ್ನು ನೆನಪಿಸಿಕೊಂಡ ಹೆಚ್‌ಡಿಕೆ, “ನಾನು ಈ ಹಿಂದೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆ. ಅಂದು ನನ್ನ ಜೊತೆ ‘ಜೋಡೆತ್ತು’ಗಳಂತೆ ನಿಂತವರು ಕೊನೆಗೆ ಬೆನ್ನಿಗೆ ಚೂರಿ ಹಾಕಿದರು. ಈಗ ಹಳೆಯ ರಾಗದ್ವೇಷಗಳನ್ನು ಮುಂದಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ,” ಎಂದು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page