Monday, July 28, 2025

ಸತ್ಯ | ನ್ಯಾಯ |ಧರ್ಮ

ದಕ್ಷಿಣ ಭಾರತ ತೆರಿಗೆ ಚಳವಳಿ ಯಾಕೆ ಮುಖ್ಯ?

ಪ್ರಸ್ತುತ ದಿನಮಾನಗಳಲ್ಲಿ ನಮ್ಮ ರಾಜ್ಯ ಸರ್ಕಾರದ ಶಾಸಕರು, ಮಂತ್ರಿಗಳು, ಒಬ್ಬ ಸಂಸದರು ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಅಭಿಯಾನ ಶುರುಮಾಡಿದ್ದಾರೆ, ಇದರ ಸಲುವಾಗಿ ಮೊನ್ನೆ ತಾನೆ ಜಂತರ್ ಮಂತರ್‌ನಲ್ಲಿ ಡೊಡ್ಡದಾಗಿ ಪ್ರತಿಭಟನೆ ಮಾಡಿದರು, ಇದಕ್ಕೆ ದಕ್ಷಿಣ ಭಾರತದ ರಾಜ್ಯಗಳು ಬೆಂಬಲವನ್ನ ಸೂಚಿಸಿದರು.

ಹಾಗಾದರೆ ಸೌತ್ ಟ್ಯಾಕ್ಸ್ ಮೂಮೆಂಟ್ ಯಾಕೆ ಮುಖ್ಯ ?

ದಕ್ಷಿಣ ಭಾರತದ ರಾಜ್ಯಗಳು ಪ್ರಸ್ತುತವಾಗಿ ತೆರಿಗೆ ಚಳುವಳಿ ನಡೆಸುತ್ತಾ ಇವೆ, ಯಾಕೆಂದರೆ ಈ ಚಳುವಳಿ ಈಗಿನ ಕಾಲಘಟ್ಟಕ್ಕೆ ಮಾತ್ರವಲ್ಲ ಮುಂಬರುವ ಕಾಲಕ್ಕೂ ದಕ್ಷಿಣ ಭಾರತದ ರಾಜ್ಯಗಳಿಗಾಗುವ ಅನ್ಯಾಯವನ್ನ ತಡೆಯಲಿಕ್ಕೆ ತುಂಬಾ ಪರಿಣಾಮಕಾರಿ ಚಳುವಳಿಯಾಗಿ ಹೊರಹೊಮ್ಮಿದೆ.

ಯಾಕೆಂದರೆ ಉದಾಹರಣೆಗೆ ದಕ್ಷಿಣ ಭಾರತದ ನಮ್ಮ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ, ಅನುದಾನ, ಬರ ಪರಿಹಾರ ಬಿಡುಗಡೆ ಮಾಡದಿರುವುದು ಮತ್ತು ಕಳೆದ ಕೆಲವು ವರ್ಷಗಳಿಂದ ಜಲಸಂಪನ್ಮೂಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ನಿರಾಕರಣೆ ಇವೆಲ್ಲವೂ ಸಹಾ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ “ಘೋರ ಅನ್ಯಾಯ” , ಹೀಗಾಗಿ ಪ್ರಸ್ತುತವಾಗಿ ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಮಲತಾಯಿ ಧೋರಣೆ ತೋರುತ್ತಿರುವುದು ನಮ್ಮೆಲ್ಲರಿಗೂ ಕಾಣ್ತಾಇದೆ.

ಹಾಗಾದರೆ ಕೇಂದ್ರ ಸರ್ಕಾರ ತೆರಿಗೆ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕಕ್ಕೆ ನಡೆಸುತ್ತಿರುವ ಅನ್ಯಾಯ ಏನು?

ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಗೋವಾ, ಕೇರಳ ಇವಿಷ್ಟು
ದಕ್ಷಿಣ ಭಾರತಕ್ಕೆ ಸೇರ್ಪಡುವಂತಹ ರಾಜ್ಯಗಳು, ಇವಿಷ್ಟು ರಾಜ್ಯಗಳಲ್ಲಿ , ತೆರಿಗೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಭಾರಿ ಪ್ರಮಾಣದ ನಷ್ಟ ಉಂಟಾಗ್ತಾ ಇದೆ, ಆದರೆ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಗೋವಾ, ಕೇರಳಕ್ಕೆ ಈ ನಷ್ಟದ ಶಾಕ ಇನ್ನು ಅಷ್ಟೊಂದು ತಟ್ಟಿಲ್ಲ.

ಯಾಕೆಂದರೆ ? ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ದೇಶದ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ, ಅಂದರೆ ನಮ್ಮ ರಾಜ್ಯದ ತೆರಿಗೆ ಹಣ ₹ 4.30 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ ನಮಗೆ ₹50,000 ಕೋಟಿ ಮಾತ್ರ ವಾಪಸ್ ಸಿಗುತ್ತದೆ. ಲಕ್ಷ ಕೋಟಿ ಅಲ್ಲಾ ಬರಿ 50,000 ಕೋಟಿ ಮಾತ್ರ, ಅಂದರೆ ಪ್ರತಿ ₹100ರಲ್ಲಿ ನಮಗೆ ವಾಪಸ್ ಬರುವುದು ₹13 ಮಾತ್ರ.

ಆದರೆ ಮೋದಿಯ ತವರು ರಾಜ್ಯಕ್ಕೆ ಯಾಕೆ ತೆರಿಗೆ ಏರಿಕೆ?

2020 ರಿಂದ ಅತಿಹೆಚ್ಚುತೆರಿಗೆ ಹಣ ಏರಿಕೆಯಾಗಿದ್ದು ಗುಜರಾತಿಗೆ. 2018–19ರಲ್ಲಿ ₹23,489 ಕೋಟಿಯಷ್ಟು ತೆರಿಗೆ ಪಾಲು ಪಡೆದಿದ್ದ ಗುಜರಾತ್, 2023–24ರಲ್ಲಿ ₹35,525 ಕೋಟಿ ಪಡೆಯುತ್ತಿದೆ. ಗುಜರಾತಿನ ತೆರಿಗೆ ಪಾಲು ಈ ಅವಧಿಯಲ್ಲಿ ₹12,036 ಕೋಟಿಯಷ್ಟು, ಅಂದರೆ ಶೇ51ರಷ್ಟು ಏರಿಕೆಯಾಗಿದೆ. ಆದರೆ ಕರ್ನಾಟಕಕ್ಕೆ ಯಾಕೆ ತೆರಿಗೆಯ ಪಾಲು ಹೆಚ್ಚಾಗಿಲ್ಲ, ಮತ್ತೆ ದೇಶದ ಬೇರೆ ಯಾವುದೇ ರಾಜ್ಯದ ತೆರಿಗೆ ಪಾಲು ಇಷ್ಟೊಂದು ಪ್ರಮಾಣದ ಏರಿಕೆಯಾಗಿಲ್ಲ.

ಅಂದರೆ ನಮ್ಮ ರಾಜ್ಯದಲ್ಲಿ ಬರುವಂತಹ ತೆರಿಗೆಯ ಹಣವನ್ನ ಕೇಂದ್ರ ನಮಗೆ ಯಾಕೆ ಅಷ್ಟೊಂದು ಕಡಿಮೆ ಕೊಡ್ತಾ ಇದೆ ಎನ್ನುವಂತಹ ಪ್ರಶ್ನೆ ಎಲ್ಲರಲ್ಲೂ ಹುಟ್ಟುತ್ತೆ? ಆದರೆ ಈ ಹಣವನ್ನ ಕೇಂದ್ರ ಸರ್ಕಾರ ಉತ್ತರ ಭಾರತದ ರಾಜ್ಯಗಳ ಅಭಿವೃದ್ದಿಗೆ ಹಂಚಿಕೆ ಮಾಡುತ್ತೆ,. ಆದರೆ ಈಗ ವಾಪಸ್ಸು ರಾಜ್ಯಕ್ಕೆ ಸಿಗುವಂತಹ ತೆರಿಗೆ ಹಣದಲ್ಲಿ ,ಕರ್ನಾಟಕ ರಾಜ್ಯ ದ ಅಭಿವೃದ್ದಿ ಹೇಗೆ ಸಾಧ್ಯ ಎನ್ನುವಂತದ್ದನ್ನ ಕೇಂದ್ರ ಸರ್ಕಾರ ಮತ್ತೆ ನಮ್ಮ ರಾಜ್ಯದಲ್ಲಿ ಗೆದ್ದು ಹೋಗಿರುವ ಎಂಪಿಗಳು ಯಾಕೆ ಯೋಚಿಸುತ್ತಿಲ್ಲ ಎನ್ನುವಂತದ್ದು ನಮ್ಮಲ್ಲಿ ಕಾಡುವಂತಹ ಪ್ರಶ್ನೆ,?. ಒಂದು ವೇಳೆ ಕೇಳಿದರೆ ಅವರನ್ನ ದೇಶದ್ರೋಹಿಗಳ ಹಾಗೆ ಯಾಕೆ ನೋಡ್ತಾ ಇದಾರೆ ಎನ್ನುವಂತದ್ದು ಇನ್ನೊಂದು ಪ್ರಶ್ನೆ.

ಈ ಮಾತನ್ನ ಯಾಕೆ ಹೇಳ್ತಾ ಇದೀನಿ ಅಂದರೆ ಇತ್ತೀಚಿಗೆ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಅವರು ಗುರುವಾರ (ಫೆ. 01) ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡಿತು. ಆಗ ಅವರು “ಕೇಂದ್ರದ ಬಜೆಟ್ನಲ್ಲಿ ಹೊಸತೇನು ಇಲ್ಲ., ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ, ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ, ದಕ್ಷಿಣ ಭಾರತದವರು ಧ್ವನಿ ಎತ್ತಬೇಕಾಗುತ್ತದೆ” ಎಂದು ಡಿ.ಕೆ.ಸುರೇಶ್ ಅವರು ಹೇಳಿದ್ದರು.

ಅಂದರೆ ಅವರ ಮಾತಿನ ಅರ್ಥ ದೇಶ ವಿಭಜನೆ ಮಾಡಬೇಕು ಎಂಬ ಉದ್ದೇಶ ಅಲ್ಲಾ, ಉತ್ತರ ಭಾರತಕ್ಕೊಂದು ನ್ಯಾಯ, ದಕ್ಷಿಣ ಭಾರತಕ್ಕೊಂದು ನ್ಯಾಯ ಎಂದಾಗ , ಅದರಿಂದ ನಷ್ಟವಾಗುವುದು ದಕ್ಷಿಣ ರಾಜ್ಯಗಳ ಅಭಿವೃದ್ದಿ ಮೇಲೆ, ಇದರಿಂದ ನಮ್ಮ ರಾಜ್ಯಗಳು ಅಭಿವೃದ್ದಿಯತ್ತ ಸಾಗದೇ , ಅನಾಭಿವೃದ್ದಿಯತ್ತ ಸಾಗುತ್ತವೆ, ಇದರಿಂದ ಆಯ ರಾಜ್ಯಗಳಿಗೆ ಎಷ್ಟು ತೆರಿಗೆಯ ಪಾಲು ಬರಬೇಕು ಅಷ್ಟನ್ನು ಕೇಂದ್ರ ನೀಡಬೇಕು, ಇಲ್ಲವಾದಲ್ಲಿ, ನಾವು ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದರು.
ಮೊನ್ನೆ ನಮ್ಮ ರಾಜ್ಯದ ಸಿ ಎಂ ಸಿದ್ದರಾಮಯ್ಯ ಕೂಡ ಹೇಳಿದ್ದು ಏನು? ನೀವು ತೆರಿಗೆ ಹಣ ತೆಗೆದುಕೊಳ್ತಿರಾ ತಗೊಳಿ, ಆದರೆ ಅದರ ಸಿಂಹಪಾಲು ನೀವೆ ತಗೋಬೇಡಿ ಎನ್ನುವಂತದ್ದು, ಅಭಿವೃದ್ಧಿ ಆಗ್ತಿರುವಂತಹ ರಾಜ್ಯಗಳಿಗೆ ಇದು ದೊಡ್ಡ ಹೊಡೆತ. ಇವ್ರು ನಮ್ಮ ರಾಜ್ಯಗಳ ಅಭಿವೃದ್ದಿಗೆ ಅಡ್ಡಗಾಲಾಗಿದಾರೆ. ನೀವು ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ. ನಾವು ಕೊಡಬೇಡಿ ಅಂತ ಹೇಳಲ್ಲ. ಅತಿ ಹೆಚ್ಚು ಪಾಲು ಅವರಿಗೆ ನಮನ್ನ ಕಡೆಗಣಿಸೋದು ನ್ಯಾಯನಾ? ಅಂತ ಕೇಳಿದರು.

ಏಕೆಂದರೆ ರಾಜ್ಯಗಳು ಅಭಿವೃದ್ದಿಯಾದಗಲೇ ದೇಶದ ಅಭಿವೃದ್ಧಿ ಸಾಧ್ಯವಾಗುವುದು, ಆದರೆ ಇದನ್ನ ಅರ್ಥ ಮಾಡಿಕೊಳ್ಳದೆ , ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ, ತಮ್ಮ ರಾಜ್ಯಕ್ಕೆ ಆಗುತ್ತಿರುವಂತಹ ಅನ್ಯಾಯವನ್ನ ಖಂಡಿಸದೆ, ನಮ್ಮ ಕೆಲವು ಶತ ಮೂರ್ಖ ರಾಜಕೀಯ ನಾಯಕರು ಭಾರಿ ಖಂಡನೆ ವ್ಯಕ್ತಪಡಿಸಿದರು, “ಭಾರತದಲ್ಲಿ ಬದುಕುವ ಇಚ್ಛೆ ಇಲ್ಲದೆ ಇದ್ದರೆ, ದೇಶದ್ರೋಹಿ ಹೇಳಿಕೆಗಳನ್ನು ನೀಡುವುದು ಬಿಟ್ಟು ವಿಶಾಲ ಪ್ರಪಂಚದಲ್ಲಿ ಭಾರತ ಬಿಟ್ಟು ಬೇರೆ ಯಾವುದೇ ದೇಶಕ್ಕೆ ಕಾಂಗ್ರೆಸ್ನವರು ತೆರಳಬಹುದು! ಎಂದರು. ಅಂದರೆ ಸಿಗಬೇಕಾದ ನ್ಯಾಯ ಸಿಗದಿದ್ದರೆ, ಅದನ್ನ ಕೇಳಿದಾಗ ಆಗ ದೇಶದ್ರೋಹಿಗಳು ಎನ್ನುವ ನಮ್ಮ ಬಿಜೆಪಿಯ ನಾಯಕರು ತಮ್ಮ ರಾಜ್ಯಗಳಿಗೆ ದ್ರೋಹ ಆಗ್ತಿರುವಾಗ ಅದನ್ನ ಯಾಕೆ ದ್ರೋಹ ಅಂತ ಪರಿಗಣಿಸುವುದಿಲ್ಲ ಎನ್ನವುದು ಹಲವರ ಪ್ರಶ್ನೆ.

ಇದು ಹೀಗೆ ಮುಂದುವರೆದರೆ ಇಂದಲ್ಲ ನಾಳೆ ದಕ್ಷಿಣ ಭಾರತದ ರಾಜ್ಯಗಳು ಹೋರಾಟಕ್ಕೆ ಇಳಿಯುವ ಸಾಧ್ಯತೆ ಇದೇನಾ ಎನ್ನುವದನ್ನ ನೋಡುವುದಾದರೆ, ಖಂಡಿತ ಹೌದು, ದಕ್ಷಿಣ ಭಾರತದ ರಾಜ್ಯಗಳು ಖಂಡಿತ ಹೋರಾಟಕ್ಕಿಳಿಯುತ್ತವೆ.

ಯಾಕೆಂದರೆ ತೆರಿಗೆ ವಿಚಾರದಲ್ಲಿ ಮಾತ್ರವಲ್ಲ ನಾಳೆಯ ದಿನ ಲೋಕ ಸಭೆಯಲ್ಲಿ ಯಾವುದಾದರು ಮಸೂದೆ ಹೊರಡಿಸಬೇಕಾದರೆ ದಕ್ಷಿಣ ಭಾರತದ ಸಂಸದರು ಯಾವುದೇ ಪ್ರಶ್ನೆಯನ್ನ ಮಾಡದೇ ಒಪ್ಪಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತೆ ಎನ್ನಬಹುದು, ಹೇಗೆ ಅಂತ ಕೇಳ್ತೀರಾ ಅದನ್ನ ತಿಳಿಯೋಣ ಬನ್ನಿ.

ನಾವು ಈ ಡಿ ಲಿಮಿಟೇಷನ್ ಕಾಯ್ದೆ ಬಗ್ಗೆ ಕೇಳಿದಿವಿ, ಡಿ ಲಿಮಿಟೇಶನ್ ಆಯೋಗವನ್ನು ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ ಮತ್ತು ಭಾರತದ ಚುನಾವಣಾ ಆಯೋಗದ ಸಹಯೋಗದೊಂದಿಗೆ ಅವರು ಕಾರ್ಯನಿರ್ವಹಿಸುತ್ತಾರೆ.

ಆರ್ಟಿಕಲ್ 82 ರ ಅಡಿಯಲ್ಲಿ , ಸಂಸತ್ತು ಪ್ರತಿ ಜನಗಣತಿಯ ನಂತರ ಡಿ ಲಿಮಿಟೇಶನ್ ಕಾಯಿದೆಯನ್ನು ಜಾರಿಗೊಳಿಸುತ್ತದೆ, ಆರ್ಟಿಕಲ್ 170 ರ ಅಡಿಯಲ್ಲಿ, ಪ್ರತಿ ಜನಗಣತಿಯ ನಂತರ ಡಿ ಲಿಮಿಟೇಶನ್ ಆಕ್ಟ್ ಪ್ರಕಾರ ರಾಜ್ಯಗಳನ್ನು ಪ್ರಾದೇಶಿಕ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ, ಕಾಯ್ದೆ ಜಾರಿಯಾದ ನಂತರ ಕೇಂದ್ರ ಸರ್ಕಾರವು ಡಿ ಲಿಮಿಟೇಶನ್ ಆಯೋಗವನ್ನು ಸ್ಥಾಪಿಸುತ್ತದೆ.

ಈ ಆಯೋಗವನ್ನ ಯಾಕೆ ಸ್ಥಾಪಿಸಲಾಯಿತು ಎಂದರೆ

ಸಂವಿಧಾನವು ಆಯೋಗದ ಆದೇಶಗಳು ಅಂತಿಮ ಮತ್ತು ಯಾವುದೇ ನ್ಯಾಯಾಲಯದ ಮುಂದೆ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಡಿ‌ ಲಿಮಿಟೇಷನ್ ಕಾಯ್ದೆ ಹೇಳುತ್ತೆ, ಡಿಲಿಮಿಟೇಶನ್ ಆಯೋಗದ ಆದೇಶಗಳನ್ನು ಲೋಕಸಭೆ ಅಥವಾ ರಾಜ್ಯ ವಿಧಾನಸಭೆಯ ಮುಂದೆ ಮಂಡಿಸಿದಾಗ, ಅವರು ಆದೇಶಗಳಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲಾಗುವುದಿಲ್ಲ, ಆಗಾಗಿ ಜನಸಂಖ್ಯೆಯಲ್ಲಿನ ಬದಲಾವಣೆಗಳನ್ನು ಪ್ರತಿನಿಧಿಸಲು ದೇಶದಲ್ಲಿ ಪ್ರಾದೇಶಿಕ ಕ್ಷೇತ್ರಗಳ ಮಿತಿಗಳು ಅಥವಾ ಗಡಿಗಳನ್ನು ನಿಗದಿಪಡಿಸುವ ಕಾರ್ಯವನ್ನ ಈ ಡಿಲಿಮಿಟೇಷನ್ ಕಾಯ್ದೆ ಮಾಡುತ್ತೆ,
ಆದರೆ ಭಾರತ ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಜಾರಿಗೆ ತರುವಲ್ಲಿ ಬಹುತೇಕ ಉತ್ತರ ಭಾರತದ ರಾಜ್ಯಗಳು ನಿರಾಸಕ್ತಿ ಹೊಂದಿದವು. ಇದಕ್ಕೆ ಕಾರಣ ಕೇಳಿದರೆ ಮೊಸ್ಟ್ಲಿ ಅವರಲ್ಲಿ ಪ್ಯಾಮಿಲಿ ಪ್ಲಾನಿಂಗ್ ಇರದೇ ಇರಬಹುದು, ಇದರಿಂದ ಜನಸಂಖ್ಯೆ ಹೆಚ್ಚಿ , ಉತ್ತರ ರಾಜ್ಯಗಳ ಸಂಸದರ ಸಂಖ್ಯೆಯೂ ಹೆಚ್ಚುವ ಸಂಭವವಿತ್ತು.

ಹಾಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1976 ರಲ್ಲಿ, ಸಂವಿಧಾನಕ್ಕೆ ತಿದ್ದುಪಡಿ ತಂದು 2001 ರವರೆಗೆ ಯಾವುದೇ ಕ್ಷೇತ್ರದ ಪುನರ್ ವಿಂಗಡಣೆ ಮಾಡಬಾರದೆಂದು ಡಿ ಲಿಮಿಟೇಶನ್ ಪ್ರಕ್ರಿಯೆಯನ್ನು ತಡೆಹಿಡಿದರು. ನಂತರ ವಾಜಪೇಯಿ ಅವರು 2002ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯನ್ನು 2026 ರವರೆಗೆ ಮುಂದೂಡಿದರು. ಯಾಕೆಂದರೆ , ಅಷ್ಟರಲ್ಲಿ ಎಲ್ಲಾ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣ ಆಗಿ ಸಮತೋಲನ ಸಾಧ್ಯವಾಗಬಹುದು ಎಂಬುದು ಅವರ ಲೆಕ್ಕಾಚಾರ ವಾಗಿತ್ತು, ಆದರೆ ಉತ್ತರ ಭಾರತದ ಜನಸಂಖ್ಯೆ ನೋಡುವುದಾದರೆ ಇದು ಇನ್ನೂ ಸಮತೋಲನಕ್ಕೆ ಬಂದಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ.

ಉದಾಹರಣೆಗೆ ಹೇಳುವುದಾದರೆ, ಈವರೆಗಿನ ಜನಗಣತಿ, ಡಿಲಿಮಿಟೇಶನ್ ಪ್ರಕ್ರಿಯೆಗಳನ್ನ ನೋಡುವುದಾದರೆ, ಸ್ವಾತಂತ್ರ್ಯ ನಂತರ 1951 ರಲ್ಲಿ ಮೊದಲ ಬಾರಿಗೆ ಜನಗಣತಿ ಮಾಡಲಾಯಿತು. ಆಗ ಜನಗಣತಿ 1951, 1952ರ ಚುನಾವಣೆಯಲ್ಲಿ : 497ಲೋಕಸಭಾ ಸೀಟ್, ನಂತರ 10ವರ್ಷದ ಬಳಿಕ ಮತ್ತೊಂದು ಜನಗಣತಿ ಮಾಡಲಾಗುತ್ತೆ ಅದು ಜನಗಣತಿ 1961, ಆಗ 1963 ರ ಚುನಾವಣೆಯಲ್ಲಿ 522 ಲೋಕಸಭಾ ಸೀಟ್ ಆಗ್ತಾವೆ, ಅಂದರೆ 10 ವರ್ಷದಲ್ಲಿ 25 ಸೀಟು ಹೆಚ್ಚಗಿ ಆಗ್ತವೆ, ನಂತರ 10 ವರ್ಷ ಬಿಟ್ಟು ಮತ್ತೊಂದು ಜನಗಣತಿ 1971, 1973ರ ಚುನಾವಣೆಯಲ್ಲಿ 543. ಲೋಕಸಭಾ ಸೀಟ್ ಅಂದರೆ 21 ಸೀಟು ಹೆಚ್ಚಳ ಹೀಗೆ 20 ವರ್ಸದಲ್ಲಿ 46 ಸೀಟು ಹೆಚ್ಚಳವಾದವು, ಆದರೆ ಈಗ 545 ಲೋಕಸಭಾ ಸದಸ್ಯರ ಆಸನದ ವ್ಯವಸ್ಥೆಯನ್ನು ಹೊಸ ಸಂಸತ್ ಭವನದಲ್ಲಿ 888ಕ್ಕೆ ಏರಿಕೆ ಮಾಡಲಾಗಿದೆ ಅಂದರೆ 343 ಸೀಟು ಹೆಚ್ಚಳ.

ಅರೇ 1952 ರಿಂದ ಇಲ್ಲಿವರೆಗೆ ಜನ ಸಂಖ್ಯೆ ಹೆಚ್ಚಳವಾಗಿದೆ, ಅದಕ್ಕೆ ಈಗ ಹೆಚ್ಚಳ ಮಾಡ್ತಾ ಇದಾರೆ ಅದರಲ್ಲಿ ಏನು ತಪ್ಪು ಎನ್ನುವಂತಹ ಪ್ರಶ್ನೆ ನಮ್ಮಲ್ಲಿ ಹುಟ್ಟುವುದು ಸಹಜ, ಆದರೆ ನಾನು ಹೇಳಬೇಕು ಅಂತಿರೋದು ಅವರು ಸೀಟು ಹೆಚ್ಚಳ ಮಾಡ್ತಾಇರೋದು ತಪ್ಪು ಅಂತಲ್ಲ, ಹೆಚ್ಚು ಮಾಡುತ್ತಿರುವಂತಹ ರೀತಿ ನಾಳೆಯದಿನ ದಕ್ಷಿಣ ಭಾರತಕ್ಕೆ ಹೇಗೆಲ್ಲಾ ಸಮಸ್ಯೆ ಯಾಗುತ್ತೆ ಎನ್ನುವಂತದ್ದು.

ಹೆಚ್ಚು ಮಾಡಿದರೆ ಏನು ತೊಂದರೆ ಅಂತೀರಾ ?

ಇದರಿಂದ ಭಾರತದ ರಾಜಕೀಯ ಚಿತ್ರಣವೇ ಬದಲಾಗಲಿದೆ ಅದರಲ್ಲೂ ದಕ್ಷಿಣ ರಾಜ್ಯಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಮತ್ತುರಾಜಕೀಯ ಬಿಕ್ಕಟ್ಟು ಸಂಘರ್ಷಗಳಾಗಿ ಅದು ಮುಂದೊಂದುದಿನ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೂ ಕಾರಣವಾಗಬಹುದು!
ಈಗ ಡಿ ಕೆ ಸುರೇಶ್ ಅವರು ಹೇಳಿದ್ದ ಹೇಳಿಕೆಯೂ ಇದರ ವಾಸ್ತವವೆ ಹೊರೆತೂ ಬೇರೆನಿಲ್ಲ.
ಹೇಗೆ ಪರಿಣಾಮ ಬೀರಲಿದೆ ಎನ್ನುವುದನ್ನು ನೋಡುವುದಾದರೆ, ಅದಕ್ಕೂ ಮುಂಚೆ ಆರ್ಟಿಕಲ್ 81 / 82 ನ್ನ ನಾವು ತಿಳಿದುಕೊಳ್ಳಬೇಕು,

ಏನಿದು ಆರ್ಟಿಕಲ್ 81 / 82 ಅಂತೀರಾ?

ಲೋಕಸಭೆಯನ್ನ ಹೌಸ್ ಆಫ್ ದಿ ಪೀಪಲ್ ಅಂತ ಕರೆಯುತ್ತಾರೆ. ದೇಶದ ಜನರ ಪ್ರತಿನಿಧಿಯಾಗಿ ಲೋಕಸಭಾ ಸದಸ್ಯರನ್ನು ಆರಿಸಿ ಕಳಿಸುತ್ತೇವೆ. ಈ ಲೋಕಸಭಾ ಸದಸ್ಯರ ಸಂಖ್ಯೆ ಎಷ್ಟಿರಬೇಕು ?ಯಾವ ರಾಜ್ಯಕ್ಕೆ ಎಷ್ಟು ಲೋಕಸಭಾ ಸದಸ್ಯ ಸ್ಥಾನಗಳ ಕೊಡಬೇಕು ಎಂಬುದನ್ನು ನಿರ್ಣಯ ಮಾಡಲು ನಮ್ಮ ಸಂವಿಧಾನದಲ್ಲಿ ಇದಕ್ಕೆ ಒಂದು ಸೂತ್ರ ಅನುಸರಿಸಲಾಗಿದೆ
propotional representation ಅಂದರೆ ಒಂದು ವೋಟು ಒಂದು ವ್ಯಾಲ್ಯೂ ಅಥವಾ propotional to population ಆರ್ಟಿಕಲ್: 81 / 82 ರಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಅದರಂತೆ ಲೋಕಸಭೆಯಲ್ಲಿ ಗರಿಷ್ಠ 550 ಲೋಕಸಭಾ ಸದಸ್ಯರು ಇರಬಹುದು ಆದರೆ ಪ್ರತಿ ರಾಜ್ಯದಲ್ಲಿ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸಂಸದರ ಸಂಖ್ಯೆ ಇರಬೇಕು.

ಉದಾಹರಣೆಗೆ ಒಂದು ಕೋಟಿ ಜನರಿಗೆ ಒಬ್ಬ ಸಂಸದ ಇರಬೇಕು, ಇದು ಎಲ್ಲ ರಾಜ್ಯಗಳಿಗೂ ಸರಿ ಸಮನಾಗಿರಬೇಕು. ಮತದಾರ ಯಾವುದೇ ರಾಜ್ಯದವರಾಗಿರಲಿ ಎಲ್ಲರ ಮತಕ್ಕೂ ಒಂದೇ ಮೌಲ್ಯ ಇರಬೇಕು ಎಂಬುದು ಇದರ ಉದ್ದೇಶ. ಆದರೆ ಸಿಕ್ಕಿಂ ನಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳಿಗೆ ಇದು ಅನ್ವಯವಾಗುವುದಿಲ್ಲ ಅಂತಹ ರಾಜ್ಯಗಳಿಗೆ ಕನಿಷ್ಠ ಒಬ್ಬ ಸಂಸದ ಇರಲೇಬೇಕು ಎಂದು ಹೇಳಲಾಗಿದೆ.
ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾಡಬೇಕು, ಪ್ರತಿ ಬಾರಿ ಜನಗಣತಿ ಆದ ಮೇಲೆ ಈ ಕ್ಷೇತ್ರಗಳನ್ನು ಪುನರ್ ವಿಂಗಡಣೆ / ಡಿಲಿಮಿಟೇಶನ್ ಮಾಡಬೇಕೆಂದು ಹೇಳಲಾಗಿದೆ ಈ ಪ್ರಕ್ರಿಯೆಯಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಪುನರ್ ರಚಿಸಲಾಗುತ್ತದೆ. ಇದನ್ನ ನಾವು 1951ರಿಂದ 1971ರ ಜನಗಣತಿ ಪ್ರಕಾರ ಲೋಕಸಭಾ ಚುನಾವಣೆಗಳಲ್ಲಿ 10 ವರ್ಷಕ್ಕೊಮ್ಮೆ ಲೋಕಸಭಾ ಸೀಟುಗಳು ಹೇಗೆ ಹೆಚ್ಚಾದವು ಅಂತಾ ಹೇಳಿದೆ,

CARNEGIE ENDOWMENT FOR INTERNATIONAL PEACE ಸಂಸ್ಥೆಯ ಮೂಲಕ 2019ರಲ್ಲಿ ಮಿಲನ್ ವೈಷ್ಣವ್ ಮತ್ತು ಜಾಮೆ ಹಿಲ್ಸ್ತನ್ ಸೇರಿ ಇಂಡಿಯಾಸ್ ಎಮರ್ಜ ಇನ್ ಕ್ರೈಸಿಸ್ ಆಫ್ ರೆಪ್ರಸೆಂಟೇಶನ್ ಎನ್ನುವ ರಿಸರ್ಚ್ ವರದಿ ಪ್ರಕಟಿಸಿದ್ದಾರೆ. ಅವರ ವರದಿಯ ಪ್ರಕಾರ ಕ್ಷೇತ್ರವನ್ನು ಈ ರೀತಿ ಮರು ವಿಂಗಡಣೆ ಮಾಡಿದರೆ ಲೋಕಸಭಾ ಸ್ಥಾನಗಳಲ್ಲಿ ಆಗುವ ಬದಲಾವಣೆಗಳು:
550 ಲೋಕಸಭಾ ಸೀಟುಗಳು 848ಕ್ಕೆ ಏರಿಕೆ ಮಾಡಿದರೆ, ತಮಿಳುನಾಡು 39 ಸೀಟಿನಿಂದ 49ಕ್ಕೆ ಏರಿಕೆಯಾದರೆ, ಕರ್ನಾಟಕದ ಸೀಟುಗಳು 28 ರಿಂದ 41, ಆಂಧ್ರ ಮತ್ತು ತೆಲಂಗಾಣ 42 ಸೀಟುಗಳಿಂದ 54ಕ್ಕೆ ಏರಿಕೆ, ಕೇರಳ ಯಾವುದೇ ಬದಲಾವಣೆಇಲ್ಲ 20 ಸೀಟು , ಉತ್ತರ ಪ್ರದೇಶ 80 ರಿಂದ 143 ಕ್ಕೆ ಏರಿಕೆ. ಬಿಹಾರ 45 ರಿಂದ 79ಕ್ಕೆ ಏರಿಕೆ. ರಾಜಸ್ಥಾನ 25 ರಿಂದ 50ಕ್ಕೆ , ಮಧ್ಯ ಪ್ರದೇಶ 29ರಿಂದ 52ಕ್ಕೆ ಏರಿಕೆಯಾಗುತ್ತದೆ, ಇಷ್ಟಲ್ಲದೇ ಜನಸಂಖ್ಯೆ ಆಧಾರದ ಮೇಲೆ ಮೀಸಲು ಕ್ಷೇತ್ರಗಳಲ್ಲಿಯೂ ಉತ್ತರಭಾರತಕ್ಕೆ ಹೆಚ್ಚು ಲಾಭವಾಗುತ್ತದೆ .

ಹೀಗಾದಲ್ಲಿ ದಕ್ಷಿಣ ಭಾರತಗಳಿಗೆ ದೊಡ್ಡ ಅನ್ಯಾಯವಾಗುತ್ತದೆ ಇದರಿಂದ ಹೊಸ ಬಿಕ್ಕಟ್ಟುಗಳು ಶುರುವಾಗುತ್ತವೆ.
ಆರ್ಟಿಕಲ್ 81ರ ಪ್ರಕಾರ ಲೋಕಸಭಾ ಸದಸ್ಯರ ಸಂಖ್ಯೆ 550 ಗರಿಷ್ಠ ಮಿತಿ ದಾಟಬಾರದೆಂದು ತಿಳಿಸಲಾಗಿದೆ .
ಅದರ ಪ್ರಕಾರ ಯೋಜನೆಯನ್ನು 2023ರ ಚುನಾವಣೆ ನಡೆಸುವುದಾದರೆ ತುಂಬಾ ತೊಂದರೆಗಳು ಉಂಟಾಗುತ್ತವೆ 60 ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಸಾಕಷ್ಟು ಏರುಪೇರಾಗಿದೆ .

ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಕಡೆಗಣಿಸಿ ಜನಸಂಖ್ಯೆಯನ್ನು ನಿಯಂತ್ರಿಸದ ಉತ್ತರ ಭಾರತ ರಾಜ್ಯಗಳಿಗೆ ( ಯುಪಿ ಬಿಹಾರ,, ) ಹೆಚ್ಚು ಲಾಭ ವಾಗುತ್ತದೆ. ಜನಸಂಖ್ಯೆ ನಿಯಂತ್ರಣ ಮಾಡಿಕೊಂಡ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ.
(ಉತ್ತರ ಭಾರತದಲ್ಲಿ ಜನಸಂಖ್ಯೆ ಏರಿಕೆ ಪ್ರಮಾಣ %25 ,ಜನಸಂಖ್ಯೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ದಕ್ಷಿಣ ರಾಜ್ಯಗಳ ಜನಸಂಖ್ಯೆಯ ಏರಿಕೆ ಪ್ರಮಾಣ %4 ರಿಂದ% 6 ) ಈಗಲೇ ಉತ್ತರ ಪ್ರದೇಶ, ಬಿಹಾರ , ರಾಜಸ್ಥಾನ ಎಂಪಿ ಸೀಟ್ ಗಳು ಸೇರಿದರೆ 174 ಸೀಟುಗಳು ಆಗಿಬಿಡುತ್ತವೆ! ಸಂಸತ್ ನಲ್ಲಿ ಯಾವುದೇ ಕಾಯ್ದೆ ಕಾನೂನು ತರುವಲ್ಲಿ ಇವರುಗಳೇ ಪ್ರಮುಖ ಪಾತ್ರ ವಹಿಸುತ್ತಾರೆ, ಈ ರೀತಿ ಆದಲ್ಲಿ ಉತ್ತರದವರಿಗೆ ರಾಜಕೀಯವಾಗಿ ದಕ್ಷಿಣ ರಾಜ್ಯಗಳ ಅವಲಂಬನೆಯೇ ಇರುವುದಿಲ್ಲ.

ಉತ್ತರದವರಿಗೆ ರಾಜಕೀಯವಾಗಿ ದಕ್ಷಿಣ ರಾಜ್ಯಗಳ ಅವಲಂಬನೆ ಇಲ್ಲದಿದ್ದರೆ ಏನಾಗುತ್ತಾ? ಅಂತೀರಾ? , ಒಂದು ಪಕ್ಷ ಕೇಂದ್ರದಲ್ಲಿ ದಕ್ಷಿಣ ರಾಜ್ಯಗಳ ಅವಲಂಬನೆ ಇಲ್ಲದಿದ್ದರೆ ಅದರಿಂದಾಗುವ ಪರಿಣಾಮದಿಂದ ಮತ್ತೊಂದು ಸ್ವಾತಂತ್ರ್ಯ ಚಳುವಳಿ ಹುಟ್ಟಿಕೊಳ್ಳಲು ಕಾರಣವಾಗುತ್ತೆ ……!

ದಕ್ಷಿಣದಲ್ಲಿ ಹಿಂದಿ ಹೇರಿಕೆ , ಅತಿ ಹೆಚ್ಚು ತೆರಿಗೆ ಕಟ್ಟುವ ದಕ್ಷಿಣ ರಾಜ್ಯಗಳಿಗೆ ಜಿ ಎಸ್ ಟಿ ಪಾಲು ಕೊಡುವಲ್ಲಿ ತಾರತಮ್ಯ, ನೆರೆ ಬರ ಪರಿಸ್ಥಿತಿಗಳಲ್ಲಿ ಕರೋನಾ ಸಮಯದಲ್ಲಿ ಮಾಡಿದ ಮಲತಾಯಿ ಧೋರಣೆ ಮತ್ತೆ ಮುಂದುವರೆಯುತ್ತದೆ, ಲಾಭದಾಯಕದಲ್ಲಿದ್ದ ವಿಜಯ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಮೈಸೂರು ಬ್ಯಾಂಕ್ ಗಳನ್ನು ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿದ್ದು ಈಗ ಕರ್ನಾಟಕದ ಹೆಮ್ಮೆ ನಂದಿನಿ ಡೈರಿಯನ್ನು ಅಮುಲ್ ನೊಂದಿಗೆ ವಿಲೀನಗೊಳಿಸಲು ಸಂಚುರೂಪಿಸುತ್ತಿರುವುದು, ಎಲ್ಲವೂ ದಕ್ಷಿಣದ ರಾಜ್ಯಗಳ ಮೇಲೆ ಬಿಜೆಪಿಯವರಿಗಿರುವ ಅಸಡ್ಡೆಯನ್ನು ತೋರಿಸುತ್ತದೆ.

ಹಾಗಿದ್ದರೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಆಗಬಾರದ ? ಖಂಡಿತ ಆಗಬೇಕು ಆರು ದಶಕಗಳ ಇಂದಿನ ಜನಸಂಖ್ಯೆ ಆಧಾರದ ಮೇಲೆ ಈಗಿರುವ ನಮ್ಮ ಲೋಕಸಭಾ ಕ್ಷೇತ್ರಗಳು ವಿಂಗಡಣೆಯಾಗಿರುವುದು , ಭಾರತದಲ್ಲಿ 25 ಲಕ್ಷ ಜನರಿಗೆ ಒಬ್ಬ ಸಂಸದ , ಅಮೆರಿಕದಲ್ಲಿ ಏಳು ಲಕ್ಷ ಜನರಿಗೆ ಒಬ್ಬ ಸಂಸದರುʼ ಏಳು ಕೋಟಿ ಜನಸಂಖ್ಯೆ ಇರುವ ಬ್ರಿಟನ್ ಪಾರ್ಲಿಮೆಂಟ್ ನಲ್ಲಿ 650 ಸೀಟುಗಳು, ಎಂಟು ಕೋಟಿ ಜನಸಂಖ್ಯೆ ಇರುವ ಜರ್ಮನಿಯಲ್ಲಿ 736 ಸೀಟುಗಳು, 142 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 545 ಸೀಟುಗಳು!

ಇದನ್ನ ನೋಡಿದಾಗ, ಹೊಸದಾಗಿ ಹೊಸದಾಗಿ ಕ್ಷೇತ್ರಗಳ ಮರು ವಿಂಗಡನೆ ಆಗಲೇಬೇಕು ಆದರೆ ದೇಶ ಈ ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯಗಳಿಗೆ ಅನ್ಯಾಯವಾಗದಂತೆ ಸಮಾನವಾಗಿ ಹಂಚಿಕೆಯಾಗುವಂತಹ ಸೂತ್ರವನ್ನು ಎಲ್ಲ ರಾಜ್ಯಗಳ ಪ್ರತಿನಿಧಿಗಳು , ಕಾನೂನು ತಜ್ಞರು ಸೇರಿ ಚರ್ಚಿಸಿ ಒಮ್ಮತದಿಂದ ಜಾರಿಗೊಳಿಸಬೇಕು, ಅದಕ್ಕಾಗಿ ದಕ್ಷಿಣದ ರಾಜ್ಯವು ಈಗಾಗಲೇ ಎಚ್ಚೆತ್ತುಕೊಂಡು ಒಂದಾಗಿ ಧನಿ ಎತ್ತುತ್ತಿದೆ, ಇಲ್ಲದೇ ಹೋದಲ್ಲಿ ದಕ್ಷಿಣದ ರಾಜ್ಯಗಳು ರಾಜಕೀಯವಾಗಿ ಮಾಯವಾಗುವ ದಿನ ದೂರವಿಲ್ಲ! ರಾಜ್ಯಗಳು ಅಭಿವೃದ್ಧಿಯಲ್ಲೂ ಹಿಂದೆ ಬೀಳುತ್ತವೆ, ಹಾಗ ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ತೋರುವ ಮಲತಾಯಿ ಧೋರಣೆಯಿಂದ ನಾಡಿನ ಜನ ಆಕ್ರೋಶಗೊಂಡರೆ ಅದರ ಪರಿಣಾಮವನ್ನ ಕೇಂದ್ರ ಸರ್ಕಾರ ಹೊರಬೇಕಾಗುತ್ತದೆ.

– ನಾಗಾರ್ಜುನ ಎಂ.ವಿ

ಯುವ ಪತ್ರಕರ್ತ

Related Articles

ಇತ್ತೀಚಿನ ಸುದ್ದಿಗಳು

You cannot copy content of this page