Home ಜನ-ಗಣ-ಮನ ದಲಿತ ನೋಟ ಮನುವಾದಿಗಳಿಗೆ ಹಿಂದುಳಿದವರ ಶಿಕ್ಷಣದ ಮೇಲೇಕೆ ಕಣ್ಣು?

ಮನುವಾದಿಗಳಿಗೆ ಹಿಂದುಳಿದವರ ಶಿಕ್ಷಣದ ಮೇಲೇಕೆ ಕಣ್ಣು?

0

ಬೆಂಗಳೂರಿನ ದೊಡ್ಡ ಗಣಪತಿ ದೇಗುಲದ ಟೆಂಡರ್ ಹೆಸರಲ್ಲಿ ಶೂದ್ರರೇ ನಿಮ್ಮ ಸ್ಥಾನ ಯಾವತ್ತಿಗೂ ಇದೇ ಎಂದು ನೆನಪಿಸಿದಂತೆ ತಮಿಳುನಾಡಿನ ಈರೋಡ್ ಶಾಲೆಯೊಂದರಲ್ಲೂ ಕೂಡ ಇದೇ ರೀತಿ ದಲಿತ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗುತ್ತಿದ್ದ ಸುದ್ದಿ ಇತ್ತೀಚೆಗೆ ಬಂದಿತ್ತು. ಎಳವೆಯಲ್ಲೇ ದಲಿತರ ಸ್ಥಾನವನ್ನು ಖುದ್ದು ಅವರಿಗೆ ಮತ್ತು ಇತರರಿಗೆ ತೋರಿಸಿ ಕೊಡುವಂತಹ ಪ್ರಕ್ರಿಯೆ ಇದು. ಮುಂದೆ ಓದಿ ಶಂಕರ್ ಸೂರ್ನಳ್ಳಿ ಅವರ ಲೇಖನ.

ಹಿಂದುತ್ವವಾದಿಗಳ ಕುರಿತಂತೆ ಪ್ರಗತಿಪರ ನಿಲುವುಳ್ಳವರು ಹೇಳುವಂತಹ ಪ್ರಮುಖ ಆರೋಪವೆಂದರೆ ಅವರು ಮನುಸ್ಮೃತಿಯನ್ನ ಜಾರಿಗೆ ತರಲು ಹೊರಟಿದ್ದಾರೆನ್ನುವುದು. ಮನುಸ್ಮೃತಿಯೆನ್ನುವುದು ಧಾರ್ಮಿಕ ಹಿನ್ನೆಲೆಯಿಂದ ಸಾಮಾಜಿಕ ಕಟ್ಟುಪಾಡು ನೀತಿ ನಿಯಮಗಳನ್ನು ಬೋಧಿಸುವ ಅಥವಾ ನಿರ್ದೇಶಿಸುವಂತಹ ಹಲವಾರು ಶ್ಲೋಕಗಳುಳ್ಳ ಸದ್ಯದ ಮಟ್ಟಿಗೆ ಹೇಳುವುದಾದರೆ ಒಂದು ದೊಡ್ಡ ಗ್ರಂಥ. ಹೆಚ್ಚಾಗಿ ಆಗಿನ ಸಾಹಿತ್ಯಿಕ ದಾಖಲಾತಿಗಳು ಶ್ರುತಿ ಮತ್ತು ಸ್ಮೃತಿಯ ರೂಪದಲ್ಲಿಯೇ ಇರುತ್ತಿದ್ದವು. ಅದರ ಹೆಸರೇ ಸೂಚಿಸುವಂತೆ ಮೂಲತ: ಅದೊಂದು ಸ್ಮೃತಿ (ನೆನಪಿನ ರೂಪದಲ್ಲಿ ದಾಖಲಿಸಿಕೊಂಡಂತಹ) ರೂಪದ ದಾಖಲೆ.

ಇಂದು ಯಾಗ ಹೋಮವೇ ಮೊದಲಾದ ವೈದಿಕ ಕಾರ್ಯಗಳಲ್ಲಿ ಪುಸ್ತಕಗಳನ್ನು ನೋಡಿ ಮಂತ್ರ ಪಠಿಸುವವರನ್ನು ನೋಡಬಹುದು. ಆದರೆ ಹಿಂದೆ ಅಂತಹವರನ್ನು ಕನಿಷ್ಠವಾಗಿ ನೋಡಲಾಗುತ್ತಿತ್ತಂತೆ. ಬಹುತೇಕ ಅಧ್ಯಯನಗಳಲ್ಲೇ ಇರುವ ವೈದಿಕರಿಗೆ ವೇದ, ಗೀತೆ ಮೊದಲಾದ ಸಂಸ್ಕೃತ ಸಾಹಿತ್ಯ ದಾಖಲೆಗಳನ್ನು ಕಂಠಪಾಠ ಮಾಡಿಕೊಳ್ಳುವುದು ದೊಡ್ಡ ಕಷ್ಟವೇನಲ್ಲ. ಬರವಣಿಗೆಗೆ ಸ್ವಂತ ಲಿಪಿಯೂ ಇರದ (ಇಂಗ್ಲಿಷರು ರೋಮನ್ ಲಿಪಿ ಬಳಸುವಂತೆ ಸಂಸ್ಕೃತದ ದಾಖಲೆಗಳಿರುವುದು ದೇವನಾಗರೀ ಲಿಪಿಯಲ್ಲಿ) ಹಾಗೂ ಬರವಣಿಗೆಗಾಗಿ ಇನ್ನೂ ಕಾಗದದ ಆವಿಷ್ಕಾರವಾಗದೇ ತಾಳೆಗರಿಯಂತಹ ಪ್ರಾಕೃತಿಕ ವಸ್ತುವನ್ನೇ ಅವಲಂಬಿತವಾಗಿರುವ ಅಂದಿನ ಸಂದರ್ಭದಲ್ಲಿ ಇದು ಅನಿವಾರ್ಯವಾಗಿತ್ತು ಕೂಡಾ. ತುಳುನಾಡಿನ ದೈವಾರಾಧಕರ ಪಾಡ್ದನವೂ ಇದೇ ರೀತಿಯದ್ದೇ ಆಗಿದೆ. ಈ ಬಗ್ಗೆ ಅಧ್ಯಯನ ಮಾಡಿರುವ ಜನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡರು ಈ ಪಾಡ್ದನಗಳ ಕುರಿತಂತೆ ಅಚ್ಚರಿಯಿಂದ ತುಳು ಪಾಡ್ದನಗಳ ಹದಿನೈದು ಸಾವಿರಕ್ಕೂ ಹೆಚ್ಚಿನ ಸಾಲುಗಳನ್ನು ಭೂತ ಕೋಲದ ಪಾಡ್ದನಕಾರರು ನೆನಪಿಟ್ಟು ಕೊಂಡಂತಹ ದಾಖಲೆಗಳಿವೆ ಎಂದಿದ್ದರು.

ಮನುಸ್ಮೃತಿಯ ಜಾರಿ ಎನ್ನುವ ಅಪಾಯದ ಮುನ್ನೆಚ್ಚರಿಕೆ 

ಈ ಬಗೆಯ ಸಾವಿರಾರು ವರ್ಷಗಳ ಹಿಂದಿನ ಮನುಸ್ಮೃತಿಯಂತಹ ಧಾರ್ಮಿಕ ಕಟ್ಟುಪಾಡುಗಳ ಶಾಸನವನ್ನು ಈ ಕಾಲದಲ್ಲೂ ಕೂಡ ಯಥಾವತ್ತಾಗಿ ಜಾರಿಗೆ ತರಲು ನಿಜಕ್ಕೂ ಸಾಧ್ಯವೆ? ಖಂಡಿತಾ ಇಲ್ಲ. ಆದರೆ ಈ ಕಾಲಕ್ಕೆ ಹೊಂದುವಂತೆ ಅದನ್ನು ಶಾಸನ ರೂಪದಲ್ಲಿ ಅಳವಡಿಸಿ ಕೊಳ್ಳುವ ಸಾಧ್ಯತೆಯನ್ನು ಮಾತ್ರ ಖಂಡಿತಾ ಅಲ್ಲಗಳೆಯಲಾಗದು. ಅಂದರೆ, ಜಾತೀಯತೆ, ಸ್ತ್ರೀ ಸಂಬಂಧಿ ಕಟ್ಟುಪಾಡುಗಳು, ಬ್ರಾಹ್ಮಣ್ಯದ ಹೆಚ್ಚುಗಾರಿಕೆಯ ಮರುಸ್ಥಾಪನೆ ಖಂಡಿತಾ ಸಾಧ್ಯ. ಮುಖ್ಯವಾಗಿ ಅದರ ಹಂತ ಹಂತದ ಅಳವಡಿಕೆಯನ್ನು ಇಂದು ನಾವು ಕಣ್ಣಾರೆ ನೋಡುತ್ತಿದ್ದೇವೆ ಕೂಡ. ಪ್ರಗತಿಪರರು ಎಚ್ಚರಿಸುವ ಮನುಸ್ಮೃತಿಯ ಜಾರಿ ಎನ್ನುವ ಅಪಾಯದ ಮುನ್ನೆಚ್ಚರಿಕೆಯೆಂದರೆ ಇದೇನೆ.

ಉದಾಹರಣೆಗೆ: ಶತಮಾನಗಳ ಹಿಂದೆ ಬ್ರಾಹ್ಮಣ ಕ್ಷತ್ರಿಯರನ್ನು ಹೊರತು ಪಡಿಸಿ ಸ್ತ್ರೀಯರನ್ನೂ ಸೇರಿ ಇತರರಿಗೆ ವಿದ್ಯೆ ಅಧಿಕಾರಗಳಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು. (ಸ್ತ್ರೀಯರ ಕುರಿತಂತೆ ಇದನ್ನು ಹೇಳಿದಾಕ್ಷಣ ಸನಾತನವಾದಿಗಳು ಮೈತ್ರೇಯಿ, ಗಾರ್ಗೇಯಿಯರ ಕಥೆ ಶುರುವಿಟ್ಟುಕೊಳ್ಳುತ್ತಾರೆ. ಇಂತಹ ಆಕಸ್ಮಿಕ ಉದಾಹರಣೆಗಳು ಐತಿಹಾಸಿಕ ಸಂಗತಿಗಳ ನಿಜವಾದ ಪ್ರತಿನಿಧಿತ್ವವನ್ನು ಯಾವತ್ತೂ ತೋರುವುದಿಲ್ಲ. ತೀರಾ ಇತ್ತೀಚೆಗಿನವರೆಗೂ ಸ್ತ್ರೀಯರ ಮೇಲಿನ ಕಟ್ಟುಪಾಡುಗಳ ನಿರ್ಬಂಧಗಳು ಮತ್ತು ಆ ಕುರಿತ ಹೋರಾಟಗಳಿಗೆ ಲೆಕ್ಕವಿಲ್ಲದಷ್ಟು ಐತಿಹಾಸಿಕ ದಾಖಲೆಗಳೇ ನಮ್ಮ ಮುಂದಿವೆ) ಧಾರ್ಮಿಕತೆಯ ನೆವನದ ಮೂಲಕ ಪ್ರಭುತ್ವವನ್ನು ಹಂಗಿನಲ್ಲಿರಿಸಿಕೊಂಡಿದ್ದ ಸನಾತನವಾದಿಗಳ ಹಿಡಿತ ತಪ್ಪಿ ನಂತರ ಶತಮಾನಗಳ ಕಾಲ ಆಳಿದ ಬ್ರಿಟಿಷರೇ ಮೊದಲಾದ ಅನ್ಯಮತೀಯರ ದೆಸೆಯಿಂದಾಗಿ ವಿದ್ಯೆಗೆ ಅವಕಾಶವೊದಗಿಸಿಕೊಂಡ ಶೂದ್ರವರ್ಗ ಇದೀಗ ತಮ್ಮನ್ನು ಈ ತನಕ ವಿದ್ಯೆ ವಂಚಿತರನ್ನಾಗಿಸಿದ್ದ ಸಮುದಾಯಕ್ಕೆ ಪ್ರತಿಯಾಗಿ ಅಥವಾ ಕೊನೇ ಪಕ್ಷ ತಟಸ್ಥವಾಗಿ ನಿಲ್ಲುವ ಬದಲು ಅವರ ಆದೇಶ ಪರಿಪಾಲನೆಯ ಕಾಲಾಳುಗಳಾಗಿಯೇ ಮಾರ್ಪಟ್ಟಿರುವುದು ಕಾಲದ ಒಂದು ಚೋದ್ಯವೇ ಸರಿ.

ಬ್ರಾಹ್ಮಣರಿಗಿಂತ ಶೂದ್ರ ವರ್ಗವೇ ಕಡು ಹಿಂದುತ್ವದ ಪ್ರತಿಪಾದನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿ ಕೊಂಡಿವೆ. ಅಸ್ಪೃಶ್ಯತೆಯ ಹೆಸರಲ್ಲಿ ದೇಗುಲದ ಆವರಣಕ್ಕೂ ಪ್ರವೇಶವಿಲ್ಲದಿದ್ದ ಶೂದ್ರ ವರ್ಗ ದೇಗುಲ ಪ್ರವೇಶದ ಅವಕಾಶವನ್ನು ಪಡೆದಂದಿನಿಂದ ಇದೀಗ ದೇಗುಲದ ಧಾರ್ಮಿಕ ಕರಸೇವೆಗಳು, ಕೇಸರಿ ಬಂಟಿಂಗ್ ಕಟ್ಟುವುದು, ಬಾವುಟ ಹಾರಿಸುವುದು, ಜೈಕಾರ ಕೂಗುವುದು ಇತ್ಯಾದಿಗಳಲ್ಲಿ ನಿರತವಾಗಿವೆ. ಕುರ್ಚಿ ಬೆಂಚುಗಳಿಲ್ಲದ ಶಾಲೆಗಳಿಗೆ ಹತ್ತು ರೂ ಕೊಡಲು ಹಿಂದೇಟು ಹಾಕುವ ಕೈಗಳು ದೇಗುಲಗಳಿಗೆ ಪೂಜೆಗಳಿಗೆ ಪುರೋಹಿತರಿಗೆ ಬಿಂದಾಸ್ ದಾನ, ಧರ್ಮ, ದಕ್ಷಿಣೆ ಕೊಡುವುದು, ವ್ರತಾಚರಣೆಗಳು ಮುಂತಾದವುಗಳ ಹೆಸರಲ್ಲಿ ಬ್ರಾಹ್ಮಣರ ಸೇವೆಗಾಗೇ ಟೊಂಕ ಕಟ್ಟಿಕೊಂಡು ಶೂದ್ರ ಪಡೆ ನಿಂತಿವೆ. ಶೂದ್ರ ವರ್ಗದ ಮದುವೆ, ಗೃಹ ಪ್ರವೇಶ, ನಾಮಕರಣಗಳ ಕಡೆ ಈತನಕ ಕಣ್ಣೆತ್ತಿಯೂ ನೋಡದಿದ್ದ ಬ್ರಾಹ್ಮಣ ವರ್ಗ ಈಗ ಕೈಯಲ್ಲಿ ಕಾಸಾಡುವ ಹಾಗೂ ಧಾರ್ಮಿಕ ಪೌರೋಹಿತ್ಯದ ಕಾರ್ಯಗಳಿಗೆ ಕಣ್ಮುಚ್ಚಿಕೊಂಡು ಖರ್ಚು ಮಾಡುವ ಶೂದ್ರ ವರ್ಗದ ಕಡೆ ಇನ್ನಿಲ್ಲದ ಆಸಕ್ತಿಯನ್ನು ತೋರುತ್ತಿವೆ. ಶೂದ್ರರು ಮೇಲ್ವರ್ಗದ ಹೊರತಾಗಿ ಯಾರಿಂದಲೋ ಪಡೆದ ಅಕ್ಷರ ವಿದ್ಯೆಯನ್ನು ಇದೀಗ ಹಿಂದುತ್ವ ವಿರೋಧಿಗಳ ವಿರುದ್ಧ ಕೆಂಡ ಕಾರಲು ಬಳಸಲಾಗುತ್ತಿದೆ. ಅದೇ   ರೀತಿ, ಯಾರದೋ ಹೋರಾಟದ ಫಲದಿಂದಲೋ ದೊರಕಿದ ದೇಗುಲ ಪ್ರವೇಶ ಈಗ ಕರಸೇವೆ ಮೆರವಣಿಗೆಗೆ ಉಪಯುಕ್ತವಾಗುತ್ತಿದೆ. ’ಸೋಲನ್ನೇ ಗೆಲುವಾಗಿಸುವ” ವೈದಿಕರ ಈ ಕಲೆಯನ್ನು ಮೆಚ್ಚಲೇ ಬೇಕು. ಇಂತಹಾ ಎಲ್ಲಾ ಪೂರಕ ವಾತಾವರಣಗಳು ಸನಾತನವಾದಿಗಳ ಮನುಸ್ಮೃತಿ ಶಾಸನದ ಅಳವಡಿಕೆಯ ಸಾಧ್ಯತೆಯನ್ನು ಮತ್ತಷ್ಟು ಸುಲಭವಾಗುವಂತೆ ಮಾಡಿರುವುದಂತೂ ಸತ್ಯ.

ಬ್ರಾಹ್ಮಣಶಾಹಿಯ ತಂತ್ರಗಾರಿಕೆ.

ಈ ಹಿಂದೆ ಕೆಲವೇ ಸಮುದಾಯದ ಕಪಿಮುಷ್ಟಿಯಲ್ಲಿದ್ದ ವಿದ್ಯೆ ಇದೀಗ ಸಾರ್ವತ್ರೀಕರಣಗೊಂಡಿದೆ. ಸಮಾಜ ಸುಧಾರಕರು, ಹೋರಾಟಗಾರರ ದೆಸೆಯಿಂದಾಗಿ ಸಾಮಾಜಿಕ ನ್ಯಾಯ ವ್ಯವಸ್ಥೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ ಕೂಡ ಅಸಮಾನತೆ, ಮೌಢ್ಯಗಳು ಯಾವುದೋ ಒಂದು ರೂಪದಲ್ಲಿ ಆಗಾಗ ಕಾಣಿಸುತ್ತಲೇ ಇರುತ್ತವೆ. (ಬೆಂಗಳೂರಿನ ದೇಗುಲವೊಂದರಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ಕರೆದ ಟೆಂಡರ್ ನಲ್ಲಿ ಪರಿಶಿಷ್ಟರಿಗೆ ಚಪ್ಪಲಿ ಕಾಯುವ ಕೆಲಸಕ್ಕಾಗಿ ಅರ್ಜಿ ಕರೆಯಲಾಗಿತ್ತು. ಚಾಮರಾಜನಗರದಲ್ಲಿ ದಲಿತ ಮಹಿಳೆಯೊಬ್ಬರು ಟ್ಯಾಂಕ್ ನ ನೀರು ಕುಡಿದರೆಂಬ ಮಾತ್ರಕ್ಕೆ ಟ್ಯಾಂಕ್ ಖಾಲಿ ಮಾಡಿ ಗೋಮೂತ್ರದಿಂದ ಅದನ್ನು ಶುದ್ಧಿ ಮಾಡಲಾಗಿತ್ತು. ಇದು ಹತ್ತನೇ ಶತಮಾನದ ಕಥೆಯಲ್ಲ. ಮೊನ್ನೆ ಮೊನ್ನೆ ಹತ್ತು ದಿನ ಹಿಂದಿನದ್ದು) ಸಮಾಜದಲ್ಲಿ ಸಂಪೂರ್ಣ ನೂರಕ್ಕೆ ನೂರು ಎನ್ನುವಂಥ ಬದಲಾವಣೆಗಳು ನಡೆಯದಿದ್ದರೂ ವಿದ್ಯೆ ಹಾಗು ಧಾರ್ಮಿಕ ಆಚರಣೆಗಳಲ್ಲಿನ ಮೊದಲಿದ್ದಂತಹ ನಿರ್ಬಂಧಗಳಂತೂ ಖಂಡಿತ ಇಲ್ಲ. ಇಂತಹ ಸಂದರ್ಭವನ್ನೇ ತಮ್ಮೆಡೆಗೆ ತಿರುಗಿಸಿಕೊಂಡ ಸನಾತನವಾದಿಗಳು ಹಿಂದೆ ವಿದ್ಯೆ ವಂಚಿತವಾಗಿ ಈಗ ಶಾಲೆಗೆ ಬರುವಂತಹ ಮುಗ್ಧ ಮನಸ್ಸಿನ ಚಿಕ್ಕ ಮಕ್ಕಳ (ವಿಶೇಷವಾಗಿ ಅಬ್ರಾಹ್ಮಣ ವರ್ಗದ ಮಕ್ಕಳು) ಮೇಲೆ ಧರ್ಮದ ಅಮಲನ್ನು ತುಂಬಿ ಅವರನ್ನೇ ಹಿಂದುತ್ವದ ಕಾಲಾಳುಗಳನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ. ಅವರ ಮಕ್ಕಳು ಮಾತ್ರ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮೊದಲಾದೆಡೆ ಉನ್ನತ ವ್ಯಾಸಂಗ ಪಡೆದು ಉದ್ಯೋಗದಲ್ಲಿದ್ದರೆ ಶೂದ್ರ ವರ್ಗದ ಮಕ್ಕಳು ಇಲ್ಲೇ ಹಿಂದುತ್ವದ ಹೋರಾಟಗಳಲ್ಲಿ ಸಖತ್ ಬ್ಯುಸಿ. ಒಟ್ಟಾರೆ ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳು. ಇದು ಬ್ರಾಹ್ಮಣಶಾಹಿಯ ತಂತ್ರಗಾರಿಕೆ.

ಶೂದ್ರರನ್ನು ಶಿಕ್ಷಣದಿಂದ ಹೊರಗಿಡುವ ಪ್ರಕ್ರಿಯೆಯ ಆರಂಭ

ದೇಶದಲ್ಲಿ ಲೆಕ್ಕವಿಲ್ಲದಷ್ಟು ಸರಕಾರಿ ಶಾಲೆಗಳು ಮುಚ್ಚುತ್ತಿರುವುದಾಗಿ ವರದಿಯಾಗಿವೆ. ಅದನ್ನು ಉಳಿಸಿಕೊಳ್ಳುವ ಬದಲು ಇವರಿಗೆ ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲೇ ಆಸಕ್ತಿ. ಶಾಲೆಯಲ್ಲಿ ಪ್ರತಿ ದಿನ ಹತ್ತು ನಿಮಿಷದ ಧ್ಯಾನ ಶುರು ಮಾಡಬೇಕು ಎನ್ನುವ ಸರಕಾರಿ ಸುತ್ತೋಲೆ. ಇದೇ ಧ್ಯಾನದ ನೆಪದಲ್ಲಿ ಕ್ರಮೇಣ ಮುಗ್ದ ಮಕ್ಕಳ ಮನಸ್ಸಲ್ಲಿ ತಮ್ಮ ಅಜೆಂಡಾಗಳ ಹೇರಿಕೆಯ ಹುನ್ನಾರ ಇದರ ಹಿಂದಿದೆ. 5 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಯಾರೂ ಬೇಕೆಂದು ಕೇಳದೇ ಇದ್ದ ವೇದಗಣಿತದ ತರಬೇತಿಯ ಹೆಸರಲ್ಲಿ ಪ. ಜಾತಿ ಪ. ಪಂಗಡಗಳ ಉಪ ಯೋಜನೆ (TSP, SCSP) ಯಲ್ಲಿನ ಅನಾಮತ್ತು ಅರುವತ್ತು ಕೋಟಿ ರೂ. ಗಳ ಬಳಕೆಗೆ ಮಸಲತ್ತು ನಡೆದು ಬಳಿಕ ಎದುರಾದ ವಿರೋಧದ ಬಳಿಕ ಇದನ್ನು ತಡೆಹಿಡಿಯಲಾಯಿತು. ಇವರಿಗೆ ದಲಿತರ ಅಭಿವೃದ್ಧಿಗಿಂತ ಸೀಮೆಗಿಲ್ಲದ ವೇದಗಣಿತ ತಲೆಗೆ ತುಂಬೋದರಲ್ಲೇ ಹೆಚ್ಚು ಆಸಕ್ತಿ. ಇತ್ತೀಚೆಗೆ ಶೈಕ್ಷಣಿಕ ಚಿಂತನೆಯ ಗಂಧ ಗಾಳಿಯೂ ಇರದವರ ಉಸ್ತುವಾರಿಯಲ್ಲಿ ರಚನೆಯಾದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಹಿಂದುತ್ವದ ಹುನ್ನಾರಗಳು, ಪ ಜಾತಿ/ ಪ ವರ್ಗದ ಮಕ್ಕಳ ಸ್ಕಾಲರ್ ಶಿಪ್ ರದ್ದು, ಸಂಶೋಧನಾ ವಿದ್ಯಾರ್ಥಿಗಳ ಫೆಲೋ ಶಿಪ್ ರದ್ದು, ಬೆಂಗಳೂರು ವಿ ವಿ 2 ನೇ ಸ್ನಾತಕೋತ್ತರ ಪದವಿಗಾಗಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ರದ್ದು, ಎಂಟು ಲಕ್ಷ ವಾರ್ಷಿಕ ಆದಾಯದ ಬ್ರಾಹ್ಮಣಾದಿ ಮೇಲ್ಜಾತಿಯ ಮಕ್ಕಳಿಗೆ ಮೀಸಲಾತಿ ತಂದು ಎರಡೂವರೆ ಲಕ್ಷಕ್ಕೂ ಕಡಿಮೆ ವಾರ್ಷಿಕ ಆದಾಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮಕ್ಕಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಸಂಪೂರ್ಣ ನಿಲುಗಡೆ ಇವುಗಳೆಲ್ಲ ಈ ತನಕ ವಿದ್ಯೆಯಿಂದ ಮೆರೆಯುತ್ತಿದ್ದ ಶೂದ್ರರನ್ನು ಅದರಿಂದ ಹೊರಗಿಡುವ ಪ್ರಕ್ರಿಯೆಯ ಆರಂಭಿಕ ಸೂಚನೆಗಳಷ್ಟೆ ಎನ್ನಬಹುದು.

ಬೆಂಗಳೂರಿನ ದೊಡ್ಡ ಗಣಪತಿ ದೇಗುಲದ ಟೆಂಡರ್ ಹೆಸರಲ್ಲಿ ಶೂದ್ರರೇ ನಿಮ್ಮ ಸ್ಥಾನ ಯಾವತ್ತಿಗೂ ಇದೇನೆ ಎಂದು ನೆನೆಪಿಸಿದಂತೆ ತಮಿಳುನಾಡಿನ ಈರೋಡ್ ನ ಶಾಲೆಯೊಂದರಲ್ಲೂ ಕೂಡ ಇದೇ ರೀತಿ ದಲಿತ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗುತ್ತಿದ್ದ ಸುದ್ದಿ ಇತ್ತೀಚೆಗೆ ಬಂದಿತ್ತು. ಎಳವೆಯಲ್ಲೇ ದಲಿತರ ಸ್ಥಾನವನ್ನು ಖುದ್ದು ಅವರಿಗೆ ಮತ್ತು ಇತರರಿಗೆ ತೋರಿಸಿಕೊಡುವಂತಹ ಪ್ರಕ್ರಿಯೆ ಇದು.

ಮನುವಾದಕ್ಕೆ ಕೊಡಲಿಯೇಟು.. 

ರಾಷ್ಟ್ರಕವಿ ವಿಶ್ವ ಮಾನವತಾ ಪ್ರತಿಪಾದಕ ಕುವೆಂಪುರವರು ತನಗೆ ದೊರೆತಂತಹ ಸಾಂದರ್ಭಿಕ ವಿದ್ಯಾಭಾಗ್ಯದ ಕುರಿತಂತೆ ಮಾರ್ಮಿಕವಾಗಿ ಹೀಗೆ ಹೇಳಿದ್ದರು “ ಬ್ರಿಟಿಷರು ಒಂದುವೇಳೆ ಬಾರದೇ ಇದ್ದಿದ್ದರೆ ನಾನು ಯಾವುದೋ ಮೇಲ್ವರ್ಗದವನ ಮನೆಯ ಹೊಲಸಲ್ಲಿ ಹೊರಳುತ್ತಿರುವ ಹಂದಿಯಂತಿರುತ್ತಿದ್ದೆ ಎಂದು. ವಿದ್ಯೆಯನ್ನು ಸಾರ್ವತ್ರಿಕ ಗೊಳಿಸಿ ಮನುವಾದಕ್ಕೆ ಕೊಡಲಿಯೇಟು ಕೊಟ್ಟ ಬ್ರಿಟಿಷರ ಬಗ್ಗೆ ಸನಾತನವಾದಿಗಳಿಗೆ ಬಹಳಷ್ಟು ಕೋಪವಿದೆ. (ಅವರನ್ನು ಓಡಿಸಲು ಇದೂ ಒಂದು ಕಾರಣ) ಅದೇ ರೀತಿ ಅದನ್ನು ಸ್ವಾತಂತ್ರ್ಯಾನಂತರ ಮುಂದುವರೆಸಿ ಹೋದ ನೆಹರೂರವರ ಕುರಿತಂತೆಯೂ ಕೂಡ ಅಸಾಧ್ಯ ಅಸಹನೆಯಿದೆ. ಶಿವರಾಮ ಕಾರಂತರ ಸೋದರ ಕೋಟ ವಾಸುದೇವ ಕಾರಂತರು ತಮ್ಮ ಕೃತಿಗಳಲ್ಲಿ ಈ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಸಂಸ್ಕೃತ ಹೇಳಿದ ಶೂದ್ರನ ನಾಲಗೆ ಕತ್ತರಿಸಬೇಕು, ಸಂಸ್ಕೃತ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕೆಂದ ಸನಾತನವಾದಿಗಳೆಲ್ಲಿ? ತಾರತಮ್ಯ ನೋಡದೇ ಎಲ್ಲರ ವಿದ್ಯೆಗೂ ಪ್ರೋತ್ಸಾಹ ಕೊಟ್ಟ ಅನ್ಯ ಮತೀಯರೆಲ್ಲಿ?

ಕೋರ್ಟಿನಲ್ಲಿರುವ ಮೇಲ್ವರ್ಗದವರ ತೀವ್ರ ಪ್ರತಿರೋಧದ ಕಾರಣ ದಲಿತನೊಬ್ಬನಿಗೆ ಆ ಕೋರ್ಟ್ ನಲ್ಲಿ ಅಟೆಂಡರ್ ಕೆಲಸ ಕೊಡಿಸಲೂ ಸಾಧ್ಯವಾಗದೇ ತೀರಾ ಖಿನ್ನರಾಗಿ ಕುಗ್ಗಿಹೋಗಿದ್ದ ಮಂಗಳೂರಿನ ಕುದ್ಮುಲ್ ರಂಗರಾಯರಿಗೆ ಬ್ರಿಟಿಷ್ ನ್ಯಾಯಾಧೀಶರು ಹತ್ತಿರ ಕರೆದು ರಾಯರೇ, ನಿಮಗೆ ಈ ಡಿಪ್ರೆಸ್ಡ್ ಕ್ಲಾಸ್ ನವರ ಉದ್ದಾರದ ಬಗ್ಗೆ ನಿಜಕ್ಕೂ/ ಕಳಕಳಿ ಇದ್ದಿದ್ದೇ ಹೌದಾದರೆ ಮೊದಲು ಅವರಿಗೆ ವಿದ್ಯೆ ಕಲಿಸಿ. ಅದೇ ಅವರಲ್ಲಿ ದೊಡ್ಡ ಸಾಮಾಜಿಕ ಬದಲಾವಣೆ ತರಬಲ್ಲದು ಎಂದು ಬೆನ್ನು ತಟ್ಟಿದ್ದರು. ಅದರ ಪರಿಣಾಮವೇ ’ಮಹಾತ್ಮ ಗಾಂಧೀಜಿಯ ಗುರು’ ಎಂಬ ಹೆಗ್ಗಳಿಕೆಯ ಮಟ್ಟಕ್ಕೆ ದೊಡ್ಡ ಸುಧಾರಕರಾಗಿ ಕುದ್ಮುಲ್ ರಂಗರಾಯರ ಸೇವೆ ನಾಡಿಗೆ ದೊರಕಿತು.

ಮೆರೆಯುತ್ತಿರುವ ಶೂದ್ರವರ್ಗದ ಜುಟ್ಟು ತಮ್ಮ ಕೈಯಲ್ಲಿರಬೇಕೆಂದರೆ ಮೊದಲು ಅವರನ್ನು ವಿದ್ಯೆಯಿಂದ ವಂಚಿತರನ್ನಾಗಿಸಬೇಕೆನ್ನುವ ಸನಾತನವಾದಿಗಳ ಹುನ್ನಾರವನ್ನು ತಡೆಯದಿದ್ದರೆ ಮುಂದೊಂದು ದಿನ ದೊಡ್ಡ ಗಣಪತಿ ಟೆಂಡರಿನಲ್ಲಿದ್ದ ಚಪ್ಪಲಿ ಕಾಯುವ ಕೆಲಸವೂ ಕೂಡ ಶೂದ್ರ ಸಮುದಾಯಕ್ಕೆ ದೊರೆಯದು. ಯಾಕೆಂದರೆ ದೇಗುಲದ ವಠಾರಕ್ಕೆ ಅವರಿಗೆ ಪ್ರವೇಶ ಇದ್ದರೆ ತಾನೆ ಇದೆಲ್ಲ…

ಶಂಕರ್ ಸೂರ್ನಳ್ಳಿ.

ಲೇಖಕರು

You cannot copy content of this page

Exit mobile version