Monday, November 18, 2024

ಸತ್ಯ | ನ್ಯಾಯ |ಧರ್ಮ

ಬಡವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದರೆ ತಿರಸ್ಕೃತವಾಗುತ್ತಿರುವುದು ಯಾಕೆ? – ಅನಿಲ್ ಹೊಸಕೊಪ್ಪ

ಅಮಾಯಕರು, ಬಡವರು ವೈದ್ಯಕೀಯ ನೆರವು ಕೋರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುತ್ತಿರುವುದು ಸರಿಯಷ್ಟೆ. ಆದರೆ ಕ್ಷುಲಕ ಕಾರಣಗಳನ್ನು ನೀಡಿ ಅರ್ಜಿಗಳನ್ನು ತಿರಸ್ಕರಿಸಿ, ಬಡ ಜನರಿಗೆ ವೈದ್ಯಕೀಯ ನೆರವಿನಿಂದ ವಂಚನೆ ಮಾಡುತ್ತಿರುವುದು ಅತ್ಯಂತ ಕಂಡನೀಯವಾಗಿದೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಅನಿಲ್ ಹೊಸಕೊಪ್ಪ ಗಂಭೀರ ಆರೋಪ ಮಾಡಿದ್ದಾರೆ.

ನಮ್ಮ ಮಲೆನಾಡು-ಕರಾವಳಿ ಹಾಗೂ ಇತರೆ ಭಾಗದ ನೆಲವಾಸಿಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈದ್ಯಕೀಯ ನೆರವು ಕೋರಿ ಅರ್ಜಿ ಸಲ್ಲಿಸುತ್ತಿದ್ದು, ಬಹುತೇಕ ಅರ್ಜಿಗಳು ತಿರಸ್ಕೃತವಾಗುತ್ತಿದ್ದು, ನಿಜವಾಗಿಯೂ ಬಡವರಿಗೆ ಸಲ್ಲಬೇಕಾದ ಸಹಾಯ ತಲುಪುತ್ತಿಲ್ಲ ಎಂದು ಸಂಘಟನೆ ವತಿಯಿಂದ ಆರೋಪಿಸಿದ್ದಾರೆ.

ನಮ್ಮ ಹಳ್ಳಿಗಾಡು ಪ್ರದೇಶಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸಮಸ್ಯೆಯಾದಾಗ ಜನ ಸ್ಥಳೀಯ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ 2 ದಿನಗಳಾದ ಮೇಲೆ ಇಲ್ಲಿ ಚಿಕಿತ್ಸೆ ಸಿಗುವುದಿಲ್ಲ. ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಬೇರೆ ಕಡೆ ತೋರಿಸಿ ಎನ್ನುತ್ತಾರೆ. ಈ ಮೊದಲು ಸೇರಿದ ಆಸ್ಪತ್ರೆಯಲ್ಲಿ 5 ಸಾವಿರದಿಂದ 10 ಸಾವಿರದವರೆಗೆ ಬಿಲ್ ಆಗಿರುತ್ತದೆ. ಆಯುಷ್ಮಾನ್ ಅಥವಾ ಬೇರೆ ಬಿ.ಪಿ.ಎಲ್ ಕಾರ್ಡ್‌ಗಳ ಮೂಲಕ ಸ್ವಲ್ಪ ಹಣ ಜಮಾ ಆಗಿರುತ್ತದೆ.

ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಗ್ರಾಮೀಣ ಭಾಗದ ಜನ ಅದರಲ್ಲೂ ಮಲೆನಾಡು ಕರಾವಳಿ ಭಾಗದ ಜನ ನಗರ ಪ್ರದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಅಲ್ಲಿ 15 ರಿಂದ 20 ದಿನಗಳವರೆಗೆ ಆಸ್ಪತ್ರೆಗಳಲ್ಲಿ ಇದ್ದು 2 ಲಕ್ಷದಷ್ಟು ಸಂಪೂರ್ಣ ಹಣ ಕಟ್ಟಿ ನಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಕೊಟ್ಟರೆ ಈಗಾಗಲೇ ನಿಮಗೆ ಆಯುಷ್ಠಾನ್ ಅಥವಾ ಬಿ.ಪಿ.ಎಲ್ ಸೌಲಭ್ಯದಿಂದ 5 ಸಾವಿರ ಡ್ರಾ ಆಗಿದೆ ಹಾಗಾಗಿ ಈ ಬಿಲ್ ಕೊಡಲು ಬರುವುದಿಲ್ಲ ಎಂದು ತಿರಸ್ಕರಿಸುತ್ತಾರೆ.

ಆಮಾಯಕ ಜನರಿಗೆ ಯಾವ ರೀತಿ ವೈದ್ಯಕೀಯ ನೆರವು ಪಡೆಯುವ ಅರ್ಜಿಗಳನ್ನು ಸಲ್ಲಿಸಬೇಕೆಂಬ ಮಾಹಿತಿ ಇರುವುದಿಲ್ಲ. ಎಷ್ಟೋ ಹಣ ಬಂದರೆ ಸಾಕು ಎಂದು ತಿಳಿದು ಅರ್ಜಿ ಸಲ್ಲಿಸುತ್ತಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಲಕ್ಷಗಟ್ಟಲೆ ವೆಚ್ಚವಾಗಿರುತ್ತದೆ. ಆದರೆ ಮೊದಲು ಸೇರಿದ ಆಸ್ಪತ್ರೆಯಲ್ಲಿ ಪರಿಹಾರ ಪಡೆದ ಐದೋ ಅಥವಾ ಹತ್ತು ಸಾವಿರಗಳಿಂದ ಹೆಚ್ಚಿನ ಪರಿಹಾರ ಪಡೆಯಲು ಅಮಾಯಕ ಗ್ರಾಮೀಣ ಜನ ವಂಚಿತರಾಗುತ್ತಿದ್ದಾರೆ. ಒಂದು ರೂಪಾಯಿನಷ್ಟೂ ಪರಿಹಾರ ಪಡೆಯದಿದ್ದರೂ ಸಹ ಒಂದು ಲಕ್ಷದಷ್ಟು ಪರಿಹಾರದ ಬಿಲ್ ಅನ್ನು ತಿರಸ್ಕರಿಸಲಾಗುತ್ತದೆ. ಇದರಿಂದ ಬಡ ಅಮಾಯಕ ಜನರಿಗೆ ನಿರಂತರ ಅನ್ಯಾಯವಾಗುತ್ತಿದೆ. ಸಣ್ಣ ಸಣ್ಣ ಕಾರಣಗಳನ್ನು ಮುಂದಿಟ್ಟು ಬಡ ಜನರ ಅರ್ಜಿಗಳನ್ನು ತಿರಸ್ಕರಿಸಿದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲವೇನೋ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಬರಿದಾಗಿದೆ ಎಂಬ ಭಾವನೆ ಮೂಡುತ್ತದೆ ಎಂದು ಹಳ್ಳಿಗಾಡು ಜನರ ಸಧ್ಯದ ಆತಂಕದ ಬಗ್ಗೆ ಅನಿಲ್ ಹೊಸಕೊಪ್ಪ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಗಮನ ಸೆಳೆದಿದ್ದಾರೆ.

ಹಾಗಾಗಿ ದಯವಿಟ್ಟು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ಬಿಲ್‌ಗೆ ಎಷ್ಟು ಬರುತ್ತೋ ಅದರಲ್ಲಿ ಮೊದಲ ಆಸ್ಪತ್ರೆಗಳಲ್ಲಿ ನೀಡಿದ ಕಡಿಮೆ ಮೊತ್ತವನ್ನು ಅಂದರೆ 5 ಸಾವಿರ ಕಡಿತಗೊಳಿಸಿಕೊಂಡು ಉಳಿದ ಹಣ ಬಿಡುಗಡೆ ಮಾಡಿ ಬಡವರಿಗೆ ಹೆಚ್ಚಿನ ಪರಿಹಾರ ನೀಡುವ ಮೂಲಕ ಸಹಾಯ ಮಾಡಬೇಕೆಂದು ಮಲೆನಾಡಿಗರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತೇವೆ ಎಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page