Monday, June 24, 2024

ಸತ್ಯ | ನ್ಯಾಯ |ಧರ್ಮ

ಸಾಂಸ್ಕೃತಿಕ ನೀತಿಯ ನಿರ್ಲಕ್ಷ್ಯ ಏಕೆ ?

ಹಿಂದಿನ ಐದು ವರ್ಷದ ಆಳ್ವಿಕೆಯಲ್ಲಿ ಕರ್ನಾಟಕದ ಸಮನ್ವಯದ ಅಡಿಪಾಯವೇ ಅಲುಗಾಡಿಸುವ ರೀತಿಯಲ್ಲಿ ಸಾಂಸ್ಕೃತಿಕ ಲೋಕದ ಬೆಳವಣಿಗೆಗಳನ್ನು ಕಂಡಿದ್ದರೂ, ಹಾಲಿ ಸರ್ಕಾರ ಸಾಹಿತ್ಯ, ಜಾನಪದ, ರಂಗಭೂಮಿ ಮತ್ತಿತರ ಸಾಂಸ್ಥಿಕ ನಿರ್ವಹಣೆಯ ನಿಟ್ಟಿನಲ್ಲಿ ಒಂದು ದೃಢ-ಖಚಿತ ಆಡಳಿತ ನೀತಿಯನ್ನು ಜಾರಿಗೊಳಿಸಲು ಹಿಂಜರಿಯುತ್ತಿರುವುದು ಸರಿಯಲ್ಲ – ನಾ ದಿವಾಕರ, ಚಿಂತಕರು

ಕರ್ನಾಟಕದ ಶೋಷಿತ ಸಮುದಾಯಗಳ ಹಾಗೂ ಅಂಚಿಗೆ ತಳ್ಳಲ್ಪಟ್ಟವರ ಅಭೂತಪೂರ್ವ ಬೆಂಬಲದೊಂದಿಗೆ ಅಧಿಕಾರ ವಹಿಸಿಕೊಂಡ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮುಂದಿನ ಆದ್ಯತೆಗಳು ಹಲವಾರು. ಆಯ್ಕೆಗಳೂ ಅಷ್ಟೇ ಜಟಿಲವಾಗಿದ್ದು, ಕಳೆದ ಐದು ವರ್ಷಗಳ ಕೊಳೆಯನ್ನು ತೊಳೆಯಬೇಕಾದ ನೈತಿಕ ಜವಾಬ್ದಾರಿಯನ್ನೂ ಹೊತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಾಮಾನ್ಯ ಜನತೆಯ ಜೀವನೋಪಾಯದ ಹಾದಿಯನ್ನು ಸುಗಮಗೊಳಿಸಿದ ಸರ್ಕಾರಕ್ಕೆ, ಸಮಾಜವೊಂದು ಕೇವಲ ಆರ್ಥಿಕತೆಯಿಂದಲೇ ಬದುಕುವುದಿಲ್ಲ ಎಂಬ ಪರಿವೆಯೂ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ರಥಮ ಆದ್ಯತೆ ಕರ್ನಾಟಕದ ಸಾಂಸ್ಕೃತಿಕ ವಲಯವನ್ನು ಸರಿಪಡಿಸುವುದೇ ಆಗಬೇಕಿತ್ತು.

ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಆಶಯಗಳನ್ನು ಸದಾ ಎತ್ತಿ ಹಿಡಿಯುವ ಧೋರಣೆಯುಳ್ಳ ಒಂದು ಚುನಾಯಿತ ಸರ್ಕಾರ ಅಧಿಕಾರ ವಹಿಸಿಕೊಂಡು ಐದು ತಿಂಗಳು ಕಳೆಯುತ್ತಿದ್ದರೂ, ಈವರೆಗೂ ರಾಜ್ಯದ ಸಾಹಿತ್ಯಕ-ಸಾಂಸ್ಕೃತಿಕ ಸಂಸ್ಥೆಗಳ ನಿರ್ವಹಣೆಯತ್ತ ಗಮನಹರಿಸದಿರುವುದು ಅಚ್ಚರಿ ಮೂಡಿಸುತ್ತದೆ. ಹಿಂದಿನ ಐದು ವರ್ಷದ ಆಳ್ವಿಕೆಯಲ್ಲಿ ಕರ್ನಾಟಕದ ಸಮನ್ವಯದ ಅಡಿಪಾಯವೇ ಅಲುಗಾಡಿಸುವ ರೀತಿಯಲ್ಲಿ ಸಾಂಸ್ಕೃತಿಕ ಲೋಕದ ಬೆಳವಣಿಗೆಗಳನ್ನು ಕಂಡಿದ್ದರೂ, ಹಾಲಿ ಸರ್ಕಾರ ಸಾಹಿತ್ಯ, ಜಾನಪದ, ರಂಗಭೂಮಿ ಮತ್ತಿತರ ಸಾಂಸ್ಥಿಕ ನಿರ್ವಹಣೆಯ ನಿಟ್ಟಿನಲ್ಲಿ ಒಂದು ದೃಢ-ಖಚಿತ ಆಡಳಿತ ನೀತಿಯನ್ನು ಜಾರಿಗೊಳಿಸಲು ಹಿಂಜರಿಯುತ್ತಿರುವುದು ಸರಿಯಲ್ಲ. ಆರ್ಥಿಕ ನೆಲೆಯಲ್ಲಿ, ಸಾಮಾಜಿಕ ವಲಯದಲ್ಲಿ ಸರ್ಕಾರದ ನೀತಿ-ಯೋಜನೆಗಳು ಉಂಟುಮಾಡುವ ಪ್ರಭಾವ ಮತ್ತು ವ್ಯತ್ಯಯಗಳನ್ನು ಸರಿದೂಗಿಸುತ್ತಲೇ ರಾಜ್ಯದ ಜನತೆಯ ಅಂತಃಸತ್ವವನ್ನು ಬಿಂಬಿಸುವ ಸಾಂಸ್ಕೃತಿಕ ವಲಯವನ್ನು ಸಾಂಸ್ಥಿಕವಾಗಿ ಗಟ್ಟಿಗೊಳಿಸುವುದು ಯಾವುದೇ ಸರ್ಕಾರದ ಆದ್ಯತೆಯಾಗಬೇಕಲ್ಲವೇ?

ವಿಶೇಷವಾಗಿ ಕರ್ನಾಟಕದ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಹಿತ್ಯ ವಲಯದ ನಿರ್ಲಿಪ್ತತೆಯ ನಡುವೆಯೇ ರಂಗಭೂಮಿಯನ್ನೂ ಒಳಗೊಂಡಂತೆ ಸಾಂಸ್ಕೃತಿಕ ಅಭಿವ್ಯಕ್ತಿಯ ನೆಲೆಗಳು ಗಂಭೀರವಾದ ಹೊಡೆತಕ್ಕೊಳಗಾಗಿವೆ. ಜನಸಾಮಾನ್ಯರ, ವಿಶೇಷವಾಗಿ ಶೋಷಿತ ತಳಸಮುದಾಯಗಳ ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಜೀವನೋಪಾಯಕ್ಕೆ ಪೂರಕವಾದ ಒಂದು ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸುವ ನೈತಿಕ ಜವಾಬ್ದಾರಿ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ರಂಗಸಮಾಜ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾಷಾ ಪ್ರಾಧಿಕಾರ ಹಾಗೂ ಮತ್ತಿತರ ಸಂಸ್ಥೆಗಳ ಮೇಲಿರುತ್ತದೆ. ಹಿಂದುತ್ವ ರಾಜಕಾರಣದ ಪ್ರಭಾವಕ್ಕೊಳಗಾಗಿ ಈ ಸಂಸ್ಥೆಗಳು ರಾಜ್ಯದ ಜನತೆಯ ಸಮನ್ವಯತೆ ಮತ್ತು ಸೌಹಾರ್ದತೆಯನ್ನು ಮನಗಾಣುವಲ್ಲಿ ಸೋತಿರುವುದೇ ಅಲ್ಲದೆ, ಹಲವು ಸಂದರ್ಭಗಳಲ್ಲಿ ಈ ಸಾಮರಸ್ಯದ ನೆಲೆಗಳನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿವೆ. ಮೈಸೂರಿನ ರಂಗಾಯಣ ನಿರ್ದೇಶಕರಿಲ್ಲದೆಯೂ ತನ್ನ ಹಾದಿಯನ್ನು ಮರೆಯದೆ ಉತ್ತಮ ನಾಟಕಗಳನ್ನು ನೀಡಲು ಮುಂದಾಗಿ ಯಶಸ್ವಿಯಾಗಿದೆ.

ಆದರೆ ಸಾಂಸ್ಕೃತಿಕ ಸಂಸ್ಥೆಗಳು ಅಧಿಕಾರಶಾಹಿಯ ನಿಯಂತ್ರಣದಲ್ಲೇ ಹೆಚ್ಚು ಕಾಲ ಮುಂದುವರೆಯಲಾಗುವುದಿಲ್ಲ. ನಿರ್ವಹಣೆಯಲ್ಲಿ ಅಧಿಕಾರಶಾಹಿಯು, ಆಡಳಿತ ವ್ಯವಸ್ಥೆಯು ಜನಪರ ಬದ್ಧತೆಯನ್ನೇ ಹೊಂದಿದ್ದರೂ, ಸಾಂಸ್ಕೃತಿಕ ಸಂಸ್ಥೆಗಳಿಗೆ ಅತ್ಯವಶ್ಯವಾದ ಸಮಾಜಮುಖಿ ಸೃಜನಶೀಲತೆಯನ್ನು ಒದಗಿಸಲು ಸಾಂಸ್ಕೃತಿಕ ವಲಯದ ಪರಿಣತರಿಂದ, ಕಲಾವಿದರಿಂದ ಹಾಗೂ ತಜ್ಞರಿಂದ ಬೆಂಬಲ ಬೇಕಾಗುತ್ತದೆ. ಹಾಗಾಗಿ ಸಾಂಸ್ಕೃತಿಕ ಸಂಸ್ಥೆಗಳ ಉನ್ನತ ಹುದ್ದೆಗಳನ್ನು ನಿರ್ಲಕ್ಷಿಸಿದಷ್ಟೂ ಈ ಸಂಸ್ಥೆಗಳು ನಿರ್ಲಿಪ್ತತೆಯತ್ತ ಸಾಗುತ್ತವೆ. ರಂಗಾಯಣದ ಹೊರತಾಗಿ ಉಳಿದೆಲ್ಲ ಸಂಸ್ಥೆಗಳೂ ಈ ನಿರ್ವಾತವನ್ನು ಎದುರಿಸುತ್ತಿರುವುದನ್ನು ಗಮನಿಸಬಹುದು. ರಾಜ್ಯ ಸರ್ಕಾರ, ಸಂಸ್ಕೃತಿ ಇಲಾಖೆಯ ಸಚಿವರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.

ಕಳೆದ ಸರ್ಕಾರದ ಅವಧಿಯಲ್ಲಿ ಸಾಹಿತ್ಯಕ-ಸಾಂಸ್ಕೃತಿಕ ಅಭಿವ್ಯಕ್ತಿಯ ಸಾಂಸ್ಥಿಕ ಚೌಕಟ್ಟುಗಳು ನಮ್ಮ ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿವೆ. ಕರ್ನಾಟಕದ ನೆಲಮೂಲ ಸಂಸ್ಕೃತಿ ಎನ್ನಬಹುದಾದ ಬಹುತ್ವದ ನೆಲೆಗಳನ್ನು ದುರ್ಬಲಗೊಳಿಸಲಾಗಿದೆ. ಜನಸಾಮಾನ್ಯರ ನಡುವೆ ಸೋದರತ್ವದ ಭಾವನೆಯನ್ನು ಬೆಳೆಸಿ, ಸಾಮಾಜಿಕ ಸೌಹಾರ್ದತೆಯನ್ನು ಸೃಜಿಸುವ ನಿಟ್ಟಿನಲ್ಲಿ ಸರ್ಕಾರದ ಆಡಳಿತಾತ್ಮಕ ನೀತಿಗಳು ನೆರವಾಗುವುದಿಲ್ಲ. ಈ ನೈತಿಕ ಜವಾಬ್ದಾರಿಯನ್ನು ಸಾಂಸ್ಕೃತಿಕ-ಸಾಹಿತ್ಯಕ ವಲಯವೇ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ. ಹಾಗಾಗಿಯೇ ಸ್ವಾತಂತ್ರ್ಯೋತ್ತರ ಭಾರತದ ಆಳ್ವಿಕೆಯಲ್ಲಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಬರಲಾಗಿದೆ. ಅಧಿಕಾರ ರಾಜಕಾರಣದ ಆಮಿಷಗಳಿಗೆ ಅಥವಾ ಅಸ್ತಿತ್ವದ ಪ್ರಭಾವಕ್ಕೊಳಗಾಗಿ ಈ ಸಾಂಸ್ಥಿಕ ನೆಲೆಗಳು ಸ್ವಾಯತ್ತತೆಯನ್ನು ಕಳೆದುಕೊಂಡಿದ್ದರೂ, ಆಡಳಿತಾರೂಢ ಸರ್ಕಾರಗಳು ತಳಮಟ್ಟದ ಸಾಮಾನ್ಯ ಜನತೆಯ ನಾಡಿ ಮಿಡಿತವನ್ನು ಅರಿತಿದ್ದೇ ಅದರೆ, ಈ ಸಂಸ್ಥೆಗಳು ಜನಪರವಾಗಿ ಕಾರ್ಯ ನಿರ್ವಹಿಸಲು ಸಾಧ್ಯ.

ಹಾಗಾಗಿ ಈ ಸಾಂಸ್ಥಿಕ ವಲಯದಲ್ಲಿ ಸಂವಿಧಾನಕ್ಕೆ, ಪ್ರಜಾಪ್ರಭುತ್ವದ ಆಶಯಗಳಿಗೆ ಹಾಗೂ ನಾಡಿನ ಬಹುತ್ವ ಸಂಸ್ಕೃತಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಕಾರ್ಯಪಡೆಯ ಅವಶ್ಯಕತೆ ಇದ್ದೇ ಇರುತ್ತದೆ. ಒಂದು ಜವಾಬ್ದಾರಿಯುತ ಸರ್ಕಾರವು ತನ್ನ ಸಚಿವ ಸಂಪುಟಕ್ಕೆ ನೀಡುವಷ್ಟೇ ಪ್ರಾಮುಖ್ಯತೆ, ಪ್ರಾಶಸ್ತ್ಯವನ್ನು ಸಾಂಸ್ಕೃತಿಕ ಸಂಸ್ಥೆಗಳ ನಿರ್ವಹಣೆಗೂ ನೀಡಬೇಕಾಗುತ್ತದೆ. ಇಲ್ಲಿ ನಡೆಯಬಹುದಾದ ರಾಜಕೀಯ ಲಾಬಿ, ಸ್ವಜನಪಕ್ಷಪಾತ, ಪಕ್ಷ ರಾಜಕಾರಣದ ಒತ್ತಾಸೆಗಳು ಹಾಗೂ ಜಾತಿ ಸಮೀಕರಣಗಳನ್ನು ಬದಿಗಿಟ್ಟು ನೋಡಿದಾಗಲೂ, ಸರ್ಕಾರವು ಒಂದು ಪ್ರಾಮಾಣಿಕ ಪ್ರಯತ್ನದ ಮೂಲಕ ಬಹುತ್ವ ಸಂಸ್ಕೃತಿಯನ್ನು ಸುರಕ್ಷಿತವಾಗಿ ಮುನ್ನಡೆಸುವ ರೀತಿಯಲ್ಲಿ ಕಾರ್ಯಕ್ಷಮತೆಯನ್ನು ಹೊಂದಿರಬೇಕಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ಸಾಂಸ್ಕೃತಿಕ ವ್ಯತ್ಯಯಗಳು ಮತ್ತು ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಬಹುಶಃ ಸರ್ಕಾರ ಈ ವೇಳೆಗಾಗಲೇ ಕಾರ್ಯೋನ್ಮುಖವಾಗುತ್ತಿತ್ತು.

ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯನ್ನು ತಿರಸ್ಕರಿಸಿ ರಾಜ್ಯದ ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ತಜ್ಞರ ಸಮಿತಿಯನ್ನು ನೇಮಿಸಿರುವುದು ಸ್ವಾಗತಾರ್ಹ ಕ್ರಮವೇ ಹೌದು. ಹಾಗೆಯೇ ಶಾಲಾ ಪಠ್ಯ ಪರಿಷ್ಕರಣೆಯ ದಿಕ್ಕಿನಲ್ಲೂ ಸರ್ಕಾರ ಸರಿಯಾದ ಹೆಜ್ಜೆ ಇರಿಸಿದೆ. ಆದರೆ ಈ ಎರಡೂ ವಲಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದು ತಳಮಟ್ಟದ ಜನರನ್ನು ತಲುಪುವಂತಹ ಸಾಂಸ್ಕೃತಿಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಶಿಥಿಲವಾಗಿರುವ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ನುಸುಳಿರುವಂತಹ ಮಾನವ ವಿರೋಧಿ ಧೋರಣೆಗಳನ್ನು ಸರಿಪಡಿಸುವುದು ಸರ್ಕಾರದ ಆದ್ಯತೆಯಾಗಬೇಕಲ್ಲವೇ ? ಆದರೆ ಸರ್ಕಾರ ರಚಿಸಿ ಐದು ತಿಂಗಳು ಕಳೆದರೂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಾವುದೇ ಹೆಜ್ಜೆ ಇಡಲು ಮೀನ ಮೇಷ ಎಣಿಸುತ್ತಿರುವುದು ಅಚ್ಚರಿದಾಯಕ ಅಂಶ.

ಕರ್ನಾಟಕಕ್ಕೆ ಬಹುದೊಡ್ಡ ಸಾಹಿತ್ಯಕ-ಸಾಂಸ್ಕೃತಿಕ-ರಂಗ ಪರಂಪರೆ ಇರುವಂತೆಯೇ ಇಂದಿಗೂ ಸಹ ನಾಡಿನಾದ್ಯಂತ ಈ ವಲಯಗಳಲ್ಲಿ ಬಹುತ್ವ ಸಂಸ್ಕೃತಿಯನ್ನು ಮತ್ತೊಮ್ಮೆ ಚಿಗುರಿಸುವ ಹಾಗೂ ಭವಿಷ್ಯಕ್ಕಾಗಿ ಕಾಪಾಡುವ ಬದ್ಧತೆ-ಕ್ಷಮತೆ ಹಾಗೂ ಕಾರ್ಯದಕ್ಷತೆ ಹೊಂದಿರುವ ನೂರಾರು ವ್ಯಕ್ತಿಗಳಿದ್ದಾರೆ. ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಾಂಸ್ಕೃತಿಕ ವಲಯದ ಸಾಂಸ್ಥಿಕ ನೆಲೆಗಳನ್ನು ಬಹುತ್ವ ಕೇಂದ್ರಿತ ಭೂಮಿಕೆಗಳನ್ನಾಗಿ ರೂಪಿಸುವ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಸರ್ಕಾರದ ಮೇಲಿದೆ. ಹಾಗೆಯೇ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಮರುಸ್ಥಾಪಿಸುವ ಹೊಣೆಯೂ ಸರ್ಕಾರದ್ದೇ ಆಗಿರುತ್ತದೆ. ಸರ್ಕಾರ ತುಂಬಬೇಕಿರುವುದು ಹುದ್ದೆಗಳನ್ನಲ್ಲ, ಸೃಷ್ಟಿಯಾಗಿರುವ ಸಾಂಸ್ಕೃತಿಕ ನಿರ್ವಾತವನ್ನು ಎಂಬ ಎಚ್ಚರಿಕೆಯೊಂದಿಗೆ ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತು ತನ್ನ ಜವಾಬ್ದಾರಿಯನ್ನು ಪೂರೈಸಲು ಮುಂದಾಗಲಿ.

ನಾ ದಿವಾಕರ

ಚಿಂತಕರು

ಇದನ್ನೂ ಓದಿ- ಸರ್ಕಾರಗಳು ಸಾಂಸ್ಕೃತಿಕ ಜಡತ್ವದಿಂದ ಬಿಡುಗಡೆ ಆಗುವುದು ಯಾವಾಗ?

Related Articles

ಇತ್ತೀಚಿನ ಸುದ್ದಿಗಳು