Friday, June 14, 2024

ಸತ್ಯ | ನ್ಯಾಯ |ಧರ್ಮ

ಮುಜಫರ್ ನಗರ ಶಾಲಾ ಪ್ರಕರಣ: ಮೊಹಮ್ಮದ್‌ ಜುಬೈರ್‌ ಮೇಲೆ ದೂರು ದಾಖಲಾಗಿದ್ದೇಕೆ?

ಶಿಕ್ಷಕಿಯ ಆದೇಶದಂತೆ ತನ್ನ ಸಹಪಾಠಿಯ ಕಪಾಳಕ್ಕೆ ಹೊಡೆದ ಪ್ರಕರಣದಲ್ಲಿ ಏಳು ವರ್ಷದ ಮುಸ್ಲಿಂ ಬಾಲಕನ ಧರ್ಮದ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ Alt News ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ (Mohammed Zubair) ವಿರುದ್ಧ ಮುಜಫರ್ ನಗರ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

ವಿಷ್ಣುದತ್ ಎಂಬ ವ್ಯಕ್ತಿ ನೀಡಿದ ದೂರಿನ ಮೇರೆಗೆ ಜುಬೈರ್ ವಿರುದ್ಧ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 74 ರ ಅಡಿಯಲ್ಲಿ ಬಾಲಕನ ಗುರುತನ್ನು ಬಹಿರಂಗಪಡಿಸಿರುವ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ರೂ 2 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.

ಆಗಸ್ಟ್ 24 ರಂದು ಮುಸ್ಲಿಂ ಬಾಲಕನಿಗೆ ಸಹಪಾಠಿಗಳು ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತ್ರಿಪ್ತಾ ತ್ಯಾಗಿ ( Tripta Tyagi) ಎಂಬವರಿಗೆ ಸೇರಿದ ಮುಜಾಫರ್‌ನಗರದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಶಿಕ್ಷಕಿ ಬಾಲಕನ ಮೇಲೆ ಹಲ್ಲೆ ನಡೆಸುವಂತೆ ತನ್ನ ವಿದ್ಯಾರ್ಥಿಗಳಿಗೆ ಹೇಳುತ್ತಾಳೆ. ಅಲ್ಲದೇ, ಮುಸ್ಲಿಂ ವಿದ್ಯಾರ್ಥಿಗಳು ಬೇರೆ ಎಲ್ಲಾದ್ರೂ ಹೋಗಿ ಎನ್ನುವ ಮಾತು ಕೂಡ ಈ ವಿಡಿಯೋದಲ್ಲಿ ಕೇಳುತ್ತದೆ.

ಒಬ್ಬ ಬಾಲಕನಿಗೆ ಆ ಮುಸ್ಲಿಂ ವಿದ್ಯಾರ್ಥಿಯ ಬೆನ್ನಿಗೆ ಹೊಡೆಯಲು ಹೇಳುತ್ತಾಳೆ. ನಂತರ ಸೊಂಟಕ್ಕೆ ಹೊಡೆಯುವಂತೆ ಹೇಳುತ್ತಾಳೆ.

ತ್ಯಾಗಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (Voluntarily causing hurt) ಮತ್ತು 504 (Intentional insult with intent to provoke breach of the peace) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಆಕೆಯ ವಿರುದ್ಧ ಸಣ್ಣ ಅಪರಾಧ (non cognizable) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಂದರೆ ವಾರಂಟ್ ಇಲ್ಲದೆ ಪೊಲೀಸರು ಆಕೆಯನ್ನು ಬಂಧಿಸುವಂತಿಲ್ಲ. ತನಿಖೆ ಆರಂಭಿಸಲು ಪೊಲೀಸರಿಗೆ ನ್ಯಾಯಾಲಯದ ಅನುಮತಿಯೂ ಬೇಕು.

ಘಟನೆಯ ವೀಡಿಯೊವನ್ನು Social Media ದಲ್ಲಿ ಹಂಚಿಕೊಳ್ಳುವ ಮೂಲಕ ಪತ್ರಕರ್ತ ಜುಬೇರ್ ಬಾಲಕನ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿ FIR ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು