ಚಿಕ್ಕಮಗಳೂರು ತಾಲೂಕಿನಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಹಂತಕ ಕಾಡಾನೆಯನ್ನು ಸೆರೆಹಿಡಿದಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಜನರ ಆತಂಕ ತಗ್ಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನ 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತಹಶೀಲ್ದಾರ್ ಹೊರಡಿಸಿದ ಆದೇಶದಂತೆ, ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಲಾಗಿದೆ. ಫೆಬ್ರವರಿ 26ರವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಾಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಎರಡು ಪ್ರಾಣಾಪಾಯ ಘಟನೆಗಳು ಪರಿಸ್ಥಿತಿಯನ್ನು ಗಂಭೀರಗೊಳಿಸಿವೆ. ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಅದೇ ತೋಟದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಹೊಸಪೇಟೆ ಮೂಲದ 34 ವರ್ಷದ ಕಾರ್ಮಿಕ ಮಹಿಳೆ ಬೋರಮ್ಮ ಕೂಡ ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದರು.
ಈ ಘಟನೆಯ ಬಳಿಕ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿ ‘ಕಿಲ್ಲರ್ ಸಲಗ’ ಎಂದು ಗುರುತಿಸಲಾದ ಕಾಡಾನೆಯನ್ನು ಸೆರೆಹಿಡಿಯಿತು. ಆದಾಗ್ಯೂ, ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಇನ್ನೂ ಎರಡು ಕಾಡಾನೆಗಳು ಬೀಡುಬಿಟ್ಟಿರುವುದು ಪತ್ತೆಯಾಗಿದ್ದು, ಅವುಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ನಿಗಾ ಇಟ್ಟಿದೆ.
ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ, ದಂಬದಹಳ್ಳಿ, ನಲ್ಲೂರು, ಕಾರೇಮನೆ, ಉಕ್ಕುಂದ, ಗಡಬನಹಳ್ಳಿ, ಜೋಳದಾಳು, ಚಿಕ್ಕೊಳಲೆ, ತಳಿಹಳ್ಳ ಹಾಗೂ ಶಿರಗುಂದ ಗ್ರಾಮಗಳಲ್ಲಿ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗ್ರಾಮಸ್ಥರು ಅಗತ್ಯವಿಲ್ಲದೆ ಹೊರಗೆ ಸಂಚರಿಸದಂತೆ ಹಾಗೂ ಅರಣ್ಯ ಪ್ರದೇಶಗಳಿಗೆ ತೆರಳದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
