Home ಲೋಕಸಭೆ ಚುನಾವಣೆ -2024 ಅತಂತ್ರ ಲೋಕಸಭೆ ಬಂದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಲಿದೆಯೇ ಡಿಎಮ್‌ಕೆ?

ಅತಂತ್ರ ಲೋಕಸಭೆ ಬಂದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಲಿದೆಯೇ ಡಿಎಮ್‌ಕೆ?

0

ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಬಹುಮತವನ್ನು ಘೋಷಿಸಿವೆಯಾದರೂ ಬಿಜೆಪಿ ನಾಯಕರು ತಮ್ಮ ಪಕ್ಷಕ್ಕೆ ಬಹುಮತ ಬರುತ್ತದೆ ಎನ್ನುವ ಕುರಿತು ವಿಶ್ವಾಸ ಹೊಂದಿರುವಂತಿಲ್ಲ.

ಕೆಲವು ಮೂಲಗಳ ಪ್ರಕಾರ ಬಿಜೆಪಿ ಇದೇ ಕಾರಣಕ್ಕಾಗಿ ಡಿಎಮ್‌ಕೆ ಪಕ್ಷದೊಂದಿಗೆ ಮಾತುಕತೆಯಲ್ಲಿ ತೊಡಗಿದೆ.

ಈ ಹಿಂದೆ ವಾಜಪೇಯಿ ಸರ್ಕಾರವಿದ್ದ ಸಮಯದಲ್ಲಿ ಡಿಎಮ್‌ಕೆ ಎನ್‌ಡಿಎ ಭಾಗವಾಗಿತ್ತು ಎನ್ನುವುದನ್ನು ನಾವು ಇಲ್ಲಿ ನೆನಪಿಸಿಕೊ‍ಳ್ಳಬಹುದಾಗಿದೆ. ಅಲ್ಲದೆ ಬಿಜೆಪಿ ಈ ಬಾರಿ ಬಹುಮತದ ಹತ್ತಿರ ಮುಗ್ಗರಿಸಲಿದೆ ಎನ್ನುವ ಆಂತರಿಕ ವರದಿಗಳಿವೆ. ಹೀಗಾಗಿ ಬಿಜೆಪಿ ಡಿಎಮ್‌ಕೆ ಪಕ್ಷದೊಂದಿಗೆ ಚೌಕಾಶಿಯಲ್ಲಿ ತೊಡಗಿದೆ ಎನ್ನಲಾಗುತ್ತಿದೆ.

ಈ ಚೌಕಾಶಿಯ ನೇತೃತ್ವವನ್ನು ನಿರ್ಮಲಾ ಸೀತರಾಮನ್ ಹೊತ್ತುಕೊಂಡಿದ್ದು, ಡಿಎಮ್‌ಕೆ ಬಿಜೆಪಿ ಜೊತೆ ಕೈ ಜೋಡಿಸಿದಲ್ಲಿ ಕರುಣಾನಿಧಿಯವರಿಗೆ ಮರಣೋತ್ತರ ಭಾರತರತ್ನದ ಜೊತೆಗೆ ಮಲ್ಲ ಪೆರಿಯಾರ್‌ ಮತ್ತು ಕಾವೇರಿ ವಿಷಯದಲ್ಲಿ ತಮಿಳುನಾಡಿಗೆ ಅನುಕೂಲ ಮಾಡಿಕೊಡುವುದಾಗಿ ಬಿಜೆಪಿ ಸ್ಟಾಲಿನ್‌ ಅವರಿಗೆ ಭರವಸೆ ನೀಡಲಾಗಿದೆ ಎನ್ನಲಾಗುತ್ತಿದೆ.

ಮೊನ್ನೆ ನಡೆದ ಇಂಡಿಯಾ ಬ್ಲಾಕ್‌ ನಾಯಕರ ಸಭೆಗೂ ಸ್ಟಾಲಿನ್‌ ಯಾವುದೇ ಕಾರಣ ನೀಡದೆ ಗೈರಾಗಿದ್ದರು ಎನ್ನುವುದು ಕೂಡಾ ಇಲ್ಲಿ ಗಮನಿಸಬೇಕಾದ ಅಂಶ.

ಇತ್ತೀಚೆಗೆ ಉದಯನಿಧಿ ವಿರುದ್ಧ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಸನಾತನ ವಿವಾದದ ಸಂದರ್ಭದಲ್ಲಿ ಬೆಂಕಿ ಉಗುಳಿದ್ದರಾದರೂ ರಾಜಕೀಯದಲ್ಲಿ ಏನೂ ನಡೆಯಬಹುದು ಎನ್ನುವುದಕ್ಕೆ ಈ ಹಿಂದಿನ ಸಾಕಷ್ಟು ನಿದರ್ಶನಗಳೂ ಇವೆ. ಅಲ್ಲದೆ ಬಿಜೆಪಿ ಮತ್ತು ಎಐಡಿಎಮ್‌ಕೆ ನಡುವೆ ಸಂಬಂಧ ಹದಗೆಟ್ಟಿರುವುದು ಕೂಡಾ ರಾಜಕೀಯವಾಗಿ ಬಿಜೆಪಿಗೆ ಹತ್ತಿರವಾಗಲು ಡಿಎಮ್‌ಕೆ ಪಕ್ಷಕ್ಕೆ ಕಾರಣವಾಗಬಹುದು.

ಆದರೆ ತನ್ನೊಂದಿಗೆ ಮೈತ್ರಿ ಮಾಡಿಕೊಂಡ ಪ್ರಾದೇಶಿಕ ಪಕ್ಷಗಳೆಲ್ಲವನ್ನೂ ಒಡೆದ, ನುಂಗಿ ನೀರು ಕುಡಿದ ಇತಿಹಾಸ ಹೊಂದಿರುವ ಬಿಜೆಪಿಯೊಂದಿಗೆ ಅದಕ್ಕೆ ತದ್ವಿರುದ್ಧ ಸಿದ್ಧಾಂತ ಹೊಂದಿರುವ ಡಿಎಮ್‌ಕೆ ಮೈತ್ರಿ ಮಾಡಿಕೊಂಡು ತನ್ನ ಪಕ್ಷವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗುವುದೇ ಎನ್ನುವುದೇ ಈಗ ಉಳಿದಿರುವ ಪ್ರಶ್ನೆ.

You cannot copy content of this page

Exit mobile version