Monday, June 17, 2024

ಸತ್ಯ | ನ್ಯಾಯ |ಧರ್ಮ

‌ಹಿಜಾಬ್‌ ನಿಷೇಧ ತೆರವು: ಇನ್ನು ಓದು ಮುಂದುವರೆಸುತ್ತೇನೆ – ಮುಸ್ಕಾನ್‌ ಖಾನ್

ಮಂಡ್ಯ: ಹಿಜಾಬ್ (Hijab row) ನಿಷೇಧದಿಂದಾಗಿ ಕಳೆದ ವರ್ಷ ತನ್ನ ಓದನ್ನು ನಿಲ್ಲಿಸಿದ್ದ ಮಂಡ್ಯದ ಯುವತಿ ಮುಸ್ಕಾನ್ ಖಾನ್ ಇತ್ತೀಚೆಗೆ ನಿಷೇಧ ತೆರವಿನ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ.

“ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ನಾನು ನನ್ನ ಕಾಲೇಜು ಬಿಡಬೇಕಾಯಿತು. ಇನ್ನು ಮುಂದೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಗೆ ಅವಕಾಶ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಹೀಗಾಗಿ ನಾನು ನನ್ನ ಶಿಕ್ಷಣವನ್ನು ಮುಂದುವರಿಸಲಿದ್ದೇನೆ” ಎಂದು ಅವರು ಹೇಳಿದರು .

ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಮುಸ್ಕಾನ್ ಕಳೆದ ವರ್ಷ ಹಿಜಾಬ್ ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು. ಅವರ ಹೋರಾಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ನಿಷೇಧ ಜಾರಿಗೆ ಬಂದ ನಂತರ ಅವರು ತನ್ನ ವಿದ್ಯಾಭ್ಯಾಸವನ್ನೇ ತ್ಯಜಿಸಿದ್ದರು.

“ನನಗೆ ಬೇರೆ ನಗರಗಳ ಕಾಲೇಜುಗಳಲ್ಲಿ ಓದಲು ಆಫರ್‌ಗಳು ಬಂದವು ಆದರೆ ನಾನು ಅವುಗಳನ್ನು ನಿರಾಕರಿಸಿದೆ. ಓದುವುದಾದರೆ ನನ್ನ ಊರಿನಲ್ಲೇ ಓದಬೇಕೆನ್ನುವುದು ನನ್ನ ನಿರ್ಧಾರವಾಗಿತ್ತು. ಹಿಜಾಬ್ ವಿಷಯವು ಭವಿಷ್ಯದಲ್ಲಿ ಮತ್ತೆ ರಾಜಕೀಯ ವಿಷಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಶಿಕ್ಷಣ ನನಗೆ ಬಹಳ ಮುಖ್ಯ. ಕಾಲೇಜುಗಳಲ್ಲಿ ಹಿಂದಿನ ವಾತಾವರಣ ನಿರ್ಮಾಣವಾಗಲಿ ಎನ್ನುವುದು ನನ್ನ ಆಶಯ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಶುಕ್ರವಾರ ಮೈಸೂರಿನಲ್ಲಿ ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಲವು ಪ್ರಮುಖ ಟೀಕೆಗಳನ್ನು ಮಾಡಿದ್ದರು. ಯಾವ ಉಡುಗೆ ತೊಡಬೇಕು, ಯಾವ ಆಹಾರ ಸೇವಿಸಬೇಕು ಎನ್ನುವುದು ವೈಯಕ್ತಿಕವಾಗಿದ್ದು, ಅದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಅವರು ಹೇಳಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ, ಮುಸ್ಕಾನ್‌ ತನ್ನ ಮೂರನೇ ಸೆಮಿಸ್ಟರ್‌ ಆರಂಭವಾಗುವ ಸಮಯದಲ್ಲಿ ಓದು ನಿಲ್ಲಿಸಿದ್ದರು. ಈಗ ಮತ್ತೆ ಅವರು ಮೂರನೇ ಸೆಮಿಸ್ಟರ್‌ ಸೇರಿಕೊಳ್ಳಬೇಕಿದೆ.

ಇದೇ ವೇಳೆ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಹಿಜಾಬ್ ವಿಷಯದ ಬಗ್ಗೆಯೂ ಮುಸ್ಕಾನ್ ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಅನುಕೂಲಕರ ತೀರ್ಪು ಬರುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು