Wednesday, August 20, 2025

ಸತ್ಯ | ನ್ಯಾಯ |ಧರ್ಮ

ಹಾಸನ : ಬಿಜೆಪಿ ಜೆಡಿಎಸ್ ಮೈತ್ರಿ; ಕಾಂಗ್ರೆಸ್ ಕಡೆ ಮುಖ ಮಾಡ್ತಾರಾ ಪ್ರೀತಂ ಗೌಡ!

ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆ ಬಲಿಷ್ಠ ಪಕ್ಷವಾದ ಕಾಂಗ್ರೆಸ್ಸನ್ನು ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬಗ್ಗೆ ಒಂದೊಂದೇ ನಾಯಕರು ತಮ್ಮ ತಮ್ಮ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಆದರೆ ಜೆಡಿಎಸ್ ತವರುಮನೆಯಂತಿರುವ ಹಾಸನದಲ್ಲಿ ಮಾತ್ರ ಬಿಜೆಪಿ ಕಟ್ಟಿ ಬೆಳೆಸುತ್ತಿರುವ ಪ್ರೀತಂ ಗೌಡ ಮೈತ್ರಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ.

ಒಂದು ಕಡೆ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಂತರವಾಗಿ ದೆಹಲಿಗೆ ತೆರಳಿ, ಬಿಜೆಪಿ ನಾಯಕರ ಭೇಟಿ ಮಾಡುತ್ತಿದ್ದಾರೆ. ಇತ್ತ ರಾಜ್ಯದ ಹೆಚ್ಚಿನ ನಾಯಕರು ಜೆಡಿಎಸ್ ಪಕ್ಷಕ್ಕೆ ಒಂದಷ್ಟು ಕ್ಷೇತ್ರ ಬಿಟ್ಟು ಕಾಂಗ್ರೆಸ್ ಎದುರಿಸಲು ಮುಂದಾಗು ಇಂಗಿತ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮೈತ್ರಿ ಆಗೇ ಬಿಟ್ಟಿತು, ಕ್ಷೇತ್ರಗಳ ಚರ್ಚೆ ನಡೆಯುತ್ತಿದೆ ಎನ್ನುವ ಬಗ್ಗೆಯೂ ಬಿಸಿಬಿಸಿ ಚರ್ಚೆ ಮುಂದಾಗಿದೆ.

ಈ ನಡುವೆ ಮೂಲದಿಂದಲೂ ಜೆಡಿಎಸ್ ಪಕ್ಷಕ್ಕೆ ಸಡ್ಡು ಹೊಡೆದೇ ತನ್ನ (ಬಿಜೆಪಿ) ಅಸ್ತಿತ್ವ ಸ್ಥಾಪಿಸಿಕೊಂಡು ಬಂದ, ಹಾಗೆಯೇ ಜೆಡಿಎಸ್ ಭದ್ರಕೋಟೆಯಂತಿದ್ದ ಹಾಸನದಲ್ಲೇ ಬಿಜೆಪಿ ಸ್ಥಾನ ಗಿಟ್ಟಿಸಲು ಯಶಸ್ವಿಯಾದ ಪ್ರೀತಂ ಗೌಡ ಮಾತ್ರ ತಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರ ವಿರುದ್ಧ ತಿರುಗಿ ನಿಂತಿದ್ದಾರೆ. ಆ ಮೂಲಕ ಜೆಡಿಎಸ್ ಬಿಜೆಪಿ ಮೈತ್ರಿಗೆ ನನ್ನ ಸಮ್ಮತಿ ಇಲ್ಲ ಎಂದು ತಮ್ಮ ನಿಲುವು ಹೊರಹಾಕಿದ್ದಾರೆ.

‘ಮೈತ್ರಿ ಬಗ್ಗೆ ನಿರ್ಧಾರ ತಗೆದುಕೊಳ್ಳುವ ನಾಯಕರು ಯಾರೂ ಸಹ ನನ್ನ ಬಳಿ ಈ ವರೆಗೆ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಈ ನಡುವೆ ಮೈತ್ರಿ ಬಗ್ಗೆ ಯಾರು ಪ್ರಸ್ತಾಪಿಸಿದ್ದಾರೆ ಎಂಬುದು ಸ್ಪಷ್ಟಪಡಿಸಬೇಕು. ಯಾರಿಗೋ ಕಷ್ಟ ಇದೆ ಎಂದ ಮಾತ್ರಕ್ಕೆ ಮೈತ್ರಿ ಮಾಡಿಕೊಳ್ಳುವುದು ಸೂಕ್ತ ಅಲ್ಲ’ ಎಂದು ತಮ್ಮ ನಿರ್ಧಾರ ತಿಳಿಸಿದ್ದಾರೆ.

‘ನಾವು ಕುಟುಂಬ ರಾಜಕಾರಣದ ವಿರುದ್ಧ ಹೋರಾಡುತ್ತಾ ಬಂದವರು. ಜೆಡಿಎಸ್ ಕುಟುಂಬ ರಾಜಕಾರಣವನ್ನು ಜಿಲ್ಲೆಯಾದ್ಯಂತ ಮಾಡುತ್ತಾ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಕೈ ಜೋಡಿಸಿ ಅವರ ಪಕ್ಷ ಬೆಳೆಸುವುದಾದರೆ ನಾನ್ಯಾಕೆ ಇಲ್ಲಿ ರಾಜಕಾರಣ ಮಾಡ್ಕೊಂಡು ಬರಬೇಕು. ಇದನ್ನು ನಾನು ಒಪ್ಪುವುದಿಲ್ಲ’ ಎಂದು ಜೆಡಿಎಸ್ ಜೊತೆಗಿನ ಮೈತ್ರಿಗೆ ಬಿಜೆಪಿ ಮಾಜಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ಬಿಜೆಪಿ ಪಕ್ಷದ ದ್ವಂದ್ವ ನಿಲುವುಗಳು, ಹಾಸನ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಬಿಜೆಪಿ ನಾಯಕರು ತೋರುತ್ತಿರುವ ಅಸಹಕಾರದ ಬಗ್ಗೆ ಪ್ರೀತಂ ಗೌಡ ತಮ್ಮ ಆಪ್ತರೊಂದಿಗೆ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪ್ರಸ್ತುತ ಸನ್ನಿವೇಶ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ಪೂರಕ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ, ಜೊತೆಗೆ ಮೈತ್ರಿ ಮಾತುಕತೆ ಬಗ್ಗೆ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರುವ ಬಗ್ಗೆಯೂ ಪ್ರೀತಂ ಗೌಡ ಆಸಕ್ತಿ ತೋರಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹಾಗೊಂದು ವೇಳೆ ಪ್ರೀತಂ ಗೌಡ ಕಾಂಗ್ರೆಸ್ ಸೇರ್ಪಡೆಯಾದರೆ ತನ್ನ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಎದುರಿಸಲು ತಂಡ ಕಟ್ಟಲು ಪ್ರೀತಂ ಗೌಡಗೆ ಒಂದೊಳ್ಳೆ ವಾತಾವರಣ ಸೃಷ್ಟಿಯಾಗಬಹುದು. ಇತ್ತ ಅರಸೀಕೆರೆ ಶಿವಲಿಂಗೇಗೌಡ, ಹೊಳೆನರಸೀಪುರದ ಶ್ರೇಯಸ್ ಪಟೇಲ್, ಹಾಸನದ ಬನವಾಸೆ ರಂಗಸ್ವಾಮಿ ಸೇರಿದಂತೆ ಘಟಾನುಘಟಿಗಳ ಜೊತೆಗೆ ಕೈಜೋಡಿಸಿದರೆ ಜೆಡಿಎಸ್ ಪಕ್ಷಕ್ಕೆ ಸರಿಯಾಗಿ ಠಕ್ಕರ್ ಕೊಡಬಹುದು ಎಂಬ ನಿರೀಕ್ಷೆ ಕೂಡಾ ಪ್ರೀತಂ ಗೌಡ ಅವರಿಗೆ ಇದ್ದಂತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page