Saturday, June 15, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ ಪಕ್ಷವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇನೆ: ಮಲ್ಲಿಕಾರ್ಜುನ ಖರ್ಗೆ

ಗುವಾಹಟಿ: ʼಸಾಮೂಹಿಕ ನಾಯಕತ್ವʼದಲ್ಲಿ ನಂಬಿಕೆ ಇದೆ ಹೀಗಾಗಿ ಪಕ್ಷವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಎಲ್ಲಾ ಸದಸ್ಯರೊಂದಿಗೆ ಕೆಲಸ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಈಶಾನ್ಯ ಭಾಗದ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ ಅವರು, ‘ಉದಯಪುರ ಘೋಷಣೆ’ಯನ್ನು ಜಾರಿಗೆ ತರುವುದು ಮತ್ತು ಮಹಿಳೆಯರು ಹಾಗೂ ಒಬಿಸಿ, ಎಸ್ಸಿ, ಎಸ್ಟಿ, ಜನಾಂಗಕ್ಕೆ ಸೇರಿದವರನ್ನು ಒಳಗೊಂಡಂತೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಪಕ್ಷಕ್ಕೆ ನೇಮಿಸುವ ಮೂಲಕ ಪಕ್ಷದಲ್ಲಿ ‘ಹೊಸ ರಕ್ತ’ ತರುವುದು ತಮ್ಮ ಪ್ರಾಥಮಿಕ ಗುರಿಯಾಗಿದೆ ಎಂದು ಹೇಳಿದರು.

ನನಗೆ ಸಮಾಲೋಚನೆ ಮತ್ತು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಜನರು ನನ್ನನ್ನು ಹಿಂಬಾಲಿಸುವುದರಲ್ಲಿ ನನಗೆ ನಂಬಿಕೆ ಇಲ್ಲ, ಆದರೆ ಅವರು ನನ್ನ ಪಕ್ಕದಲ್ಲಿ ನಡೆಯಬೇಕೆಂದು ನಾನು ಬಯಸುತ್ತೇನೆ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಗಾಂಧಿ ಕುಟುಂಬದ ಯಾವುದೇ ಸದಸ್ಯರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಿಲ್ಲದ ಕಾರಣ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿರುವುದಾಗಿ ಖರ್ಗೆ ಹೇಳಿದರು.

ಸೋನಿಯಾ ಮತ್ತು ರಾಹುಲ್ ಗಾಂಧಿ ಇಬ್ಬರೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಭರವಸೆ ನೀಡಿದ್ದರಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರತಿನಿಧಿಗಳೇ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ ಎಂದು ಖರ್ಗೆ ತಿಳಿಸಿದರು.

ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ದೇಶ ಮತ್ತು ಪ್ರತಿಪಕ್ಷಗಳನ್ನು ವಿಭಜಿಸುವುದು ಬಿಜೆಪಿಯವರ ಉದ್ದೇಶವಾಗಿದೆ. ಹೀಗಾಗಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಪಕ್ಷದ ಸದಸ್ಯರು ಒಗ್ಗಟ್ಟಾಗಿರಬೇಕು ಎಂದು ಅವರು ಒತ್ತಾಯಿಸಿದರು.

ಈ ಹಿಂದೆ ಇಂದಿರಾ ಮತ್ತು ರಾಜೀವ್ ಗಾಂಧಿ ಅವರು ಮುಂದಿಟ್ಟಿದ್ದ ಜವಾಹರಲಾಲ್ ನೆಹರೂ ಅವರ ಪರಂಪರೆಯನ್ನು ಕಾಂಗ್ರೆಸ್ ರಕ್ಷಿಸಬೇಕಿದೆ. ಈ ಹಿನ್ನಲೆಯಲ್ಲಿ 20 ವರ್ಷಗಳ ಕಾಲ ಪಕ್ಷದ ಚುಕ್ಕಾಣಿ ಹಿಡಿದ ನಂತರ ಜ್ಞಾನ ಮತ್ತು ಅನುಭವ ಹೊಂದಿರುವ ಸೋನಿಯಾ ಗಾಂಧಿ ಅವರ ಮಾತನ್ನು ಕೇಳುವುದು ನಮ್ಮ ಕರ್ತವ್ಯ ಎಂದು ಖರ್ಗೆ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು