Sunday, June 16, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ ಟಿಕೆಟಿಗೆ ಕುತ್ತು ತರಬಹುದೆ ಸೌಮ್ಯಾ ರೆಡ್ಡಿ ಸೋಲು?

ಬೆಂಗಳೂರು: ಕೇಂದ್ರ ಸರಕಾರದ ಅವಧಿ ಮುಗಿಯುತ್ತ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆಗಳೂ ಗರಿಗೆದರತೊಡಗಿವೆ. ಇದರೊಂದಿಗೆ ಬಿಜೆಪಿಯ ಗಟ್ಟಿ ನೆಲೆಯಾದ ಬೆಂಗಳೂರು ದಕ್ಷಿಣದಲ್ಲೂ ರಾಜಕೀಯ ಚಟುವಟಿಕೆಗಳು ತುರುಸಾಗಿಯೇ ನಡೆದಿದೆ.

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆಯಿಂದ ಹಾಲಿನ ಪ್ಯಾಕೇಟ್‌ ಒಂದನ್ನು ಹೇಗೆ ಕತ್ತರಿಸಬೇಕೆನ್ನುವ ವಿಡಿಯೋ ಮಾಡಿ ಅದನ್ನು ತಮ್ಮ ಆಪ್ತ ಮಾಧ್ಯವನ್ನು ಬಳಸಿ ವೈರಲ್‌ ಕೂಡಾ ಮಾಡಿದ್ದರು ತೇಜಸ್ವಿನಿ ಅನಂತ ಕುಮಾರ್.‌ ಆದರೆ ರಾಜಕೀಯ ಮೇಲಾಟಗಳ ಕಾರಣದಿಂದಾಗಿ ಕಡೇ ಗಳಿಗೆಯಲ್ಲಿ ಅವರಿಗೆ ಟಿಕೆಟ್‌ ತಪ್ಪಿ ಬಸವನಗುಡಿ ಶಾಶಕರ ಸೋದರ ಸಂಬಂಧಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ಸಿಕ್ಕಿತ್ತು. ಇದರಿಂದ ಮೊದ ಮೊದಲು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ತೇಜಸ್ವಿನಿಯವರು ನಂತರ ಸುಮ್ಮನಾಗಿದ್ದರು.

ಈ ನಡುವೆ ತೇಜಸ್ವಿನಿಯವರ ಮಗಳು ಕೂಡಾ ಆಗಾಗ ಬೇರೆ ಪಕ್ಷಗಳ ಕೆಲಸಗಳನ್ನು ಹೊಗಳಿ ಟ್ವೀಟ್‌ ಮಾಡುತ್ತಾ ಪಕ್ಷದ ಅಭಿಮಾನಿಗಳ ಪಿತ್ತವನ್ನು ಕದಡುತ್ತಿದ್ದರು.

ಈಗ ಹೊಸ ಬೆಳವಣಿಗೆಯಲ್ಲಿ ತೇಜಸ್ವಿನಿ ಅನಂತ ಕುಮಾರ್‌ ಡಿ ಕೆ ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆನ್ನುವ ಸುದ್ದಿಗೆ ರೆಕ್ಕೆ-ಪುಕ್ಕಗಳು ಮೂಡತೊಡಗಿವೆ. ಆದರೆ ಇದನ್ನು ತೇಜಸ್ವಿನಿಯವರು ನಿರಾಕರಿಸಿದ್ದರಾದರೂ ತಾನು ಟಿಕೆಟ್‌ ಆಕಾಂಕ್ಷಿ ಅಲ್ಲ ಎಂದು ಹೇಳಿಲ್ಲ. ಬದಲಿಗೆ ನಾನು ಅನಂತಕುಮಾರ್‌ ಅವರು ಕಟ್ಟಿದ ಪಕ್ಷದಲ್ಲೇ ಇರುತ್ತೇನೆ ಎನ್ನುವ ಮೂಲಕ ಪಕ್ಷ ಕಟ್ಟಿದವರಲ್ಲಿ ತನ್ನ ಗಂಡನೂ ಪ್ರಮುಖರು ಎನ್ನುವ ಸಂದೇಶವನ್ನು ರಾಜ್ಯ ಬಿಜೆಪಿಗೆ ಕಳಿಸಿದ್ದಾರೆ.

ಇತ್ತ ಮೋದಿಯವರನ್ನು ಒಂದು ಸುತ್ತು ಭೇಟಿ ಮಾಡಿ ಬಂದು ಈಗ ಪಕ್ಷದಲ್ಲಿನ ತನ್ನ ವಿರೋಧಿಗಳ ಕಣ್ಣು ಕೆಂಪಾಗಿಸಿದ್ದಾರೆ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ತೇಜಸ್ವಿನಿ ಅನಂತ ಕುಮಾರ್.‌

ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಕೋಟೆ ಹೌದಾದರೂ ಅದರ ವ್ಯಾಪ್ತಿಯ ಬಿಟಿಎಮ್‌ ಮತ್ತು ಜಯನಗರ ಕ್ಷೇತ್ರಗಳು ಕಾಂಗ್ರೆಸ್‌ ಬಳಿ ಎಂದರೆ ಸಚಿವ ರಾಮಲಿಂಗರೆಡ್ಡಿಯವರ ಇದ್ದವು. ಅದು ಅವರ ಭದ್ರ ಕೋಟೆ. ಇಲ್ಲಿ ಮೊದಲಿನಿಂದಲೂ ರಾಮಲಿಂಗ ರೆಡ್ಡಿ ಮತ್ತು ಬಿಜೆಪಿ ನಡುವೆ ಒಂದು ಒಪ್ಪಂದವಿದೆ ಎನ್ನಲಾಗುತ್ತದೆ.

ಅದೆಂದರೆ ಲೋಕಸಭೆ ಬಿಜೆಪಿಗಾದರೆ ಬಿಟಿಎಮ್‌ ರಾಮಲಿಂಗರೆಡ್ಡಿಯವರಿಗೆ ಎಂದು. ಇಂದಿಗೂ ಬಿಜೆಪಿ ಬಿಟಿಎಮ್‌ ಕ್ಷೇತ್ರದಲ್ಲಿ ಸ್ಟ್ರಾಂಗ್‌ ಆದ ಅ‍ಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ಅತ್ತ ಜಯನಗರ ಕೇತ್ರದಲ್ಲಿ ಸರಾಗವಾಗಿ ಗೆಲ್ಲುತ್ತಿದ್ದ ನಿರ್ಮಾಪಕ ವಿಜಯ್‌ ಕುಮಾರ್‌ ಅವರ ನಂತರ ಆ ಕ್ಷೇತ್ರ ರೆಡ್ಡಿಯವರ ಪುತ್ರಿ ಸೌಮ್ಯರೆಡ್ಡಿಯವರ ಪಾಲಾಗಿತ್ತು. ಚೆನ್ನಾಗಿ ಓದಿಕೊಂಡಿರುವ ಮತ್ತು ಜನರೊಡನೆ ಸರಾಗವಾಗಿ ಬೆರೆತು ಅವರೊಡನೆ ಮಾತನಾಡುವ ಸೌಮ್ಯರೆಡ್ಡಿ ತನ್ನ ಜನಪ್ರಿಯತೆಯಿಂದಾಗಿ ಎರಡನೇ ಬಾರಿಯೂ ಗೆಲುವಿನ ಹೊಸ್ತಿಲಿನವರೆಗೆ ಬಂದು ಮುಗ್ಗರಿಸಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಜಯನಗರ ಕ್ಷೇತ್ರದ ಚುನಾವಣೆ ದೊಡ್ಡ ಮೊತ್ತದ ಕುತೂಹಲಕ್ಕೂ, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ತಿಕ್ಕಾಟಕ್ಕೂ ಕಾರಣವಾಗಿತ್ತು. ಈ ಮೇಲಾಟದಲ್ಲಿ ಆರ್‌ ಅಶೋಕ್‌ ಮತ್ತು ಸೂರ್ಯ ಮುಂಚೂಣಿಯಲ್ಲಿದ್ದರು. ಇದು ರೆಡ್ಡಿ ಮತ್ತು ಡಿಕೆಶಿಯವರನ್ನು ಕೆರಳಸಿತ್ತು.

ಈ ತಿಕ್ಕಾಟವೇ ತೇಜಸ್ವಿ ಸೂರ್ಯರಿಗೆ ತೊಡಕಾಗುವ ಸಂಭವವಿದೆ ಎನ್ನುತ್ತಾರೆ. ರಾಜಕೀಯ ಪ್ರವೀಣರು. ಪಕ್ಷ ಪಕ್ಷಗಳ ನಡುವೆ ಎಷ್ಟೇ ವಿರೋಧವಿದ್ದರೂ ಇಂತಹ ಒಳ ಸಂಬಂಧಗಳು ರಾಜಕೀಯದಲ್ಲಿ ಬಹಳಷ್ಟಿವೆ. ಆದರೆ ಈ ಬಾರಿ ನಡೆದ ರಾಜಕೀಯ ಮೇಲಾಟಗಳು ಮನುಷ್ಯ ಸಂಬಂಧಗಳನ್ನು ಮೀರಿದ್ದವು.

ಇವೆರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಿಡಿತ ಒಂದಷ್ಟು ಬಿಗಿಯಾಗಿರುವುದರಿಂದಾಗಿ ಮತ್ತು ತೇಜಸ್ವಿನಿ ಅನಂತ ಕುಮಾರ್‌ ಅವರು ಟಿಕೆಟ್‌ ಆಕಾಂಕ್ಷಿಯಾಗಿರುವುದರಿಂದ ಮತ್ತು ಕಾಂಗ್ರೆಸ್‌ ಸ್ಥಳೀಯ ನಾಯಕರ ಜೊತೆಯೂ ಒಳ್ಳೆಯ ರೀತಿಯಲ್ಲಿ ಇರುವುದರಿಂದಾಗಿ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಜಾಸ್ತಿ ಎನ್ನಲಾಗುತ್ತಿದೆ.

ಜೊತೆಗೆ ಮೋದಿಯವರೂ ಟಿಕೆಟ್‌ ಕೊಡುವ ಭರವಸೆ ನೀಡಿರುವುದಾಗಿ ಮಾತುಗಳು ಕೇಳಿ ಬರುತ್ತಿದೆ. ಅಲ್ಲದೆ ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ಹೊಸ ಮುಖಗಳನ್ನು ಪರಿಚಯಿಸುವ ಬಿಜೆಪಿಯ ತಂತ್ರವೂ ಇಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ.

ಅವರ ಚಿಕ್ಕಪ್ಪನೂ ಶಾಸಕರಾಗಿರುವ ಕಾರಣ ಒಂದೇ ಕುಟುಂಬದ ಇಬ್ಬಿಬ್ಬರಿಗೆ ಟಿಕೆಟ್‌ ಕೊಡುವುದರ ಕುರಿತೂ ಬಿಜೆಪಿಯಲ್ಲಿ ಅಸಮಾಧಾನ ಇದೆ ಎನ್ನಲಾಗುತ್ತಿದೆ.

ಇದೆಲ್ಲವನ್ನೂ ಮೀರಿ ಸದಾ ಸಲ್ಲದ ಕಾರಣಗಳಿಗೇ ಸದಾ ಸುದ್ದಿಯಲ್ಲಿರುವ ತೇಜಸ್ವಿ ಸೂರ್ಯ ಈ ಬಾರಿ ಟಿಕೆಟ್‌ ಪಡೆಯುತ್ತಾರೆಯೇ ಎನ್ನುವುದನ್ನು ತಿಳಿಯಲು ಇನ್ನೂ ಏಳೆಂಟು ತಿಂಗಳು ಕಾಯಬೇಕಿದೆ. ಹಾಗೊಂದು ವೇಳೆ ಈ ಅವರಿಗೇ ಟಿಕೆಟ್‌ ದೊರೆತರೆ ಅದಮ್ಯ ಚೇತನ ಸಂಸ್ಥೆಯ ರೂವಾರಿಯೂ ಆಗಿರುವ ತೇಜಸ್ವಿನಿ ಅನಂತಕುಮಾರ್‌ ಅವರ ನಡೆ ಏನಾಗಲಿದೆ ಎನ್ನುವ ಕುತೂಹಲಕ್ಕೂ ಆಗಲೇ ಉತ್ತರ ಸಿಗಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು