Saturday, July 12, 2025

ಸತ್ಯ | ನ್ಯಾಯ |ಧರ್ಮ

ಸರಳತೆಗೆ ಮಾದರಿಯಾಗಬೇಕಿದ್ದ ಸಭಾಧ್ಯಕ್ಷರೇ ಪಾರ್ಚೂನರ್‌ ಕಾರ್‌ ಖರೀದಿಸುವುದೇ? ಯತ್ನಾಳ ಪ್ರಶ್ನೆ

ಬೆಂಗಳೂರು: ಸರಳತೆಗೆ ಮಾದರಿಯಾಗಬೇಕಿದ್ದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ತಮ್ಮ ಓಡಾಟಕ್ಕೆ ಹೊಸ ಮಾದರಿಯ, ಕಪ್ಪು ಬಣ್ಣದ ಐಷಾರಾಮಿ ಫಾರ್ಚೂನರ್ ಕಾರು ಖರೀದಿಸಿರುವುದು ಸರಿಯೇ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.


ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಹಾಕಿರುವ ಅವರು, ‘ದುಂದುವೆಚ್ಚಗಳನ್ನು ಕಡಿಮೆ ಮಾಡಿ, ಇರುವ ವಾಹನವನ್ನೇ ಮಾರ್ಪಾಡು ಮಾಡಿಕೊಂಡು ಬಳಸಿ ಬೊಕ್ಕಸಕ್ಕೆ ಹೊರೆಯಾಗದಂತೆ ಮೇಲ್ಪಂಕ್ತಿ ಹಾಕಿಕೊಡಬೇಕಾಗಿದ್ದ ಸಭಾಧ್ಯಕ್ಷರು ಐಷಾರಾಮಿ ಕಾರನ್ನು ಖರೀದಿ ಮಾಡುವ ಅಗತ್ಯವಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.


ಯು.ಟಿ. ಖಾದರ್ ಅವರಿಗೆ ವಿಧಾನಸಭೆ ಸಚಿವಾಲಯದಿಂದ ಹೊಸ ಕಾರು (ಕೆಎ 11 ಜಿಎ 1) ಒದಗಿಸಲಾಗಿದ್ದು, ವಿಶೇಷ ವಿನ್ಯಾಸ ಮಾಡಿರುವುದರಿಂದ ₹41 ಲಕ್ಷ ವೆಚ್ಚ ಆಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 360 ಡಿಗ್ರಿ ಕ್ಯಾಮೆರಾ, ಪ್ರಯಾಣದ ಸಂದರ್ಭದಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರ ಮುಖಕ್ಕೆ ಬೆಳಕು‌‌ ನೀಡುವ ವಿಶೇಷ ಎಲ್‌ಇಡಿ ಲೈಟ್ ಸೌಲಭ್ಯವನ್ನು ಈ ಕಾರು ಹೊಂದಿದೆ. ಜಿಆರ್ ಕಿಟ್ ಅಳವಡಿಸುವ ಮೂಲಕ ಕಾರಿಗೆ ವಿಶೇಷ ವಿನ್ಯಾಸ ಕೂಡಾ ಮಾಡಲಾಗಿದೆ. ಇನ್ನು ಕಾರು ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರ ಹೊರತಾಗಿ ವಿಧಾನ ಸಭಾಧ್ಯಕ್ಷರಿಗೆ ಮಾತ್ರ ಈ ಲಾಂಛನ ಅಳವಡಿಸಲು ಅವಕಾಶವಿದೆ.


ರಾಜ್ಯ ಭೀಕರ ಬರದಿಂದ ಕಂಗೆಟ್ಟಿದೆ. ರಾಜ್ಯದ 223 ತಾಲೂಕುಗಳು ಬರ ಪೀಡಿತವೆಂದು ಸರ್ಕಾರವೇ ಘೋಷಣೆ ಮಾಡಿದೆ. ಇಂಥ ದುರ್ದಿನಗಳಲ್ಲಿ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿತ್ತು. ಎಂದು ಬರೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಸಂಪುಟದ 33 ಸಚಿವರಿಗೆ ಕಳೆದ ಅಕ್ಟೋಬರ್‌ನಲ್ಲಿ ಇನೋವಾ ಕ್ರಿಸ್ಟಾ ಹೈಬ್ರಿಡ್‌ ಕಾರು ಖರೀದಿಸಲಾಗಿದೆ. 33 ಕಾರುಗಳನ್ನು ತಲಾ ₹30 ಲಕ್ಷ ದರದಲ್ಲಿ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಸೆಕ್ಷನ್‌ 4–ಜಿ ಅಡಿಯಲ್ಲಿ ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಆದೇಶ ಪ್ರಕಟಿಸಿತ್ತು. ಈಗ ಮತ್ತೆ ಸಭಾಧ್ಯಕ್ಷರ ಕಾರು ಖರೀದಿಸಲಾಗಿದೆ.


ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರವೇ ಘೋಷಿಸಿರುವ ಈ ಸಮಯದಲ್ಲಿ ಐಷಾರಾಮಿ ಕಾರುಗಳ ಖರೀದಿ ಅಗತ್ಯ ಇತ್ತೇ ಎಂದು ವಿಪಕ್ಷ ನಾಯಕ ಯತ್ನಾಳ ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page