Friday, June 14, 2024

ಸತ್ಯ | ನ್ಯಾಯ |ಧರ್ಮ

ಬರ್ತೀಯಾ?……

ನಿರ್ಭಯಾ, ದಾನಮ್ಮ ಸೌಜನ್ಯ, ಆಸಿಫಾ, ಪ್ರಿಯಾಂಕ ರೆಡ್ಡಿ..  ಇನ್ನೂ ಎಷ್ಟು ಅಮಾಯಕ ಜೀವಗಳನ್ನು ಈ ವ್ಯವಸ್ಥೆ  ಬಲಿ ತಗೊಂಡಿದೆ. ಇನ್ನೆಷ್ಟು ಬಲಿ ಆಗಬೇಕು.?  ಸರ್ಕಾರ ಯಾವ ಕ್ರಮ ತಗೊಂಡಾದ. ನಮ್ಮನ್ನು ಆಳುವ ಚೌಕೀದಾರ್ ಎಲ್ಲಿ? ” ಬೇಟಿ ಬಚಾವ್ ಬೇಟಿ ಪಡಾವ್” ವಾಕ್ಯದ ವಾರಸುದಾರ ಏನ ಮಾಡತ್ತಿದ್ದಾನೆ.?‌ ಪ್ರಿಯಾಂಕಾ ಮಾವಿನಕರ್‌ ಪ್ರಶ್ನೆಗಳಿವು. 

ಅವತ್ ರಾತ್ರಿ ಕೆಲಸ ಮುಗಿಸ್ಕೊಂಡು ಆಫೀಸ್ ಬಿಡಲಿಕ್ಕೆ  ರಾತ್ರಿ 9 ಗಂಟೆ ಆಗಿತ್ತು. ಆಫೀಸ್ ಇದ್ದದ್ದು ಭಾಷ್ಯಂ  ಸರ್ಕಲ್. ಅಲ್ಲಿಂದ  ಕೆಂಪೇಗೌಡ ಬಸ್ ಸ್ಟಾಪ್ಗೆ ಬರಲಿಕ್ಕೆ 9 ಗಂಟೆ 20 ನಿಮಿಷ ಆಯ್ತು. 

ಬೆಂಗಳೂರು ಅಂದ್ರೆ ನನಗೆ ಮೊದಲಿಂದ ಅಂಜಿಕೆನೆ. ಒಂದ್ ಕಡೆ ಹೋದ್ರೆ ಮತ್ತೊಂದು ಕಡೆ ಹೆಂಗ್  ಹೋಗಬೇಕು ಅಂತ ಗೊತ್ತಾಗದೆ ಬೆಂಗಳೂರನ್ಯಾಗ ಅದೆಷ್ಟೊ ಸಲ ಕಳೆದು ಹೋಗಿದ್ದೆನೋ. ಕಷ್ಟಕ್ಕೆ ಸ್ನೇಹಿತರಿಗೆ ಪೋನ್ ಮಾಡಿ ನಾನು ಕಳೆದು ಹೋಗಿದೀನಿ ಅಂತ ಗೋಳೊ ಅತ್ತಿದ್ದಕ್ಕೆ ಲೆಕ್ಕನೇ ಇಲ್ಲ. 

 ಅದ್ರಲ್ಲಿ ಮೆಜೆಸ್ಟಿಕ್ ಅಂದ್ರ ಮತ್ತಷ್ಟು ಜಾಸ್ತಿ ಅಂಜಿಕೆ, ಒಂದು ತರಹ ಆತಂಕ, ಚಿತ್ರ ವಿಚಿತ್ರ ಮುಖಗಳು. ನಾವು ಬೆಂಗಳೂರಿಗೆ ಹೊಸಬರು ಅಂತ ಗೊತ್ತಾದ್ರೆ  ಸಾಕು ಯಾಮಾರಿಸುತ್ತಾರ ನೋಡ್  ಅಂತ ರೂಮ್ ಮೇಟ್ ಅಕ್ಕ ನನಗೆ ಎಚ್ಚರಿಸ್ತಿದ್ದಳು. “ನೋಡವ್ವ ನೀ ಅಪ್ಪಿ  ತಪ್ಪಿಯೂ ಫೋನಿನಲ್ಲಿ ಅಕ್ಕ ನನಗೆ ಗೊತ್ತಾಗುತ್ತಿಲ್ಲ ಹೆಂಗ್ ಬರಬೇಕು ಅಂತ ಕೇಳಬೇಡವ್ವ ತಾಯಿ, ಮೆಸೇಜ್ ಮಾಡು ನಾನು ರಿಪ್ಲೈ ಮಾಡ್ತಿನಿ” ಅಂತ ಪದೇ ಪದೇ ಹೇಳತ್ತಿದ್ದಳು. ಅಯ್ಯೊ ನನಗೆ ಬರಲಿಕ್ಕೆ ಗೊತ್ತಾಗತ್ತಿಲ್ಲ ಹೆಂಗ್  ಬರಬೇಕು ಅಂತ ಫೋನ್ಯಾಗ  ಮಾತಾಡಿದ್ರೆ ಸಾಕು, ಎಲ್ಲಿ ಹೋಗಬೇಕಮ್ಮ ನಾನು ಕರಕೊಂಡು ಹೋಗತ್ತಿನಿ ಬಾ ಅಂತ ಕರೆಯುವವರ ನೂರಾರು ಕೈಗಳು ಸಿಗುತ್ತಾವ. ಅವರ ಜತಿಗಿ ಒಮ್ಮೆ ಹೋದರೆ ಮುಗಿತು ವಾಪಸ್ ಬರ್ತಿನಿ ಅನ್ನೊ ಯಾವ ನೀರಿಕ್ಷೆವೂ ಇಲ್ಲ ಅನ್ನುವುದು ನನಗೂ ಖಾತ್ರಿ. ಅದಕ್ಕೆ ಬೆಂಗಳೂರನ್ಯಾಗ  ಇರುವಷ್ಟು ದಿನ ಭಾಳ ಎಚ್ಚರಿಕೆಯಿಂದೆ ಇದ್ದಿದ್ದೆ. 

ನಾನು ಬಸ್ ಇಳಿದು ಮೆಟ್ರೋ ಮಾರ್ಗದ ಕಡೆ ಹೊರಟಿದ್ದೆ.  ನನ್ನ ಹಿಂದ 35 ರಿಂದ 40 ವರ್ಷದ ವ್ಯಕ್ತಿ ಬಂದು ಬರ್ತಿಯಾ ಅಂತ ಕೇಳಿದ್ನು. ಒಂದು ಕ್ಷಣ ಕೈ ಕಾಲಲ್ಲಿ ನಡುಕ ಬಂತು. ಸುತ್ತ ಮುತ್ತ ನೋಡಿದರ ಇನ್ನು ಹೆಚ್ಚಿಕಿ ಅಂಜಿಕಿ‌ ಆಯ್ತು. ಮುಂದೆ ಹೆಜ್ಜಿ ಇಡಲಿಕ್ಕೆ ಆಗಲಿಲ್ಲ. ಬೆಂಗಳೂರು ಅಂದ್ರೆ ಹೆಣ್ಣುಮಕ್ಕಳಿಗಿ ಸುರಕ್ಷತೆನೆ ಇಲ್ಲದ ಊರಂತ ನಮ್ಮೂರನ್ಯಾಗ ಹೇಳತ್ತಿದ್ದರು. ಒಳಗೊಳಗೆ ಅಂಜಿಕಿ ಇದ್ದರೂ ತೊರಿಸ್ಕೊಳ್ಳದೆ ಮುಖದಾಗ ಆಕ್ರೋಶದ ಬೆಂಕಿ ಹೊತ್ತು, ಅವನನ್ನು ಸಿಟ್ಟಿನಿಂದ ದಿಟ್ಟಿಸಿ ನೋಡಿ “ಎಲ್ಲಿಗೆ ಬರಬೇಕೊ ಬಾಡ್ಯ, ಏನ್ ಅನ್ನಕೊಂಡಿದ್ದಿ ನನ್ನ” ಅಂತ ನಮ್ಮೂರು ಕಲಬುರಗಿ ಭಾಷೆದಾಗ ಬೈಲಿಕ್ಕೆ ಶುರು ಮಾಡದೆ.  ಅಲ್ಲಿಂದ ಅವನು ಯಾವಾಗ ಓಡಿದ್ನೊ, ನಾನು ಯಾವಾಗ ಮೆಟ್ರೋ ಹತ್ತಿದ್ದನೊ ನನಗೂ ಅರಿವಿಲ್ಲ.

ಹೆಣ್ಣನ್ನು ಭಾರತ ಮಾತೆ ಅಂತ ಈ ನೆಲದಾಗ ಕರಿತ್ತಾರೆ. ಆದರೆ ಹೆಣ್ಣುಮಕ್ಕಳಿಗಿ ರಕ್ಷಣೆ ಅದಾ ಏನು??  ಭಾರತ ಮಾತಾ ಕೀ ಜೈ ಅಂತ ಹೇಳೊ ಕೈಗಳೆ ಅವಳ ಮೇಲೆ ಅತ್ಯಾಚಾರ ಮಾಡ್ಲಾತ್ತಾರೆ, ಅವಳು ಯಾವ ಬಟ್ಟಿ ಹಾಕೊಬೇಕು, ಏನ್ ತಿನ್ನಬೇಕು, ಯಾರಿಗಿ ಮದ್ವಿ ಆಗಬೇಕು, ಎಷ್ಟು ಗಂಟಿಗಿ ಮನ್ಯಾಗ ಇರಬೇಕು, ಸಾಯುವವರೆಗೂ ಗಂಡಿನ ಆಶ್ರಯದಾಗೆ ಇರಬೇಕು ಅಂತ ನಿರ್ಧಾರ ಮಾಡ್ಯಾರ ಯಾರು.?  ಹೆಣ್ಣು ಅಂದರೆ ಬರೀ ಭೋಗದ ವಸ್ತು, ಯಂತ್ರ ಇದ್ದಂಗೆ ಅಂತ ತಿಳಿದ ಈ ಗಂಡಸರಿಗೆ ಯಾಕ್ ತಿಳಿಯಲ್ಲ, ಹೆಣ್ಣಿಗೂ ಅವಳದೆಯಾದ ಸ್ವಾತಂತ್ರ್ಯ ಅದಾ, ನಿರ್ಭಯವಾಗಿ ಬದುಕುವ ಹಕ್ಕು ಅದಾ ಅಂತ ಯಾಕೆ ಅರ್ಥ ಆಗಲ್ಲ?? ಮಾರ್ಚ್ 8 ಕ್ಕೆ ಎಲ್ಲ ಕಡಿ ಮಹಿಳಾ ದಿನಾಚರಣೆ ಆಚರಣೆ ಮಾಡುತ್ತಾರೆ. ಆದರೆ ಎಷ್ಟರಮಟ್ಟಿಗೆ ಮಹಿಳೆಯರು ನಿರ್ಭಯವಾಗಿ ಮತ್ತು ಸ್ವಾತಂತ್ರ್ಯವಾಗಿ ಬದುಕುತ್ತಿದ್ದಾರೆ ಅಂತ ಈ ಪುರುಷ ಪ್ರಧಾನ ವ್ಯವಸ್ಥೆ ಒಮ್ಮೆ ಪ್ರಶ್ನೆಸಿಕೊಳ್ಳಬೇಕಾದ ಅಗತ್ಯ ಇದೆ‌.

‌ದೆಹಲಿಯ ನಿರ್ಭಯಾಳ ಮೇಲೆ ಅತ್ಯಾಚಾರ ಆಗಿದ್ದ ಆ  ಘಟನೆಯನ್ನು ಅನೇಕ ಮನುವಾದಿ ಮನಸ್ಸುಗಳು ಸಮರ್ಥಿಸಿಕೊಂಡಿದಾವ.   ಹೆಣ್ಣಮಕ್ಕಳು ಕತ್ತಲು ಆಗೋದ್ರೊಳಗೆ ಗೂಡ ಸೇರಕೊಬೇಕು ಅನ್ನೊ ಮೊಂಡು ವಾದಗಳು ಅದೆಷ್ಟು ಸಲ  ಕೇಳಿಲ್ಲ‌ ಹೇಳಿ.?  ಅವಳು ಯಾಕ್ ಅಷ್ಟೊತ್ತಿಗೆ ಹೊರಗ ಹೋಗಬೇಕಿತ್ತು, ಹೊರಗ ಹೋದ್ರೆ ಹಿಂಗೆ ಆಗತ್ತಾದ ಅನ್ನೊ ಮಾತು ಕೇಳಿದ್ದೇವಿ. 

ಹೈದ್ರಾಬಾದ್ನಲ್ಲಿ ಪ್ರಿಯಾಂಕ ರೆಡ್ಡಿ ಅನ್ನೊ ಪಶು ವೈದ್ಯೆ ಮೇಲೆ ನಾಲ್ಕು ಜನ ಕಾಮುಕರು ಅತ್ಯಾಚಾರ ಮಾಡಿ ಬೆಂಕಿಹಚ್ಚಿದ ಘಟನೆ ನಡೆದಿತ್ತು.  ಇದಕ್ಕೂ ನಮ್ಮಲ್ಲಿ ಉತ್ತರ ಕಂಡುಕೊಂಡಿದ್ದಾರೆ. ದೇಶದಾಗ ಹೆಣ್ಣುಮಕ್ಕಳ ಮ್ಯಾಲ್ ಅತ್ಯಾಚಾರ ಹೆಚ್ಚ ಆಗಲಿಕ್ಕೆ ಹೆಣ್ಣಮಕ್ಕಳು ಉಡುವ ಬಟ್ಟೆನೆ  ಮುಖ್ಯ ಕಾರಣ ಅಂತ ಹೇಳೊ ಗಂಡಸರು ಯಾಕೆ ತಮ್ಮ ಕೆಟ್ಟ  ನೋಟವನ್ನು   ಕೆಟ್ಟ  ನೋಟವನ್ನು   ಬದಲಿಸಿಕೊಳ್ಳಲ್ಲ.??? ನೋಡೊ ಕಣ್ಣು ಸರಿ ಇದ್ದರೆ ಅಲ್ಲ‌, ನೋಡೊ ಕಣ್ಣಿನ್ಯಾಗ  ಕಾಮನೆ ತುಂಬುಕೊಂಡಾಗ  ಸೀರೆ ಉಟ್ಟರೆನೂ ಜೀನ್ಸ್, ಶಾರ್ಟ್ಸ್ ಹಾಕಿದರೆನೂ ಅತ್ಯಾಚಾರಗಳು ಆಗುತ್ತಾನೆ ಇರುತ್ತಾವೆ. ಸೀರೆಯುಟ್ಟ ಹೆಣ್ಣುಮಕ್ಕಳು ಕೈ ಮುಗಿದು ಅತ್ಯಾಚಾರ ಮಾಡಬ್ಯಾಡ ಅಂತ ಕೇಳಿದ್ರೆ ಬಿಟ್ಟ ಉದಾಹರಣೆ ಅದಾವ ಏನು.? 6 ತಿಂಗಳ ಕೂಸಿನಿಂದ ಹಿಡಿದು 60 ವರ್ಷದ ಆಯಿ ಮ್ಯಾಲು ಇವತ್ತಿಗೂ ಅತ್ಯಾಚಾರ ನಿಂತಿಲ್ಲ.  6 ತಿಂಗಳ ಕೂಸು ಯಾವ ಬಟ್ಟೆ ಹಾಕಿತ್ತು, 60 ವರ್ಷದ ಆಯಿ ಯಾವ ಬಟ್ಟೆ ಹಾಕಿದ್ದಳು ಹೇಳಿ.? 

ಹೆಣ್ಣಮಕ್ಕಳಿಗಿ ಮನೆಯಲ್ಲೆ  ರಕ್ಷಣೆ ಇಲ್ಲ ತಂದೆಯಿಂದಲೊ, ಅಣ್ಣನಿಂದಲೊ, ಮಾವನಿಂದೊ,  ಚಿಕ್ಕಪ್ಪನಿಂದೊ  ಒಂದಿಲ್ಲ ಒಂದು ಕಡೆಯಿಂದ ಹೆಣ್ಣು ಮಗು ಅತ್ಯಾಚಾರಕ್ಕೆ ಒಳಗಾಗತ್ತಾನೆ ಇದ್ದಾಳೆ.  ನಮ್ಮ ನಮ್ಮ ಮನೆಗಳಲ್ಲೆ ಮಹಿಳೆಯರು  ಶೋಷಣೆಗೆ ಒಳಗಾಗುತ್ತಿದ್ದಾರೆ ಅಂದ ಮೇಲೆ ಹೊರಗಿನ ಜನರನ್ನು ಹೇಗೆ ನಂಬಲಿಕ್ಕೆ  ಸಾಧ್ಯ.? 

ಕೆಲಸದ ಸ್ಥಳಗಳಲ್ಲಿ ಅದು ಯಾವುದೇ ಕ್ಷೇತ್ರವಾಗಿರಲಿ  ರಾಜಕೀಯ, ಸಿನಿಮಾ, ಐಟಿ ಕಂಪನಿ, ಪತ್ರಿಕೋದ್ಯಮ,  ಗಾರ್ಮೆಂಟ್ಸ್‌, ಸ್ಕೂಲ್ ಹೇಳಕೊತ್ತಾ ಹೋದರೆ ಪಟ್ಟಿ ಮುಗಿಯಲ್ಲ, ಹಿಂಗ್  ಪ್ರತಿಯೊಂದು ರಂಗದಲ್ಲೂ ಹೆಣ್ಣುಮಕ್ಕಳು ತಮ್ಮನ್ನು ತಾನು ರಕ್ಷಿಸಿಕೊಳ್ಳುವುದೇ ಇವತ್  ಮಹಿಳೆಯರ ಮುಂದಿರುವ ದೊಡ್ಡ ಸವಾಲಾಗ್ಯಾದ. 

ನನ್ನ ಮೇಲೆ ಅತ್ಯಾಚಾರ ಆಗ್ಯಾದ, ನಾನು ಅದರ ವಿರುದ್ಧ ಹೋರಾಡತ್ತಿನಿ, ಧ್ವನಿ ಎತ್ತತ್ತಿನಿ‌ ಅಂತ ಮೀ-ಟೂ ಅಭಿಯಾನ ಶುರು ಮಾಡಿದಾಗ ಮಹಿಳೆಯರ ಧ್ವನಿಯನ್ನು ಹತ್ತಿಕ್ಕಲು ನೂರಾರೂ ಪ್ರಯತ್ನಗಳು ನಡೆದಿವೆ. ಅತ್ಯಾಚಾರ ಆದಾಗಲೇ ಪ್ರಶ್ನಿಸಬೇಕಿತ್ತು ಈಗ ಯಾಕೆ ಪ್ರಶ್ನಿಸ್ತಿರಿ ಅಂತ ಹೇಳಿ ಸಿನಿಮಾ ನಟಿಯರ ಬಾಯಿ ಮುಚ್ಚಲು ಪ್ರಯತ್ನಿಸಿದ್ದಾರೆ. 

2019 ರಲ್ಲಿ ಕರ್ನಾಟಕ ಮಹಿಳಾ ಪತ್ರಕರ್ತರ ಸಂಘದ ಸಭೆ ಇತ್ತು. ನಾ  ಹೋಗಿದ್ದೆ.‌ ಹಿರಿಯ ಪತ್ರಕರ್ತೆಯೊಬ್ಬರು ತಮ್ಮ ಪತ್ರಿಕೋದ್ಯಮ ವೃತ್ತಿಯ ಅನುಭವ ಹಂಚಿಕೊಳ್ಳುವಾಗ ಹೇಳಿದ ಮಾತು. –  ಪತ್ರಿಕೆಯ ಸಂಪಾದಕ ಅವರನ್ನು ಕರದು ಮಾತಾಡುವಾಗ ಅವರ ಕೈ ಹಿಡಿದು “ನಿನ್ನ ಕೈ ತುಂಬ ಆಪ್ತವಾಗಿದೆ ಎಂದರಂತೆ” ಅದಕ್ಕೆ ಅವರು “ಹೌದು ಸರ್ ತಂದೆ ಮಗಳಷ್ಟೆ ಆಪ್ತ” ವೆಂದಾಗ ಕೈ ಬಿಟ್ಟರಂತೆ. ಸಮಾಜದ ಹುಳುಕನ್ನು ಬೈಲಿಗೆಳೆಯಬೇಕಿದ್ದ ಪತ್ರಕರ್ತರು ಹೀಗೆ  ಹುಳುಗಳಂತೆ ವರ್ತಿಸುವಾಗ  ಸಮಾಜಕ್ಕೆ ಇವರಿಂದ ಏನ್ ಲಾಭ.? 

ಅತ್ಯಾಚಾರಕ್ಕೆ ರಾಜಕೀಯ ಬಣ್ಣ ಬಳಿತಾರೆ, ಧರ್ಮದ ಲೇಪನ ಹಚ್ಚುವ ಕೆಲಸ ಈಗೀಗ ಭಾಳ  ವ್ಯವಸ್ಥಿತವಾಗಿ ನಡಿಕತ್ತಾದ.‌ 

ಬಿಲ್ಕಸ್ ಬಾನು ಮ್ಯಾಲ ಅತ್ಯಾಚಾರ ಮಾಡಿದ 11 ಜನ  ಆರೋಪಿಗಳನ್ನ‌ ಗುಜರಾತಿನ  ನ್ಯಾಯಾಲಯ ಸನ್ನಡತೆ ಆಧಾರದ ಮ್ಯಾಲ ಬಿಡುಗಡೆ ಮಾಡ್ಯಾದ. ಇದನ್ನ ನೋಡಿದ್ರಾ ಈ ದೇಶದಾಗ ಮತ್ತಷ್ಟು ಹೆಚ್ಚಿನ ಸಂಖ್ಯದಾಗ ಹೆಣ್ಣುಮಕ್ಕಳ‌  ಮೇಲೆ ಅತ್ಯಾಚಾರಗಳು ನಡೆಯಲಿ ಅನ್ನುವುದಕ್ಕೆ ಪುಷ್ಠಿ ಕೊಟ್ಟಂತೆ  ಕಾಣತ್ತಾದ. ಹತ್ರಾಸ್ ನ್ಯಾಗ  19 ವರ್ಷದ ಯುವತಿ ಮ್ಯಾಲ ಅತ್ಯಾಚಾರ  ಮಾಡಿದವರನ್ನ ಕೂಡ ಇವತ್ತಿನ  ಆಳುವ ಸರ್ಕಾರ ಬಿಡುಗಡೆ  ಮಾಡಿ ಯಾವ ಸಂದೇಶ ಕೊಟ್ಟದ ಹೇಳಿ. ನಮ್ಮ ದೇಶದ ಪರಿಸ್ಥಿತಿ ಎಲ್ಲಿಗೆ ಬಂದು‌ ನಿಂತಾದ ಅಂತ ಯೋಚಿಸ ಬೇಕಾಗ್ಯಾದ. 

ಸಂವಿಧಾನದ ಆಶಯಗಳನ್ನ  ಸಂಪೂರ್ಣವಾಗಿ ಕೊಲೆ  ಮಾಡ್ತಿದ್ದಾರೆ.  ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಹಿಳಾ ಸಮಾನತೆ ಮಾತು ಎಲ್ಲಿಗೆ ಹೋಯ್ತು ಹೇಳಿ.? ಗಾಂಧಿಜೀಯವರು ಹೇಳಿದ ಮಹಿಳಾ ಸ್ವಾತಂತ್ರ್ಯದ ಕನಸು ಎಲ್ಲಿಗಿ ಹೋಯ್ತು ಹೇಳಿ.?  

ನಿರ್ಭಯಾ, ದಾನಮ್ಮ ಸೌಜನ್ಯ, ಆಸಿಫಾ, ಪ್ರಿಯಾಂಕ ರೆಡ್ಡಿ  ಇನ್ನೂ ಎಷ್ಟು ಅಮಾಯಕ ಜೀವಗಳನ್ನು ಈ ವ್ಯವಸ್ಥೆ  ಬಲಿ ತಗೊಂಡಿದೆ ಇನ್ನೆಷ್ಟು ಬಲಿ ಆಗಬೇಕು.?  ಸರ್ಕಾರ ಯಾವ ಕ್ರಮ ತಗೊಂಡಾದ. ನಮ್ಮನ್ನು ಆಳುವ ಚೌಕೀದಾರ್ ಎಲ್ಲಿ? “ಬೇಟಿ ಪಡಾವ್ ಬೇಟಿ ಬಚಾವ್” ವಾಕ್ಯದ ವಾರಸುದಾರ ಏನ ಮಾಡತ್ತಿದ್ದಾನೆ.? 

ಎಲ್ಲಿ ತನಕ  ಅತ್ಯಾಚಾರ ಮಾಡದವರ ಪರ ವಾದಿಸಲಿಕ್ಕೆ  ವಕೀಲರು ಇರತ್ತಾರೋ, ರಕ್ಷಿಸಲಿಕ್ಕೆ  ಈ ಮನುವಾದಿ ಆಡಳಿತ ವ್ಯವಸ್ಥೆ ಇರುತ್ತಾದೊ ಅಲ್ಲಿ ತನಕ ಅತ್ಯಾಚಾರಗಳು ನಿಲ್ಲಲ್ಲ. ಮಹಿಳಾ ದಿನಾಚರಣೆಗೂ ಅರ್ಥ ಬರಲ್ಲ‌.

ನಮ್ಮ ದೇಶದಾಗ ಆಡಳಿತ ವ್ಯವಸ್ಥೆ ಬದಲಾಗುವುದರ ಜತೆಗೆ ಅದು ಬಲಗೊಳ್ಳಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಅಲ್ಲ ಗಲ್ಲು ಶಿಕ್ಷೆ ವಿಧಿಸಬೇಕು. ಅತ್ಯಾಚಾರಿಗಳ ಪರ ವಾದಿಸುವ ವಕೀಲರನ್ನೂ ಅದೇ ಶಿಕ್ಷೆಗೆ ಗುರಿ ಮಾಡಬೇಕು. 

ಹೆಣ್ಣು ಅಂದ್ರೆ  ಚಂಚಲೆ, ವ್ಯಭಿಚಾರಿ ಗಂಡಿನ ಆಶ್ರಯದಾಗೆ ಬದುಕಬೇಕು ಅಂತ ಹೇಳುವ ಮನುವಿನ ಮಹಿಳಾ ವಿರೋಧಿ ಹೇಳಿಕೆಯನ್ನ ವಿರೋಧಿಸಿ ಮಹಿಳೆಯರು ಅಂದರೆ ಜೀವ  ಜೀವನ, ಆಕೆಗೂ  ಅವಳದೆಯಾದ ಸ್ವಾತಂತ್ರ್ಯ ಅದಾ, ನಿರ್ಭಯವಾಗಿ ಅವಳಿಗೂ ಬದುಕುವ ಹಕ್ಕಿದೆ. ಸಂವಿಧಾನದ ‌ಆಶಯಗಳೊಂದಿಗೆ ಮುನ್ನಡೆಯುವ ಸ್ವಾತಂತ್ರ್ಯ ಜೀವಂತವಾಗಿದೆ ಅನ್ನುವುದನ್ನ ನಿರೂಪಿಸಬೇಕು. ಆಗ ಮಾರ್ಚ್ 8ರ ಮಹಿಳಾ ದಿನಾಚರಣೆಗೂ ಒಂದು‌ ಅರ್ಥ ಬರುತ್ತೆ. 

ಪ್ರಿಯಾಂಕಾ ಮಾವಿನಕರ್

ಹವ್ಯಾಸಿ ಬರಹಗಾರ್ತಿ, ಕಲಬುರುಗಿ.

Related Articles

ಇತ್ತೀಚಿನ ಸುದ್ದಿಗಳು