Tuesday, June 18, 2024

ಸತ್ಯ | ನ್ಯಾಯ |ಧರ್ಮ

ಕೊರಗರಿಗೆ ವೈದ್ಯಕೀಯ ಮರುಪಾವತಿ ಹಿಂಪಡೆತ: ಸರ್ಕಾರದ ಕ್ರಮಕ್ಕೆ ವೈದ್ಯರ ಖಂಡನೆ

ದಕ್ಷಿಣ ಕನ್ನಡ: ಆಗಸ್ಟ್ 17, 2022ರಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಉಪಕಾರ್ಯದರ್ಶಿಯವರು ಹೊರಡಿಸಿದ್ದ ಕೊರಗ ಸಮುದಾಯದವರ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿರುವುದಿಲ್ಲ ಎಂಬ ಆದೇಶವನ್ನು ಸರ್ಕಾರವು ಈ ಕೂಡಲೇ ಹಿಂಪಡೆಯುವಂತೆ ಉಡುಪಿ, ಮಂಗಳೂರಿನ ಮನೋವೈದ್ಯಕೀಯ ತಜ್ಞರುಗಳಾದ ಡಾ. ಪಿವಿ ಭಂಡಾರಿ ಮತ್ತು ಡಾ. ಶ್ರೀನಿವಾಸ್‌ ಕಕ್ಕಿಲ್ಲಾಯ  ಆಗ್ರಹಿಸಿದ್ದಾರೆ.

ಅತ್ಯಂತ ಹಿಂದುಳಿದ ಕೊರಗ ಸಮುದಾಯದವರು ‘ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣದಿಂದ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದು’, ಅದೇ ಕಾರಣಕ್ಕೆ ಇನ್ನು ಮುಂದೆ ಅವರಿಗೆ ಯಾವುದೇ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿರುವುದಿಲ್ಲ ಎಂಬ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಉಪಕಾರ್ಯದರ್ಶಿಯವರು ಹೊರಡಿಸಿರುವ ಈ ಆದೇಶದಲ್ಲಿ ಹೇಳಿರುವ ವೈದ್ಯಕೀಯ ವೆಚ್ಚದ ನಿರಾಕರಣೆಯೂ, ಅದಕ್ಕಾಗಿ ಬಳಸಿರುವ ಭಾಷೆಯೂ, ನೀಡಿರುವ ಕಾರಣಗಳೂ ತೀರಾ ಆಕ್ಷೇಪಾರ್ಹವೂ, ಅವೈಜ್ಞಾನಿಕವೂ, ಸತ್ಯಕ್ಕೆ ದೂರವಾದವೂ ಆಗಿದೆ ಎಂದು ಆರೋಪಿಸಿರುವ ವೈದ್ಯರು ಸರ್ಕಾರದ ಕ್ರಮವನ್ನು ಬಲವಾಗಿ ಖಂಡಿಸಿದ್ದಾರೆ. ಸರಕಾರವು ಈ ಕೂಡಲೇ ಈ ಆದೇಶವನ್ನು ಹಿಂಪಡೆದು ಕೊರಗ ಸಮುದಾಯದವರಿಗೆ ದೊರೆಯುತ್ತಿದ್ದ ವೈದ್ಯಕೀಯ ಸೌಲಭ್ಯಗಳೂ ಸೇರಿದಂತೆ ಸಕಲ ಸೌಲಭ್ಯಗಳನ್ನೂ ಹಿಂದಿನಂತೆಯೇ ಮುಂದುವರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮನೋವೈದ್ಯಕೀಯ ತಜ್ಞ ಡಾ. ಪಿವಿ ಭಂಡಾರಿ

ʼಕೊರಗ ಸಮುದಾಯದವರು ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣದಿಂದ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದಾರೆʼ ಎನ್ನುವುದಕ್ಕೆ ಮತ್ತು ಆ ಸಮುದಾಯದ ಮಕ್ಕಳು, ಮಹಿಳೆಯರು ಮತ್ತೆಲ್ಲರಿಗೂ ಉಂಟಾಗುವ ಯಾವುದೇ ಕಾಯಿಲೆಗಳಿಗೂ ಇವುಗಳಷ್ಟೇ ಕಾರಣ ಎನ್ನುವುದಕ್ಕೆ ಯಾವುದಾದರೂ ಆಧಾರಗಳಿದ್ದರೆ ಸರಕಾರವು ಅವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಹ ವೈದ್ಯರು ಸರ್ಕಾರಕ್ಕೆ ಆಗ್ರಹಪಡಿಸಿದ್ದಾರೆ.

ಡಾ. ಶ್ರೀನಿವಾಸ ಕಕ್ಕಿಲ್ಲಾಯ

 ಆನಲೈನ್ ಜರ್ನಲ್ ಆಫ್ ಅಲೈಡ್ ಸಯನ್ಸ್ ನಲ್ಲಿ 2009 ರಲ್ಲಿ ಪ್ರಕಟವಾದ ಉಡುಪಿಯ ಕೊರಗ ಸಮುದಾಯದ ಅಧ್ಯಯನದಲ್ಲಿ ಕೊರಗರಲ್ಲಿ ಮದ್ಯಪಾನದಿಂದ ಹಾನಿಗಳಾಗುವ ಸಾಧ್ಯತೆಗಳು ಇತರರಿಗಿಂತ ಕಡಿಮೆ ಇರುವುದನ್ನು ವರದಿ ಮಾಡಲಾಗಿತ್ತು [Online Journal of Health and Allied Sciences, 2009;8(4).] ಹಾಗಿರುವಾಗ ಕೊರಗರಿಗೆ ಬಾಧಿಸುವ ಎಲ್ಲಾ ಕಾಯಿಲೆಗಳಿಗೆ ಮದ್ಯಪಾನ ಮತ್ತು ಇತರ ದುಶ್ಚಟಗಳಷ್ಟೇ ಕಾರಣವೆಂದು ದೂಷಿಸಿ, ಆ ನೆಪದಲ್ಲಿ ಸಕಲ ವೈದ್ಯಕೀಯ ಮರುಪಾವತಿಯನ್ನು ರದ್ದು ಪಡಿಸಿರುವುದು ಪರಮ ಅನ್ಯಾಯವಾಗಿದೆ ಎಂದು ಡಾ. ಪಿ ವಿ ಭಂಡಾರಿ ಹಾಗೂ ಶ್ರೀನಿವಾಸ ಕಕ್ಕಿಲ್ಲಾಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಆ ರೀತಿಯ ಆರೋಪವನ್ನು ಮಾಡಿರುವುದು ನಮ್ಮ ದೇಶದ ಅತಿ ಪ್ರಾಚೀನವಾದ ಮತ್ತು ಒಂದು ಕಾಲದಲ್ಲಿ ಈ ನಾಡನ್ನು ಆಳಿಕೊಂಡಿದ್ದ, ಈಗ ಅತಿ ಹಿಂದುಳಿದಿರುವ, ಅತಿ ಕಡಿಮೆ ಸದಸ್ಯರು ಉಳಿದುಕೊಂಡಿರುವ ಕೊರಗ ಸಮುದಾಯಕ್ಕೆ ಮಾಡಿರುವ ಮಹಾ ಅವಮಾನ ಎಂದು ಇಬ್ಬರು ವೈದ್ಯರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಇಂಥ ಅಮಾನವೀಯವಾದ, ಅವಮಾನಕಾರಿಯಾದ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿರುವ ವೈದ್ಯರು ಈ ಆದೇಶದಲ್ಲಿ ನೀಡಿರುವ ಕಾರಣಗಳಿಗೆ ಕೊರಗ ಸಮುದಾಯದವರಿಗೆ ವೈದ್ಯಕೀಯ ಮರುಪಾವತಿ ಕೊಡುವುದಿಲ್ಲ ಎಂದಾದರೆ ಅವೇ ಕಾರಣಗಳಿಗಾಗಿ ಅಂಥ ‘ದುಶ್ಚಟಗಳನ್ನು’ ಹೊಂದಿರಬಹುದಾದ ಜನಪ್ರತಿನಿಧಿಗಳಿಗೂ, ಸಚಿವರಿಗೂ ಯಾವುದೇ ವೈದ್ಯಕೀಯ ಮರುಪಾವತಿಯನ್ನು ನೀಡಲಾಗದು ಎಂಬ ಆದೇಶವನ್ನು ಹೊರಡಿಸುವ ಧೈರ್ಯವು ಸರಕಾರಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು