ಭಾಷೆಯ ಮಧ್ಯಸ್ಥಿಕೆ ಇಲ್ಲದಿದ್ದರೆ ಧರ್ಮ, ದೇವರು, ಆಚರಣೆ ಪುರಾಣ ಯಾವುದೂ ಇಲ್ಲ |  ಪ್ರೊ. ಪುರುಷೋತ್ತಮ ಬಿಳಿಮಲೆ

ಮಂಗಳೂರು : ಧರ್ಮ ಮತ್ತು ಭಾಷೆಯ ನಡುವಣ ಸಂಬಂಧ ಗಾಢವಾದದ್ದು. ಧರ್ಮ ಭಾಷೆಯನ್ನು ಸೃಷ್ಟಿಸುತ್ತದೆ, ಭಾಷೆ ಧರ್ಮವನ್ನು ಸೃಷ್ಟಿಸುತ್ತದೆ. ಧಾರ್ಮಿಕ ಭಾಷೆ ಸಂಸ್ಕೃತಿಯನ್ನು ಕಾಪಾಡುತ್ತದೆ. ಧಾರ್ಮಿಕ ಭಾಷೆಯು ಜನರಲ್ಲಿ ಭಾವನೆಗಳನ್ನು ಪ್ರೇರೇಪಿಸುತ್ತದೆ ಮತ್ತು ಪ್ರಚೋದಿಸುತ್ತದೆ ಎಂದು ಜೆಎನ್‌ಯು ವಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಆಂಗ್ಲ, ಹಿಂದಿ, ಕನ್ನಡ, ಸಂಸ್ಕೃತ ಮತ್ತು ಕೊಂಕಣಿ ಭಾಷಾ ವಿಭಾಗದ ಆಶ್ರಯದಲ್ಲಿ ‘ಭಾಷಾ ಸಂಗಮ-2023” ಎಂಬ ಒಂದು ದಿನದ ರಾಷ್ಟ್ರ ಮಟ್ಟದ ಬಹುಭಾಷಾ ವಿಚಾರ ಸಂಕಿರಣದ ಪ್ರಧಾನ ಭಾಷಣಕಾರರಾಗಿ ಅವರು ಮಾತಾಡುತ್ತಿದ್ದರು.

ಧರ್ಮ ಮತ್ತು ಭಾಷೆಯ ನಡುವಣ ಸಂಬಂಧಗಳ ಸಂಕೀರ್ಣತೆಯನ್ನು ವಿವರಿಸುತ್ತಾ  ಅವರು ೨೦೧೯ ರಲ್ಲಿ ಬನಾರಸ್‌ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡರು. ಆ ವರ್ಷದ ನವೆಂಬರ ೫ ರಂದು ವಿಶ್ವವಿದ್ಯಾಲಯವು ನಿಯಮಾನುಸಾರ ಡಾ.ಫಿರೋಜ್‌ ಖಾನ್‌ ಎಂಬವರನ್ನು ʼಸಂಸ್ಕೃತ ವಿದ್ಯಾಧರ್ಮ ವಿಜ್ಞಾನ ಸಾಹಿತ್ಯʼ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ನೇಮಕ ಮಾಡಿತ್ತು. ಸಂಸ್ಕೃತ ಭಾಷೆ ಮತ್ತು ಸಾಹಿತ್ಯದ ಮೇಲಣ ಅವರ ಪಾಂಡಿತ್ಯವನ್ನು ಆಯ್ಕೆ ಸಮಿತಿ ಒಪ್ಪಿಕೊಂಡಿತ್ತಾದರೂ ಹಿಂದೂ ಸಂಪ್ರದಾಯಗಳ ಅಗತ್ಯ  ಪ್ರಾಯೋಗಿಕ ಜ್ಞಾನವನ್ನು ಅವರು ಹೊಂದಿರುವುದಿಲ್ಲ ಎಂದು RSS  ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವಾದಿಸಿತು. ಅಭ್ಯರ್ಥಿಯ ಸಂಸ್ಕೃತ ಭಾಷಾ ತಿಳಿವಳಿಕೆ ಮತ್ತು ಹಿಂದೂ ಧರ್ಮದ ಬಗ್ಗೆ ಬಹುಬಗೆಯ ಚರ್ಚೆಗಳು ನಡೆದು ಕೊನೆಗೆ ಫಿರೋಜ್‌ ಖಾನರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿದ ಬಳಿಕ ವಿವಾದ ಕೊನೆ ಗೊಂಡಿತು ಎಂದು ಘಟನೆಯನ್ನು ಉಲ್ಲೇಖಿಸುತ್ತಾ  ಧರ್ಮ ಮತ್ತು  ಭಾಷೆಗಳ ನಡುವಿನ ಸಂಬಂಧಗಳ ಬಗ್ಗೆ ನಾವು ಹೆಚ್ಚು ಯೋಚಿಸುವಂತೆ ಇದು ಮಾಡಿದೆ ಎಂದರು.

ಮಂಗಳೂರಿನ ಧರ್ಮಾಧ್ಯಕ್ಷರಾದ  ರೆ. ಡಾ. ಪೀಟರ್ ಪೌಲ್  ಸಲ್ಡಾನಾ ಇವರು  ವಿಚಾರ ಸಂಕಿರಣವನ್ನು ಉದ್ಘಾಟಿಸಿ “ಧರ್ಮ ಮತ್ತು ಭಾಷೆಗಳು ಸಂಸ್ಕೃತಿಯಲ್ಲಿ ಅಂತರ್ಗತವಾಗಿವೆ” ಎಂದರು.

ಸಿದ್ದಕಟ್ಟೆ ಸರಕಾರೀ ಪ್ರಥಮದರ್ಜೆ ಕಾಲೇಜಿನ  ಪ್ರಾಂಶುಪಾಲರಾದ ಡಾ. ಅಜಕ್ಕಳ ಗಿರೀಶ್ ಭಟ್ ʼ ಧರ್ಮದೊಂದಿಗೆ ಕನ್ನಡ ತುಳು ಮತ್ತು ಸಂಸ್ಕೃತ ಭಾಷೆಗಳ ಮುಖಾಮುಖಿʼ ಯ ಬಗ್ಗೆ ಮಾತಾಡಿದರು. ನಿರ್ದೇಶಕರಾದ ರೆ.ಡಾ.ರುಡಾಲ್ಫ್ ಆರ್. ಪಿಂಟೊ, ʼಧರ್ಮದಲ್ಲಿ ಕೊಂಕಣಿ ಮತ್ತು ಲ್ಯಾಟಿನ್ ಪ್ರಭಾವʼ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಸುಮಾ ಟಿ ರೋಡಣ್ಣವರ ʼಧಾರ್ಮಿಕ ಆಚರಣೆಗಳು ಮತ್ತು ಪ್ರಚಾರದಲ್ಲಿ ಹಿಂದಿಯ ಪಾತ್ರʼ ವಿಷಯಗಳ  ಕುರಿತು ಮಾತನಾಡಿದರು.

ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ಸಂಚಾಲಕ ವಂ. ಫಾದರ್ ಬೊನವೆಂಚರ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿಚಾರ ಸಂಕಿರಣದ  ಸಹ ನಿರ್ದೇಶಕರಾಗಿರುವ ವಂ ಗುರು. ಡಾ ಐವನ್ ಡಿ ಸೋಜಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಿಯನಾ  ಡಿ ಸೋಜಾ, ಉಪನ್ಯಾಸಕಿ, ಸಂಯೋಜಕಿ  ಕ್ಯಾರೆಲ್ ಫೆರ್ನಾಂಡಿಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ವಂ. ಗುರು.  ಮೈಕಲ್ ಸಾಂತುಮಾಯೋರ್  ಅತಿಥಿಗಳನ್ನು ಸ್ವಾಗತಿಸಿದರು,  ವಿಚಾರ ಸಂಕಿರಣದ ಸಹ ಸಂಯೋಜಕಿ ಸೌಮ್ಯಾ ಕೋಟ್ಯಾನ್ ವಂದಿಸಿದರು, ವಿದ್ಯಾರ್ಥಿ ಜ್ಯೋಸ್ಥಾನ್ ಕಾರ್ಯಕ್ರಮವನ್ನು ನಿರೂಪಿಸಿದರು, 

ಕರ್ನಾಟಕ, ಕೇರಳ, ಗೋವಾ, ಡೆಲ್ಲಿಯಿಂದ ಆಗಮಿಸಿದ ಸುಮಾರು  200 ಮಂದಿ ಈ ವಿಚಾರ  ಸಂಕಿರಣದಲ್ಲಿ ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು