Monday, December 29, 2025

ಸತ್ಯ | ನ್ಯಾಯ |ಧರ್ಮ

ಮಂತ್ರ ಮಾಂಗಲ್ಯ ಮೂಲಕ ಸರಳ ಅಂತರ್ಜಾತಿ ವಿವಾಹಕ್ಕೆ ಸಾಕ್ಷಿಯಾದ ಎಚ್. ಮಧುಸೂಧನ್-ಹರ್ಷಿತ

ಹಾಸನ: ಇತ್ತೀಚಿನ ದಿನಗಳಲ್ಲಿ ಜಾತಿ ಹೆಸರಿನಲ್ಲಿ ಸಮಾಜ ಒಡೆಯುತ್ತಿರುವ ಸಂದರ್ಭದಲ್ಲಿ, ಪ್ರೀತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಮುಂದಿಟ್ಟು ಹಾಸನದಲ್ಲಿ ನಡೆದ ಸರಳ ಅಂತರ್ಜಾತಿ ವಿವಾಹ ಒಂದು ಸಕಾರಾತ್ಮಕ ಸಂದೇಶ ನೀಡಿದೆ.

ಸಾಹಿತಿ ಹರೀಶ್ ಕಟ್ಟೆಬೆಳಗುಲಿ ಅವರ ಪುತ್ರ ಎಚ್.ಮಧುಸೂಧನ್ ಮತ್ತು ಹರ್ಷಿತ ಸಿ.ಎಂ. ಅವರು ಹಾಸನದ ಪಾಲಿಕ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ‘ವಿಶ್ವಮಾನವ ಸಂದೇಶದ ಮಂತ್ರ ಮಾಂಗಲ್ಯ’ ಹಾಗೂ “ಮನಸ್ಸಾಕ್ಷಿ ಮದುವೆ” ಪ್ರಮಾಣವಚನ ಸ್ವೀಕರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಮಾಜ ದುಬಾರಿ ಹಾಗೂ ಆಡಂಬರದ ಮದುವೆಗಳತ್ತ ಹೋಗುತ್ತಿರುವ ಈ ಕಾಲದಲ್ಲಿ, ಯಾವುದೇ ವೈಭವವಿಲ್ಲದೆ ಸರಳವಾಗಿ ನಡೆದ ಈ ವಿವಾಹ ಸಮಾರಂಭ ಎಲ್ಲರ ಗಮನ ಸೆಳೆಯಿತು.

ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಅವರು ವಧು-ವರರಿಗೆ ಮನಸ್ಸಾಕ್ಷಿ ಮದುವೆ ಪ್ರಮಾಣವಚನ ಬೋಧಿಸಿ ಮಾತನಾಡಿ, ಇಂತಹ ಸರಳ ಮದುವೆಗಳು ಸಮಾಜಕ್ಕೆ ಮಾದರಿಯಾಗಬೇಕು. ಆಡಂಬರದ ಮದುವೆಗಳು ಅಸಮಾನತೆಗಳನ್ನು ಹೆಚ್ಚಿಸುತ್ತವೆ, ಆದರೆ ಸರಳ ವಿವಾಹಗಳು ಸಮಾನತೆ ಮತ್ತು ಮಾನವೀಯತೆಯನ್ನು ಬಲಪಡಿಸುತ್ತವೆ ಎಂದರು.

ಸಿಪಿಐ(ಎಂ) ಮುಖಂಡ ಧರ್ಮೇಶ್ ಮಾತನಾಡಿ, ಸಮಾಜದಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕಿದೆ. ಪ್ರಗತಿಪರರು ಮತ್ತು ಸಮಾಜ ಇಂತಹ ದಂಪತಿಗಳ ಬೆಂಬಲಕ್ಕೆ ನಿಲ್ಲಬೇಕು. ದಾಂಪತ್ಯ ಜೀವನದಲ್ಲಿಯೂ ಗಂಡು-ಹೆಣ್ಣು ಮೇಲುಕೀಳು ಭಾವನೆ ಇಲ್ಲದೆ, ಕುಟುಂಬದಲ್ಲಿ ಸಮಾನತೆ ನೆಲೆಸಬೇಕು. ಪ್ರೀತಿಸಿ ಮದುವೆಯಾದವರು ಜವಾಬ್ದಾರಿಯಿಂದ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಾಹಿತಿ ಹರೀಶ್ ಕಟ್ಟೆಬೆಳಗುಲಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕವಯತ್ರಿ ಜ.ನಾ.ತೇಜಶ್ರೀ, ಸಾಹಿತಿಗಳಾದ ಯೋಗೀಶ್ ಮಾಸ್ಟರ್, ಮೇಟಿಕೆರೆ ಹಿರಿಯಣ್ಣ, ಲಾ ಪಾಯಿಂಟ್ ಖ್ಯಾತಿಯ ವಕೀಲ ಸುಖೇಶ್ ಕುಮಾರ ಶೆಟ್ಟಿ, ದಲಿತ ಮುಖಂಡ ರಾಜಶೇಖರ್, ಜಗದೀಶ್ ಜಾಣ, ಕೃಷ್ಣದಾಸ್, ದಂಡೋರ ವಿಜಿಕುಮಾರ್, ಹಾ.ಚನ್ನಬಸಪ್ಪ ಸೇರಿದಂತೆ ಹಲವರು ಅಂತರ್ಜಾತಿ ವಿವಾಹದ ಮಹತ್ವದ ಬಗ್ಗೆ ಮಾತನಾಡಿ ವಧು?ವರರಿಗೆ ಶುಭ ಹಾರೈಸಿದರು.

ವಧು-ವರರ ಅಪಾರ ಬಂಧುಗಳು ಹಾಗೂ ಸ್ನೇಹಿತರು ಈ ಸರಳ ಮದುವೆಗೆ ಸಾಕ್ಷಿಯಾದರು. ಕಾರ್ಯಕ್ರಮದ ಅಂತ್ಯದಲ್ಲಿ ಎಂ.ಜಿ. ಪೃಥ್ವಿ ಎಲ್ಲರಿಗೂ ವಂದಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page