Tuesday, June 18, 2024

ಸತ್ಯ | ನ್ಯಾಯ |ಧರ್ಮ

ಹೆಣ್ಣಿನ ಮೇಲೆ ಜಂಗೀ ಕುಸ್ತಿ

ಮಹಿಳೆಯರ ಮೇಲೆ ಹತೋಟಿ ಇಡುವುದೇ ಗಂಡಸುತನ ಎಂದು ನಂಬಿಸಿರುವ ಪಿತೃಪ್ರಧಾನತೆ ಎಲ್ಲ ಜಾತಿಯ ಗಂಡಸರಲ್ಲೂ ಇದೆ. ಅದರಲ್ಲೂ ಹಿಂದುತ್ವದ ಅಜೆಂಡಾ ಹಿಡಿದಿರುವವರು ತುಸು ಹೆಚ್ಚಾಗಿಯೇ ಹೆಣ್ಣಿನ ಘನತೆಗೆ ಪೆಟ್ಟು ಕೊಡುತ್ತಿದ್ದಾರೆ. ಹೆಣ್ಣುಮಕ್ಕಳ ಅಲಂಕಾರ, ವೇಷಭೂಷಣಗಳ ಬಗ್ಗೆ ಲಘುವಾಗಿ ಮಾತನಾಡುತ್ತಾ ಇದ್ದರೆ ಅದೊಂದು ಪುರುಷತ್ವದ ಗತ್ತು ಎಂದು ಭಾವಿಸುತ್ತಾರೆ – ಪ್ರೊ.ಆರ್.ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರು

ಜನಪ್ರತಿನಿಧಿಗಳಾಗಿ ಆಯ್ಕೆಯಾದ ತೆಲಂಗಾಣ ಗೃಹಸಚಿವ ಮಹಮೂದ್ ಅಲಿ ಅವರು ಮಹಿಳೆಯರು ಚಿಕ್ಕ ಬಟ್ಟೆ ಧರಿಸುವುದು ಸಮಸ್ಯೆಗೆ ಕಾರಣವಾಗಬಹುದು ಎಂದರು. ಜನಪ್ರತಿನಿಧಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿ ನಿರಪರಾಧಿಯೆಂದು ಪೊಲೀಸರಿಂದ ಬಿ ರಿಪೋರ್ಟ್ ಪಡೆದರು. ಕುಂಕುಮ ಇಲ್ಲದ ಮಹಿಳೆಯನ್ನು ಕೋಲಾರದ ಸಂಸದ ಎಸ್.ಮುನಿಸ್ವಾಮಿ ನಿಂದಿಸಿದರು. ಇತ್ತೀಚೆಗೆ  ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿ.ಸಿ.ಎಂ. ಆದ ಡಿ.ಕೆ.ಶಿ ಅವರು ಹೇಳಿದ ಮಾತು ‘ನನ್ನ ಪರ್ಮಿಷನ್ ಇಲ್ಲದೆ ನಮ್ಮ ಮನೆಯ ಮಹಿಳೆಯರು ಇಂದು ನಿಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ’ ಎಂದರು ಹಾಗೂ ಒಂದು ಸಂಸ್ಕೃತ ಶ್ಲೋಕವನ್ನು ಉದಾಹರಿಸಿ ಮನೆಯ ಹೆಣ್ಣುಮಕ್ಕಳು ಅಂದರೆ ತಾಯಿ, ಹೆಂಡತಿ ಹಾಗೂ ಮಗಳ ಮೇಲೆ ಯಾವಾಗಲೂ ಒಂದು ಕಣ್ಣು ಇಟ್ಟಿರಬೇಕೆಂದು ತಿಳಿಸಿದರು.‌

ಈ ಮೇಲಿನ ನಾಲ್ಕು ಜನ ಜನಪ್ರತಿನಿಧಿಗಳು ಮಹಿಳೆಯರ ಮೇಲೆ ಹೊಂದಿರುವ ಭಾವನೆ ಒಂದೇ ಆಗಿದೆ. ಪಿತೃಪ್ರಧಾನತೆಯಲ್ಲಿ ನಡೆಯುವ ಮಹಿಳೆಯರ ಮೇಲಿನ ದಬ್ಬಾಳಿಕೆ, ಹಿಂಸೆಯನ್ನು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಅವರು ಒಪ್ಪುತ್ತಾರೆ. ಅದಕ್ಕಾಗಿ ಹೆಣ್ಣನ್ನು ಕಾಯಲು ಯಾವಾಗಲೂ ಗಂಡು ಬೇಕು ಎಂದು ನಂಬುತ್ತಾರೆ. ಅಂದರೆ ಕೇಡು ಬಯಸುವ ಗಂಡನ್ನು ಹತ್ತಿಕ್ಕಲು ಅಥವಾ ನಿಯಂತ್ರಿಸಲು, ಕಾಯಲು ಮತ್ತೊಬ್ಬ ಗಂಡು ಬೇಕು ಎನ್ನುವುದು ಹಾಗೆಯೇ ಹೆಣ್ಣಿನ ನಡವಳಿಕೆಯೇ ಅವಳೆಲ್ಲ ಸಂಕಷ್ಟಗಳಿಗೆ ಕಾರಣ ಎನ್ನುವುದು; ಎಲ್ಲರಲ್ಲೂ ಮನು ಬೇರೂರಿವುದನ್ನು ತಿಳಿಸುತ್ತದೆ. ಹೆಣ್ಣಿನ ಎಲ್ಲ ಸಮಸ್ಯೆಗಳನ್ನು ಖಾಸಗೀಕರಿಸಿ ನೋಡುವ ಹಾಗೂ ಖಾಸಗಿಯಲ್ಲ ಇವೂ ಸಾರ್ವಜನಿಕ ಸಮಸ್ಯೆಗಳೇ ಎನ್ನುವ ಮೂಲಕ ಮಹಿಳೆಯರನ್ನು ಮಾನಸಿಕವಾಗಿ ಹಿಂಸಿಸುವ ಪ್ರವೃತ್ತಿಗಳೇ ಆಗಿವೆ. ಗಂಡು ಕಾಯುವವ, ಹೆಣ್ಣು ರಕ್ಷಿಸಿಕೊಳ್ಳುವವಳು ಮತ್ತು ಹೆಣ್ಣು ಎಂದಿಗೂ ಸ್ವತಂತ್ರಳಲ್ಲ ಎಂಬ ಭಾವ ಅವರಲ್ಲಿ ಪದೇ ಪದೇ ಬರುವಂತೆ ಮಾಡುವುದಾಗಿದೆ.

ಸಾರ್ವಜನಿಕ ಕ್ಷೇತ್ರಕ್ಕೆ ಮುನ್ನುಗ್ಗಿ ಬರುವ ಮಹಿಳೆಯರ ಬಗ್ಗೆ ಸಮಾಜ ಹೊಂದಿರುವ ಮನಸ್ಥಿತಿ ಇದು. ಸೂಟುಬೂಟಿನ ಗಂಡಿನ ಎದುರಲ್ಲಿ ಅರೆನಗ್ನವಾಗಿ ಹೆಣ್ಣನ್ನು ಕುಣಿಸುವ ನಿರ್ದೇಶಕರನ್ನು ಇವರು ಎಂದಾದರು ತಪ್ಪೆಂದು ಹೇಳಿದ್ದಾರೆಯೇ? ನಿತ್ಯದಲ್ಲಿ ನಗ್ನಗೊಳ್ಳುವ ಪುರುಷರ ಬಗ್ಗೆ ಚಕಾರ ಎತ್ತದ ಮತ್ತು ಅವರಿಂದಲೇ ಮಹಿಳೆಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳದೆ ಎಲ್ಲ ತಪ್ಪನ್ನು ಮಹಿಳೆಯರಲ್ಲಿ ಹುಡುಕುವ ಪ್ರವೃತ್ತಿ ಇದಾಗಿದೆ. ಇದು ಪುರುಷ ಪ್ರಧಾನತೆಯಲ್ಲಿಯೇ ನೆಲೆಯಾಗಿರುವುದು ವಿರೋಧಾಭಾಸ. ಮಹಿಳೆಯ ಎದುರಾಗಿ ಮಹಿಳೆಯನ್ನು ನೋಡುವಂತೆ, ಪುರುಷರ ಎದುರಾಗಿ ಪುರುಷರನ್ನು ಇಡುವ ಇದು ನಾಯಕ / ಖಳನಾಯಕ ಎಂಬ ಮಿಥ್ ಅನ್ನು ಹುಟ್ಟು ಹಾಕಿದೆ. ನಾಯಕ ಖಳನಾಯಕನೂ ಆಗಿದ್ದು ಮಹಿಳೆಯರ ಸಂರಕ್ಷಕನಾಗುವ ಮೂಲಕ ನೈತಿಕ ಪೊಲೀಸಿಂಗ್ ಮಾಡುವುದನ್ನು ತಮ್ಮ ಹಕ್ಕಾಗಿಯೂ ಪರಿಭಾವಿಸಲಾಗಿದೆ.

ನಾಲ್ಕು ಗೋಡೆಗಳ ನಡುವೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಸಾಕ್ಷಿಗಳು ಇರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಇಂಥ ಹೇಳಿಕೆಯನ್ನು ದಾಖಲಿಸುವ ಮೂಲಕ  ಆರಕ್ಷಕ ಠಾಣೆಯ ರಕ್ಷಕರ ಮನಸ್ಥಿತಿ ಇದೇ ಸಮಾಜ ಇಂಥ ಮೌಲ್ಯ ವ್ಯವಸ್ಥೆಯಿಂದ ರೂಪಿತವಾಗಿದೆ. ಅವರೂ ಈ ಪಿತೃಪ್ರಧಾನತೆಯ ಕೂಸುಗಳೇ. ಮಹಿಳೆಯರು ಬಾಯಿಮುಚ್ಚಿ ಸಹಿಸಿಕೊಂಡರಷ್ಟೇ ಉಳಿಗಾಲ ಇಲ್ಲದಿದ್ದರೆ ಅವರಿಗೆ ಯಾವ ಕಾಲವೂ ಇಲ್ಲ ಎಂದು ಎತ್ತಿ ತೋರಿಸುತ್ತಿದ್ದಾರೆ. ಇದನ್ನು ಮೌನವಾಗಿ ನೋಡುತ್ತಿರುವ ರಾಷ್ಟ್ರದ ರಾಷ್ಟ್ರಪತಿ ಮಾತೆಯು ಏನೂ ಹೇಳುತ್ತಿಲ್ಲ. ರಾಷ್ಟ್ರವನ್ನು ಕಾಯುತ್ತಿರುವ ವಿಶ್ವಗುರುಗಳು ಏನೂ ಹೇಳುತ್ತಿಲ್ಲ. ಮದುವೆಯಾದರೂ ವೈರಾಗ್ಯ ಜೀವನವನ್ನು ಅನುಭವಿಸುತ್ತಿರುವ ಇವರಿಗೆ ಮಹಿಳೆಯರ ದು:ಖ ಅರ್ಥವಾಗುವುದೂ ಇಲ್ಲ. ‘ಸುಂಕದವನ ಮುಂದೆ ಸುಖ ದು:ಖ ಹೇಳಿದಂತೆ’ ಎಂಬ ಗಾದೆ ಮಾತಿನಂತಾಗಿದೆ ಮಹಿಳೆಯ ಸ್ಥಿತಿ.

ಮಹಿಳೆಯರ ಮೇಲೆ ಹತೋಟಿ ಇಡುವುದೇ ಗಂಡಸುತನ ಎಂದು ನಂಬಿಸಿರುವ ಪಿತೃಪ್ರಧಾನತೆ ಎಲ್ಲ ಜಾತಿಯ ಗಂಡಸರಲ್ಲೂ ಇದೆ. ಅದರಲ್ಲೂ ಹಿಂದುತ್ವದ ಅಜೆಂಡಾ ಹಿಡಿದಿರುವವರು ತುಸು ಹೆಚ್ಚಾಗಿಯೇ ಹೆಣ್ಣಿನ ಘನತೆಗೆ ಪೆಟ್ಟು ಕೊಡುತ್ತಿದ್ದಾರೆ. ಹೆಣ್ಣುಮಕ್ಕಳ ಅಲಂಕಾರ, ವೇಷಭೂಷಣಗಳ ಬಗ್ಗೆ ಲಘುವಾಗಿ ಮಾತನಾಡುತ್ತಾ ಇದ್ದರೆ ಅದೊಂದು ಪುರುಷತ್ವದ ಗತ್ತು ಎಂದು ಭಾವಿಸುತ್ತಾರೆ. ಹೆಣ್ಣಿನ ನಡೆಯನ್ನು ಕುಟುಂಬ, ಸಾಮಾಜಿಕರು ಯಾರು ಬೇಕಾದರೂ ಪ್ರಶ್ನಿಸಬಹುದು ಎಂಬ ಅಘೋಷಿತ ವ್ಯವಸ್ಥೆಯೊಂದು ನಮ್ಮ ಸಾಮಾಜಿಕ ಸಂರಚನೆಯಲ್ಲಿದೆ. ಅದಕ್ಕಾಗಿಯೇ ಅದನ್ನು ಹೇಳಿದ ಜನಪ್ರತಿನಿಧಿಗಳನ್ನು ಯಾವ ಒಬ್ಬ ರಾಜಕಾರಣಿಯಾಗಲಿ ಪ್ರಶ್ನಿಸಿಲ್ಲ. ಹೆಣ್ಣು ಮಕ್ಕಳಾದ ಒಬ್ಬ ರಾಜಕಾರಣಿಯೂ ಇದರ ಬಗ್ಗೆ ಚಕಾರ ಎತ್ತಲಿಲ್ಲ. ಹೀಗೆ ಮೌನಕ್ಕೆ ಜಾರುವ ಉದ್ದೇಶ ಹೊಂದಾಣಿಕೆ ರಾಜಕಾರಣ. ಅದನ್ನು ಅವಮಾನ ಎಂದು ಭಾವಿಸದೆ ಸರಿಪಡಿಸಿಕೊಳ್ಳಬೇಕೆಂದು ಹಾದಿಬೀದಿಯವರೆಲ್ಲ ತಿಳಿದಿದ್ದಾರೆ. ಇಂಥ ಸಾಮಾಜಿಕ ಸಂರಚನೆಯನ್ನು ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲರೂ ಒಪ್ಪಿ ಅನುಸರಿಸುತ್ತಾರೆ. ಇದೊಂದು ಭಾರತೀಯ ಸಂಪ್ರದಾಯವೆಂದು ಘೋಷಿಸುತ್ತಾರೆ.

ಹಾಗಾದರೆ ಆ ಸಂಪ್ರದಾಯಗಳನ್ನು ಮಾಡಿದವರ್ಯಾರು, ಪಾಲಿಸುವವರ್ಯಾರು ಎಂದರೆ ಗಂಡು ಹೇಳುವವ, ಹೆಣ್ಣು ಆ ಆದೇಶವನ್ನು ಪಾಲಿಸುವವಳು. ಈ ಆದೇಶ ನೀಡುವ ಹಕ್ಕು ಗಂಡಿನದು ಎಂದು ಎಲ್ಲಾ ವರ್ಗದ, ಜಾತಿಗಳ, ಪ್ರದೇಶಗಳ ಪುರುಷರೂ ನಂಬಿದ್ದಾರೆ. ಈ ಆದೇಶ ನೀಡುವಾಗ ತಾನು ಏನು ಹೇಳುತ್ತೇನೆ ಎನ್ನುವುದಕ್ಕಿಂತ ತಾನು ಹೇಳುತ್ತಿರುವುದು ಸರಿಯಾದ ಕ್ರಮ ಎಂದು ಭಾವಿಸಿರುತ್ತಾರೆ. ಭಾವಿಸಿರುವ ಕಾರಣವಾಗಿ ಯಾರೂ ಯಾರನ್ನೂ ನಿಂದಿಸಿಕೊಳ್ಳುತ್ತಿಲ್ಲ. ಇವರ್ಯಾರು ಐಟಂ ಸಾಂಗ್ ಯಾಕೆ ಮಾಡ್ತೀರಿ ಅಂತ ಒಬ್ಬ ಪುರುಷ ನಿರ್ದೇಶಕರನ್ನು ಪ್ರಶ್ನಿಸಲ್ಲ. ಚುನಾವಣೆ ಬಂದ್ರೆ ಐಟಂ ಸಾಂಗಿಗೆ ಹೆಣ್ಣುಮಕ್ಕಳಿಂದ ಕುಣಿಸಿ, ಅವರೊಂದಿಗೆ ತಾವೂ ಕುಣಿದು ತಮ್ಮ ಗಂಡಸುತನವನ್ನು ತೋರಿಸುತ್ತಾರೆ. ಅದು ಭಾರತೀಯ ಸಂಪ್ರದಾಯಕ್ಕೆ ಧಕ್ಕೆ ತರುವುದಿಲ್ಲ. ಹಾದಿಬೀದಿಯಲ್ಲಿ ಹೆಣ್ಣುಮಕ್ಕಳನ್ನು ಕೇವಲವಾಗಿ ನೋಡುವ, ಅತ್ಯಾಚಾರ ಎಸಗುವ ಪುರುಷರಿಗೆ ಜಾಮೀನು ಕೊಡಿಸುವವರ ಬಗ್ಗೆ ಇವರಿಗೆ ಬೇಸರವಿಲ್ಲ. ಆತ ಛಲೋ ಲಾಯರ ಗಂಡುಮಕ್ಕಳನ್ನು ಸರಿಯಾಗಿ ಅರ್ಥ ಮಾಡಿಕೊಂಡವ ಎಂದು ಭಾವಿಸುತ್ತಾರೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮುಖ ಮುಚ್ಚಿಕೊಳ್ಳಬೇಕು. ಅತ್ಯಾಚಾರ ಮಾಡಿದವ ಎದೆ ಸೆಟೆದುಕೊಂಡು ಕ್ಯಾಮರಾಕ್ಕೆ ಮುಖ ನೀಡುತ್ತಾನೆ. ಇಂಥದನ್ನು ನೋಡುವ ಯುವಜನರಿಗೆ ನೀಡುತ್ತಿರುವ ಮೌಲ್ಯವಾದರೂ ಏನೆಂದು ಯಾರೂ ಯೋಚಿಸದೆ ಇರಲು ಮುಖ್ಯ ಕಾರಣ ಎಲ್ಲರಲ್ಲೂ ಮನು ಕುಳಿತಿದ್ದಾನೆ. ಇಲ್ಲವೆ ಮಾನಸಿಕವಾಗಿ ಅಂತರ್ಗತವಾಗಿದೆ.

ಆಳುವವರ ಇಂಥ ತಿಳುವಳಿಕೆಗಳು ಸಾರ್ವಜನಿಕವಾಗಿ ರಾರಾಜಿಸುವಂತೆ ಆಗಿವೆ. ಇದಕ್ಕೆ ಹೆಚ್ಚು ಖಂಡನೆಗಳು ಬಾರದಿರಲು ಮುಖ್ಯ ಕಾರಣ ಇದನ್ನೇ ಜನಸಾಮಾನ್ಯರು ನಂಬಿದ್ದಾರೆ. ತಮ್ಮ ಮಕ್ಕಳ ವಿಷಯಕ್ಕೆ ಇಂಥ ವಿಷಯಗಳು ಬಂದಾಗ ಕನಲುವ ಅವರು ಬೇರೆ ಹೆಣ್ಣುಮಕ್ಕಳಿಗೆ ಆದಾಗ ಲಕ್ಷಿಸುವುದಿಲ್ಲ ಹಾಗೂ ಅದನ್ನೇ ಸಹಜ ಪ್ರಕ್ರಿಯೆಯಾಗಿ ಭಾವಿಸುತ್ತಾರೆ. ಇಂಥ ಮಾತು ಮತ್ತು ಕೃತ್ಯಗಳನ್ನು ಸಂವಿಧಾನದ ಪ್ರಕಾರ ಕ್ರಿಮಿನಲ್ ಅಪರಾಧಗಳೆಂದು ಪರಿಭಾವಿಸುವುದಿಲ್ಲ. ಸಂವಿಧಾನವನ್ನು ಜನರ ಮನಸ್ಸಿನಾಳಕ್ಕೆ ಇಳಿಸುವ ಕೆಲಸದ ಮೂಲಕ ಮಾತ್ರ ಮಹಿಳೆಯರ ಹಕ್ಕುಗಳನ್ನು ಗೌರವಿಸುವಂತೆ ಮಾಡಲು ಸಾಧ್ಯ. ಸಾವಿರಾರು ವರ್ಷಗಳ ಮೌಲ್ಯಗಳಾಗಿ ರಕ್ತಗತವಾಗಿರುವ ಮಹಿಳೆಯರ ಮೇಲಿನ ಹಿಂಸೆಯನ್ನು ಹೋಗಲಾಡಿಸಲು ಸರ್ವ ವಿಧದಲ್ಲೂ ನಿರಂತರ ಪ್ರಯತ್ನಗಳ ಮೂಲಕವೇ ಸಾಧ್ಯವಾಗಿಸಲು ಸಾಧ್ಯ.

ಪ್ರೊ.ಆರ್.ಸುನಂದಮ್ಮ

ನಿವೃತ್ತ ಪ್ರಾಧ್ಯಾಪಕರು

ಇದನ್ನೂ ಓದಿ-ಬಿಟ್ಟಿ ಭಾಗ್ಯಗಳಲ್ಲ.. ಜನಸಾಮಾನ್ಯರ ಶ್ರಮ ನುಂಗಿದ್ದಕ್ಕೆ ಪರಿಹಾರ

Related Articles

ಇತ್ತೀಚಿನ ಸುದ್ದಿಗಳು