‌ಬೆಂಗಳೂರು | ಲಿವ್ ಇನ್‌ ಪಾರ್ಟ್ನರ್‌ ಎದೆಗೆ ಇರಿದು ಕೊಂದ ಮಹಿಳೆಯ ಬಂಧನ

Live-in partner murder: ಬೆಂಗಳೂರು: ತನ್ನ ಲಿವ್ ಇನ್‌ ಪಾರ್ಟ್ನರ್ ಎದೆಗೆ ಚಾಕುವಿನಿಂದ ಇರಿದು ಕೊಂದಿರುವ ಮಹಿಳೆ, ತನ್ನ ಚಾರಿತ್ರ್ಯದ ಮೇಲಿನ ಅನುಮಾನವೇ ತಾನು ಈ ಕೃತ್ಯ ಎಸಗಲು ಕಾರಣವಾಯಿತು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಸೆಪ್ಟೆಂಬರ್ 5ರಂದು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಮಹಿಳೆಯನ್ನು ಕರ್ನಾಟಕದ ಬೆಳಗಾವಿ ಮೂಲದ ರೇಣುಕಾ (24) ಎಂದು ಗುರುತಿಸಲಾಗಿದ್ದು, ಮೃತನನ್ನು ಕೇರಳದ ಕಣ್ಣೂರಿನ ಜಾವೇದ್ (29) ಎಂದು ಗುರುತಿಸಲಾಗಿದೆ.

ರೇಣುಕಾ ಜಾವೇದನನ್ನು ಆಸ್ಪತ್ರೆಗೆ ಸೇರಿಸಿದ ನಂತರ ಅಪಾರ್ಟ್‌ಮೆಂಟ್‌ಗೆ ಹಿಂತಿರುಗಿ ಅಲ್ಲಿಂದ ಪರಾರಿಯಾಗಲು ಯೋಜಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಹೊರಗಿನಿಂದ ಬಾಗಿಲು ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮಹಿಳೆ ಕಾಲೇಜು ಡ್ರಾಪೌಟ್‌ ಆಗಿದ್ದು, ಆರು ವರ್ಷದ ಬಾಲಕಿಯ ತಾಯಿ. ಅವಳು ಕೆಲಸಕ್ಕೆ ಹೋಗದೆ ಒಂಟಿ ಗಂಡಸರೊಡನೆ ಪಬ್ಬಿಗೆ ಹೋಗಿ ಅವರಿಗೆ ಕಂಪನಿ ನೀಡುವ ಮೂಲಕ ಬದುಕು ನಡೆಸುತ್ತಿದ್ದಳು. ಐಷಾರಾಮಿ ಬದುಕು ನಡೆಸುವ ಬಯಕೆಯಿಂದ ಹೀಗೆ ಮಾಡುತ್ತಿದ್ದಳು.

ಮಡಿವಾಳದಲ್ಲಿ ಮೊಬೈಲ್ ರಿಪೇರಿ ಮಾಡುತ್ತಿದ್ದ ಆರೋಪಿ ಜಾವೇದ್ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ. ಅವರಿಬ್ಬರು ಮೂರು ವರ್ಷಗಳ ಕಾಲದಿಂದ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಇತ್ತೀಚೆಗೆ ಅಕ್ಷಯ ನಗರದ ಅಪಾರ್ಟ್ಮೆಂಟ್ ಒಂದಕ್ಕೆ ತೆರಳಿದ್ದರು. ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಮಂಗಳವಾರ ಯಾವುದೋ ವಿಷಯಕ್ಕೆ ಜಗಳವಾಡುತ್ತಿದ್ದರು.
ಈ ಸಂದರ್ಭದಲ್ಲಿ ಕೋಪದ ಭರದಲ್ಲಿ ರೇಣುಕಾ ಚಾಕುವಿನಿಂದ ಜಾವೇದ್ ಎದೆಗೆ ಇರಿದಿದ್ದಾಳೆ.

ನಂತರ, ಆಕೆ ಅವನನ್ನು ಆಸ್ಪತ್ರೆಗೆ ಕರೆದೊಯ್ದಳು ಆದರೆ‌ ಜಾವೇದ್ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾನೆ. ಈ ಸಂಬಂಧ ಅಪಾರ್ಟ್‌ಮೆಂಟ್ ಮಾಲೀಕ ಗಣೇಶ್ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೇಣುಕಾಳನ್ನು ವಶಕ್ಕೆ ಪಡೆದಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು