Saturday, June 15, 2024

ಸತ್ಯ | ನ್ಯಾಯ |ಧರ್ಮ

ರಾಜಕಾರಣದಲ್ಲಿ ಮಹಿಳೆಯರ ಮುಖಾಮುಖಿ

ಚುನಾವಣೆಗಳಲ್ಲಿ ದೊಂಬಿ, ಗಲಭೆ ಹಿಂಸಾಚಾರಗಳಿಗೆ ತಡೆ ಹಾಕಬೇಕು. ಚುನಾವಣೆಗಳಲ್ಲಿ ಹರಿದಾಡುವ ಹಣ, ವಸ್ತುಗಳಿಗೆ ವಿದಾಯ ಹೇಳಿ, ಸಮರ್ಥ ರಾಜಕೀಯ ನಾಯಕಿಯರಿಗೆ ಅವಕಾಶ ಮಾಡಿ ಕೊಡಬೇಕಿದೆ. ಸರ್ಕಾರಗಳು ಮಹಿಳಾ ಸಬಲೀಕರಣದ ಬಗ್ಗೆ ಗಮನಹರಿಸುತ್ತಾ ಮಹಿಳೆಯರನ್ನು ಹೆಚ್ಚು ಹೆಚ್ಚು ಅಧಿಕಾರ ಕೇಂದ್ರಿತ ಮತ್ತು ನೀತಿ ನಿರೂಪಣಾ ಜಾಗಗಳಲ್ಲಿ ಸ್ಥಾಪಿಸಬೇಕಿದೆ. ಡಾ.ಕೆ.ಷರೀಫಾ

ಕರ್ನಾಟಕದಲ್ಲಿ 2023ರ ಮೇ 10 ರಂದು ವಿಧಾನಸಭೆಯ ಚುನಾವಣೆಗಳು ನಡೆಯಲಿವೆ. ಈಗಾಗಲೇ ಚುನಾವಣಾ ಆಯೋಗವು 2023ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿಯಾಗಿದೆ. ಜಿಲ್ಲಾವಾರು ಮಹಿಳಾ ಮತ್ತು ಪುರುಷ ಮತದಾರರ ಅಂಕಿ ಸಂಖ್ಯೆಗಳ ವಿವರ ರಾಜಕೀಯ ಪಕ್ಷಗಳಿಗೆ ಸಿಕ್ಕಿದೆ. ಕರ್ನಾಟಕದಲ್ಲಿ ಒಟ್ಟು 5.05 ಕೋಟಿ ಮತದಾರರಿದ್ದಾರೆ. ಉಡುಪಿಯಲ್ಲಿ ಒಟ್ಟು 10.1 ಲಕ್ಷ ಜನ ಮತದಾರರಿದ್ದು ಅದರಲ್ಲಿ 5.2 ಲಕ್ಷ ಜನ ಮಹಿಳಾ ಮತದಾರರಿದ್ದಾರೆ. ಪುರುಷರು 4.9 ಲಕ್ಷಗಳಷ್ಟಿದ್ದರೆ, ತೃತೀಯ ಲಿಂಗಿ 12 ಮತದಾರರಿದ್ದಾರೆ. ಉಡುಪಿಯಲ್ಲಿ ಕರ್ನಾಟಕದಲ್ಲಿಯೇ ಅತೀ ಹೆಚ್ಚಿನ ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ ಎಂದು ಅಲ್ಲಿಯ ಜಿಲ್ಲಾಧಿಕಾರಿಯವರೇ ತಿಳಿಸಿರುತ್ತಾರೆ. ಕುಂದಾಪುರದಲ್ಲಿ ಪುರುಷ ಮತದಾರರು 98,224 ಇದ್ದರೆ ಮಹಿಳಾ ಮತದಾರರ ಸಂಖ್ಯೆ 1,06,298 ಇದೆ. ಆದರೂ ಈ ಬಾರಿಯ ಚುನಾವಣೆಯಲ್ಲಿ ಯಾವ ಯಾವ ಪಕ್ಷ ಎಷ್ಟು ಜನ ಮಹಿಳೆಯರಿಗೆ ಟಿಕೇಟು ನೀಡಿದೆ ಎಂದು ಪರಿಶೀಲಿಸಿದರೆ ಉತ್ತರ ಬಹಳ ನಿರಾಶಾದಾಯಕವಾಗಿದೆ.

ಸ್ಥಳೀಯ ಚುನಾವಣೆಗಳೇ ಇರಲಿ, ವಿಧಾನಸೌಧ ಅಥವಾ ಪಾರ್ಲಿಮೆಂಟ್ ಚುನಾವಣೆಗಳೇ ಬರಲಿ ಮಹಿಳೆಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ರಾಜಕೀಯ ಚುನಾವಣೆಗಳು ಮಹಿಳೆಯರನ್ನು ಬೆಂಬಲಿಸುವ ತರಹ ಇಲ್ಲದಿರುವುದೇ ಅವಳ ಪ್ರಗತಿಗೆ ದೊಡ್ಡ ಮಾರಕವಾಗಿದೆ. ಲಿಂಗ ತಾರತಮ್ಯದ, ಪುರುಷ ಪ್ರಧಾನ ನಡೆಗಳನ್ನು ಅವಳು ಹೆಜ್ಜೆ ಹೆಜ್ಜೆಗೂ ಎದುರಿಸಬೇಕಾಗುತ್ತದೆ. ಎಷ್ಟೇ ನಿರ್ಭಂಧಿಸಿದರೂ ಮತ್ತೆ ಮತ್ತೆ ರಾಜಕಾರಣದಲ್ಲಿ ಸ್ತ್ರೀ ಅಸ್ಮಿತೆ ವಿರೋಧಿ ಒಕ್ಕಣಿಕೆಗಳು ಎಗ್ಗಿಲ್ಲದೆ ಸಾಗುತ್ತಿವೆ. ನಾವೇನೂ ಸೀರಿ ತೊಟ್ಟಿದ್ದೇವಾ? ಬಳೆ ತೊಟ್ಟಿದ್ದೇವಾ? ಬಾಲ ಕಟಿ ಮಹಿಲಾಯೇಂ ಎನ್ನುವಂತಹ ಹೆಣ್ಣನ್ನು ಅವಮಾನಿಸುವ ಮತ್ತು ಅವರ ಅಸ್ಮಿತೆಯನ್ನು ಅಲ್ಲಗಳೆಯುವ ನಡೆಗಳನ್ನು ನಾವು ರಾಜಕಾರಣ, ಕುಟುಂಬ ಮತ್ತು ಸಮಾಜದಲ್ಲಿ ನೋಡುತ್ತಿದ್ದೇವೆ. ಚುನಾವಣೆಗಳಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ವೇದಿಕೆಗಳಲ್ಲಿ ಬೆಂಬಲಿಸಿದರೂ ಸಹ ವಾಸ್ತವದಲ್ಲಿ ಅವಳಿಗೆ ಸಿಗುವ ಬೆಂಬಲ ಶೂನ್ಯವೆಂದೇ ಹೇಳಬೇಕಾಗಿದೆ. ಮಹಿಳೆಯರಿಗಾಗಿ ಹುಟ್ಟು ಹಾಕಿರುವ ಮಹಿಳಾ ಆಯೋಗಗಳು ಆಳುವ ಪಕ್ಷಗಳ ಬಾಲಂಗೋಶಿಗಳಾಗಿ ಕೆಲಸ ಮಾಡುತ್ತಿರುತ್ತವೆಯೇ ವಿನ: ಅವಳ ಘನತೆಯ ರಕ್ಷಣೆಗಾಗಿ ಅಲ್ಲ.

ಜಗತ್ತನ್ನು ತನ್ನ ತಾಯ್ತನದ ಅಸ್ಮಿತೆಯಿಂದ ಮನೆ, ಮನೆತನ, ಕುಟುಂಬ, ವಂಶವನ್ನು ಬೆಳೆಸುವ ಪೋಶಿಸುವ ಅವಳಲ್ಲಿ ಅಗಾಧವಾದ ಸಾಮರ್ಥ್ಯವಿದೆ. ಆದರೆ ಅದರ ಪರಿಚಯವನ್ನು ಅವಳಿಗೆ ಮಾಡಿಸಬೇಕಿದೆ. ಮಹಿಳೆಯರು ರಾಜಕೀಯ ಪ್ರವೇಶ ಮಾಡಲು ಮತದಾನ ಮಾಡಲು ಅವಕಾಶಗಳಿವೆ. ಆದರೆ ಚುನಾವಣಾ ಪ್ರಚಾರಕ್ಕೆ ಬೇಕಾದ ಹಣಬಲ ತೋಳ್ಬಲಗಳು ಅವಳ ಬಳಿಯಿಲ್ಲ. ಚುನಾವಣೆ ಎದುರಿಸಿ ನಿಲ್ಲುವ ಗಟ್ಟಿಗಿತ್ತಿಯರಿದ್ದಾರೆ ನಿಜ. ಆದರೆ, ಪಕ್ಷದೊಳಗಿನ ತಂತ್ರಗಾರಿಕೆ, ವಿಸ್ಫೋಟಗೊಂಡ ಭಿನ್ನಾಭಿಪ್ರಾಯವನ್ನು ತಣಿಸಲು ಮಹಿಳೆಯನ್ನು ಬಲಿಕೊಡಲಾಗುತ್ತದೆ. ಜನಸಂಖ್ಯೆಯಲ್ಲಿ ಶೇಕಡಾ 5೦ ರಷ್ಟಿರುವ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಕೇವಲ  5%, 6%, 10% ವನ್ನು ದಾಟಿಲ್ಲ. ಮಹಿಳೆ ಮನಸ್ಸು ಮಾಡಿದರೆ ಈ ಸಾಧನೆ ಮಾಡುವುದು ಆಕೆಗೆ ಸಾಧ್ಯವಿದೆ. ನಮ್ಮ ಸಾಧನೆಗೆ ಯಾವುದೇ ಮಿತಿಯಿಲ್ಲ. ಒಬ್ಬ ಗಂಡಸಿಗೆ ಸಮಾಜವನ್ನು ಉತ್ತಮ ಪಡಿಸಲು ಎಷ್ಟು ಸಾಧ್ಯವೋ ಅದಕ್ಕಿಂತಲೂ ಹೆಚ್ಚು ಸಮರ್ಥವಾಗಿ ಮಹಿಳೆಯರು ತಮ್ಮ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಿದೆ. ಎಲ್ಲಾ ಧರ್ಮಗ್ರಂಥಗಳೂ ಪುರುಷ ನಿರ್ಮಿತ ಮತ್ತು ಅವು ತಮ್ಮ ತಮ್ಮ ಸ್ವಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ರಚನೆಯಾಗಿರುವ ಬಗ್ಗೆ ಎರಡು ಮಾತಿಲ್ಲ. ಆದ್ದರಿಂದ ಸರ್ಕಾರಗಳು ಮಹಿಳಾ ಸಬಲೀಕರಣದ ಬಗ್ಗೆ ಗಮನಹರಿಸುತ್ತಾ ಮಹಿಳೆಯರನ್ನು ಹೆಚ್ಚು ಹೆಚ್ಚು ಅಧಿಕಾರ ಕೇಂದ್ರಿತ ಮತ್ತು ನೀತಿ ನಿರೂಪಣಾ ಜಾಗಗಳಲ್ಲಿ ಸ್ಥಾಪಿಸಬೇಕಿದೆ. ಮಹಿಳೆಯರೂ ಸಹ ತಾವು ಅಬಲೆಯರು, ಅಧೀನ ಬದುಕು ತಮ್ಮದು ಎಂಬ ಮನಸ್ಥಿತಿಯಿಂದ ಹೊರಬರಬೇಕಿದೆ.

ನಮ್ಮ ಸಂವಿಧಾನ ಲಿಂಗತಾರತಮ್ಯವಿಲ್ಲದಂತೆ ಎಲ್ಲ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದೆ. ಸಂವಿಧಾನದ ಪೀಠಿಕೆಯಲ್ಲಿ ಮತ್ತು ಭಾಗ 111 ರ  ಅಡಿಯಲ್ಲಿ  ಮಹಿಳೆಯರಿಗೆ, ಸ್ವಾತಂತ್ರ್ಯ ಸಮಾನತೆ, ಮತ್ತು ಭಾರತದ ಚುನಾವಣೆಗಳಲ್ಲಿ ಭಾಗವಹಿಸುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ಖಾತರಿಪಡಿಸಿದೆ. ಹೀಗಿರುವಾಗ, ಎಲ್ಲ ರಾಜಕೀಯ ಪಕ್ಷಗಳೂ ಸಹ ಮಹಿಳೆಯರು ರಾಜಕೀಯದಲ್ಲಿ ಹೆಚ್ಚಿಗೆ ಭಾಗವಹಿಸುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ ಮತ್ತು ಪೂರಕ ನೀತಿಗಳನ್ನು ನಿರೂಪಿಸುತ್ತಾ, ಅವಳಿಗೆ ಪೂರಕವಾಗಿ, ಮತ್ತು ಬೆಂಬಲವಾಗಿ ನಿಲ್ಲಬೇಕಿದೆ.

ಇದನ್ನೂ ಓದಿ-http://ಕೊಡಗು ಕದನ | ಹಳಬರ ಎದುರು ಹೊಸಬರ ಹಣಾ ಹಣಿ

1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಗಳಾಗಿರುವ ಸಂದರ್ಭದಲ್ಲಿ ಶೇ.33% ಮಹಿಳಾ ಮೀಸಲಾತಿ ಬಿಲ್ಲು ಪಾರ್ಲಿಮೆಂಟಿನಲಿ ಮಂಡನೆಯಾಗಿ 27 ವರ್ಷಗಳೇ ಸಂದರೂ ಸಹ ಇಂದಿಗೂ ಆ ಮಹಿಳಾ ಮೀಸಲಾತಿ ಬಿಲ್ಲು ಜಾರಿಯಾಗದೇ ಇರುವುದಕ್ಕೆ ಪಿತೃ ಪ್ರಧಾನ ಮನಸ್ಸುಗಳು ರಾಜಕಾರಣದ ಚುಕ್ಕಾಣಿ ಹಿಡಿದಿರುವುದೇ ಸಾಕ್ಷಿಯಾಗಿದೆ. ಈ ಮಸೂದೆಯನ್ನು ಡಿಸೆಂಬರ್ 17, 2009ರಂದು ಸ್ವೀಕರಿಸಿದ ನಂತರ  ಮೇ 9, 2010ರಂದು ರಾಜ್ಯ ಸಭೆಯಲ್ಲಿ ಅಂಗೀಕರಿಸಿದರೂ ಕೂಡ ಲೋಕಸಭೆಯಲ್ಲಿ ಅದಕ್ಕೆ ಅಂಗೀಕಾರದ ಮುದ್ರೆ ಒತ್ತಲಿಲ್ಲ.

ಮಹಿಳಾ ಶಕ್ತಿಯನ್ನು ಒಗ್ಗೂಡಿಸಿ ರಾಜಕೀಯ ತಂತ್ರಗಳ ಒಳಭೇದಗಳನ್ನು ಭೇದಿಸಬೇಕಿದೆ. ಪುರುಷ ಸತ್ತೆ ಮಹಿಳಾ ಸಶಕ್ತೀಕರಣವನ್ನು ಒಪ್ಪುತ್ತಿಲ್ಲ. ಆ ಕಾರಣದಿಂದಾಗಿಯೇ ರಾಜಸತ್ತೆಯಲ್ಲೂ, ಪ್ರಜಾಸತ್ತೆಯಲ್ಲೂ ಮಹಿಳೆಯರು, ತಮ್ಮ ಪತಿಯ ನಿಧನದ ನಂತರ ಇಲ್ಲವೇ ಮದುವೆಯಾಗದೇ ಇರುವ ಮಹಿಳೆಯರು ರಾಜಕೀಯದ ಚುಕ್ಕಾಣಿ ಹಿಡಿದಿರುವ ನಿದರ್ಶನ ನಮ್ಮ ಕಣ್ಣ ಮುಂದಿದೆ. ಮಹಿಳೆ ಎಂತಹಾ ಸಮರ್ಥಳು ಎಂಬುದಕ್ಕೆ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳ ಪರಿಣಾಮವನ್ನು ನೋಡಬೇಕು. ಪಂಚಾಯಿತಿ ಮತ್ತು ಪುರಸಭಾ ಸದಸ್ಯರು, ಅಧ್ಯಕ್ಷರಾಗಿ ಮೀಸಲಾತಿಯ ಮೂಲಕ ಪುಟಿದೆದ್ದ ಮಹಿಳಾ ಶಕ್ತಿಯನ್ನು ಅಲ್ಲಗಳೆಯಲಾದೀತೇ?

ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದ ಶೇಕಡಾವಾರು ಪ್ರಮಾಣದಲ್ಲಿ ಭಾರತವು ವಿಶ್ವದಲ್ಲಿ 149ನೇ ಸ್ಥಾನದಲ್ಲಿದೆ. ಲೋಕಸಭೆಯ 17ನೇ ಸಂಸತ್ತಿನಲ್ಲಿ ಅತ್ಯಧಿಕ ಮಹಿಳಾ ರಾಜಕಾರಣಿಗಳನ್ನು ಸಂಸತ್ತಿನಲ್ಲಿ ಕಾಣಬಹುದಾಗಿದೆ. ಆಗ 14.3%ರಷ್ಟು ಮಹಿಳೆಯರನ್ನು ಅದು ಕಂಡಿತು. ಮತ್ತು 2013 ರಲ್ಲಿ ರಾಜ್ಯಸಭೆಯಲ್ಲಿ 10.6% ರಷ್ಟನ್ನು ಹಾಗೂ ಲೋಕಸಭೆಯಲ್ಲಿ 11% ಮಹಿಳಾ ಪ್ರಾತಿನಿಧ್ಯವನ್ನು ಕಂಡಿತು. ಮಹಿಳೆಯರಿಗೆ ಆರ್ಥಿಕ ನಿರ್ಧಾರಗಳನ್ನು ಮಾಡುವ ಶಕ್ತಿ ಕೇಂದ್ರಗಳನ್ನು ವಹಿಸಿಕೊಡಬೇಕಿದೆ. ಮಹಿಳೆಯರಿಗಾಗಿ ಕ್ರಿಯಾ ಯೋಜನೆಗಳು, ಅವರನ್ನು ಸಬಲೀಕರಣಗೊಳಿಲು ಶಕ್ತಿಕೇಂದ್ರಿತ ಸ್ಥಾನಗಳನ್ನು ವಹಿಸಿ ಕೊಡಬೇಕಿದೆ. ಮಹಿಳೆಯರನ್ನು ಆಡಳಿತದಲ್ಲಿ ಮತ್ತು ನಾಯಕತ್ವದ ಸ್ಥಾನಗಳಲ್ಲಿ ಇರುವಂತೆ ಮಾಡಿದರೆ ಅವಳಲ್ಲಿ ನಿಜವಾಗಿಯೂ ಶಕ್ತಿ ಸಂಚಾರವಾಗುತ್ತದೆ. ಆಗ ನಾವು ರಾಜಕಾರಣದಲ್ಲಿ ಹೆಚ್ಚಿನ ಮಹಿಳೆಯರನ್ನು ಕಾಣಲು ಸಾಧ್ಯವಾಗುತ್ತದೆ. ಚುನಾವಣೆಗಳಲ್ಲಿ ದೊಂಬಿ, ಗಲಭೆ ಹಿಂಸಾಚಾರಗಳಿಗೆ ತಡೆ ಹಾಕಬೇಕು. ಚುನಾವಣೆಗಳಲ್ಲಿ ಹರಿದಾಡುವ ಹಣ, ವಸ್ತುಗಳಿಗೆ ವಿದಾಯ ಹೇಳಿ, ಸಮರ್ಥ ರಾಜಕೀಯ ನಾಯಕಿಯರಿಗೆ ಅವಕಾಶ ಮಾಡಿ ಕೊಡಬೇಕಿದೆ.

ಮಹಿಳಾ ಅಭಿವೃಧ್ಧಿಯ ಕಾರ್ಯಕ್ರಮಗಳು ಹೀಗಿರಬೇಕೆಂದು ಬಯಸುವೆ.

1.       ಕಾಂಗ್ರೆಸ್ ಸರ್ಕಾರ ಗೆದ್ದು ಬಂದರೆ, ಕೇಂದ್ರದಲ್ಲಿ ಸರ್ಕಾರ ರಚಿಸಿದರೆ 26 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಬಿಲ್ಲು ಜಾರಿ ಮಾಡಲಿ.

2.      ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಲಿಂಗತಾರತಮ್ಯವಿಲ್ಲದೇ ಜಾರಿ ಮಾಡಬೇಕು.

3.      ಕನಿಷ್ಟ ಕೂಲಿ ಕಾನೂನು ಜಾರಿಯಿದ್ದರೂ ಅಂಗನವಾಡಿ ಶಿಕ್ಷಕಿಯರನ್ನು ಕನಿಷ್ಟ ಕೂಲಿಯನ್ನೂ ಕೊಡದೆ ಶೋಷಣೆ ಮಾಡುತ್ತಿರುವುದನ್ನು ನಿಲ್ಲಿಸಿ ಅವರ ಕೆಲಸವನ್ನು ಖಾಯಂಗೊಳಿಸಬೇಕು.

4.      ಮನರೇಗಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಕೆಲಸಗಳನ್ನು ನೀಡುತ್ತಾ ಬಡತನದಿಂದ ಅವರು ವಲಸೆ ಹೋಗುವುದನ್ನು ತಪ್ಪಿಸಲು ಹೆಚ್ಚಿಗೆ ಹಣ ಮಂಜೂರು ಮಾಡಬೇಕು.

5.      ನೇಕಾರರಿಗೆ ಸೂಕ್ತ ಧನ ಸಹಾಯ ಮಾಡುವುದರೊಂದಿಗೆ ನೇಕಾರಿಕೆಗೆ ಶಕ್ತಿ ತುಂಬಬೇಕು.

6.      ಹೆಣ್ಣು ಮಗುವಿನ ಶಿಕ್ಷಣ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಕನಿಷ್ಟ ಪಕ್ಷ ಮೆಟ್ರಿಕ್ಯುಲೇಶನ್ ವರೆಗಾದರೂ ವಹಿಸಿಕೊಳ್ಳಬೇಕು.

7.      ಮಹಿಳೆಯರಲ್ಲಿ ನಾಯಕತ್ವದ ಗುಣ ಬೆಳೆಸಲು ಕಾರ್ಯಾಗಾರಗಳನ್ನು ನಡೆಸಬೇಕು.

ಡಾ.ಕೆ.ಷರೀಫಾ

ಲೇಖಕರು

ಇದನ್ನೂ ಓದಿhttp://ಮೌಲ್ಯ ಮರೆತ ರಾಜಕಾರಣ

Related Articles

ಇತ್ತೀಚಿನ ಸುದ್ದಿಗಳು