Saturday, June 15, 2024

ಸತ್ಯ | ನ್ಯಾಯ |ಧರ್ಮ

ರಾಜಕಾರಣದಲ್ಲಿ ಮಹಿಳಾ ನಾಯಕತ್ವ

ಮೀಸಲಾತಿಯಿಲ್ಲದೆ ಮಹಿಳೆ ಎಲ್ಲರೊಂದಿಗೆ ಸ್ಪರ್ಧಿಸಿ ಗೆಲ್ಲುವಂತಹ ವಾತಾವರಣ ಈಗ ಉಳಿದಿಲ್ಲ. ಮ್ಯಾನ್, ಮಸಲ್ ಮತ್ತು ಮನಿಗಳದೇ ಕಾರುಭಾರು ಇರುವಾಗ ಈ ಮೂರು ಶಕ್ತಿಗಳು ಇಲ್ಲದ ಮಹಿಳೆಯರು ಸಾಮಾನ್ಯ ಕೆಟಗರಿಯಲ್ಲಿ ಗೆಲ್ಲುವುದು ಕಷ್ಟ- ಡಾ.ಕೆ.ಷರೀಫಾ

 ಸ್ಥಳೀಯ ಚುನಾವಣೆಗಳಿಂದ ಹಿಡಿದು ಜಾಗತಿಕ ಮಟ್ಟದ ಚುನಾವಣೆಗಳವರೆಗೂ ಮಹಿಳೆಯರು ನಾಯಕತ್ವ ಮತ್ತು ರಾಜಕೀಯ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ನಿರ್ಭಂಧಿಸುತ್ತಲೇ ಬರಲಾಗಿದೆ. ಮಹಿಳೆಯರಲ್ಲಿ ಶಿಕ್ಷಣ, ಸಂಪರ್ಕ ಸಾಧನ ಮತ್ತು ಸಂಪನ್ಮೂಲಗಳ ಕೊರತೆಯಿದೆ. ನಮ್ಮ ಸಂವಿಧಾನವು ಮಹಿಳಾ ನಾಯಕತ್ವದ ವಿರೋಧಿಯಲ್ಲ. ಭಾರತದ ಸಂವಿಧಾನ ರಚನಾ ಸದಸ್ಯರ ಸಂಖ್ಯೆ ಒಟ್ಟು 389 ಇದ್ದರೆ, ಅದರಲ್ಲಿ 15 ಮಹಿಳಾ ಸದಸ್ಯರೂ ಇದ್ದರು ಎಂಬುದು ದಾಖಲೆಗಳ ಮೂಲಕ ಸರ್ವವಿಧಿತ. ನಮ್ಮ ಸಂವಿಧಾನ ಮಹಿಳಾ ಸಮಾನತೆಯನ್ನು ಬಯಸುತ್ತದೆ. ಸಂವಿಧಾನ ನಮಗೆ ಸಮಾನತೆ ನೀಡಿದ್ದರೂ ಸ್ವಾತಂತ್ರ್ಯದ 76 ವರ್ಷಗಳು ಗತಿಸಿದರೂ ಇನ್ನೂ ಏಕೆ ಸಮಾನತೆಯ ತತ್ವ ಅಳಡಿಸಿಕೊಳ್ಳಲು ಸಾಧ್ಯವಾಗಿಲ್ಲವೆಂಬುದನ್ನು ನಾವು ಯೋಚಿಸಬೇಕಾಗಿದೆ.

 ಮಹಿಳೆಯರಿಗೆ ಶೇ.33% ರಷ್ಟು ಮೀಸಲಾತಿ ಕೊಡಬೇಕೆಂದು 1996ರಲ್ಲಿ ಮಹಿಳಾ ಮೀಸಲಾತಿ ಬಿಲ್ಲು ಪಾರ್ಲಿಮೆಂಟಿನಲ್ಲಿ ಮಂಡಿಸಿ 27 ವರ್ಷಗಳೇ ಗತಿಸಿದರೂ ಇನ್ನೂ ಏಕೆ ಪಾಸಾಗಿಲ್ಲ? ಎಂಬ ಪ್ರಶ್ನೆ ನಮ್ಮ ಮುಂದೆ ನಿಲ್ಲುತ್ತದೆ. ಸ್ಥಳೀಯ ಮಟ್ಟದಿಂದ ಹಿಡಿದು ಜಾಗತಿಕ ಮಟ್ಟದವರೆಗೂ ಮಹಿಳಾ ನಾಯಕತ್ವ ಮತ್ತು ಅವಳ ರಾಜಕೀಯ ಭಾಗವಹಿಸುವಿಕೆಯನ್ನು ಯಾಕೆ ನಿರ್ಭಂಧಿಸಲಾಗಿದೆ? ಮಹಿಳೆಯರ ರಾಜಕೀಯ ನಡೆಯನ್ನು ಇಲ್ಲಿಯ ತಾರತಮ್ಯ ಆಧಾರಿತ ಸ್ಥಾಪಿತ ಮನೋಸ್ಥಿತಿಗಳು, ಕಾನೂನುಗಳು, ಹಲವಾರು ಹಕ್ಕು ಜಾರಿ ಮಾಡುವ ಸಂಸ್ಥೆಗಳ ಮೂಲಕವೂ ಅವಳ ನಡೆಯನ್ನು ನಿರ್ಬಧಿಸಲಾಗುತ್ತದೆ. ಮಹಿಳಾ ನಾಯಕತ್ವ ಮತ್ತು ರಾಜಕೀಯ ಭಾಗವಹಿಸುವಿಕೆಯ ಬಗ್ಗೆ 2011ರ ಯುಎನ್ ಜನರಲ್ ಅಸೆಂಬ್ಲಿ ನಿರ್ಣಯವು ಈ ರೀತಿಯಾಗಿದೆ. “ ಪ್ರಪಂಚದ ಎಲ್ಲಾ ಭಾಗಗಳಲ್ಲಿ ಮಹಿಳೆಯರು ರಾಜಕೀಯ ಕ್ಷೇತ್ರದಿಂದ ಹೆಚ್ಚಾಗಿ ಅಂಚಿನಲ್ಲಿದ್ದಾರೆ. ಅನೇಕ ತಾರತಮ್ಯಗಳು, ರೂಢಿ ಅಭ್ಯಾಸಗಳು, ವರ್ತನೆಗಳು ಮತ್ತು ಲಿಂಗ ಸಂಬಂಧಿ ಅಧ್ಯಯನಗಳು, ಕಡಿಮೆ ಮಟ್ಟದ ಶಿಕ್ಷಣದ ಪರಿಣಾಮವಾಗಿ, ಆರೋಗ್ಯ ಕಾನೂನು ರಕ್ಷಣೆಯ ಪ್ರವೇಶದ ಕೊರತೆ ಮತ್ತು ಮಹಿಳೆಯರ ಮೇಲೆ ಬಡತನದ ಪರಿಣಾಮಗಳು” ಎಂದು ಅಭಿಪ್ರಾಯಿಸುತ್ತದೆ. ಮುಖ್ಯವಾಹಿನಿಯ ರಾಜಕೀಯ ಅಡಳಿತದಲ್ಲಿ ಮಹಿಳೆಗೆ ಸಿಗಬೇಕಾದಷ್ಟು ಅವಕಾಶಗಳು ಸಿಗದಿರುವುದು ಹಿಂದಿನಿಂದ ಇಂದಿನವರೆಗೂ ನಡೆಯುತ್ತಲೇ ಬಂದಿದೆ. ಸಚಿವ ಸಂಪುಟದಲ್ಲಿ ಸುಮ್ಮನೇ ಕಾಟಾಚಾರಕ್ಕೆ ಒಬ್ಬ ಮಹಿಳೆಗೆ ಮಾತ್ರ ಒಂದು ಅಮುಖ್ಯವಾದ ಒಂದು ಖಾತೆ ನೀಡಿ ಮೂಲೆಗೆ ಕೂಡಿಸುತ್ತಾರೆ. ಅದರಲ್ಲೂ ಕನ್ನಡ ಸಂಸ್ಕೃತಿಯೋ, ಮಹಿಳೆ ಮತ್ತು ಮಕ್ಕಳ  ಅಭಿವೃದ್ಧಿ ಖಾತೆಯನ್ನೋ ವಹಿಸಿ ಕೈತೊಳೆದು ಕೊಳ್ಳುತ್ತಾರೆ.

1999ರ ಎಸ್.ಎಂ. ಕೃಷ್ಣರವರ ಸಂಪುಟದಲ್ಲಿ ಅತ್ಯಂತ ಹೆಚ್ಚಿನ ಸಚಿವೆಯರಿದ್ದರು. ಮೋಟಮ್ಮನವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಖಾತೆ, ರಾಣಿ ಸತೀಶ್‍ರವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುಮಾ ವಸಂತರವರಿಗೆ  ಮುಜರಾಯಿ ಮತ್ತು ನಫೀಸಾ ಫಜಲ್ ರವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ವಹಿಸಲಾಗಿತ್ತು. ಕರ್ನಾಟಕದಲ್ಲಿ ಮೊಟ್ಟ ಮೊದಲ ಮಹಿಳಾ ಮಂತ್ರಿಯಾಗಿ ಕೆಲಸ ನಿರ್ವಹಿಸಿದ ಮಹಿಳೆಯೆಂದರೆ ಗ್ರೇಸಿ ಟಕ್ಕರವರು. ಇವರು 1957ರಲ್ಲಿ ಶಿಕ್ಷಣ ಸಚಿವೆಯಾಗಿ ಕೆಲಸ ನಿರ್ವಹಿಸಿದರು. ಗ್ರಾಮೀಣ ಕೈಗಾರಿಕೆಗಳ ಉಪ ಮಂತ್ರಿಯಾಗಿ ಕಾರ್ಯಭಾರ ನಿಭಾಯಿಸಿದವರು ಲೀಲಾವತಿ ವಿ. ಮಾಗಡಿಯವರು. ಕ್ಯಾಬಿನೇಟ್ ದರ್ಜೆಯ ಸಚಿವೆಯಾಗಿ 1962ರಲ್ಲಿ ಸಮಾಜ ಕಲ್ಯಾಣ ಖಾತೆಯನ್ನು ನಿರ್ವಹಿಸಿದವರು ಯಶೋಧರ ದಾಸಪ್ಪನವರು. ಮನೋರಮಾ ಮಧ್ವರಾಜರವರು 3 ಅವಧಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿರ್ವಹಿಸಿದರು. 1999ರ ಹಿಂದಿನ ಚುನಾವಣೆಯಲ್ಲಿ ರಾಜ್ಯದಾದ್ಯಂತ 107 ಜನ ಮಹಿಳೆಯರು ಸ್ಪರ್ಧಿಸಿದ್ದರು. ಅದರಲ್ಲಿ ಕೇವಲ 5 ಜನ ಮಾತ್ರ ಚುನಾವಣೆಯಲ್ಲಿ ಗೆದ್ದರು.‌

ಶಿವಕಾಂತ ಚತುರೆಯವರು 1985, ಎ.ಪುಷ್ಪಾವತಿ, ಬಿ.ಟಿ.ಲಲಿತಾ ನಾಯಕ್ ರವರು 1994ರಲ್ಲಿ ಹಾಗೂ ಭಾಗೀರತಿ ಮರುಳಸಿದ್ದನಗೌಡ 2004ರಲ್ಲಿ ಎಲ್ಲರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದವರು. 1985ರಲ್ಲಿ ಕನ್ನಡ ಸಂಸ್ಕೃತಿ ಸಚಿವೆಯಾಗಿ ಲೀಲಾದೇವಿ ಆರ್. ಪ್ರಸಾದ್ ರವರು ಕಾರ್ಯನಿರ್ವಹಿಸಿದರು. ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ಅಂದರೆ 1952ರಲ್ಲಿ ಕರ್ನಾಟಕದಲ್ಲಿ ಮೊದಲ ವಿಧಾನಸಭೆ ರಚನೆಯಾದಾಗಲಿಂದ ಈವರೆಗೂ ಸುಮಾರು 35 ಜನ ಮಹಿಳೆಯರು ಮಂತ್ರಿಗಳಾಗಿರಬಹುದು. ಬಹುತೇಕರಿಗೆ ಜುಜುಬಿ ಖಾತೆಗಳನ್ನು ನೀಡಲಾಗುತ್ತಿತ್ತು ಎಂಬುದು ಸರ್ವವಿಧಿತ. ಸುಮತಿ ಮಡಿಮನ್ ಅವರು 1979ರಲ್ಲಿ ವಿಧಾನಸಭೆಯ ಉಪಾಧ್ಯಕ್ಷರಾಗಿ ಮತ್ತು ವಿಧಾನಸಭೆಯ ಸಭಾಧ್ಯಕ್ಷರಾಗಿಯೂ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಎಂ.ಆರ್.ಲಕ್ಷ್ಮಮ್ಮ, ರಾಣಿ ಸತೀಶ್ ಅವರು ವಿಧಾನಪರಿಷತ್ತಿನ ಉಪಸಭಾಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಸವರಾಜೇಶ್ವರಿಯವರು ವಿಧಾನಪರಿಷತ್ತಿನ ಸಭಾಪತಿಗಳಾಗಿ ಸದನವನ್ನು ನಡೆಸಿದ್ದಾರೆ. ಜಯಮಾಲಾರವರು ವಿಧಾನಪರಿಷತ್ತಿನ ಸಭಾ ನಾಯಕಿಯಾದ ಮೊಟ್ಟ ಮೊದಲ ಮಹಿಳೆಯಾಗಿದ್ದಾರೆ.

ರಾಜಕೀಯವೆಂದರೆ ಅದು ಪುರುಷರ  ಭದ್ರಕೋಟೆ ಎಂಬ ಮಾತನ್ನು ಈ ಮಹಿಳೆಯರು ಮುರಿದಿದ್ದಾರೆ ನಿಜ. ಆದರೂ ಅವಳ ಕಾರ್ಯದಕ್ಷತೆಯನ್ನು ಪರಿಗಣಿಸದಿರುವುದು ವಿಷಾದನೀಯ! ಜಗತ್ತಿನಲ್ಲಿ ಮೊದಲ ಬಾರಿಗೆ 2015 ರಲ್ಲಿ ಕೆನಡಾದಲ್ಲಿ ಲಿಂಗ ಸಮತೂಲಿತ ಸಂಪುಟದ ರಚನೆಯಾಗಿತ್ತು. ಅದರಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದರು. ರಾಜಕೀಯದಲ್ಲಿ ಆಡಳಿತದ ಅಧಿಕಾರ ಸ್ಥಾನಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಒಳಗೊಳ್ಳುವ ಈ ಬೆಳವಣಿಗೆ ಹೆಣ್ಣು ಮಕ್ಕಳಿಗೆ ನೀಡುವ ಸಂದೇಶವು ಬಹಳ ಸಶಕ್ತವಾಗಿದೆ. ಭಾರತದಲ್ಲಿ ರಾಜಕೀಯ ಪ್ರಾತಿನಿಧ್ಯವು ಅತ್ಯಂತ ಕೆಳಮಟ್ಟದಲ್ಲಿದೆ. ಕೇವಲ ಪ್ರಾತಿನಿಧ್ಯಕ್ಕಷ್ಟೇ ಮಹಿಳೆ ಸೀಮಿತವಾಗುತ್ತಿದ್ದಾಳೆ. ಸಿಗಬೇಕಾದ ಅವಳ ನ್ಯಾಯಯುತ ಪಾಲು ಅವಳಿಗೆ ಸಿಗುತ್ತಿಲ್ಲ ಎಂಬುದು ಶೋಚನೀಯ!

ಮಹಿಳಾ ರಾಜಕೀಯ ಸಮಾನತೆಯೆಂಬುದು ಮಂತ್ರಕ್ಕೆ ಉದುರುವ ಮಾವಿನಕಾಯಿಯಲ್ಲ. ಅದಕ್ಕಾಗಿ ಜನತೆಯ ಮತ್ತು ಸರ್ಕಾರದ ಎರಡೂ ಪ್ರಯತ್ನಗಳು ಬೇಕಾಗುತ್ತವೆ. ಕ್ಯೂಬಾದಂತಹ ಸಣ್ಣ ದೇಶ ತನ್ನ ದೇಶದ ಮಹಿಳೆಯರಿಗೆ ರಾಜಕೀಯ, ಶೈಕ್ಷಣಿಕ, ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಂವಿಧಾನದ ಮೂಲಕ ಸಮಾನ ಹಕ್ಕುಗಳನ್ನು ನೀಡಿತು. 1975ರಲ್ಲಿ ಕುಟುಂಬ ಕಾಯ್ದೆ ಜಾರಿಗೆ ತಂದು ಮನೆಯ ಕರ್ತವ್ಯಗಳನ್ನು ಬಾಳ ಸಂಗಾತಿಯ ಜೊತೆಗೆ ಸಮಾನವಾಗಿ ಹಂಚಿಕೊಳ್ಳಲು ಕ್ಯೂಬಾದ ಮಹಿಳೆಗೆ ಸರ್ಕಾರ ಅನುವು ಮಾಡಿ ಕೊಟ್ಟಿತು. ಕ್ಯೂಬಾದ 2000ನೇ ಇಸವಿಯ ಪಾರ್ಲಿಮೆಂಟಿನ ಚುನಾವಣೆಯಲ್ಲಿ ಶೇಕಡಾ 22.8% ರಷ್ಟು ಇದ್ದ ಮಹಿಳಾ ಪ್ರಾತಿನಿಧ್ಯವು 2015ರಲ್ಲಿ ಶೇ. 53% ರಷ್ಟು ಆಗುತ್ತದೆ. ಈಗ ವಿಶ್ವದಲ್ಲಿಯೇ ಕ್ಯೂಬಾ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಹೀಗೆ ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನೆಲೆಗೆ ತರಲು ಸರ್ಕಾರದ ಪ್ರಾಮಾಣಿಕ ಪ್ರಯತ್ನದ ಅವಶ್ಯಕತೆಯಿದೆ. ಆಗಲೇ ಮಹಿಳೆಯರಲ್ಲಿನ ಸಾಮರ್ಥ್ಯವು ಸಂಪೂರ್ಣವಾಗಿ ರಾಷ್ಟ್ರ ಕಟ್ಟುವ ಕೆಲಸಗಳಿಗೆ ಬಳಕೆಯಾಗುತ್ತದೆ. ಆಗಲೇ ಆ ದೇಶ ಅಭಿವೃಧ್ಧಿಯ ಪಥದಲ್ಲಿ ಸಾಗುತ್ತದೆ.

ಪಂಡಿತ ಜವಾಹರಲಾಲ್ ನೆಹರು ಅವರು ಹೇಳುತ್ತಿದ್ದರು. “ ರಾಜಕೀಯದಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ನೀಡದಿದ್ದರೆ ನಾವು ಅರ್ಧದಷ್ಟು ಮತದಾರರನ್ನು ಕಡೆಕಣಿಸಿದಂತೆ. ಇದು ಅವಿವೇಕದ ಪರಮಾವಧಿ” ಎಂದು ಹೇಳುತ್ತಿದ್ದರು.  ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಸುಧಾರಿಸಬೇಕಾದರೆ ಅವರಿಗೆ ಮೀಸಲಾತಿ ನೀಡದೇ ಗತ್ಯಂತರವೇ ಇಲ್ಲ. ಮಹಿಳೆಯರಲ್ಲಿ ನಾಯಕತ್ವದ ಗುಣ ಸ್ವಭಾವ ಮೂಡಲು ಲಿಂಗ ಸಮಾನತೆಯ ಮತ್ತು ಸಬಲೀಕರಣ, ಸಾಮರ್ಥ್ಯ ಹೆಚ್ಚಿಸಿಕೊಳ್ಳುವ, ಮತ್ತು ಇತರರಿಗೆ ಸಹಾಯ ಮಾಡುವ ಉದಾತ್ತ ಗುಣಗಳನ್ನು ರೂಪಿಸಿಕೊಳ್ಳಲು ತರಬೇತಿಯನ್ನೂ ನೀಡಬೇಕಾಗುತ್ತದೆ. ಇಲ್ಲವಾದರೆ, ಮನಿ, ಮಸಲ್ ಮತ್ತು ಮೆನ್ ಎಂಬ ಮೂರು “ಎಂ”.ಗಳ ರಾಜಕೀಯದಲ್ಲಿ ಮಹಿಳಾ ನಾಯಕತ್ವ ಸಶಕ್ತವಾಗಿ ಮೂಡಿ ಬರುವುದು ದುರ್ಲಭ ಎನ್ನುವಂತಾಗಿದೆ.

ಮಹಿಳೆಯರು ರಾಜಕೀಯದಿಂದ ದೂರ ನಿಲ್ಲುವ ಕಾಲ ಸರಿದು ಹೋಗಿದೆ. ಅವಳ ಕುಟುಂಬದ ಸದಸ್ಯರೂ ಈಗ ಅವಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ.  ಮಾರ್ಗರೆಟ್ ಆಳ್ವ ರವರು “ಹೆಣ್ಣುಮಕ್ಕಳಿಗೆ ಯಾವುದೂ ಅಸಾಧ್ಯ ಇಲ್ಲ. ಆದರೆ, ಮೀಸಲಾತಿ ಇದ್ದರಷ್ಟೇ ಪ್ರಾತಿನಿಧ್ಯ ಹೆಚ್ಚಲು ಸಾಧ್ಯ” ಎನ್ನುತ್ತಾರೆ. ಅವರ ಈ ಮಾತು ನೂರಕ್ಕೆ ನೂರು ಸತ್ಯ. ಏಕೆಂದರೆ ಮೀಸಲಾತಿಯಿಲ್ಲದೆ ಅವಳು ಎಲ್ಲರೊಂದಿಗೆ ಸ್ಪರ್ಧಿಸಿ ಗೆಲ್ಲುವಂತಹ ವಾತಾವರಣ ಈಗ ಉಳಿದಿಲ್ಲ. ಮ್ಯಾನ್, ಮಸಲ್ ಮತ್ತು ಮನಿಗಳದೇ ಕಾರುಭಾರು ಇರುವಾಗ ಈ ಮೂರು ಶಕ್ತಿಗಳು ಇಲ್ಲದ ಮಹಿಳೆಯರು ಸಾಮಾನ್ಯ ಕೆಟಗರಿಯಲ್ಲಿ ಗೆಲ್ಲುವುದು ಕಷ್ಟ. ಒಟ್ಟಿನಲ್ಲಿ ಮಹಿಳಾ ನಾಯಕತ್ವ ಮತ್ತು ಸಬಲೀಕರಣದಿಂದ ಅವಳ ಲಿಂಗ ಸಮಾನತೆಯೆಡೆಗೆ ನಡೆಯುತ್ತಿರುವ ನಡಿಗೆಯಲ್ಲಿ ಸ್ವಲ್ಪ ವೇಗ ಹೆಚ್ಚಾಗುತ್ತದೆ.

ದೇಶದ ಪ್ರಧಾನಿಯಾಗಿ ನೆಹರೂರವರು 23 ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿದ್ದರೆ, ಇಂದಿರಾಗಾಂಧಿಯವರು 66 ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿದ್ದರು. ಈಗ ಪ್ರಸ್ತುತ ಪ್ರಧಾನಿಯವರು ಸ್ಥಾಪಿಸಿರುವ ಸಾರ್ವಜನಿಕ ಉದ್ದಿಮೆಗಳು 0. ಆದರೆ ಹಾಲಿ ಪ್ರಧಾನಿಯವರು ಮಾರಾಟ ಮಾಡಿರುವ ಸಾರ್ವಜನಿಕ ಉದ್ದಿಮೆಗಳು 23. ಇದನ್ನೆಲ್ಲ ಗಮನಿಸಿದರೆ ಎಲ್ಲ ಪುರುಷರಿಗಿಂತಲೂ ಹೆಚ್ಚು ಕ್ರಿಯಾಶೀಲ, ಮತ್ತು ಜನಪರವಾಗಿ ಕೆಲಸ ಮಾಡಲು ಮಹಿಳೆಗೆ ಸಾಧ್ಯವಿದೆ. ಅದಕ್ಕೆ ಪೂರಕವಾದ ವಾತಾವರಣ, ಅವಕಾಶಗಳು ಸಿಗಬೇಕಾಗಿದೆ ಅಷ್ಟೇ.

ಡಾ.ಕೆ.ಷರೀಫಾ

ಲೇಖಕರು

ಇದನ್ನೂ ಓದಿhttps://peepalmedia.com/woman-need-to-vote-no-need-for-power/ http://ಮಹಿಳೆ | ಮತದಾನಕ್ಕೆ ಬೇಕೇಬೇಕು; ಅಧಿಕಾರಕ್ಕೆ ಬೇಕೆಂದಿಲ್ಲ!

Related Articles

ಇತ್ತೀಚಿನ ಸುದ್ದಿಗಳು