Friday, June 14, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ಮೀಸಲಾತಿ ಮಸೂದೆ: ಸಂಭ್ರಮದ ನಡುವೆಯೇ ನೂರೆಂಟು ಅನುಮಾನಗಳು

2014 ರಲ್ಲಿ ಪೂರ್ಣ ಬಹುಮತದ ನರೇಂದ್ರ ಮೋದಿ ಸರಕಾರಕ್ಕೆ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸು ಮಾಡುವ ಎಲ್ಲ ಅವಕಾಶವೂ ಇತ್ತು; ಆದರೆ ಮಾಡಲಿಲ್ಲ. 2019 ರಲ್ಲಿ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯೇ 303!. ಆದರೂ ಅದನ್ನು ಅಂಗೀಕರಿಸಿ ಶಾಸನವನ್ನಾಗಿ ಮಾಡುವ ಪ್ರಾಮಾಣಿಕ ಯತ್ನ ಮಾಡಲಿಲ್ಲ. ಇದೀಗ ಲೋಕಸಭಾ ಚುನಾವಣೆಗೆ ಕೇವಲ ಎಂಟು ತಿಂಗಳಿದೆ ಎನ್ನುವಾಗ ಅದನ್ನು ಸಂಸತ್ತಿನ ಮುಂದೆ ತರಲಾಗಿದೆ- ಶ್ರೀನಿವಾಸ ಕಾರ್ಕಳ

ನಾವೇನೋ ಈಗ ಮಹಿಳೆಯರಿಗೆ ಚುನಾವಣೆ ಸ್ಪರ್ಧಿಸಲು ಮೀಸಲಾತಿಯ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದೇವೆ. ಆದರೆ, ಮಹಿಳೆಯರನ್ನು ಸದಾ ಎರಡನೆ ದರ್ಜೆಯಾಗಿ ನೋಡುವ ಪುರುಷ ಪಾರಮ್ಯದ ಜಗತ್ತಿನಲ್ಲಿ, ಶತಮಾನಗಳ ಕಾಲ, ಮಹಿಳೆಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಕೂಡಾ ಇರಲಿಲ್ಲ ಎನ್ನುವ ವಿಚಾರ ಎಷ್ಟು ಮಂದಿಗೆ ಗೊತ್ತು? ವಿಶ್ವದ ಅನೇಕ ಮುಂದುವರಿದ ಪ್ರಜಾತಂತ್ರಗಳಲ್ಲಿ ಕೂಡಾ ಈ ಒಂದು ಸಣ್ಣ ಹಕ್ಕನ್ನು ಪಡೆಯಲೂ ಭಾರೀ ಹೋರಾಟ ಮಾಡಬೇಕಾಯಿತು ಮತ್ತು ಸರಿಸುಮಾರು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದ ಬಳಿಕವಷ್ಟೇ ಹಂತ ಹಂತವಾಗಿ ಮಹಿಳೆಯರಿಗೆ ಮತದಾನದ ಹಕ್ಕು ದೊರೆಯಲಾರಂಭಿಸಿತು.

ಜಾಗತಿಕವಾಗಿ ಈ ಸಮಾನ ಮತದಾನದ ಹಕ್ಕು ದೊಡ್ಡ ಮಟ್ಟದಲ್ಲಿ ಜಾರಿಗೆ ಬಂದುದು ಹತ್ತೊಂಬತ್ತನೆ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೆ ಶತಮಾನದ ಆರಂಭದಲ್ಲಿ. ನ್ಯೂಜಿಲೆಂಡ್ (1893), ಆಸ್ಟ್ರೇಲಿಯಾ (1902), ಫಿನ್ ಲ್ಯಾಂಡ್ (1906), ನಾರ್ವೇ (1913), ಸೋವಿಯತ್ (1917), ಕೆನಡಾ, ಜರ್ಮನಿ, ಆಸ್ಟ್ರಿಯಾ, ಪೋಲಂಡ್ (1918), ಜೆಕೋಸ್ಲೋವಾಕಿಯಾ (1919), ಯುಎಸ್ ಮತ್ತು ಹಂಗರಿ (1920), ಗ್ರೇಟ್ ಬ್ರಿಟನ್ (1918 ಮತ್ತು 1928), ಬರ್ಮಾ (1922), ಈಕ್ವೆಡಾರ್ (1929), ದಕ್ಷಿಣ ಆಫ್ರಿಕಾ (1930), ಬ್ರೆಜಿಲ್, ಉರುಗ್ವೆ, ಥಾಯ್ಲಂಡ್ (1932), ಟರ್ಕಿ, ಕ್ಯೂಬಾ (1934) ಫಿಲಿಪೈನ್ಸ್ (1937).

ಭಾರತದ ಪ್ರಶಂಸಾರ್ಹ ನಡೆ

ಆದರೆ, ಭಾರತದ ಸಂವಿಧಾನ ನಿರ್ಮಾತೃಗಳು ಸಮಾನತೆಯ ವಿಚಾರದಲ್ಲಿ ಎಂತಹ ಮುಕ್ತ ಮನಸು ಹೊಂದಿದ್ದರು ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಅದೆಷ್ಟು ಕಾಳಜಿ ಹೊಂದಿದ್ದರು ಎಂದರೆ, ಭಾರತ ಸ್ವತಂತ್ರಗೊಂಡು ಸಂವಿಧಾನ ಜಾರಿಯಾಗಿ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುವಾಗಲೇ (1951) ಭಾರತದ ಎಲ್ಲ ಅರ್ಹ ವಯಸ್ಸಿನ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿಯಾಗಿತ್ತು. ಬಡವ ಶ್ರೀಮಂತ, ಬ್ರಾಹ್ಮಣ ದಲಿತ, ಪುರುಷ ಮಹಿಳೆ ಎನ್ನುವ ಭೇದ ವಿಲ್ಲದೆ ಎಲ್ಲರಿಗೂ ಒಂದೇ ಓಟಿನ ಹಕ್ಕು. ಪ್ರತಿಯೊಬ್ಬರ ಓಟಿಗೂ ಒಂದೇ ಮೌಲ್ಯ. ಇದು ಭಾರತದ ಮತ್ತು ಭಾರತ ಸಂವಿಧಾನದ ವಿಶೇಷ.

ಆದರೆ, ಜಗತ್ತಿನ ಎಲ್ಲೆಡೆ ಅನೇಕ ಸಾಮಾಜಿಕ ಕಾರಣಗಳಿಂದ, ಮಹಿಳೆಯರಿಗೆ ಅಧಿಕಾರ ರಾಜಕಾರಣವೂ  ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಅವಕಾಶ ನಿರಾಕರಿಸುವ ವಿಚಾರದಲ್ಲಿ ಭಾರತವೂ ಹಿಂದೆ ಉಳಿದಿರಲಿಲ್ಲ. ಇದೇ ಕಾರಣದಿಂದ ಸ್ವಾತಂತ್ರ್ಯದ ಇಷ್ಟು ವರ್ಷಗಳ ಬಳಿಕವೂ ಶಾಸನ ಸಭೆಗಳಲ್ಲಿ ಮಹಿಳೆಯರು ಕಾಣ ಸಿಗುವುದು ತೀರಾ ವಿರಳ ಸಂಖ್ಯೆಯಲ್ಲಿ. ಪ್ರಸ್ತುತ ಲೋಕಸಭೆಯಲ್ಲಿ 14.94%, ರಾಜ್ಯಸಭೆಯಲ್ಲಿ 14.05%, ರಾಜ್ಯ ವಿಧಾನಸಭೆಗಳಲ್ಲಿ 10% ಮಹಿಳಾ ಪ್ರಾತಿನಿಧ್ಯವಿದೆ.

ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿರುವಾಗ ಶಾಸನ ಸಭೆಗಳಲ್ಲಿಯೂ ಅರ್ಧದಷ್ಟು ಮಹಿಳೆಯರಿರಬೇಕಾದುದು ನ್ಯಾಯಯುತವಾದುದು. ಇದು ಸಾಧ‍್ಯವಾಗಬೇಕಾದರೆ ಮುಖ್ಯವಾಗಿ ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು. ಆದರೆ, ಸಾಮಾಜಿಕ ಬದಲಾವಣೆ ಎಷ್ಟು ಆಮೆಗತಿಯಲ್ಲಿ ಸಾಗುತ್ತಿದೆ ಎಂದರೆ, ಅಂತಹ ಒಂದು ಆದರ್ಶ ಪರಿಸ್ಥಿತಿ ಬರಲು ಇನ್ನೂ ಸಾವಿರಾರು ವರ್ಷ ಬೇಕಾದೀತು. ಆಗಲೂ ಬದಲಾಗುತ್ತದೆ ಎಂಬುದಕ್ಕೆ ಖಾತ್ರಿಯಿಲ್ಲ. ಇದೇ ಕಾರಣದಿಂದ ಶಾಸನದ ಮೂಲಕವಾದರೂ ಮೀಸಲಾತಿ ಒದಗಿಸಿ, ಕನಿಷ್ಠ ಮೂರನೇ ಒಂದರಷ್ಟಾದರೂ ಸ್ಥಾನಗಳನ್ನು ಮಹಿಳೆಯರಿಗೆ ಒದಗಿಸಬೇಕು ಎನ್ನುವುದು ಬಹಳ ಕಾಲದಿಂದ ಕೇಳಿ ಬರುತ್ತಿರುವ ಕೂಗು.

ಆದರೆ, ಇದನ್ನು ಮತ್ತೆ ನಿರ್ಧರಿಸಬೇಕಾದುದು ಯಾರು? ಪುರುಷರು!. ಪುರುಷರ ಪಾರಮ್ಯ ಇರುವ ಪಾರ್ಲಿಮೆಂಟ್. ಇದೇ ಸಮಸ್ಯೆ! ಪುರುಷಪ್ರಧಾನ ಮನಸ್ಥಿತಿಯಿಂದ ಒಂದಿಂಚೂ ಅತ್ತಿತ್ತ ಸರಿಯಲು ಸಿದ್ಧರಿರದ ಅಸಂಖ್ಯ ನಾಯಕರು ಈಗಲೂ ನಮ್ಮಲ್ಲಿದ್ದು, ಅವರು ಅದಕ್ಕೆ ಆಗಲೂ ದೊಡ್ಡ ಅಡ್ಡಿಯಾಗಿದ್ದರು, ಈಗಲೂ ದೊಡ್ಡ ಅಡ್ಡಿಯಾಗಿಯೇ ಇದ್ದಾರೆ.

ಮಹಿಳಾ ಮೀಸಲಾತಿಯ ಇತಿಹಾಸ

ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಮಸೂದೆಯನ್ನು 1989 ರಲ್ಲಿ ರಾಜೀವ್ ಗಾಂಧಿಯವರ ಸರಕಾರ ರಾಜ್ಯಸಭೆಯಲ್ಲಿ ಮಂಡಿಸಿತ್ತು. ಆದರೆ ಅದಕ್ಕೆ ಅನುಮೋದನೆ ದೊರೆಯಲಿಲ್ಲ. 1992-93 ರಲ್ಲಿ ಪಿವಿ ನರಸಿಂಹರಾವ್ ಸರಕಾರವು 72 ಮತ್ತು 74 ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸಿತು. ಇದರ ಪರಿಣಾಮವಾಗಿ, ಈಗ ದೇಶದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳಿದ್ದಾರೆ.

1996 ರಲ್ಲಿ ಎಚ್ ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಯತ್ನ ನಡೆಯಿತು. 1998, 1999, 2003 ರಲ್ಲಿ ಅಟಲ್ ಸರಕಾರವೂ ಈ ಯತ್ನವನ್ನು ಮುಂದುವರಿಸಿತು. 2004 ರಲ್ಲಿ ಯುಪಿಎ -1 ಕೂಡಾ ಈ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿತು. ಆದರೆ ಐದು ಬಾರಿಯೂ ಈ ಮಸೂದೆಗೆ ಅಂಗೀಕಾರ ಪಡೆಯುವ ಯತ್ನಕ್ಕೆ ಯಶ ಸಿಗಲಿಲ್ಲ.

ಸದರಿ ಮಸೂದೆಯು ಸಂಸತ್ತಿನ ಒಂದು ಮನೆಯಲ್ಲಾದರೂ ಅಂಗೀಕಾರಗೊಳ್ಳಲು ಮನ ಮೋಹನ್ ಸಿಂಗ್ ಸರಕಾರ ಬರಬೇಕಾಯಿತು (ಇದರಲ್ಲಿ ದೊಡ್ಡ ಪಾತ್ರ ವಹಿಸಿದ್ದು ಸೋನಿಯಾ ಗಾಂಧಿ). 2009 ರಲ್ಲಿ ಮಂಡಿಸಿ 2010 ರಲ್ಲಿ (09-03-2010) ಯುಪಿಎಯ ಅಂಗಪಕ್ಷಗಳ ವಿರೋಧ ಇದ್ದಾಗಲೂ ಇದನ್ನು ರಾಜ್ಯಸಭೆಯಲ್ಲಿ ಪಾಸು ಮಾಡಲಾಯಿತು (ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿರುವುದರಿಂದ ಲೋಕಸಭೆ ವಿಸರ್ಜನೆಯಾದರೂ ಮಸೂದೆ ಊರ್ಜಿತವಾಗಿ ಉಳಿದುಕೊಳ್ಳುವಂತಾಯಿತು). ಲೋಕಸಭೆಯಲ್ಲಿ ಪಾಸು ಮಾಡಲು ಅಗತ್ಯ ಸಂಖ್ಯೆ ಇಲ್ಲವಾದ ಮತ್ತು ಮಿತ್ರ ಪಕ್ಷಗಳ ವಿರೋಧದ ಕಾರಣ ಈ ಮಸೂದೆ ಮತ್ತೆ ನೆನೆಗುದಿಗೆ ಬಿದ್ದಿತ್ತು.

2014 ರಲ್ಲಿ ಪೂರ್ಣ ಬಹುಮತದ ನರೇಂದ್ರ ಮೋದಿ ಸರಕಾರಕ್ಕೆ ಇದನ್ನು ಪಾಸು ಮಾಡುವ ಎಲ್ಲ ಅವಕಾಶವೂ ಇತ್ತು; ಆದರೆ ಮಾಡಲಿಲ್ಲ. 2019 ರಲ್ಲಿ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯೇ 303!. ಆದರೂ ಅದನ್ನು ಅಂಗೀಕರಿಸಿ ಶಾಸನವನ್ನಾಗಿ ಮಾಡುವ ಪ್ರಾಮಾಣಿಕ ಯತ್ನ ಮಾಡಲಿಲ್ಲ. ಇದೀಗ ಲೋಕಸಭಾ ಚುನಾವಣೆಗೆ ಕೇವಲ ಎಂಟು ತಿಂಗಳಿದೆ ಎನ್ನುವಾಗ ಅದನ್ನು ಸಂಸತ್ತಿನ ಮುಂದೆ ತರಲಾಗಿದೆ. ಆದ್ದರಿಂದಲೇ, ಮೋದಿಯವರ ಗುರಿ ಮುಂದಿನ ವರ್ಷದ ಚುನಾವಣೆಯೇ ಹೊರತು, ಪ್ರಾಮಾಣಿಕವಾಗಿ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಅವಕಾಶ ಮಾಡಿಕೊಡುವುದಲ್ಲ ಎಂಬ ಆಕ್ಷೇಪಕ್ಕೆ ಕಾರಣವಾಗಿದೆ.

ಮಸೂದೆಯಲ್ಲಿನ ಆಕ್ಷೇಪಾರ್ಹ ಅಂಶಗಳು

ಸದರಿ ಮಸೂದೆಯನ್ನು ‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂದು ಹೆಸರಿಸಲಾಗಿದ್ದು, ಇದು ಭಾರತದ ಮಹಿಳೆಯರಿಗೆ  ನರೇಂದ್ರ ಮೋದಿಯವರ ದೊಡ್ಡ ಕೊಡುಗೆ ಎಂದು ಕೊಂಡಾಡಲಾಗುತ್ತಿದೆ. ಆದರೆ ಮಸೂದೆಯ ಕೆಲ ಅಂಶಗಳು ಈಗಿನ ಈ ಸಂಭ್ರಮ ಮತ್ತು ಉತ್ಸಾಹಗಳಿಗೆ ತಣ್ಣೀರೆರಚುವ ಸಾಧ್ಯತೆಯೇ ಹೆಚ್ಚು.

ಮಸೂದೆಯ 334A (1) ರಲ್ಲಿ ಹೀಗೆ ಹೇಳಲಾಗಿದೆ. “Notwithstanding anything in the foregoing provision of this Part or Part VIII, the provisions of the Constitution relating to the reservation of seats for women in the House of the People, the Legislative Assembly of a State and the Legislative Assembly of the National Capital Territory of Delhi shall come into effect after an exercise of delimitation is undertaken for this purpose after the relevant figures for the first census taken after commencement of the Constitution (One Hundred and Twenty-eighth Amendment) Act, 2023 have been published and shall cease to have effect on the expiration of a period of fifteen years from such commencement”

ಇದು ಅತ್ಯಂತ ಭ್ರಮ ನಿರಸನಗೊಳಿಸುವ ಭಾಗ. ಯಾಕೆಂದರೆ ಮಹಿಳಾ ಮೀಸಲಾತಿ ಮಸೂದೆ ಈಗ ಅಂಗೀಕಾರಗೊಂಡು ಶಾಸನವಾದರೂ ಕೂಡಾ ಇದು ಚಾಲ್ತಿಗೆ ಬರುವುದು ಮುಂದಿನ ಜನಗಣತಿಯ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ಬಳಿಕ!

ಅನಿಶ್ಚಿತತೆ

2021 ರಲ್ಲಿ ದೇಶದ ಜನಗಣಗತಿ ನಡೆಯಬೇಕಿತ್ತು. ಕೋವಿಡ್ ಮತ್ತಿತರ ಕಾರಣಗಳಿಂದ ಅದು ನಡೆದಿಲ್ಲ. 2023 ಮುಗಿಯುತ್ತ ಬಂದರೂ ಅದು ನಡೆಯುವ ಯಾವ ಲಕ್ಷಣವೂ ಇಲ್ಲ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಆ ಕಾರಣದಿಂದ 2024 ರಲ್ಲಿಯೂ ಅದು ನಡೆಯುವ ಸಾಧ‍್ಯತೆಯೂ ಇಲ್ಲ. ಮುಂದಿನ ಜನಗಣತಿ ನಡೆಯುವುದು ಯಾವಾಗ ಎನ್ನುವ ಸ್ಪಷ್ಟತೆಯೇ ಇಲ್ಲದಿರುವಾಗ, ಖಚಿತವಾಗಿ ಮಹಿಳಾ ಮೀಸಲಾತಿ ಜಾರಿಗೆ ಬರುವುದು ಯಾವಾಗ?

ಹೊಸದಾಗಿ ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ಸಂಸತ್‌ ನಲ್ಲಿ ದಕ್ಷಿಣ ಭಾರತದ ಸಂಭಾವ್ಯ ಪ್ರಾತಿನಿಧ್ಯ (ಕೆಂಪು)

ಎರಡನೆಯದಾಗಿ, ಕ್ಷೇತ್ರ ಪುನರ್ವಿಂಗಡಣೆಯಾದ (ಡಿಲಿಮಿಟೇಶನ್) ಬಳಿಕ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಇಲ್ಲಿ ಹೇಳಲಾಗಿದೆ. 2026 ರವರೆಗೂ ಕ್ಷೇತ್ರ ಪುನರ್ವಿಂಗಡಣೆ ನಡೆಸುವಂತಿಲ್ಲ. ಅಲ್ಲದೆ, ಈ ಬಾರಿ ಕ್ಷೇತ್ರ ಪುನರ್ವಿಂಗಡಣೆ ಭಾರೀ ವಿವಾದದ ಸಂಗತಿಯಾಗಿದೆ. ಯಾಕೆಂದರೆ, ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ಮುಂದೆ ಇರುವುದರಿಂದ ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಸಂಸತ್ ನಲ್ಲಿ ಕಡಿಮೆ ಪ್ರಾತಿನಿಧ್ಯ ಪಡೆದುಕೊಳ್ಳಲಿವೆ ಮತ್ತು ಜನಸಂಖ್ಯಾ ನಿಯಂತ್ರಣದಲ್ಲಿ ಹಿಂದೆ ಉಳಿದಿರುವ ಉತ್ತರಪ್ರದೇಶ, ಬಿಹಾರ, ರಾಜಸ್ತಾನ ಮೊದಲಾದ ರಾಜ್ಯಗಳು, ಜನಸಂಖ್ಯೆಯ ಕಾರಣಕ್ಕೇ ಸಂಸತ್ ನಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಳ್ಳಲಿವೆ. ಇದು ವಿಶೇಷವಾಗಿ, ದಕ್ಷಿಣದ ರಾಜ್ಯಗಳಿಂದ ಈಗಾಗಲೇ ಭಾರೀ ವಿರೋಧಕ್ಕೆ ಕಾರಣವಾಗಿದೆ. ಹಾಗಾಗಿ, ಕ್ಷೇತ್ರ ಪುನರ್ವಿಂಗಡಣೆ ಈ ಬಾರಿ ಅಷ್ಟು ಸುಲಭದ ಕೆಲಸವಲ್ಲ. ಕ್ಷೇತ್ರ ಪುನರ್ವಿಂಗಡಣೆಯ ಕಾರ್ಯವೇ ಅನಿಶ್ಚಿತವಿರುವಾಗ, ಸ್ವಾಭಾವಿಕವಾಗಿ ಮಹಿಳಾ ಮೀಸಲಾತಿ ಜಾರಿಗೊಳ್ಳುವುದು ಕೂಡಾ ಅನಿಶ್ಚಿತವೇ ಅಲ್ಲವೇ?

ಸದರಿ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಒಳಮೀಸಲಾತಿ ಒದಗಿಸಲಾಗಿದೆ. ಇತರ ಹಿಂದುಳಿದ ಜಾತಿಗಳವರಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರಿಗೂ ಒಳ ಮೀಸಲಾತಿ ಒದಗಿಸಬೇಕು ಎಂಬ ಕೂಗು ಈಗಾಗಲೇ ಎದ್ದಿದೆ.

2010ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯು ಮೀಸಲಾತಿಯು ತಕ್ಷಣ ಜಾರಿಗೆ ಬರಬೇಕು ಎಂದಿತ್ತು. ಆದರೆ ಈಗಾಗಲೇ ಹೇಳಿದ ಹಾಗೆ, ಈ 2023 ರ ಮಸೂದೆಯ ಪ್ರಕಾರ ಮಹಿಳಾ ಮೀಸಲಾತಿ ಯಾವಾಗ ಜಾರಿಗೆ ಬರುತ್ತದೆ ಎನ್ನುವುದೇ ಖಾತರಿಯಿಲ್ಲ. 2024 ರಲ್ಲಿಯಂತೂ ಜಾರಿಗೆ ಬರುವುದಿಲ್ಲ. 2029 ರಲ್ಲಿಯಾದರೂ ಬಂದೀತೇ? ಅಥವಾ 2031 ರ ಬಳಿಕ?!

ಚುನಾವಣಾ ಗಿಮಿಕ್?!

ಈ ಎಲ್ಲ ಕಾರಣದಿಂದ, ಮೇಲ್ನೋಟಕ್ಕೆ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ  ‘ನಾರಿ ಶಕ್ತಿ ವಂದನಾ ಅಧಿನಿಯಮ (2023)’ ಆಕರ್ಷಕವಾಗಿ ಕಂಡರೂ, ಅದರ ಜಾರಿಯೇ ಅಸಂಭವ ಎನಿಸುವಂತಾಗಿದೆ. ಆದ್ದರಿಂದಲೇ, ಇದು 2024 ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮೋದಿ ಸರಕಾರದ ಒಕ್ಕೂಟ ಸರಕಾರ ನಡೆಸಿರುವ ಒಂದು ಕುತಂತ್ರ, ಮಹಿಳೆಯರಿಗೆ ಮಾಡಿದ ಬಹು ದೊಡ್ಡ ಮೋಸ ಹೊರತು ಬೇರೇನೂ ಅಲ್ಲ ಎಂದು ವಿಪಕ್ಷಗಳು ದೂರುವಂತಾಗಿದೆ.

ಸಾವಿರ ಮೈಲಿಯ ಪಯಣವೂ ಒಂದು ಹೆಜ್ಜೆಯಿಂದಲೇ ಆರಂಭವಾಗುತ್ತದೆ. ಮಸೂದೆ ಮಂಡನೆಯ ಉದ್ದೇಶ ಏನೇ ಇರಲಿ ಮತ್ತು ಇದು ಯಾವಾಗ ಜಾರಿಗೆ ಬರಲಿದೆ ಎಂಬುದು ಅನಿಶ್ಚಿತವೇ ಇರಲಿ, ಆದರೆ ಮಹಿಳೆಯರಿಗೆ ರಾಜಕೀಯದಲ್ಲಿ ಅವರ ನ್ಯಾಯಸಮ್ಮತ ಪಾಲು ನೀಡುವ ದಿಶೆಯಲ್ಲಿ ಇದೊಂದು ಸ್ವಾಗತಾರ್ಹ ಹೆಜ್ಜೆ ಎನ್ನುವುದರಲ್ಲಿ ಅನುಮಾನವಿಲ್ಲ. ಪ್ರತಿಯೊಂದು ಪ್ರಶ್ನೆಗೆ ಒಂದು ಉತ್ತರವಿರುವ ಹಾಗೆಯೇ, ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ರಾಜಕೀಯ ಸಹಿತ ಪ್ರತಿಯೊಂದು ಕ್ಷೇತ್ರವೂ ನಿರಂತರವಾಗಿ ವಿಕಾಸಗೊಳ್ಳುತ್ತಿರುತ್ತದೆ. ಹಾಗಾಗಿ, ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು, ಮುಂದೆ ಎಂದಾದರೂ ಶಾಸನಸಭೆಯಲ್ಲಿ ಮೂರನೇ ಒಂದಲ್ಲ, ಎರಡನೇ ಒಂದರಷ್ಟು ಮಹಿಳೆಯರು ಕಾಣಿಸಿಕೊಳ್ಳುವ ದಿನಗಳೂ ಬರಬಹುದು, ಅದಕ್ಕೆ ಈ ಸಂವಿಧಾನ ತಿದ್ದುಪಡಿ ಮಸೂದೆ ನಾಂದಿಯಾಗುವಂತಾಗಲಿ ಎಂದು ಆಶಿಸೋಣ.

ಶ್ರೀನಿವಾಸ ಕಾರ್ಕಳ

ವಿಡಿಯೋ ನೋಡಿ :ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!

Related Articles

ಇತ್ತೀಚಿನ ಸುದ್ದಿಗಳು