Thursday, June 27, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ಮೀಸಲಾತಿ ಮಸೂದೆ: ಒಂದಿಷ್ಟು ಜಿಜ್ಞಾಸೆಗಳು

2014 ಮತ್ತು 2019ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದ ವರ್ತಮಾನದ ಸರಕಾರ, ಅದನ್ನು ಅಂಗೀಕರಿಸಿ ಶಾಸನವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡದೇ,  ಕೇವಲ ಎಂಟು ತಿಂಗಳಲ್ಲಿ ಮತ್ತೊಂದು ಲೋಕಸಭೆ ಚುನಾವಣೆ ಎದುರಿಸಬೇಕಾದ ತುರ್ತಿನಲ್ಲಿ ಇರುವಾಗ ಇದನ್ನು ಸಂಸತ್ತಿನ ಮುಂದಿಟ್ಟದ್ದು ಕೇವಲ ಚುನಾವಣಾ ಪ್ರಚಾರಕ್ಕಾಗಿಯೇ?- ಡಾ. ಜ್ಯೋತಿ, ಸಹಾಯಕ ಪ್ರಾಧ್ಯಾಪಕರು, ತುಮಕೂರು ವಿ.ವಿ

ನಾರಿ ಶಕ್ತಿ ವಂದನಾ ಅಧಿನಿಯಮ(2023), ಮಹಿಳೆಯರಿಗೆ ಲೋಕಸಭೆ, ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆಯು (ಮಹಿಳಾ ಮೀಸಲಾತಿ ಮಸೂದೆ), ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಹುಮತದಿಂದ ಅಂಗೀಕಾರವಾಗಿದೆ.  ಈ ಮಸೂದೆಯ ಮೂಲ ಆಶಯದಂತೆ ಅಳವಡಿಕೆಯಾಗಿದ್ದರೆ, ನಮ್ಮ ದೇಶದ ರಾಜಕಾರಣದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು.  ದೇಶದ ಮಹಿಳೆಯರ ಸಬಲೀಕರಣ ಮಾರ್ಗದಲ್ಲಿ ಐತಿಹಾಸಿಕ ಹೆಜ್ಜೆಯೆಂದು ಪರಿಗಣಿಸಲ್ಪಟ್ಟಿರುವುದರಿಂದ, ಇದನ್ನು ಸಮಗ್ರವಾಗಿ ಅರಿತುಕೊಳ್ಳಬೇಕಾದ ಅಗತ್ಯವಿದೆ.

ಮೊದಲನೆಯ ಪ್ರಶ್ನೆ, ಶಾಸನಬದ್ಧ ಮೀಸಲಾತಿ ಇಲ್ಲದೆಯೂ, ರಾಜಕೀಯ ಪಕ್ಷಗಳು ಸ್ವಯಂಪ್ರೇರಿತವಾಗಿ ಮೀಸಲಾತಿ ಅಳವಡಿಸಿಕೊಂಡಿದ್ದರಿಂದ, ಈ ಏಳು ದೇಶಗಳ ರಾಜಕೀಯ ಕ್ಷೇತ್ರದಲ್ಲಿ 35% ಕ್ಕಿಂತ ಹೆಚ್ಚಿನ ಮಹಿಳಾ ಪ್ರಾತಿನಿಧ್ಯವನ್ನು ನಾವಿಂದು ಕಾಣಬಹುದು: ಸ್ವೀಡನ್ (46%), ನಾರ್ವೆ(46%), ದಕ್ಷಿಣ ಆಫ್ರಿಕಾ(45%), ಆಸ್ಟ್ರೇಲಿಯಾ(38%), ಫ್ರಾನ್ಸ್(38%), ಜರ್ಮನಿ(35%), ಮತ್ತು ಇಂಗ್ಲೆಂಡ್( 35%). ಇಂತಹ ಇಚ್ಛಾಶಕ್ತಿಯನ್ನು ನಮ್ಮ ದೇಶದ ರಾಜಕೀಯ ಪಕ್ಷಗಳು ಕಳೆದ 77 ವರ್ಷಗಳಲ್ಲಿ ಯಾಕೆ ಪ್ರದರ್ಶಿಸಿಲ್ಲ?

ಎರಡನೆಯ ಪ್ರಶ್ನೆ, ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿರುವಾಗ,  ಅದೂ ಕೂಡ, ಹಲವಾರು ದಶಕಗಳಿಂದ ಮುಂದೂಡಲ್ಪಟ್ಟು ಈಗ ಅಂಗೀಕಾರವಾಗುತ್ತಿರುವಾಗ,  ಮತ್ತು ಮುಂದೊಂದು ದಿನ ಎರಡು ಶರತ್ತುಗಳಿಗೆ (ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ) ಒಳಪಟ್ಟು ಜಾರಿಗೆ ಬರಲಿರುವುದರಿಂದ, ಕೇವಲ 33% ಮೀಸಲಾತಿ ಸಾಕೆ? ಅಥವಾ, ಜನಸಂಖ್ಯೆಗೆ ಅನುಗುಣವಾಗಿ 50% (ಪರಿಶಿಷ್ಟ ಜಾತಿ/ಪಂಗಡ/ ಇತರ  ಹಿಂದುಳಿದ ಜಾತಿ/ ಅಲ್ಪಸಂಖ್ಯಾತರಿಗೆ ಒಳ ಮೀಸಲಾತಿ ಕಲ್ಪಿಸಿ) ಯಾಕೆ ಕೊಡಬಾರದು? ಪಾಲಿಗೆ ಬಂದದ್ದು ಪಂಚಾಮೃತ, ಇಷ್ಟಾದರೂ ಸಿಕ್ಕಿತಲ್ಲಾ, ಎಂದು ಪ್ರತಿಕ್ರಿಯಿಸಿ ತೃಪ್ತಿ ಪಟ್ಟುಕೊಳ್ಳಬೇಕೇ?

ಮೂರನೆಯ ಪ್ರಶ್ನೆ, ಈ ಮಸೂದೆ ಅಂಗೀಕರವಾಗುತ್ತಿರುವ ಸಂದರ್ಭಕ್ಕೆ ಸಂಬಂಧಿಸಿದ್ದು. 1992-93ರಲ್ಲಿ ಪಂಚಾಯತಿ  ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತಂದಾಗ, ಮಹಿಳೆಯರ ಕಾರ್ಯವೈಖರಿಯ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕುಹಕ ಮತ್ತು ಅಪನಂಬಿಕೆಗಳಿದ್ದವು. ಕೆಲವೊಮ್ಮೆ, ಮಹಿಳೆಯರನ್ನು ಮುಂದಿಟ್ಟುಕೊಂಡು ಪುರುಷರು ಅಧಿಕಾರ ಚಲಾಯಿಸಿದ ಉದಾಹರಣೆಗಳೂ ಇದ್ದವು. ಆದರೆ, ಕ್ರಮೇಣ ಮಹಿಳೆಯರ ಕಾರ್ಯಕ್ಷಮತೆಯ ಕುರಿತು ಸಾಕಷ್ಟು ಪ್ರಸಂಶೆ ಕೇಳಿಬರತೊಡಗಿತು. ಇದರಿಂದಾಗಿ, ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗಿರುವುದಲ್ಲದೆ ತಳಮಟ್ಟದಲ್ಲಿ ಮಹಿಳೆಯರ ಪರಿಸ್ಥಿತಿ ಕೂಡ ಕೊಂಚ ಸುಧಾರಿಸಿದೆಯೆನ್ನಬಹುದು. ಆದರೆ, 2010 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರವಾದ ಮಹಿಳಾ ಮೀಸಲಾತಿ ಮಸೂದೆ, ಇಲ್ಲಿಯವರೆಗೆ  ಧೂಳು ಹಿಡಿದಿದ್ದು, ಈಗ ನಿದ್ದೆಯಿಂದ ಎದ್ದುಬಂದಂತೆ ಒಮ್ಮೆಲೇ ಜಾಗ್ರತವಾದದ್ದು ಯಾಕೆ? 2014 ಮತ್ತು 2019ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದ ವರ್ತಮಾನದ ಸರಕಾರ, ಅದನ್ನು ಅಂಗೀಕರಿಸಿ ಶಾಸನವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡದೇ,  ಕೇವಲ ಎಂಟು ತಿಂಗಳಲ್ಲಿ ಮತ್ತೊಂದು ಲೋಕಸಭೆ ಚುನಾವಣೆ ಎದುರಿಸಬೇಕಾದ ತುರ್ತಿನಲ್ಲಿ ಇರುವಾಗ ಇದನ್ನು ಸಂಸತ್ತಿನ ಮುಂದಿಟ್ಟದ್ದು (ಅದೂ ಕೂಡ ತಕ್ಷಣಕ್ಕೆ ಜಾರಿಯಾಗುವುದಿಲ್ಲ ಎನ್ನುವ ಖಾತ್ರಿಯೊಂದಿಗೆ) ಕೇವಲ ಚುನಾವಣಾ ಪ್ರಚಾರಕ್ಕಾಗಿಯೇ? 2024ರ ಚುನಾವಣೆಗೆ ಇದು ಅನ್ವಯವಾಗುವುದಿಲ್ಲ ಎನ್ನುವುದಾದರೆ ಮತ್ತು ಮುಂದಿನ ಚುನಾವಣೆ ತೀವ್ರ ಸಂಘರ್ಷದಿಂದ ಕೂಡಿರುವ ಸಾಧ್ಯತೆಯಿರುವುದರಿಂದ, ಈ ಸೆಣಸಾಟಕ್ಕೆ ನಮ್ಮ ಮಹಿಳೆಯರು ಅರ್ಹರಲ್ಲವೆಂದು ಅರ್ಥವೇ? ಯಾಕೆಂದರೆ, ಈ ಮಸೂದೆಯನ್ನು ತಕ್ಷಣದಿಂದ ಜಾರಿಗೆ ತರಲು ಯಾವುದೇ ಅಡ್ಡಿಗಳಿಲ್ಲ, ಆದರೂ ಯಾಕೆ ಎರಡು ಷರತ್ತುಗಳನ್ನು ಸೇರಿಸಿಕೊಂಡು ಮುಂದೂಡಲಾಗಿದೆ?

ಪುರುಷ ಪ್ರಧಾನತೆಯ, ನಿಷ್ಠುರದ ಜದ್ದಾಜಿದ್ದಿನ ಹೋರಾಟದ, ಗಂಡು ಪಳಗಿದ ರಾಜಕೀಯ ಕ್ಷೇತ್ರ ಸುಲಭವಾಗಿ ಹೆಣ್ಣು ಮಕ್ಕಳಿಗೆ ತೆರೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ, ಹೆಚ್ಚಿನ ರಾಜಕೀಯ ಪಕ್ಷಗಳು, ಮೃದು ಮತ್ತು ಸೂಕ್ಷ್ಮ ಮನಸ್ಸಿನ  ಹೆಣ್ಣುಮಕ್ಕಳಿಗಿಂತ, ಗಂಡಸರಿಗೆ (ದಪ್ಪ ಚರ್ಮದ) ಚುನಾವಣಾ ಟಿಕೆಟ್ ಕೊಡಲು ಪ್ರಾಶಸ್ತ್ಯ ನೀಡುತ್ತವೆ. ಹಾಗಾಗಿ, ತಳಮಟ್ಟದ ಪಕ್ಷ ಕಾರ್ಯಕರ್ತರಾಗಿ ಆರಂಭಿಸಿ ಉನ್ನತ ಸ್ಥಾನ ತಲುಪುವ ಮಹಿಳೆಯರಿಗಿಂತ, ರಾಜಕೀಯ ಮನೆತನದ ಪ್ರಭಾವ ಬಳಸಿಕೊಳ್ಳುವ ಮಹಿಳೆಯರನ್ನೇ ಹೆಚ್ಚಾಗಿ ನೋಡುತ್ತೇವೆ. ಈ ಹಿನ್ನೆಲೆಯಲ್ಲಿ, ಸಂಪ್ರದಾಯಸ್ಥ ಪುರುಷ ಮನಸ್ಥಿತಿಯಿರುವ ರಾಜಕೀಯ ಪಕ್ಷಗಳು ಮಹಿಳಾ ಶಕ್ತಿಯ ಅರಿವಾಗಿ ಎಚ್ಚೆತ್ತುಕೊಂಡ ಕಾರಣವೇನಿರಬಹುದು?

ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ, ರಾಷ್ಟ್ರದ ರಾಜಕಾರಣದ ದಿಕ್ಕನ್ನು ಬದಲಾಯಿಸಿದ ಒಂದು ವಿಶಿಷ್ಟ ಮೈಲಿಗಲ್ಲೆನ್ನಬಹುದು. ಮಹಿಳಾ ಮತದಾರರನ್ನು ಕೇಂದ್ರವಾಗಿಟ್ಟುಕೊಂಡ ಗ್ಯಾರಂಟಿಗಳ ಸಹಾಯದಿಂದ, ಪಕ್ಷವೊಂದು ಅಧಿಕಾರ ಪಡೆದದ್ದು ವಿಸ್ಮಯ ಹುಟ್ಟಿಸಿ, ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳು ಮತ್ತು ಕೇಂದ್ರಕ್ಕೆ ಇದೊಂದು ಪ್ರಣಾಳಿಕೆಯ ತಳಹದಿಯಂತೆ ಕೆಲಸ ಮಾಡಲಿದೆ. ಇಲ್ಲಿಯವರೆಗೆ ಕೇವಲ ಉದ್ಯಮಿಗಳನ್ನಷ್ಟೇ  ಓಲೈಸುತ್ತಿದ್ದ ಪಕ್ಷಗಳು, ಇನ್ನು ಮುಂದೆ, ಜನಸಾಮಾನ್ಯರಿಗೆ ಅದರಲ್ಲಿಯೂ ವಿಶೇಷವಾಗಿ ಮಹಿಳಾ ಮತದಾರರಿಗೆ ಒಂದಿಷ್ಟು ಗ್ಯಾರಂಟಿಯ ಭದ್ರತೆ ಕೊಡಬೇಕಾಗುವುದು ಗೆಲ್ಲಲು ಉತ್ತಮ ಮಾರ್ಗವೆಂದುಕೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ, ಮಹಿಳಾ ಮೀಸಲಾತಿ ಮಸೂದೆಯೂ ಕೂಡ ಮುಂಬರುವ ಚುನಾವಣೆಯಲ್ಲಿ, ಪಕ್ಷಗಳು ಮಹಿಳಾ ಮತದಾರರನ್ನು ಸೆಳೆಯುವ ತಂತ್ರವಾಗಬಹುದು. ಅದೂ ಕೂಡ ವಾಸ್ತವದಲ್ಲಿ ಮಸೂದೆ ಜಾರಿಗೆ  ಬರುವ ಮೊದಲೇ.

ಈ ಪ್ರಶ್ನೆಗಳ ನಡುವೆ, ಪ್ರಸಕ್ತ ಅಂಗೀಕಾರವಾಗುತ್ತಿರುವ ಈ ಮಸೂದೆಯು ಒಂದಲ್ಲ ಒಂದು ದಿನ ನಿಜವಾಗಿಯೂ ಜಾರಿಗೆ ಬರಬಹುದೇ? ಈ ಸಂಶಯಕ್ಕೆ ಎರಡು ಕಾರಣಗಳಿವೆ- ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿ ಶಾಸನವಾದರೂ ಚಾಲ್ತಿಗೆ ಬರುವುದು ಮುಂದಿನ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ಬಳಿಕ.

ಜನಗಣತಿಯ ವಿಚಾರಕ್ಕೆ ಬಂದರೆ, 2021ರಲ್ಲಿ ನಡೆಯಬೇಕಿದ್ದ ಜನಗಣತಿ ಇಂದಿಗೂ ನಡೆದಿಲ್ಲ. ಇನ್ನು, ಕ್ಷೇತ್ರ ಪುನರ್ವಿಂಗಡಣೆ 2026ರಲ್ಲಿ ನಡೆಯ ಬೇಕಾಗಿದೆ. ಅದು ಜನಸಂಖ್ಯೆಯ ಆಧಾರದಲ್ಲಿ ನಡೆಯಲಿರುವುದರಿಂದ, ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಭಾರತದ ರಾಜ್ಯಗಳು ಮತ್ತು ಜನಸಂಖ್ಯಾ ನಿಯಂತ್ರಣ ಸಾಧಿಸಿರುವ ದಕ್ಷಿಣ ಭಾರತದ ರಾಜ್ಯಗಳ ನಡುವೆ ತೀವ್ರ ಸಂಘರ್ಷ ತರಲಿದೆ. ಇದರ ಪ್ರಕಾರ, ಉತ್ತರದ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿ, ದಕ್ಷಿಣದ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಆದ್ದರಿಂದ, ಉತ್ತರ ಭಾರತದ ಹಿಡಿತ ಸಾಧಿಸಿರುವ ಆಡಳಿತ ಪಕ್ಷ ಮತ್ತು ದಕ್ಷಿಣದಲ್ಲಿ ಪ್ರಾಬಲ್ಯ ಹೊಂದಿರುವ ವಿರೋಧ ಪಕ್ಷಗಳ ನಡುವೆ ಎಂದೂ ಮುಗಿಯದ ಘರ್ಷಣೆಯ ವಿಷಯವಾಗಿ ಉಳಿಯಲಿದೆ.

ಈ ಎರಡು ಮೂಲಭೂತ ಪ್ರಕ್ರಿಯೆಗಳು ಯಾವುದೇ ಮುಂದೂಡುವಿಕೆಯಿಲ್ಲದೆ ತಾರ್ಕಿಕ ಮತ್ತು ಸಹಮತದ ಅಂತ್ಯಕಾಣುವುದು ಸಂಶಯವಾಗಿರುವಾಗ, ಮಹಿಳಾ ಮೀಸಲಾತಿ ಜಾರಿಗೆ ಬಂದೀತೇ? ಒಂದು ವೇಳೆ ಪ್ರಯತ್ನ ಪ್ರಾಮಾಣಿಕವಾಗಿದ್ದರೆ, ಈ ಪ್ರಕ್ರಿಯೆಗಳ ಅಗತ್ಯವಿಲ್ಲದೆ, ತಕ್ಷಣದಿಂದಲೇ, ಮುಂದಿನ ಚುನಾವಣೆಗೆ ಅನ್ವಯವಾಗುವಂತೆ ಜಾರಿ ಗೊಳಿಸಲು ಸಾಧ್ಯವಿಲ್ಲವೇ? ಈ ಪ್ರಶ್ನೆಗಳಿಂದ, ಇದೊಂದು ಕೇವಲ ಚುನಾವಣಾ  ಘೋಷಣೆ ಮಾತ್ರ, ಹೃದಯಪೂರ್ವಕ ಇಚ್ಚಾಶಕ್ತಿಯ ಪ್ರಯತ್ನವಲ್ಲವೆಂಬುದು ಸ್ಪಷ್ಟವಾಗುತ್ತದೆ.

ಒಂದುವೇಳೆ, ಈ ಮಹಿಳಾ ಮೀಸಲಾತಿ ಮಸೂದೆ ಸದುದ್ದೇಶದಿಂದ ಕೂಡಿದೆ ಹಾಗು ತನ್ನ ಆಶಯದಂತೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಿದೆ ಎನ್ನುವುದಾದರೆ, ಸಾಕಷ್ಟು ಮುನ್ನೆಚ್ಚರಿಕೆಗಳು ಕೂಡ ಅಗತ್ಯವಿದೆ.

ಮುಖ್ಯವಾಗಿ, ಈ ಮೀಸಲಾತಿ ಪ್ರಯೋಜನ ಪಡೆಯುವ ಮಹಿಳಾ ಪ್ರತಿನಿಧಿಗಳು  ಯಾರಾಗಿರಬೇಕು? ರಾಜಕೀಯ ಕುಟುಂಬಗಳಿಂದ ಬಂದ ಹೆಣ್ಣುಮಕ್ಕಳು ಮಾತ್ರ ಮೀಸಲಾತಿಯ ಲಾಭ ಪಡೆಯಬೇಕೆ? ಅಥವಾ ಸಮಾಜಸೇವೆ ಮಾಡಬಯಸುವ ತಳಮಟ್ಟದ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಗಬೇಕೇ? ನಮ್ಮ ದೇಶದ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಪಕ್ಷಾತೀತವಾಗಿ ಸಾಮಾನ್ಯೀಕರಣಗೊಂಡಿರುವಾಗ, ನಮ್ಮ ರಾಜಕಾರಣಿಗಳು ತಮ್ಮ ಕ್ಷೇತ್ರದ ಉತ್ತರಾಧಿಕಾರಿಯಾಗಿ ತಮ್ಮ ಗಂಡುಮಕ್ಕಳನ್ನು ಸಿದ್ಧಗೊಳಿಸುವುದನ್ನು ನೋಡುತ್ತೇವೆ. ಗಂಡುಮಕ್ಕಳಿದ್ದರೆ, ಅವರ ಹೆಣ್ಣುಮಕ್ಕಳಿಗೆ  (ಗಂಡು ಮಕ್ಕಳಿಗಿಂತ ಬುದ್ದಿವಂತರಾಗಿದ್ದರೂ) ಬೆಂಬಲ ಕಡಿಮೆಯೆನ್ನಬಹುದು. ಸಾಮಾನ್ಯವಾಗಿ, ಹೆಣ್ಣುಮಕ್ಕಳಿಗೆ ಉದ್ಯಮಿಗಳೊಂದಿಗೆ (ಕೊಡುಕೊಳ್ಳುವ ವ್ಯವಹಾರವಿರುವ) ಮದುವೆ ಮಾಡಿ ಸಂಬಂಧ ಬೆಳೆಸುವುದನ್ನು ನೋಡುತ್ತೇವೆ. ಇದರಿಂದಾಗಿ, ಶ್ರಮವಹಿಸುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರು (ಹೆಣ್ಣಾಗಲಿ, ಗಂಡಾಗಲಿ), ಜೀವನಪರ್ಯಂತ ಸೇವಕರಾಗಿಯೇ ಉಳಿಯುತ್ತಾರೆ. ಒಂದು ವೇಳೆ, ಈ ರಾಜಕಾರಣಿಗಳಿಗೆ ಗಂಡುಮಕ್ಕಳಿಲ್ಲದೆ ಹೆಣ್ಣು ಮಕ್ಕಳು ಮಾತ್ರ ಇದ್ದಲ್ಲಿ, ಅಂತಹ ಸಂದರ್ಭದಲ್ಲಿ ಮಾತ್ರ ಹೆಣ್ಣುಮಕ್ಕಳಿಗೆ ರಾಜಕೀಯ ತರಬೇತಿ ನೀಡಲಾಗುತ್ತದೆ. ಇಂತಹ ಹೆಣ್ಣುಮಕ್ಕಳು ಮೀಸಲಾತಿ ಇಲ್ಲದೆಯೇ ಪಕ್ಷದ ಟಿಕೆಟ್ ಪಡೆಯುತ್ತಾರೆ. ನಿಜವಾಗಿ, ಮೀಸಲಾತಿ  ಸಿಗಬೇಕಾದುದು, ಶ್ರಮವಹಿಸುವ ಮತ್ತು ಸಮಾಜಮುಖಿ ಕಾಳಜಿ ಇರುವ ತಳಮಟ್ಟದ ಮಹಿಳಾ ಕಾರ್ಯಕರ್ತರಿಗೆ. ಈ ಮೀಸಲಾತಿ ಮಸೂದೆ, ಹಣ ಮತ್ತು ಪ್ರಭಾವದ ಬೆಂಬಲ ಇಲ್ಲದ  ಮಹಿಳಾ ಕಾರ್ಯಕರ್ತರಿಗೆ ಸ್ಪರ್ಧಿಸುವ ಅವಕಾಶ  ತೆರೆಯಲಿದೆಯೇ? ಪ್ರತಿ ಜನಪರ ಮಸೂದೆಗಳು ಜನಸಾಮಾನ್ಯರಿಗೆ ಸಿಗದಂತೆ ತಡೆಯುವ ಶಕ್ತಿಗಳಿವೆ. ಇಲ್ಲಿಯವರೆಗೆ, ತಮ್ಮ ಗಂಡು ಮಕ್ಕಳನ್ನು ಉತ್ತರಾಧಿಕಾರಿಯಂತೆ ತಯಾರಿ ಮಾಡುತ್ತಿದ್ದವರು, ಈಗ ಹೆಣ್ಣು ಮಕ್ಕಳನ್ನು ಸಜ್ಜುಗೊಳಿಸಬಹುದು.  ಈ ರೀತಿಯ, ಮಹಿಳಾ ಆಯಾಮದ ಕುಟುಂಬ ರಾಜಕಾರಣಕ್ಕೆ ಮಾರ್ಗ ದೊರಕಿಸಿ ಕೊಟ್ಟರೆ, ಮಹಿಳಾ ಮೀಸಲಾತಿಯ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ.  ಹಣ ಮತ್ತು ಪ್ರಭಾವ ಎಲ್ಲಿಯವರೆಗೆ ನಮ್ಮ ರಾಜಕಾರಣವನ್ನು ನಿಯಂತ್ರಿಸುತ್ತದೋ, ಅಲ್ಲಿಯವರೆಗೆ ರಾಜಕೀಯ ಕ್ಷೇತ್ರ  ಪ್ರಜಾಸತ್ತೆಯಾಗಿರದು.

ನಮ್ಮ ದೇಶದ ಹೆಣ್ಣು ಮಕ್ಕಳ ಮತ್ತು ಸ್ತ್ರಿಪರ ಮನಸ್ಸುಗಳ ನಿರಂತರ ಹೋರಾಟದ ಫಲವಾಗಿ ಈ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ಇದು ಯಾವುದೇ ರಾಜಕೀಯ ಪಕ್ಷದ ಭಿಕ್ಷೆಯಲ್ಲ. ಜನಸಂಖ್ಯೆಗೆ ಅನುಗುಣವಾಗಿ, 50% ಮಹಿಳೆಯರು ಇಂದು ರಾಜಕೀಯದಲ್ಲಿ ಗುರುತಿಸಿ ಕೊಳ್ಳಬೇಕಾಗಿತ್ತು. ಒಂದುವೇಳೆ ನಮ್ಮ ರಾಜಕೀಯ ಪಕ್ಷಗಳು ಮಹಿಳಾಪರ ನಿಲುವು ಹೊಂದಿದ್ದರೆ, ಈ ಮಸೂದೆ ಅಂಗೀಕಾರವಾಗುವ ಮೊದಲೇ, ತಮ್ಮ ಪಕ್ಷದ ಹಂತದಲ್ಲಿಯೇ ಮೀಸಲಾತಿ ಒದಗಿಸುತ್ತಿದ್ದವು. ಅಂತೂ, ಗತಕಾಲದ ಕಹಿಗಳನ್ನು ನುಂಗಿಕೊಂಡು, ಇಂದು ದೇಶದಲ್ಲಿ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡ ಮಹಿಳಾ ಕಾರ್ಯಕರ್ತರು, ಸೀಟುಹಂಚಿಕೆಯಲ್ಲಿ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ, ಅತ್ಯಂತ ಪಾರದರ್ಶಕವಾಗಿ ಪಕ್ಷದಿಂದ ಸ್ಪರ್ಧಿಸುವ ಸೀಟು ಸಿಗುವಂತೆ ನೋಡಿಕೊಂಡರೆ ಮತ್ತು ಅವರನ್ನು ನಿಸ್ವಾರ್ಥವಾಗಿ ಬೆಂಬಲಿಸಿದರೆ, ಈ ಮಸೂದೆ ತನ್ನ ಸಾರ್ಥಕತೆ ಪಡೆಯುತ್ತದೆ.

ಡಾ.ಜ್ಯೋತಿ

ಇಂಗ್ಲಿಷ್‌ ಸಾಹಿತ್ಯದಲ್ಲಿ ಡಾಕ್ಟರೇಟ್‌ ಪಡೆದಿರುವ ಇವರು ಪ್ರಸಕ್ತ, ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ವೈಚಾರಿಕ ಲೇಖನಗಳು, ಸಣ್ಣ ಕಥೆಗಳು, ವಿಮರ್ಶಾ ಬರಹಗಳು ಮತ್ತು ಅನುವಾದಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ.

ಇದನ್ನೂ ಓದಿ- ಮಹಿಳಾ ಮೀಸಲಾತಿ ಮಸೂದೆ: ಸಂಭ್ರಮದ ನಡುವೆಯೇ ನೂರೆಂಟು ಅನುಮಾನಗಳು

Related Articles

ಇತ್ತೀಚಿನ ಸುದ್ದಿಗಳು