Sunday, April 27, 2025

ಸತ್ಯ | ನ್ಯಾಯ |ಧರ್ಮ

ಆನೆ ಧಾಮದ ಕಾಮಗಾರಿ ಇನ್ನು ಎರಡು ತಿಂಗಳಲ್ಲಿ ಆರಂಭ – ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ಹಾಸನ ಕೊಡಗು ಮತ್ತು ಚಿಕ್ಕಮಗಳೂರು ಭಾಗದಲ್ಲಿ ಕಾಡಾನೆಗಳಿಂದ ಸಂಭವಿಸುತ್ತಿರುವ ಜೀವಹಾನಿ, ಬೆಳೆ ಹಾನಿ ತಡೆಯಲು ಭದ್ರಾ ಅಭಯಾರಣ್ಯದಲ್ಲಿ ನಿರ್ಮಿಸಲುದ್ದೇಶಿಸಿರುವ ಸಾಫ್ಟ್ ರಿಲೀಸ್ ಸೆಂಟರ್ – ಆನೆ ಧಾಮದ ಕಾಮಗಾರಿ ಇನ್ನು ಒಂದೂವರೆ-ಎರಡು ತಿಂಗಳಲ್ಲಿ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದಲ್ಲಿಂದು (ಏ.25) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದ್ದು, 53 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು, ಡಿಪಿಆರ್ ಸಿದ್ಧವಾಗುತ್ತಿದೆ ಎಂದರು.ಪ್ರತಿ ವರ್ಷ ಸರಾಸರಿ 50-60 ಜನರು ವನ್ಯಜೀವಿ- ಮಾನವ ಸಂಘರ್ಷದಿಂದ ಮೃತಪಡುತ್ತಿದ್ದಾರೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಜನರ ಜೀವ ರಕ್ಷಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು.

6225.31 ಎಕರೆ ಅರಣ್ಯ ಒತ್ತುವರಿ ತೆರವು
ರಾಜ್ಯದಲ್ಲಿ ಕಳೆದ 21 ತಿಂಗಳ ಅವಧಿಯಲ್ಲಿ 1203 ಪ್ರಕರಣಗಳಲ್ಲಿ 6225.31 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಲಾಗಿದೆ. ಇದರ ಜೊತೆಗೆ 15422 ಎಕರೆ ಜಮೀನನ್ನು ಅರಣ್ಯ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು. ಅರಣ್ಯದಂಚಿನಲ್ಲಿ ಬಿದಿರು ಬೆಳೆಸಿದರೆ ಅದು ಜೈವಿಕ ಮತ್ತು ಸ್ವಾಭಾವಿಕ ಬ್ಯಾರಿಕೇಡ್ ನಂತೆ ಕಾರ್ಯ ನಿರ್ವಹಿಸುತ್ತದೆ. ಅರಣ್ಯ ಒತ್ತುವರಿ ತಡೆಯುತ್ತದೆ. ಜೊತೆಗೆ ಆನೆಗಳಿಗೆ ಆಹಾರವೂ ಆಗುತ್ತದೆ. ಇದರಿಂದ ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಸಹಾಯವಾಗುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಿದಿರು ಬೆಳೆಸಲು ಸೂಚನೆ ನೀಡಲಾಗಿದೆ ಎಂದರು.

ಎಚ್.ಎಂ.ಟಿ. ಪ್ರಕರಣ; ಮೇನಲ್ಲಿ ವಿಚಾರಣೆ
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 443 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ತಡೆಯಲಾಗಿದ್ದು, ಈ ಅರಣ್ಯ ಜಮೀನು ಹಿಂಪಡೆಯಲು ಕಾನೂನು ಹೋರಾಟ ಮಾಡಲಾಗುತ್ತಿದೆ. ಮುಂದಿನ ತಿಂಗಳು ಪ್ರಕರಣ ವಿಚಾರಣೆಗೆ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಈಶ್ವರಖಂಡ್ರೆ ತಿಳಿಸಿದರು.ಚಾರಣ ಪಥಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಆನ್ ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಕಳೆದ ವರ್ಷ ಡಿ.ಆರ್.ಎಫ್.ಓ. ಹಂತದವರೆಗಿನ ಅರಣ್ಯ ಸಿಬ್ಬಂದಿಯನ್ನು ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ವರ್ಗಾವಣೆ ಮಾಡಲಾಗಿದೆ. ಅರಣ್ಯ ಅಪರಾಧಗಳಿಗೆ ಆನ್ ಲೈನ್ ಎಫ್.ಐ.ಆರ್ ದಾಖಲಿಸಲು ಗರುಡಾಕ್ಷಿ ವ್ಯವಸ್ಥೆ ಜಾರಿ ಮಾಡಲಾಗಿದೆ. ಒಟ್ಟಾರೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗುತ್ತಿದೆ ಎಂದೂ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page