Monday, July 28, 2025

ಸತ್ಯ | ನ್ಯಾಯ |ಧರ್ಮ

ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿ ಕುಂಠಿತ- ಸಂಸದ ಶ್ರೇಯಸ್ ಪಟೇಲ್

ಹಾಸನ : ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75  ಕಾಮಗಾರಿಯ ವೇಗ ಕುಂಠಿತಗೊಂಡಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.

 ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿಯನ್ನು ಜುಲೈ ಅಂತ್ಯದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಮುಂಗಾರು ನಿರೀಕ್ಷಿತ ಸಮಯಕ್ಕಿಂತ ಒಂದು ತಿಂಗಳು ಮೊದಲೇ ಆರಂಭವಾದ ಕಾರಣ ಹಾಗೂ ಹಲವು ಕಡೆ ಗುಡ್ಡ ಕುಸಿತದಿಂದ ಕಾಮಗಾರಿಗೆ ಅಡ್ಡಿಯಾಗಿದ್ದು, ಕೆಲಸದಲ್ಲಿ ವಿಳಂಬ ಉಂಟಾಗಿದೆ ಎಂದು ಹೇಳಿದರು.

 ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಯಾವುದೇ ಅಡಚಣೆ ಇಲ್ಲದೆ, ದಿನರಾತ್ರಿ ಶ್ರಮಿಸುತ್ತಿದ್ದಾರೆ. ಕುಸಿಯುತ್ತಿರುವ ಗುಡ್ಡ ಪ್ರದೇಶಗಳಲ್ಲಿ ಸುಮಾರು ₹40 ಕೋಟಿ ವೆಚ್ಚದ ತಡೆಗೋಡೆ ಕಾಮಗಾರಿಗೆ ಈಗಾಗಲೇ ಟೆಂಡರ್ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಇದರಿಂದ ಶಾಶ್ವತ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದರು.

ಹೆದ್ದಾರಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಮಾಜಿ ಸಚಿವ ನಾಗರಾಜ ಶೆಟ್ಟಿ ಸಂಸದರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.ನಂತರ ಮಾದ್ಯಮದವರೊಂದಿಗೆ ಮಾತನಾಡಿ, “ನಾನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗಿನಿಂದ ಈ ರಸ್ತೆಯ ಕಾಮಗಾರಿ ಪೂರ್ಣಗೊಳಿಸಲು ಹಲವಾರು ಬಾರಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಗಳನ್ನು ಕರೆದರೂ ಫಲಿತಾಂಶ ಸಿಗಲಿಲ್ಲ. ಗುತ್ತಿಗೆದಾರರು ಇನ್ನೂ 13 ವರ್ಷ ಹಿಂದಿನ ದರದಂತೆ ಕಾಮಗಾರಿಯನ್ನು ಮುಂದುವರಿಸುತ್ತಿದ್ದು, ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆ ಈ ಕಾಮಗಾರಿಯ ಗುಣಮಟ್ಟಕ್ಕೂ ದುಪ್ಪಟ್ಟು ಪ್ರಭಾವ ಬೀರಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.

“ಈ ರಸ್ತೆಯ ವಿಳಂಬದಿಂದ ಮಂಗಳೂರು ಬಂದರಿನ ಶೇಕಡಾ 50ರಷ್ಟು ವಾಣಿಜ್ಯ ಚಟುವಟಿಕೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ರಾಜ್ಯದ ಪ್ರಮುಖ ವಸ್ತುಗಳು ಈಗ ಚೆನ್ನೈ ಮತ್ತು ಇತರ ಬಂದರುಗಳ ಮೂಲಕ ಸಾಗಾಟವಾಗುತ್ತಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಬಂದರು ನಗರಿಯ ಸಂಪರ್ಕದ ಈ ರಸ್ತೆ ಸ್ಥಗಿತಗೊಂಡರೆ, ಹೀಗಾಗಿ ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ, ಮಧ್ಯವರ್ತಿ ಪಾತ್ರವಹಿಸಲು ನಾನು ಸಿದ್ಧನಿದ್ದೇನೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಅಧಿಕಾರಿ ಸೈಯದ್ ಅಮಾನುಲ್ಲಾ, ವ್ಯವಸ್ಥಾಪಕ ವಿಪಿನ್ ಶರ್ಮಾ, ಡಿ ವೈ ಎಸ್ ಪಿ ಪ್ರಮೋದ್ ಕುಮಾರ್, ತಹಶೀಲ್ದಾರ್ ಮೋಹನ್, ಕಾಂಗ್ರೆಸ್ ಮುಖಂಡರಾದ ಸೈಯದ್ ಮುಫೀಸ್, ಬೈಕೆರೆ ದೇವರಾಜ್, ಉದಯ್ ಹೆಚ್.ಎಚ್. ಕಲ್ಗನೆ ಪ್ರಶಾಂತ್, ಕಲ್ಗನೆ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗುಣಮಟ್ಟದ ಕಾಮಗಾರಿಗೆ ನಿರಂತರ ಭೇಟಿ : ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿ ಗುಣಮಟ್ಟವಾಗಿ ನಡೆಯಬೇಕು ಹಾಗೂ ಅತಿ ಶೀಘ್ರವಾಗಿ ಮುಗಿಯಬೇಕು ಈ ಕಾರಣದಿಂದಾಗಿ ನಾನು ಪದೇ ಪದೇ ಭೇಟಿ ನೀಡುತ್ತಿದ್ದೇನೆ ವೀಕ್ಷಿಸುತ್ತಿದ್ದೇನೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇನೆ. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ವಿಘ್ನಗಳನ್ನು ನಿವಾರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದ್ದಾರೆ.

ಮಂಜರಾಬಾದ್ ದರ್ಗಾ ಸಂಪರ್ಕಕ್ಕೆ ರಸ್ತೆ ನಿರ್ಮಾಣಕ್ಕೆ ಸೂಚನೆ : ಮಂಜರಾಬಾದ್ ದರ್ಗಾ ಸಂಪರ್ಕದ ರಸ್ತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಕಡಿತಗೊಂಡಿದ್ದು ಇದರಿಂದ ಬಹಳ ತೊಂದರೆಯಾಗುತ್ತಿದೆ ಎಂಬ ಪುರಸಭೆ ಮಾಜಿ ಅಧ್ಯಕ್ಷ ಸೈಯದ್ ಮುಫೀಜ್ ಸಂಸದರ ಗಮನಕ್ಕೆ ತಂದ ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಸಂಸದ ಶ್ರೇಯಸ್ ಪಟೇಲ್ ಸ್ಥಳದಲ್ಲೇ ಇದ್ದ  ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಂಪರ್ಕಕ್ಕೆ ರಸ್ತೆ ಮಾಡಿಸಿ ಕೊಡುವಂತೆ ಸೂಚಿಸಿದರು ಇದಕ್ಕೆ ಪ್ರತಿಕ್ರಿಸಿ ರಸ್ತೆ ಮಾಡಿಕೊಡುವ ಭರವಸೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿದರು.

ರಿಡ್ಜ್ ಪಾಯಿಂಟ್ ನಿರ್ಮಾಣಕ್ಕೆ ಮನವಿ: ಮಂಜರಾಬಾದ್ ದರ್ಗಾ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದ ಪ್ರದೇಶ ಐತಿಹಾಸಿಕವಾಗಿದ್ದು, ಇಲ್ಲಿ ಬೀಳುವ ಮಳೆಯ ನೀರು ಪಶ್ಚಿಮ ಬಂಗಾಳ ಮತ್ತು ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಈ ಪ್ರಮುಖ ಸ್ಥಳದಲ್ಲಿ ರಿಡ್ಜ್ ಪಾಯಿಂಟ್ ಸ್ಥಾಪಿಸಲು ಅನುಮತಿ ನೀಡುವಂತೆ ಹಾಗೂ ಹೆದ್ದಾರಿ ಅಧಿಕಾರಿಗಳ ಸಹಕಾರ ಒದಗಿಸುವಂತೆ ಮಂಜರಾಬಾದ್ ದರ್ಗಾದ ಮಾಜಿ ಅಧ್ಯಕ್ಷ ಮಲ್ನಾಡ್ ಮೆಹಬೂಬ್ ಮನವಿ ಸಲ್ಲಿಸಿದರು. ಇದಕ್ಕೆ ಬೆಂಬಲವಾಗಿ ಹೆದ್ದಾರಿ ಗುತ್ತಿಗೆದಾರರಿಗೆ ಸಹಕಾರ ನೀಡುವಂತೆ ಸಂಸದ ಶ್ರೇಯಸ್ ಪಟೇಲ್ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ರಿಡ್ಜ್ ಪಾಯಿಂಟ್ ನಿರ್ಮಾಣವಾಗುವುದು ವಿಶೇಷ ಆಕರ್ಷಣೆಯಾಗಲಿದೆ.

ಅನಾರೋಗ್ಯದಲ್ಲೂ ಕರ್ತವ್ಯ ನಿಭಾಯಿಸಿದ ಸಂಸದ : ಆರೋಗ್ಯ ಸರಿಯಿಲ್ಲದಿದ್ದರೂ ಸಂಸದ ಶ್ರೇಯಸ್ ಪಟೇಲ್ ತಮ್ಮ ನಿಗದಿತ ಕಾರ್ಯಕ್ರಮವನ್ನು ಕೈಬಿಡದೆ, ಕರ್ತವ್ಯನಿಷ್ಠೆಯಿಂದ ಪಾಲ್ಗೊಂಡಿದ್ದಾರೆ. ಬೆಳಿಗ್ಗೆ ಅನಾರೋಗ್ಯದಿಂದಾಗಿ ಅವರು ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದ ಬಳಿಕ, ಕೆಲಕಾಲ ವಿಶ್ರಾಂತಿ ಮಾಡಿ, ಪೂರ್ವನಿಗದಿತ ಕಾರ್ಯಕ್ರಮದಂತೆ ಹೆದ್ದಾರಿ ವೀಕ್ಷಣೆಗೆ ತೆರಳಿದರು. ಕೈಗೆ ವೈದ್ಯಕೀಯ ಚಿಕಿತ್ಸೆ ಪಡೆದಿರುವುದಕ್ಕೆ ಸಾಕ್ಷಿಯಾಗಿ ಬ್ಯಾಂಡೇಜ್ ಗೋಚರಿಸಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page