Monday, June 17, 2024

ಸತ್ಯ | ನ್ಯಾಯ |ಧರ್ಮ

ಸಾವು ಬದುಕಿನ ನಡುವೆ ಕಾರ್ಮಿಕರು; ಭಾಷಣದಲ್ಲಿ ಮೈಮರೆತ ವಿಶ್ವಗುರುಗಳು

ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಿಸುತ್ತಿರುವ ಸಿಲ್ಕ್ಯಾರಾ ಹೆದ್ದಾರಿ ಸುರಂಗದ ಕಾಮಗಾರಿ ಸಂದರ್ಭದಲ್ಲಿ ಭೂಕುಸಿತವಾಗಿ 41 ಜನ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡು ಸಾವಿನ ಭಯದಲ್ಲಿ ಬದುಕಿನ ಆತಂಕದ ಕ್ಷಣಗಳನ್ನು ಕಳೆಯುತ್ತಿದ್ದು ಕಳೆದ 11 ದಿನಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೇಂದ್ರ ಸರಕಾರದ ಯೋಜನೆಯಂತೆ ಚಾರದಾಮ್ ಸರ್ವಋತು ರಸ್ತೆ ಯೋಜನೆಯಡಿ ಉತ್ತರಕಾಶಿಯಿಂದ ಯಮನೋತ್ರಿಗೆ ಹೋಗುವ ನಡುವಿನ ಮಾರ್ಗದಲ್ಲಿ  4.5 ಕಿಮಿ ಉದ್ದದ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದಾಗ ನವೆಂಬರ್ 12 ರಂದು ಈ ಭೀಕರ ದುರಂತ ನಡೆದಿದೆ. ರಕ್ಷಣಾ  ಕಾರ್ಯಾಚರಣೆ ಜಾರಿಯಲ್ಲಿದೆಯಾದರೂ ಇನ್ನೂ ಫಲಕೊಟ್ಟಿಲ್ಲ.

ಹಿಮಾಲಯದ ತಪ್ಪಲಲ್ಲಿ, ಅತ್ಯಂತ ಸಡಿಲವಾದ ಭೂತಳ ರಚನೆ ಇರುವಲ್ಲಿ ಇಂತಹ ಯೋಜನೆಗಳು ಅಪಾಯಕಾರಿ ಎಂದು ಭೂಗರ್ಭ ಶಾಸ್ತ್ರಜ್ಞರು, ಪರಿಸರವಾದಿಗಳು ಮೊದಲೇ ಎಚ್ಚರಿಸಿದ್ದರು. ಆದರೂ ಕಡುಕಷ್ಟಕರವಾದ ಚಾರ್ದಾಮ್ ಯಾತ್ರೆಯನ್ನು ಸರಳಗೊಳಿಸಲು ಭೂಗರ್ಭವನ್ನು ಬಗೆದು ಸುರಂಗ ಮಾರ್ಗವನ್ನು ನಿರ್ಮಿಸುವ ಅನರ್ಥಕಾರಿ ಯೋಜನೆಯನ್ನು ಹಮ್ಮಿಕೊಂಡಿದೆ. 

ಸಿಲ್ಕ್ಯಾರಾ ಸುರಂಗ ದುರಂತ

ಸಂಘಿಗಳು ಈ ಭೂಕುಸಿತ ದುರಂತಕ್ಕೆ ಕಾರಣವಾದ ಅಸುರಕ್ಷಿತ ಯೋಜನೆಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಆದರೆ ಅದರ ಬದಲಾಗಿ ಭಾವನಾತ್ಮಕ ಕತೆಯೊಂದನ್ನು ಹರಿಬಿಡುತ್ತಿದ್ದಾರೆ. ಅದೇನೆಂದರೆ “ಈ ಸುರಂಗದ ಕಾಮಗಾರಿ ಆರಂಭವಾಗುವ  ಜಾಗದಲ್ಲಿ ಭೂಕನಾಗ ಎನ್ನುವ ಚಿಕ್ಕ ದೇವಸ್ಥಾನವಿತ್ತು. ಕಾರ್ಮಿಕರು ಪ್ರತಿದಿನ ಅದಕ್ಕೆ ನಮಸ್ಕರಿಸಿ ಕೆಲಸಕ್ಕೆ ಹೋಗುತ್ತಿದ್ದರಿಂದ ಯಾವುದೇ ಅವಘಡ ಸಂಭವಿಸಿರಲಿಲ್ಲ. ಆದರೆ ಯಾವಾಗ ಕನ್ ಸ್ಟ್ರಕ್ಷನ್ ಕಂಪನಿಯವರು ಈ ದೇವಸ್ಥಾನವನ್ನು ಡಿಮಾಲಿಶ್ ಮಾಡಿದರೋ ಆಗ ಭೂಕನಾಗ ದೇವರ ಕೋಪಕ್ಕೆ ಒಳಗಾಗಿ ಈ ದುರಂತ ಸಂಭವಿಸಿತು. ಈ ಅನಾಹುತಕ್ಕೆ ದೈವದ ಶಾಪವೇ ಕಾರಣವಾಗಿದೆ.” ಹೀಗೊಂದು ಕಲ್ಪನೆಯ ಕಥೆಯನ್ನು ಹುಟ್ಟುಹಾಕುವ ಮೂಲಕ ದೇವರ ಮಹಿಮೆಯನ್ನು ಎತ್ತಿಹಿಡಿದು ಭಕ್ತಾದಿಗಳಲ್ಲಿ ಭಾವತೀವ್ರತೆಯನ್ನು ಹುಟ್ಟು ಹಾಕಲು ಪ್ರಯತ್ನಿಸಲಾಗುತ್ತಿದೆ. ಈ ದುರಂತಕ್ಕೆ ಅವೈಜ್ಞಾನಿಕ ಯೋಜನೆ ಕಾರಣ ಎಂಬ ಆರೋಪವನ್ನು ಮರೆಮಾಚಲು ದೇವರ ಕೋಪದ ಕಲ್ಪನೆ ಹರಿಬಿಡಲಾಗಿದೆ. ದೈವದ ಸಿಟ್ಟು ಇರುವುದೇ ಆಗಿದ್ದರೆ ಅದು ಗುತ್ತಿಗೆದಾರರ ಮೇಲಿರಬೇಕಿತ್ತು. ದೇವಸ್ಥಾನವನ್ನು ತೆರವು ಗೊಳಿಸಿದವರಿಗೆ ತೊಂದರೆ ಆಗಬಹುದಾಗಿತ್ತು. ಇಲ್ಲವೇ ಈ ರೀತಿಯ ಅವೈಜ್ಞಾನಿಕ ಪರಿಸರ ವಿರೋಧಿ ಯೋಜನೆಯನ್ನು ರೂಪಿಸಿದವರ ಪ್ರಾಣಕ್ಕೆ ಸಂಚಕಾರ ಬರಬಹುದಾಗಿತ್ತು. ಆದರೆ ದಿನವೂ ಪ್ರಾರ್ಥನೆ ಸಲ್ಲಿಸಿಯೇ ಕೆಲಸಕ್ಕೆ ಹೋಗುತ್ತಿದ್ದ ಪಾಪದ ಶ್ರಮಜೀವಿಗಳ ಮೇಲೆ ಯಾಕೆ ದೈವ ಮುನಿಸಿ ಕೊಳ್ಳಬೇಕು? ಕಾರ್ಮಿಕರ ಜೀವಕ್ಕೆ ಅಪಾಯ ತಂದೊಡ್ಡಬೇಕಿತ್ತು?. ಪ್ರಶ್ನೆ ಕೇಳುವವರಿಗಿಂತ ಭಾವಪ್ರಚೋದನೆಗೆ ಒಳಗಾಗುವ ಭಕ್ತರೇ ಹೆಚ್ಚಿರುವಾಗ ಇಲ್ಲಿ ದೈವವೂ ನಿರುತ್ತರ!

ಹೋಗಲಿ, ದೇಶಾದ್ಯಂತ ದೀಪಾವಳಿಯ ಸಂಭ್ರಮದ ಆಚರಣೆಯ ದಿನ ಹೀಗೊಂದು ದುರಂತ ನಡೆಯಿತಲ್ಲಾ, ಅದಕ್ಕೆ ತಕ್ಷಣ ಸ್ಪಂದಿಸಬೇಕಿದ್ದ ವಿಶ್ವಗುರುಗಳು ಯಾಕೆ ಸುಮ್ಮನಿದ್ದರು? ಪ್ರಾಣಾಪಾಯದಲ್ಲಿರುವ ಕಾರ್ಮಿಕರ ರಕ್ಷಣಾ ಕಾರ್ಯದ ಕೆಲಸ ಅಧಿಕಾರಿಗಳು ಹಾಗೂ ಗುತ್ತಿಗೆದಾರರದ್ದು ಎಂದುಕೊಂಡ ಪ್ರಧಾನಿಗಳು ತಮಗೂ ಈ ದುರಂತಕ್ಕೂ ಸಂಬಂಧವೇ ಇಲ್ಲವೆಂಬಂತೆ ಯಾಕೆ ಮೌನವಹಿಸಿದರು? ಯಾಕೆಂದರೆ ಅಲ್ಲಿ ಸಾವಿನ ವಿರುದ್ದ ಬದುಕಲು ಹೋರಾಡುತ್ತಿದ್ದವರು ದೊಡ್ಡ ಅಧಿಕಾರಿಗಳಲ್ಲ, ಬಂಡವಾಳಶಾಹಿಗಳೂ ಅಲ್ಲಾ, ಕಾರ್ಪೋರೇಟ್ ಕಂಪನಿಯವರಂತೂ ಮೊದಲೇ ಅಲ್ಲ.‌ ಕೇವಲ ಕಾರ್ಮಿಕರು. ಅಂತವರ ಜೀವಕ್ಕೆ ವಿಶ್ವಗುರುಗಳ ಒಡ್ಡೋಲಗದಲ್ಲಿ ಯಾವ ಬೆಲೆಯೂ ಇಲ್ಲ. ಗಾಯಗೊಂಡರೆ ಇಲ್ಲವೇ ಸತ್ತರೆ ಒಂದಿಷ್ಟು ಪರಿಹಾರ ಕೊಟ್ಟು ಬೇರೆ ಕಾರ್ಮಿಕರಿಂದ ಕಾಮಗಾರಿ ಮುಂದುವರೆಸಿದರಾಯ್ತು ಎನ್ನುವುದೇ ಆಳುವ ವರ್ಗಗಳ ಧೋರಣೆ. ನಿಜವಾದ ಮಾನವೀಯತೆ ಇರುವ ಜನನಾಯಕ ತನ್ನದೇ ದೇಶದಲ್ಲಿ, ತನ್ನದೇ ಯೋಜನೆಯಲ್ಲಿ ದುರಂತ ಸಂಭವಿಸಿದಾಗ ಚುನಾವಣಾ ಭಾಷಣ ಮಾಡುತ್ತಾ ಸುತ್ತುವುದಿಲ್ಲ. ಕ್ರಿಕೆಟ್ ಆಟ ನೋಡಿ ಆನಂದಿಸುವುದಿಲ್ಲ. ಎಲ್ಲ ಬಿಟ್ಟು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕಿತ್ತು. ಕಾರ್ಮಿಕರ ಕುಟುಂಬಗಳಿಗೆ ಸಾಂತ್ವನ ಹೇಳಬೇಕಿತ್ತು. ಆದರೆ ಈ ದೇಶವನ್ನಾಳುತ್ತಿರುವುದು ನೀರೋ ಮಾದರಿಯ ದೊರೆ ದೇಶಕ್ಕೆ ಬೆಂಕಿ ಬಿದ್ದಾಗ ನೀರೋ ದೊರೆ ಪಿಟೀಲು ಬಾರಿಸುತ್ತಿದ್ದರೆ, ನಮ್ಮ ವಿಶ್ವಗುರು ದೊರೆ ಚುನಾವಣಾ ಭಾಷಣ ಮಾಡುತ್ತಿದ್ದರು. ಇದು ನಿಜಕ್ಕೂ ಅಕ್ಷಮ್ಯ. 

ರಕ್ಷಣಾ ಕಾರ್ಯ

ಇಷ್ಟಕ್ಕೂ ಚಾರ್ದಾಮ್ ಯಾತ್ರೆ ಎನ್ನುವುದು ಹಿಂದೂ ಶ್ರದ್ದಾ ಭಕ್ತಿಯ ಸ್ಥಳವಾಗಿದೆ. ಅನೇಕ ಅಡೆತಡೆ ಅಪಾಯಗಳನ್ನು ಎದುರಿಸಿಯೇ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಪ್ರತಿವರ್ಷವೂ ಹೋಗುತ್ತಾರೆ. ಜನರಿಗೆ ಬದುಕು ಕಟ್ಟಿಕೊಡುವುದಕ್ಕಿಂತಾ ಅವರ ಭಾವನೆಗಳನ್ನೇ ಉದ್ದೀಪಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಹಾಗೂ ಅದರ ಹಿಂದಿರುವ ಸಂಘಕ್ಕೆ ಬೇಕಿರುವುದು ಇಂತಹ ದೇವರು ಧರ್ಮ ಭಾವ ಭಕ್ತಿಯನ್ನು ಪ್ರಚೋದಿಸುವ ಸಂಗತಿಗಳೇ. ಅವರಿಗೆ ದೇಶದ ಅಭಿವೃದ್ಧಿ ಅಂದರೆ ಮಂದಿರಗಳ ನಿರ್ಮಾಣವೆಂಬುದು ಆದ್ಯತೆಯ ಕಾರ್ಯಗಳಾಗಿವೆ. ರಾಮಮಂದಿರ ನಿರ್ಮಾಣದ ಜೊತೆಗೆ ಜನತೆಯ ಭಾವನೆಗಳನ್ನು ಕೇಂದ್ರೀಕರಿಸುವ ಕಾರ್ಯವೇ ಕೇಂದ್ರ ಸರಕಾರದ ಮೊದಲ ಸಾಧ್ಯತೆಯಾಗಿದೆ. ಚಾರ್ದಾಮ್ ಯಾತ್ರೆಯ ಕುರಿತು ಭಕ್ತರ ಭಾವನೆಗಳನ್ನೇ ಅಧಿಕಾರದ ಮೆಟ್ಟಲುಗಳಾಗಿ ಬಳಸಲು ಈ ಸರ್ವಋತು ಸುರಂಗ ಮಾರ್ಗ ಯೋಜನೆಯನ್ನು ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ. ಪರಿಸರದ ವಿರುದ್ಧವಾಗಿ ನಡೆಯುವ ಯಾವುದೇ ಅಭಿವೃದ್ಧಿಗಳು ಪ್ರಕೃತಿ ಒಡ್ಡುವ ನಕಾರಾತ್ಮಕ ದುಷ್ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಭೂಕಂಪದ ಸಂಭವನೀಯತೆ ಹೆಚ್ಚಿರುವ ಸ್ಥಳದಲ್ಲಿ, ಭೂಗರ್ಭದ ಶಿಲಾರಚನೆ ಸಡಿಲವಾಗಿರುವ ಪರಿಸ್ಥಿತಿಯಲ್ಲಿ, ಭೂಕುಸಿತ ಹಾಗೂ ಪ್ರವಾಹದ ಅಪಾಯ ಸದಾ ಇರುವ ಭೂಪ್ರದೇಶದಲ್ಲಿ ಈ ರೀತಿಯ ಅವೈಜ್ಞಾನಿಕ ಬೃಹತ್ ಯೋಜನೆಗಳು ಅನಗತ್ಯವಾಗಿತ್ತು. ಆದರೆ ಜನರ ಧಾರ್ಮಿಕ ಭಾವನೆಗಳ ಮೇಲೆಯೇ ತನ್ನ ಅಧಿಕಾರವನ್ನು ಪ್ರತಿಷ್ಠಾಪಿಸಿಕೊಂಡಿರುವ ಸರಕಾರಕ್ಕೆ ಇವೆಲ್ಲವೂ ಬೇಕಿತ್ತು. 

ಹೀಗಾಗಿ.. ಕಾಮಗಾರಿ ಸಮಯದಲ್ಲೇ ಭೂಕುಸಿತ ಆರಂಭವಾಗಿದೆ. ಮುಂದೆಯೂ ಅನೇಕ ಅಪಾಯಗಳು, ಅಗಣಿತ ದುರಂತಗಳೂ ಕಾಯ್ದಿವೆ. ಆದರೂ ಜನರ ತೆರಿಗೆಯ ಹಣದಿಂದ ಈ ರೀತಿಯ ಅವೈಜ್ಞಾನಿಕ ಕಾಮಗಾರಿಗಳು ಜಾರಿಯಲ್ಲಿವೆ. ದುರಂತ ಸಂಭವಿಸಿದರೂ ನೀರೋ ದೊರೆ ಭಾಷಣದ ಪಿಟೀಲು ಬಾರಿಸುವುದರಲ್ಲಿ ನಿರತವಾಗಿದ್ದಾರೆ. 

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-ಕಾಂಗ್ರೆಸ್ಸಿಗರು ಹೀಗೇಕೆ?

Related Articles

ಇತ್ತೀಚಿನ ಸುದ್ದಿಗಳು