Friday, June 14, 2024

ಸತ್ಯ | ನ್ಯಾಯ |ಧರ್ಮ

ವರ್ಲ್ಡ್‌ ಕಪ್ | ಗೆದ್ದರೆ ಮೋದಿ ಪ್ರಭಾವ; ಸೋತರೆ..?

ಅಕಸ್ಮಾತ್ ಭಾರತ ತಂಡ ಗೆದ್ದಿದ್ದೇ ಆಗಿದ್ದರೆ ಆ ಗೆಲುವೂ ಸಹ ಸಂಘ ಪರಿವಾರದ ರಾಜಕೀಯ ಲಾಭದ ಸರಕಾಗುತ್ತಿತ್ತು. ಪಾರ್ಲಿಮೆಂಟ್ ಎಲೆಕ್ಷನ್ ಮುಂದಿರುವುದರಿಂದ ಈ ಗೆಲುವನ್ನೇ ನೆಪವಾಗಿಟ್ಟುಕೊಂಡು ಹುಸಿ ದೇಶಪ್ರೇಮದ ಭಾವತೀವ್ರತೆಯ ಉನ್ಮಾದವನ್ನು ಸೃಷ್ಟಿಸುವ ಸಂಭವನೀಯತೆಗಳೇ ಹೆಚ್ಚಿದ್ದವು. ಅದರರ್ಥ ಟೀಂ ಇಂಡಿಯಾದ ಸೋಲನ್ನು ಬಯಸುತ್ತೇವೆಂಬುದಲ್ಲ ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ವರ್ಲ್ಡ್‌ ಕಪ್ ಫೀವರ್ ಮುಗಿದಿದೆ. ಟೀಮ್ ಇಂಡಿಯಾ ಆಡಿದ ಎಲ್ಲಾ ಆಟಗಳನ್ನು ಗೆದ್ದು ಅಂತಿಮ ಆಟದಲ್ಲಿ ಸೋತಿದೆ. ಆಟ ಅಂದ ಮೇಲೆ ಸೋಲು ಗೆಲುವು ಸಹಜ. ಆದರೆ ಆಟದಲ್ಲಿ ಗೆದ್ದರೆ ಅದರ ಯಶಸ್ಸು ಪ್ರಧಾನಿ ಮೋದಿಯ ಪ್ರಸಾದ ಎಂದು ಸಂಭ್ರಮಿಸುವ, ಪ್ರಚಾರ ಪಡಿಸುವ ಭಕ್ತ ಪಡೆಯೇ ಭಾರತದಲ್ಲಿ ಬೇಕಾದಷ್ಟಿದೆ. ಅಕಸ್ಮಾತ್ ಭಾರತ ತಂಡ ವಿಶ್ವಕಪ್ ಗೆದ್ದಿದ್ದರೆ  ಮೋದಿಯವರು ಸ್ಟೇಡಿಯಂಗೆ ಕಾಲಿಟ್ಟಿದ್ದರಿಂದಲೇ ಭಾರತದ ಗೆಲುವು ಸುಲಭವಾಯ್ತು ಎಂದೂ ಟೀಂ ಇಂಡಿಯಾದ ಗೆಲುವನ್ನು ಮೋದಿಯವರ ಖಾತೆಗೆ ಜಮಾ ಮಾಡಿ ಮೋದಿ ಮೇನಿಯಾ ಸೃಷ್ಟಿಸುವ ಪ್ರಯತ್ನವನ್ನು ಸಂಘ ಪರಿವಾರದ ಅಂಗಗಳು ಗ್ಯಾರಂಟಿ ಮಾಡುತ್ತಿದ್ದವು. ಇತ್ತೀಚೆಗೆ ಓಲಂಪಿಕ್ ನಲ್ಲಿ ಹೆಚ್ಚು ಪದಕ ಗೆದ್ದಾಗಲೂ ಹೀಗೇ ಆಗಿತ್ತು. ಇವತ್ತು ಟೀಮ್ ಇಂಡಿಯಾ ಗೆದ್ದಿದ್ದರೂ ಅದೇ ಆಗುತ್ತಿತ್ತು. 

ಆದರೆ ಈಗ ಟೀಮ್ ಇಂಡಿಯಾ ಸೋತಿದೆ. ಇದರ ಹೊಣೆಯನ್ನೂ ಮೋದಿಯವರೇ ಹೊರಬೇಕಲ್ಲವೇ. ಅವರ ಕಾಲ್ಗುಣದ ಮಹಿಮೆಯಿಂದಲೇ ಗೆಲ್ಲುವ ಟೀಮಿಗೆ ಸೋಲಾಯಿತು ಎನ್ನಬಹುದಲ್ಲವೇ? ಹಾಗೇನಾದರೂ ಹೇಳಿದರೆ ಭಕ್ತರ ವಿರೋಧ ಎದುರಿಸಬೇಕಾಗುತ್ತದೆ. ಆದರೆ ಮೋದಿಯವರಿಂದಲೇ ಭಾರತದ ಕ್ರಿಕೆಟ್ ತಂಡಕ್ಕೆ ಸೋಲಾಗಿದೆ ಎಂಬುದೂ ಸತ್ಯ. ಇದನ್ನು ಭಕ್ತಾದಿ ಭಜನಾ ಮಂಡಳಿ ಒಪ್ಪದೇ ಹೋದರೂ ಪ್ರಜ್ಞಾವಂತರು ಒಪ್ಪಲೇಬೇಕಿದೆ. ಮೋದಿ ಹೆಸರಿನ ಮಹಿಮೆಯ ಗರಿಮೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗದ ಪ್ರತಿಫಲವೇ ಟೀಮ್ ಇಂಡಿಯಾದ ಸೋಲು.

ಬಹುಷಃ ಈ ರೀತಿಯ ಸೋಲನ್ನು ಭಾರತೀಯರು ಯಾರೂ ಊಹಿಸಿರಲಿಲ್ಲ. ಯಾಕೆಂದರೆ ಈ ಸಲದ ವಿಶ್ವಕಪ್ ಪಂದ್ಯದಲ್ಲಿ ಆಡಿದ ಅಷ್ಟೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಅಭೂತಪೂರ್ವ ಗೆಲುವನ್ನು ದಾಖಲಿಸಿತ್ತು. ಸೆಮಿಪೈನಲ್ ಕೂಡಾ ಗೆದ್ದುಕೊಂಡಿತ್ತು. ಪೈನಲ್ಲಿನಲ್ಲಿ ಗೆದ್ದ ಇದೇ ಆಸ್ಟ್ರೇಲಿಯಾ ತಂಡವನ್ನು ಲೀಗ್ ಹಂತದಲ್ಲಿ ಸೋಲಿಸಿತ್ತು. ಸೋಲೇ ಕಾಣದ ಭಾರತದ ಕ್ರಿಕೆಟ್ ತಂಡ ಕಟ್ಟ ಕಡೆಯ ಆಟದಲ್ಲಿ ಸೋತು ಇಡೀ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ನಿರಾಸೆಯ ಕಡಲಲ್ಲಿ ಮುಳುಗಿಸಿತು.

ಅರೆ, ಇಂಡಿಯಾ ತಂಡ ಸೋತಿದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರು ಹೇಗೆ ಕಾರಣರಾಗುತ್ತಾರೆ? ಎಂದು ಕೇಳಬಹುದು. ಗೆಲುವಾಗಿದ್ದರೆ ಹೇಗೆ ಮೋದಿ ಮಹಿಮೆ ಎನ್ನುತ್ತಿದ್ದರೋ ಹಾಗೆಯೇ ಸೋತಿದ್ದಕ್ಕೂ ಮೋದಿ ಕಾರಣ ಎಂಬುದೂ ಸಬೂಬಾಗಬಹುದಾಗಿತ್ತು. ಈ ರೀತಿಯ ಕುತರ್ಕಕ್ಕೂ ಸಕಾರಣ ಇದೆ. ಅದೇನೆಂದರೆ ಅವತ್ತೂ ಹೀಗೇ ಆಗಿತ್ತು. ಮೋದೀಜಿ ಖುದ್ದಾಗಿ ಹಾಜರಿದ್ದಾಗ ಚಂದ್ರಯಾನದ ಉಡಾವಣೆ ವಿಫಲವಾಯ್ತು. ಅವರ ಅನುಪಸ್ಥಿತಿಯಲ್ಲಿ ಯಶಸ್ವಿಯಾಯ್ತು. ಈಗಲೂ ಹಾಗೇನೇ ಅವರಿಲ್ಲದಾಗ ಎಲ್ಲಾ ಪಂದ್ಯ ಗೆದ್ದಿದ್ದ ಟೀಂ ಇಂಡಿಯಾ ಮೋದಿಯವರು ಹಾಜರಾದ ಮೇಲೆ ಸೋತೇ ಹೋಯಿತು. ಇದು ಮೋದಿ ಮಹಾತ್ಮರ ಕಾಲ್ಗುಣವಾ? ಕಾಕತಾಳೀಯವಾ? ಇಂತಹ ಅತಾರ್ಕಿಕ ಕಾರಣಗಳನ್ನು ಹೇಳಿ ಆಟಗಾರರ ಸೋಲನ್ನು ಪ್ರಧಾನಿಗಳ ತಲೆಗೆ ಕಟ್ಟಿದರೆ ಭಕ್ತರಿಗೂ ಬೇರೆಯವರಿಗೂ ವ್ಯತ್ಯಾಸ ಇರುವುದಿಲ್ಲ. 

ಆದರೆ ಗೆಲುವಿನ ಹುರುಪಿನಲ್ಲಿದ್ದ ಟೀಂ ಇಂಡಿಯಾ ಸೋಲಿಗೆ ಮೋದಿಯವರೇ ಕಾರಣ ಎನ್ನುವುದಕ್ಕೆ ಸಕಾರಣವೂ ಇದೆ. ಅಂಧ ಭಕ್ತರು ಒಪ್ಪದೇ ಹೋದರೂ ಪ್ರಜ್ಞಾವಂತರು ಈ ನಿಟ್ಟಿನಲ್ಲಿ ಯೋಚಿಸಬಹುದಾಗಿದೆ. ಅದೇನೆಂದರೆ.. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ವಿಶ್ವದಲ್ಲೆ ಅತೀ ದೊಡ್ಡದಾದದ್ದು. ಸರಿ ಸುಮಾರು ಒಂದೂಕಾಲು ಲಕ್ಷಕ್ಕಿಂತಲೂ ಹೆಚ್ಚು ಜನರು ಕೂತು ವೀಕ್ಷಿಸಬಹುದಾದದ್ದು. ಸರ್ದಾರ್ ಪಟೇಲರ ಹೆಸರಿನ ಈ ಸ್ಟೇಡಿಯಂಗೆ 2021 ರಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಿ ಸಂಘ ಪರಿವಾರ ವ್ಯಕ್ತಿಪೂಜೆಗೆ ಇಳಿದದ್ದು ಗೊತ್ತಿರುವ ಸಂಗತಿಯೇ. ಮೋದಿ ನಾಮಾಂಕಿತ ಈ ಬೃಹತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಶ್ವಕಪ್ ಪೈನಲ್ ಪಂದ್ಯವನ್ನು ನಿಗದಿ ಮಾಡಿದಾಗಲೇ ಭಾರತದ ಗೆಲುವು ಅನಿಶ್ಚಿತವೆನಿಸಿತ್ತು. ಯಾಕೆಂದರೆ ಎರಡು ವರ್ಷಗಳ ಹಿಂದೆ ಮರುನಿರ್ಮಾಣಗೊಂಡ ನಂತರ ಈ  ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತೀಯ ತಂಡ ಹೆಚ್ಚು ಆಟಗಳನ್ನು ಆಡಿ ಪಳಗಿದ್ದೇ ಇಲ್ಲ. ಟೀಂ ಇಂಡಿಯಾಗೂ ಈ ಸ್ಟೇಡಿಯಂ ಇನ್ನೂ ಒಲಿದಿರಲಿಲ್ಲ.‌ ನಮ್ಮ ತಂಡ ಈ ಸಲದ ವಿಶ್ವಕಪ್ ನಲ್ಲಿ ಆಡಿದ ಎಲ್ಲಾ ಆಟಗಳನ್ನೂ ಗೆಲ್ಲಲು ಕಾರಣಗಳು ಎರಡು. ಒಂದು ಎದುರಾಳಿ ತಂಡ ದುರ್ಬಲವಾಗಿದ್ದು, ಇನ್ನೊಂದು  ಹೋಂಟೌನ್ ಸ್ಟೇಡಿಯಂಗಳಲ್ಲಿ ಆಡಿದ್ದು. ಅಂದರೆ ಬೆಂಗಳೂರು ಮುಂಬೈ ಚೆನೈ ಕಲ್ಕತ್ತಾ ಸ್ಟೇಡಿಯಂಗಳು ಟೀಂ ಇಂಡಿಯಾದ ಆಟಗಾರರಿಗೆ ಚಿರಪರಿಚಿತವಾದವುಗಳು. ಅಲ್ಲಿನ ಪಿಚ್ ಗಳ ಬಗ್ಗೆ ಆಟಗಾರರಿಗೆ ಚೆನ್ನಾಗಿ ಅರಿವಿತ್ತು. ಹೀಗಾಗಿ ಎಲ್ಲಾ ಲೀಗ್ ಪಂದ್ಯಗಳು ಹಾಗೂ ಸೆಮಿಫೈನಲ್ ಮ್ಯಾಚ್ ಗಳನ್ನು ಗೆಲ್ಲಲು ಟೀಂ ಇಂಡಿಯಾಗೆ ಸಾಧ್ಯವಾಯಿತು. ಆದರೆ ಪೈನಲ್ ಪಂದ್ಯದಲ್ಲಿ ಸೋಲಲು ನರೇಂದ್ರ ಮೋದಿ ಸ್ಟೇಡಿಯಂ ಕೂಡಾ ಪ್ರಮುಖ ಕಾರಣ ಎನ್ನುವುದನ್ನು ಅಲ್ಲಗಳೆಯಲಾಗದು. 

ಮೋದಿಯವರನ್ನು ಮೆಚ್ಚಿಸಲು, ಅವರ ನಾಮಬಲವನ್ನು ಹೆಚ್ಚಿಸಲು ಬಿಸಿಸಿಐ ನಲ್ಲಿರುವ ಮೋದಿ ಭಕ್ತ ಪಡೆ ನರೇಂದ್ರ ಮೋದಿಯವರ ತವರು ಗುಜರಾತಿನ ಅಹಮದಾಬಾದ್ ನಲ್ಲಿರುವ ಮೋದಿ ನಾಮಧೇಯದ ಸ್ಟೇಡಿಯಂನ್ನೇ ಪೈನಲ್ ಪಂದ್ಯಕ್ಕೆ ಆಯ್ಕೆ ಮಾಡಿದ್ದರು. ಟೀಂ ಇಂಡಿಯಾ ಯಾವ ಸ್ಟೇಡಿಯಂನಲ್ಲಿ ಪೈನಲ್ ಮ್ಯಾಚ್ ಆಡಿದರೆ ಗೆಲ್ಲಬಹುದು ಎನ್ನುವ ಖಚಿತತೆಗಿಂತಾ ಮೋದಿ ಹೆಸರಿನ ಸ್ಟೇಡಿಯಂ ಬಹಳ ಮುಖ್ಯವಾಯಿತು. ಹೀಗಾಗಿ ಟೀಂ ಇಂಡಿಯಾದ ನಿರಂತರ ಗೆಲುವಿನ ಓಟಕ್ಕೆ ಅಂತಿಮ ಹಂತದಲ್ಲಿ ಸೋಲಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು. ವಿಶ್ವಕಪ್ ಗೆಲ್ಲುವ ಅವಕಾಶದಿಂದ ಭಾರತ ಮತ್ತೊಮ್ಮೆ ವಂಚಿತವಾಯ್ತು. 

ಅಕಸ್ಮಾತ್ ಭಾರತ ತಂಡ ಗೆದ್ದಿದ್ದೇ ಆಗಿದ್ದರೆ ಆ ಗೆಲುವೂ ಸಹ ಸಂಘ ಪರಿವಾರದ ರಾಜಕೀಯ ಲಾಭದ ಸರಕಾಗುತ್ತಿತ್ತು. ಪಾರ್ಲಿಮೆಂಟ್ ಎಲೆಕ್ಷನ್ ಮುಂದಿರುವುದರಿಂದ ಈ ಗೆಲುವನ್ನೇ ನೆಪವಾಗಿಟ್ಟುಕೊಂಡು ಹುಸಿ ದೇಶಪ್ರೇಮದ ಭಾವತೀವ್ರತೆಯ ಉನ್ಮಾದವನ್ನು ಸೃಷ್ಟಿಸುವ ಸಂಭವನೀಯತೆಗಳೇ ಹೆಚ್ಚಿದ್ದವು. ಅದರರ್ಥ ಟೀಂ ಇಂಡಿಯಾದ ಸೋಲನ್ನು ಬಯಸುತ್ತೇವೆಂಬುದಲ್ಲ. ಆಟ ಒಂದರ ಗೆಲುವನ್ನು ಹಾಗೂ ಅದರ ಜೊತೆಗೆ ಬೆಸೆದ ಜನರ ಭಾವನಾತ್ಮಕ ನಿಲುವನ್ನು ರಾಜಕೀಕರಣ ಗೊಳಿಸಿ ಅದು ಹೇಗೆ ನರೇಂದ್ರ ಮೋದಿ ಮತ್ತು ಟೀಮ್ ತಮ್ಮ ಪಕ್ಷದ ಪರವಾದ ಮತಬೇಟೆಗೆ ಬಳಸಿಕೊಳ್ಳುತ್ತಾರೆ ಎಂಬುದರ ಕುರಿತ ಆತಂಕವೂ ಇದೆ.

ಅಂಧ ಭಕ್ತರು ಒಪ್ಪಲಿ ಬಿಡಲಿ ಭಾರತ ತಂಡದ ಸೋಲಿಗೆ ಮೋದಿ ಮೇನಿಯಾವೇ ಪ್ರಮುಖ ಕಾರಣವಾಯ್ತು. ಈ ಸಲದ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ನಿರಂತರ ಗೆಲುವನ್ನು ಸಾಧಿಸಿದ ಭಾರತದ ಹೆಮ್ಮೆಯ ಆಟಗಾರರನ್ನು ಅಭಿನಂದಿಸೋಣ. ವ್ಯಕ್ತಿ ಪೂಜೆಯ ಕಾರಣದಿಂದಾಗಿ ತಪ್ಪಾದ ಆಟದ ಮೈದಾನವನ್ನು ಆಯ್ಕೆ ಮಾಡಿದ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸೋಣ. ಮತ್ತೆ ನಾಲ್ಕು ವರ್ಷಗಳ ನಂತರ ಬರುವ ವಿಶ್ವಕಪ್ ಪಂದ್ಯದಲ್ಲಿ ಗೆಲುವು ಸಿಗಲಿ ಎಂದು ಆಶಿಸೋಣ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು