Monday, June 17, 2024

ಸತ್ಯ | ನ್ಯಾಯ |ಧರ್ಮ

ಪೀಪಲ್‌ ದಿನ ವಿಶೇಷ: ಜಾಗತಿಕ ಅಯೋಡಿನ್ ಕೊರತೆ ತಡೆ ದಿನ

ಉಪ್ಪು ಎನ್ನುವುದು ಒಂದು ವಿಚಿತ್ರ ಪದಾರ್ಥ. ಇದನ್ನು ಹಾಗೆಯೇ ತಿಂದರೆ ಒಂದು ಕಾಳು ಕೂಡಾ ತಿನ್ನಲಾಗದು. ಆದರೆ ಅದನ್ನು ಬಳಸದೆ ಅಡುಗೆ ಮಾಡಿದರೆ ಒಂದು ತುತ್ತು ಕೂಡಾ ಕೆಳಗಿಳಿಯುವುದಿಲ್ಲ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎನ್ನುವ ಮಾತು ಇಂದು ಕೇಳಿ ಕೇಳಿ ಕ್ಲೀಷೆಯೆನ್ನಿಸಿದರೂ ಉಪ್ಪಿನ ಮಹತ್ವವೇನೂ ಇಂದಿಗೂ ಕಡಿಮೆಯಾಗಿಲ್ಲ. ಇಂತಹ ಉಪ್ಪಿನ ಮೂಲಕ ದೇಹಕ್ಕೆ ದೊರೆಯುವುದೇ ಅಯೋಡಿನ್.‌ ಇದೊಂದು ಬಹಳ ಮುಖ್ಯ ಖನಿಜ. ಇದು ಕೂಡಾ ಉಪ್ಪಿನಂತೆಯೇ ದೇಹದಲ್ಲಿ ಇದರ ಪ್ರಮಾಣ ಹೆಚ್ಚುವಂತೆಯೂ ಇಲ್ಲ, ಕಡಿಮೆಯಾಗುವಂತೆಯೂ ಇಲ್ಲ.

ಅಯೋಡಿನ್ ಮನುಷ್ಯನ ದೇಹಕ್ಕೆ ಅಗತ್ತವಿರುವ ಪ್ರಮುಖ ಖನಿಜಗಳಲ್ಲಿ ಒಂದು. ದೇಹದಲ್ಲಿ ಅಯೋಡಿನ್‌ ಕೊರತೆ ಎದುರಾದಾಗ ಮನುಷ್ಯನಲ್ಲಿ ಅನೇಕ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಈ ಕಾಯಿಲೆಗಳು ಒಬ್ಬ ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಲ್ಲವು.

ದೇಹದಲ್ಲಿ ಕಂಡುಬರುವ ಅಯೋಡಿನ್‌ ಕೊರತೆಯು ಹೇಗೆ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದೆಂದು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 21ರಂದು ವಿಶ್ವ ಅಯೋಡಿನ್ ಕೊರತೆ ದಿನ ಅಥವಾ ಜಾಗತಿಕ ಅಯೋಡಿನ್ ಕೊರತೆಯ ತಡೆಗಟ್ಟುವಿಕೆ ದಿನವನ್ನು ಆಚರಿಸಲಾಗುತ್ತದೆ.

ಈ ಅಯೋಡಿನ್‌ ಕೊರತೆಯಿಂದ ಮನುಷ್ಯ ಹಲವು ಕಾಯಿಲೆಗಳಿಗೆ ತುತ್ತಾಗಬಹುದು. ಇಂತಹ ರೋಗಗಳನ್ನು ಅಯೋಡಿನ್‌ ಡಿಫಿಷಿಯೆನ್ಸಿ ಡಿಸೀಸ್‌ (IDD) ಎಂದು ಕರೆಯಲಾಗುತ್ತದೆ.

ಕುತ್ತಿಗೆಯ ಮುಂಭಾಗದಲ್ಲಿರುವ ಥೈರಾಯಿಡ್ ಎಂಬ ಗ್ರಂಥಿಯು ಈ ಅಯೋಡಿನ್ ಎನ್ನುವ ಖನಿಜವನ್ನು ಬಳಸಿಕೊಂಡು ‘ಥೈರಾಕ್ಸಿನ್ ಎಂಬ ಹಾರ್ಮೋನನ್ನು ಉತ್ಪತ್ತಿ ಮಾಡುತ್ತದೆ. ದೇಹದಲ್ಲಿನ ಅನೇಕ ದೈಹಿಕ ರಾಸಾಯನಿಕ ಹಾಗೂ ಬೌದ್ಧಿಕ ಕ್ರಿಯೆಗಳು ಸಮರ್ಪಕವಾಗಿ ನಡೆಯಲು ಈ ಥೈರಾಕ್ಸಿನ್ ಅತ್ಯಾವಶ್ಯಕ.

ಮಕ್ಕಳ ಬೆಳವಣಿಗೆಯಲ್ಲಿ ಈ ಅಯೋಡಿನ್‌ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಸುರಿ ಹೆಂಗಸರಲ್ಲಿ ಅಯೋಡಿನ್‌ ಕೊರತೆ ಕಂಡು ಬಂದರೆ ಮಗುವಿನ ಮೆದುಳು ಬೆಳವಣಿಗೆಯಾಗದಿರುವ ಅಪಾಯವಿರುತ್ತದೆ. ಭಾರತದಲ್ಲಿ ಬಹುತೇಕ ಮಕ್ಕಳ ಬುದ್ಧಿ ಮಾಂದ್ಯತೆಗೆ ಗರ್ಭಿಣಿಯಾಗಿರುವಾಗ ಉಂಟಾಗುವ ಅಯೋಡಿನ್‌ ಕೊರತೆಯೇ ಕಾರಣ.

ಇದಲ್ಲದೆ ಕೂದಲು, ಚರ್ಮ, ಉಗುರು ಹಾಗೂ ಹಲ್ಲುಗಳ ಆರೋಗ್ಯಕ್ಕೂ ಆಯೋಡಿನ್ ಬೇಕು. ಈ ಅಯೋಡಿನ್‌ ಸಿಗುವುದು ಭೂಮಿಯಿಂದ. ಅಯೋಡಿನ್‌ ಯುಕ್ತ ಭೂಮಿಯಿಂದ ಬೆಳೆದ ಬೆಳೆಯಿಂದ ನಮಗೆ ಅಯೋಡಿನ್‌ ದೊರೆಯುತ್ತದೆ. ಆದರೆ ಇಂದು ಪದೇ ಪದೇ ಬೀಳುವ ದೊಡ್ಡ ಮಳೆ, ಹಿಮಪಾತ ಹಾಗೂ ಪ್ರವಾಹಗಳಿಂದ ಭೂಮಿಯಲ್ಲಿನ ಅಯೋಡಿನ್‌ ಅಂಶ ಕೊಚ್ಚಿ ಹೋಗುತ್ತಿದೆ. ಇದರಿಂದಾಗಿ ನಾವಿಂದು ಸೇವಿಸುತ್ತಿರುವ ಆಹಾರದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ಅಯೋಡಿನ್‌ ದೊರೆಯುತ್ತಿಲ್ಲ.

ಆದರೆ ನಮ್ಮ ದೇಹಕ್ಕೆ ಅಗತ್ಯವಿರುವ ಅಯೋಡಿನ್‌ ಪ್ರಮಾಣ ಬಹಳ ಸಣ್ಣ ಪ್ರಮಾಣದ್ದು. ವಯಸ್ಕ ವ್ಯಕ್ತಿಯ ದೇಹಕ್ಕೆ ದಿನವೊಂದಕ್ಕೆ ಬೇಕಾಗುವ ಅಯೋಡಿನ್‌ ಪ್ರಮಾಣ 140 ಮಿಲಿಗ್ರಾಂ ಎಂದು ಪರಿಣಿತರು ಹೇಳುತ್ತಾರೆ. ಮಕ್ಕಳಿಗೆ 50 ಮಿಲಿಗ್ರಾಂ ಆದರೆ ಗರ್ಭಿಣಿ ಮಹಿಳೆಯರಿಗೆ 200 ಮಿಲಿಗ್ರಾಂ. ಅಧಿಕ ಅಯೋಡಿನ್‌ ಸೇವನೆಯು ನಮ್ಮ ಥೈರಾಯ್ಡ್‌ ಗ್ರಂಥಿಯ ಕಾರ್ಯನಿರ್ವಹಿಸುವಿಕೆಯಲ್ಲಿ ಬದಲಾವಣೆ ತಂದು ಹಲವು ಕಾಯಿಲೆಗಳಿಗೆ ದಾರಿಕೊಡುತ್ತದೆ.

ಹಸುವಿನ ಹಾಲು ಮತ್ತು ಡೈರಿ ಉತ್ಪನ್ನಗಳು, ಮೊಟ್ಟೆಗಳು, ಸಮುದ್ರ ಮೀನುಗಳು ಮತ್ತು ಚಿಪ್ಪುಮೀನುಗಳಲ್ಲಿ ಅಯೋಡಿನ್‌ ಪ್ರಮಾಣ ಹೆಚ್ಚಿರುತ್ತದೆ. ಧಾನ್ಯಗಳು ಮತ್ತು ಕಾಳುಗಳು ಸಹ ಅಯೋಡಿನ ಪ್ರಮಾಣವನ್ನು ಹೊಂದಿರುತ್ತವೆಯಾದರೂ, ಆ ಬೆಳೆಯ ಸಸ್ಯಗಳು ಬೆಳೆದ ಮಣ್ಣಿನಲ್ಲಿರುವ ಅಯೋಡಿನ್ ಪ್ರಮಾಣವನ್ನು ಅವಲಂಬಿಸಿ ಲಭ್ಯತೆಯ ಮಟ್ಟಗಳು ಬದಲಾಗುತ್ತವೆ.

ಇಂದು ದೇಶದಲ್ಲಿ 7.1 ಕೋಟಿ ಜನರು ಅಯೋಡಿನ್‌ ಕೊರತೆಯಿಂದ ಬಳಲುತ್ತಿದ್ದಾರೆ. ಈ ಅಯೋಡಿನ್‌ ಕೊರತೆಯನ್ನು ತುಂಬಿಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ಅಯೋಡಿನ್‌ ಜನಿಜಯುಕ್ತ ಉಪ್ಪನ್ನೇ ಸೇವಿಸುವುದು. ಅಯೋಡಿನ್‌ ಯುಕ್ತ ಉಪ್ಪು 30 PPM ಪ್ರಮಾಣದ ಅಯೋಡಿನ್‌ ಹೊಂದಿರುತ್ತದೆಯಾದರೂ ಈ ಅಯೋಡಿನ್‌ ಗಾಳಿಯಲ್ಲಿ ಸುಲಭವಾಗಿ ಆವಿಯಾಗುತ್ತದೆಯಾದ್ದರಿಂದ ನಮಗೆ ದೊರೆಯುವ ಅಯೋಡಿನ್‌ ಮಟ್ಟ 15 PPM ಮಾತ್ರ. ಈ ಕಾರಣಕ್ಕಾಗಿ ಉಪ್ಪನ್ನು ಕೊಳ್ಳುವಾಗ ಅದರ ಉತ್ಪಾದನ ದಿನಾಂಕವನ್ನು ನೋಡಿಯೇ ಕೊಳ್ಳಬೇಕು. ಹಳೆಯದಾದ ಉಪ್ಪೆಂದರೆ ಹೆಚ್ಚು ಅಯೋಡಿನ್‌ ನಷ್ಟವೆಂದೇ ಅರ್ಥ. ಉಪ್ಪನ್ನು ತೆರೆದು ಇಡಬಾರದು. ಸದಾ ಮುಚ್ಚಿಡಬಾರದು.

ಇಂದು ಮಾರುಕಟ್ಟೆಯಲ್ಲಿ ಹಲವು ಬಗೆ ಉಪ್ಪುಗಳು ಲಭ್ಯವಿವೆ. ಹಿಮಾಲಯನ್‌ ಉಪ್ಪು ಹೆಚ್ಚು ಆರೋಗ್ಯಕರ ಎನ್ನಲಾಗುತ್ತದೆಯಾದರೂ ಅದು ಜನಸಾಮನ್ಯರ ಕಿಸೆಗೆ ಒಂದಿಷ್ಟು ಭಾರವೂ ಹೌದು. ಈ ಜಾಗತಿಕ ಅಯೋಡಿನ್‌ ಕೊರತೆ ತಡೆ ದಿನದಂದು ಪೀಪಲ್‌ ಮೀಡಿಯಾ ನಿಮಗೆಲ್ಲರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತದೆ.

(ಸೂಚನೆ: ಇಲ್ಲಿ ಲೇಖನದಲ್ಲಿ ನೀಡಲಾಗಿರುವ ಸಲಹೆಗಳು ಕೇವಲ ಮಾಹಿತಿಗಾಗಿ ನೀಡಲಾಗಿದ್ದು ಅದನ್ನು ಪರಿಣಿತ ವೈದ್ಯಕೀಯ ವೈದ್ಯಕೀಯ ಸಲಹೆಯೆಂದು ಪರಿಗಣಿಸಬಾರದೆಂದು ಮನವಿ ಮಾಡುತ್ತೇವೆ.)

Related Articles

ಇತ್ತೀಚಿನ ಸುದ್ದಿಗಳು