Monday, January 12, 2026

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು- 66 : ವಿಶ್ವ ಮಾಫಿಯಾ ಮತಿಗೇಡಿ “ಡಾನ್” ಟ್ರಂಪ್!

“..ಇಡೀ ವಿದ್ಯಮಾನವು ಜಗತ್ತು ಶೀಘ್ರದಲ್ಲೇ ಇನ್ನೊಬ್ಬ ಹಿಟ್ಲರ್ ಮತ್ತು ಇನ್ನೊಂದು ಮಹಾಯುದ್ಧವನ್ನು ಎದುರಿಸಬೇಕಾದೀತು ಎಂಬ ಮುನ್ನೆಚ್ಚರಿಕೆಯನ್ನು ನೀಡುತ್ತಿದೆ. ಹಾಗಾದಲ್ಲಿ ಅದುವೇ ಮಾನವ ಕುಲದ, ಭೂಮಿಯ ಅಂತ್ಯವಾಗಬಹುದು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಜನವರಿ 3, 2026ರಂದು “ಆಪರೇಷನ್ ಅಬ್ಸೊಲ್ಯೂಟ್ ರೆಸೊಲ್ವ್” ಅಡಿಯಲ್ಲಿ ಯುಎಸ್ಎ ನಡೆಸಿದ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಅಪಹರಣವು ಜಾಗತಿಕ ರಾಜಕೀಯದಲ್ಲಿ ತೀರಾ ಆಕ್ರಮಣಕಾರಿಯಾದ ವಿದೇಶಾಂಗ ನೀತಿಯತ್ತ ಅದರ ಭಾರೀ ಪಲ್ಲಟವನ್ನು ಸೂಚಿಸುತ್ತದೆ. ಒಂದು ಸಾರ್ವಭೌಮ ನೆಲದಲ್ಲಿ ಹಾಲಿ ರಾಷ್ಟ್ರದ ಮುಖ್ಯಸ್ಥರನ್ನು ವಶಕ್ಕೆ ತೆಗೆದುಕೊಳ್ಳಲು ಮಿಲಿಟರಿ ಬಲವನ್ನು ಬಳಸುವ ಮೂಲಕ, ಯುಎಸ್ಎಯು ಸಾಂಪ್ರದಾಯಿಕವಾದ ಜಾಗತಿಕ ರಾಜತಾಂತ್ರಿಕ ಮಾನದಂಡಗಳನ್ನು ಮೀರಿ, ರಾಜಾರೋಷವಾಗಿ ನೇರ ಹಸ್ತಕ್ಷೇಪದ ಹಾದಿಯನ್ನು ತುಳಿದಿದೆ. ಕೆಲಸಮಯ ಹಿಂದೆ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಯುಎಸ್ಎಯ ರಕ್ಷಣಾ ಇಲಾಖೆಯನ್ನು ಯುದ್ಧ ಇಲಾಖೆ ಎಂದು ನಾಮಕರಣ ಮಾಡಿದುದು ಸಾಂಕೇತಿಕವೂ, ಈ ನಿಟ್ಟಿನಲ್ಲಿ ಸೂಚನೆಯೂ ಆಗಿತ್ತು.

ಕಾನೂನು ಉಲ್ಲಂಘನೆಗಳು
ಈ ಕಾರ್ಯಾಚರಣೆಯು ಯುಎನ್ ಚಾರ್ಟರ್‌ನ ಆರ್ಟಿಕಲ್ 2(4)ರ ಸ್ಪಷ್ಟ ಉಲ್ಲಂಘನೆಯಾಗಿದೆ. ಅದು ಯಾವುದೇ ದೇಶದ (State) ಪ್ರಾದೇಶಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲಪ್ರಯೋಗ ಅಥವಾ ಬಲಪ್ರಯೋಗದ ಬೆದರಿಕೆಯನ್ನು ನಿಷೇಧಿಸುತ್ತದೆ. ವಿದೇಶಿ ನಾಯಕನನ್ನು ಅಪಹರಿಸುವುದು “ಆಕ್ರಮಣಶೀಲತೆಯ ಅಪರಾಧ” ಎಂದು ಅನೇಕ ಅಂತರರಾಷ್ಟ್ರೀಯ ಕಾನೂನು ತಜ್ಞರು ವಾದಿಸಿದ್ದಾರೆ. ಯುಎಸ್ಎ ಸಂವಿಧಾನದ ಅಡಿಯಲ್ಲಿ ಕೂಡಾ ಬೇರೆ ದೇಶದ ಮೇಲೆ ಯುದ್ಧವನ್ನು ಘೋಷಿಸುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ. ಅದು ಇರುವುದು ಕಾಂಗ್ರೆಸಿಗೆ (ಯುಎಸ್ಎಯ ಲೋಕಸಭೆ). ಆದರೆ, ಡೊನಾಲ್ಡ್ ಟ್ರಂಪ್ ಆಡಳಿತವು ಈ ದಾಳಿಯನ್ನು ಯುದ್ಧವೆಂದು ಘೋಷಿಸದೇ ಕೇವಲ ಮಾದಕವಸ್ತು-ಭಯೋತ್ಪಾದನಾ ಆರೋಪದ ಅಡಿಯಲ್ಲಿ ನಡೆದ “ಕಾನೂನು ಜಾರಿ ಕ್ರಮ” ಎಂದು ಬಿಂಬಿಸುವ ಮೂಲಕ ಯುದ್ಧಾಧಿಕಾರ ಕಾಯ್ದೆಯನ್ನು ಬೈಪಾಸ್ ಮಾಡಿ, ರಂಗೋಲಿಯ ಕೆಳಗೆ ನುಸುಳಿದೆ. ಇಲ್ಲಿ ತೋರಿಸಲಾದ ವಂಚಕ ಕಾನೂನು ಕುಶಲತೆಯು ಮಿಲಿಟರಿ ಆಕ್ರಮಣವೊಂದನ್ನು ಕೇವಲ “ಬಂಧನ ಕಾರ್ಯಾಚರಣೆ” ಎಂಬಂತೆ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಇನ್ನೊಂದು ದೇಶದೊಳಗೆ ನುಗ್ಗಿ, ಅಮಾಯಕ ಪ್ರಜೆಗಳೂ ಸೇರಿದಂತೆ ನಲ್ವತ್ತಕ್ಕೂ ಹೆಚ್ಚು ಜನರು ಸಾವಿಗೀಡಾದರೂ, ಅಪಾರ ಪ್ರಮಾಣದ ಆಸ್ತಿ ನಷ್ಟವಾದರೂ ಅದು ಯುದ್ಧ ಕೃತ್ಯ (Act of War) ಅಲ್ಲ; ಬಂಧನ ಕಾರ್ಯಾಚರಣೆ! ಅಂತರರಾಷ್ಟ್ರೀಯ ಕಾನೂನು ಪ್ರಕಾರ ವಿದೇಶಿ ದೂತಾವಾಸದ ಒಳಗಡೆ ಪೊಲೀಸರು ನುಗ್ಗಿದರೂ, ಅದು “ಆಕ್ಟ್ ಆಫ್ ವಾರ್” ಎನಿಸುತ್ತದೆ! ಈ ಕಾನೂನು “ಪ್ರಜಾಪ್ರಭುತ್ವವಾದಿ ಯುಎಸ್ಎ”ಗೆ ಅನ್ವಯಿಸುವುದಿಲ್ಲ! “ವಿಶ್ವಗುರು” ಭಾರತ ಸೇರಿದಂತೆ ಉಳಿದವರಿಗೆ ಅನ್ವಯಿಸುತ್ತದೆ.

ನೆಪ ಮತ್ತು ವಾಸ್ತವ: ತೈಲದ ಪಾತ್ರ
​ಅಪಹರಣಕ್ಕೆ ಅಧಿಕೃತ ನೆಪವೆಂದರೆ “ಮಾದಕ-ಭಯೋತ್ಪಾದನೆ”ಯ ಆರೋಪ. ಈಗ ಸ್ವತಃ ಯುಎಸ್ಎ ಅಲ್ಲಿನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸುವಾಗಲೂ ಮಡುರೊ ಯಾವುದೆಯೇ ಮಾದಕವಸ್ತು ಜಾಲದ ಸದಸ್ಯನಲ್ಲ ಎಂದು ಹೇಳಿದೆ. ಹೇಗಿದ್ದರೂ, ಇದರ ಮೂಲ ಪ್ರೇರಣೆ ವೆನೆಜುವೆಲಾದ ನೈಸರ್ಗಿಕ ಸಂಪನ್ಮೂಲಗಳ ನಿಯಂತ್ರಣವಾಗಿದೆ ಎಂದು ವಿಶ್ವದ ಎಲ್ಲರಿಗೂ ಗೊತ್ತು ಮತ್ತು ಸ್ವತಃ ಟ್ರಂಪ್ ಅಲ್ಲಿನ ತೈಲವನ್ನು ಮಾರಾಟ ಮಾಡುವ ಮಾತಾಡುತ್ತಿದ್ದಾರೆ. ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ ಮತ್ತು ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿರುವ ಪ್ರಕಾರ, ಯುಎಸ್ಎಯು ಈಗ ಆ ದೇಶವನ್ನು “ನಡೆಸುತ್ತದೆ” ಮತ್ತು ತೈಲಕ್ಕೆ ಸಂಬಂಧಿಸಿದಂತೆ ಅಲ್ಲಿ “ಉಪಸ್ಥಿತಿ” ಹೊಂದಿರುತ್ತದೆ. ಈ ಕ್ರಮವು ತೈಲ ಸಂಪನ್ನ ರಾಷ್ಟ್ರಗಳ ಕೂಟವಾದ “ಒಪೆಕ್ ಪ್ಲಸ್” (OPEC+)ನ ಪ್ರಭಾವವನ್ನು ಮುರಿಯಲು, ಅಮೇರಿಕನ್ ಖಾಸಗಿ ಸಂಸ್ಥೆಗಳಿಗೆ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲ ಒದಗಿಸಲು ಮತ್ತು ಪಶ್ಚಿಮ ಗೋಳಾರ್ಧದಲ್ಲಿ ಚೀನಾ ಮತ್ತು ರಷ್ಯಾದ ಪ್ರಮುಖ ಮಿತ್ರ ರಾಷ್ಟ್ರವನ್ನು ಹೊಸಕಿಹಾಕಲು ರೂಪಿಸಲಾಗಿದೆ.

ಸಂಪನ್ಮೂಲ-ಸಮೃದ್ಧ ರಾಷ್ಟ್ರಗಳಿಗೆ ಎಚ್ಚರಿಕೆ
ಇನ್ನು ಮುಂದೆ “ರಾಷ್ಟ್ರೀಯ ಸಾರ್ವಭೌಮತ್ವ” ಎಂಬುದು ಸುರಕ್ಷತೆಯ ಖಾತರಿಯಲ್ಲ ಎಂಬುದಕ್ಕೆ ಇತರ ದೇಶಗಳಿಗೆ ​ಈ ಆಕ್ರಮಣವು ಸ್ಪಷ್ಟ ಎಚ್ಚರಿಕೆಯಾಗಿದೆ. ಖನಿಜ ಅಥವಾ ಇಂಧನ ಸಮೃದ್ಧವಾಗಿರುವ ರಾಷ್ಟ್ರಗಳು ಈಗ ಯುಎಸ್ಎಯ ಹಿತಾಸಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ, ಇಲ್ಲವೇ ಇದೇ ರೀತಿಯ ಹಸ್ತಕ್ಷೇಪಗಳ ಅಪಾಯಕ್ಕೆ ಸಿಲುಕುವ ಒತ್ತಡದಲ್ಲಿವೆ. “ನಿಯಮ-ಆಧಾರಿತ” ವಿಶ್ವ ವ್ಯವಸ್ಥೆಯನ್ನು “ಶಕ್ತಿ-ಆಧಾರಿತ” ವ್ಯವಸ್ಥೆಯಾಗಿ ಈ ಆಕ್ರಮಣವು ಬದಲಿಸುತ್ತಿದೆ.

ಹಿಟ್ಲರ್‌ಗೆ ಹೋಲಿಕೆ
​ಟೀಕಾಕಾರರು ಈ ಕ್ರಮಗಳು ಮತ್ತು 1939ರ ಪೋಲೆಂಡ್ ಆಕ್ರಮಣದಂತಹ ಐತಿಹಾಸಿಕ ಭೂ ಕಬಳಿಕೆಗಳ ನಡುವೆ ಸಮಾನಾಂತರಗಳನ್ನು ಚಿತ್ರಿಸಿದ್ದಾರೆ. ಮೆಕ್ಸಿಕೋದ ಮಾದಕವಸ್ತು ಗುಂಪುಗಳ (ಕಾರ್ಟೆಲ್‌) ವಿರುದ್ಧ ಅಲ್ಲಿನ ಸರಕಾರವನ್ನು ಕಡೆಗಣಿಸಿ, ಏಕಪಕ್ಷೀಯ ದಾಳಿಗಳು ಮತ್ತು ಗ್ರೀನ್‌ಲ್ಯಾಂಡನ್ನು ತನಗೆ ಮಾರಾಟ ಮಾಡದಿದ್ದರೆ, ಅದನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳುವ ಬೆದರಿಕೆ ಹಾಕುವುದು, ತನ್ನ ಮಾತು ಕೇಳದವರಿಗೆ ಬೇಕಾಬಿಟ್ಟಿ ಸುಂಕ…  ಇತ್ಯಾದಿಯಾಗಿ ಟ್ರಂಪ್ ಆಡಳಿತದ ವಾಕ್ಚಾತುರ್ಯದ ನೀತಿಯು- ಇಡೀ ಎರಡು ಅಮೆರಿಕಾ ಖಂಡಗಳ ಸಂಪನ್ಮೂಲಗಳ ಮೇಲೆ ಯುಎಸ್‌ಎಯ ಹಕ್ಕು ಸ್ಥಾಪಿಸುವ ಮತ್ತು ಯುರೋಪಿಯನ್ನರನ್ನು ಅದರಿಂದ ಹೊರಗಿಡುವ ನಯವಂಚಕ ಮನ್ರೋ ಸಿದ್ಧಾಂತಕ್ಕೆ “ಟ್ರಂಪ್ ಅನುಬಂಧ”ವನ್ನು ಸೇರಿಸುತ್ತದೆ. ಈ ಸಿದ್ಧಾಂತವು ಇಡೀ ಗೋಳಾರ್ಧ ಮತ್ತು ಆರ್ಕ್ಟಿಕ್ ಅನ್ನು “ರಾಷ್ಟ್ರೀಯ ಭದ್ರತೆ” ಮತ್ತು ಸಂಪನ್ಮೂಲ ಬಸಿಯಲು ಸ್ವಾಧೀನಪಡಿಸಿಕೊಳ್ಳಬೇಕಾದ ಖಾಸಗಿ ಆಸ್ತಿಯಾಗಿ ಪರಿಗಣಿಸುತ್ತದೆ.

ಹಸ್ತಕ್ಷೇಪದ ಇತಿಹಾಸ
1953ರಲ್ಲಿ ಇರಾನ್‌ನಲ್ಲಿ ನಡೆದ ದಂಗೆಯಿಂದ 1973ರ ಚಿಲಿಯ ಸಾಲ್ವದೋರ್ ಅಲೆಂಡೆ ಪದಚ್ಯುತಿಯವರೆಗೆ, ಸ್ನೇಹಪರ “ಕೈಗೊಂಬೆಗಳನ್ನು” ಸ್ಥಾಪಿಸಲು ಬೇರೆ ದೇಶಗಳ ನಾಯಕರನ್ನು ಉರುಳಿಸಿದ ಇತಿಹಾಸವನ್ನು ಅಮೆರಿಕ ಹೊಂದಿದೆ. ಈ ಪಟ್ಟಿ ಬಹಳ ಉದ್ದವಿದೆ. ವೆನೆಜುವೆಲಾ ಅಧ್ಯಕ್ಷರ ಅಪಹರಣವು ಸೂಕ್ಷ್ಮತೆಯ ಕೊರತೆಯಲ್ಲಿ ಮಾತ್ರವೇ ಭಿನ್ನವಾಗಿದೆ. ರಹಸ್ಯವಾಗಿ ಸಿಐಎ ಮೂಲಕ ನಡೆಸುವ ದಂಗೆಯ ಬದಲಿಗೆ, ಇದು ಟಿವಿ ನೇರ ಪ್ರಸಾರವಾದ, ರಾಜಾರೋಷವಾಗಿ ನಡೆದ ಮಿಲಿಟರಿ ಆಕ್ರಮಣವಾಗಿತ್ತು. ಕ್ಯಾರಕಾಸ್‌ನಲ್ಲಿ “ಪರಿವರ್ತನಾ ಮಂಡಳಿ”ಯನ್ನು ಸ್ಥಾಪಿಸುವ ಮೂಲಕ, ಯುಎಸ್ಎ 20ನೇ ಶತಮಾನದ ಪ್ರಾದೇಶಿಕ ಪ್ರಾಬಲ್ಯದ ಮಾದರಿಗೆ ಮರಳುತ್ತಿದೆ; ಅಲ್ಲಿ ಸ್ಥಳೀಯ ನಾಯಕರು ಕೇವಲ ಯುಎಸ್ಎ ಹಿತಾಸಕ್ತಿಗಳ ವ್ಯವಸ್ಥಾಪಕರಾಗಿ ಮಾತ್ರ ಉಳಿಯಲಿದ್ದಾರೆ. ಜನರನ್ನು ಕೇಳುವವರೇ ಇಲ್ಲ!

ಇಂಧನ ಭದ್ರತೆ ಮತ್ತು “ಬ್ರಿಕ್ಸ್” ಮುರಿತ
ಈ ಕಾರ್ಯಾಚರಣೆಯು ಭಾರತದ ಇಂಧನ ಭದ್ರತೆ ಮತ್ತು “ಬ್ರಿಕ್ಸ್” ಬಣದೊಳಗೆ ಅದರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸಂಕೀರ್ಣ ಸಂದಿಗ್ಧತೆಯನ್ನು ಸೃಷ್ಟಿಸಿದೆ. ಯುಎಸ್ಎ ಮೇಲ್ವಿಚಾರಣೆಯಲ್ಲಿ ವೆನೆಜುವೆಲಾದ ಸ್ಥಿರೀಕರಣವು ಅಂತಿಮವಾಗಿ “ಒಎನ್‌ಜಿಸಿ- ವಿದೇಶ್‌”ನಂತಹ ಭಾರತೀಯ ಸಂಸ್ಥೆಗಳು ಒಂದು ಬಿಲಿಯನ್ ಡಾಲರ್‌ನಷ್ಟು (ಸುಮಾರು 8,000 ಕೋಟಿ ರೂಪಾಯಿ) “ಸಿಕ್ಕಿಬಿದ್ದಿರುವ” ಲಾಭಾಂಶವನ್ನು ಮರಳಿ ಪಡೆಯಲು ಮತ್ತು ಅಲ್ಲಿನ ಒರಿನೊಕೊ ಪಟ್ಟಿಯಲ್ಲಿ ಉತ್ಪಾದನೆಯನ್ನು ಪುನರಾರಂಭಿಸಲು ಅನುವು ಮಾಡಿಕೊಡಲಿದೆ. ಆದರೆ, ಇದು ಹೊಸದಿಲ್ಲಿಯನ್ನು ಭೌಗೋಳಿಕ ರಾಜಕೀಯ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಮೇಲೆ ಹೇಳಿದ ಲಾಭಾಂಶ ಮತ್ತು ಹಿತಾಸಕ್ತಿಯನ್ನು ರಕ್ಷಿಸಲು ಯುಎಸ್ಎಯನ್ನು ಕುಶಿಯಲ್ಲಿ ಇಡಬೇಕು! ಈಗ  “ಬ್ರಿಕ್ಸ್‌”ನಲ್ಲಿ, ಒಂದು ದೊಡ್ಡ ಬಿರುಕು ಕಾಣಿಸಿಕೊಂಡಿದೆ: ರಷ್ಯಾ ಮತ್ತು ಚೀನಾ ಈ ದಾಳಿಯನ್ನು “ಸಶಸ್ತ್ರ ಆಕ್ರಮಣ” ಎಂದು ಖಂಡಿಸಿವೆ. ಬ್ರೆಜಿಲ್ ಇದು “ಸ್ವೀಕಾರಾರ್ಹವಲ್ಲದ ರೇಖೆಯನ್ನು ದಾಟಿದೆ” ಎಂದು ಎಚ್ಚರಿಸಿದೆ. ದಕ್ಷಿಣ ಆಫ್ರಿಕಾ ಕೂಡಾ ಇದನ್ನು ಖಂಡಿಸಿದೆ. ಆದರೆ, “ವಿಶ್ವಗುರು” ಭಾರತವು ಮಾತ್ರ ಈ ಬಂಡಿಗೆ ಸೇರದೆ, ಯುಎಸ್ಎಯನ್ನು ಹೆಸರಿಸುವ ಧೈರ್ಯವನ್ನೂ ತೋರದೆ, ಪುಕ್ಕಲುತನದ “ಆಳವಾದ ಕಳವಳ” ಮಾತ್ರ ವ್ಯಕ್ತಪಡಿಸಿದೆ. ಮೋದಿ ಸರಕಾರದ ಇಂತಾ ಸೈದ್ಧಾಂತಿಕ ಬದ್ಧತೆಯಿಲ್ಲದೇ ಸ್ವಹಿತಾಸಕ್ತಿಗಾಗಿ ಯುಎಸ್ಎ ಮುಂದೆ ಹಲ್ಲು ಕಿಸಿಯುವ ನೀತಿಯು ಬ್ರಿಕ್ಸ್‌ನ ಇತರ ರಾಷ್ಟ್ರಗಳಿಂದ ಭಾರತವನ್ನು ದೂರಮಾಡುತ್ತಿದೆ. “ಬ್ರಿಕ್ಸ್” ಮಾತ್ರವಲ್ಲ; ಜಾಗತಿಕ ದಕ್ಷಿಣ ದೇಶಗಳು ಭಾರತವನ್ನು ಒಂದು ವಿಶ್ವಾಸಾರ್ಹವಲ್ಲದ, ಎಡೆಬಿಡಂಗಿ ರಾಷ್ಟ್ರ ಎಂಬಂತೆ ಕಾಣಲಾರಂಭಿಸಿವೆ.

ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿಯನ್ನು ಪದೇ ಪದೇ ಮುಜುಗರಕ್ಕೀಡುಮಾಡಿದ್ದಾರೆ. (ಭಾರತ-ಪಾಕಿಸ್ಥಾನ ಯುದ್ಧ ನಿಲ್ಲಿಸಿದ್ದು, ಭೇಟಿಯಾಗಿ ಮೋದಿ “ಒಮ್ಮೆ ಬೇಟಿ ಮಾಡಬಹುದೇ ಸಾರ್ ಪ್ಲೀಸ್ ಎಂದು ಅಂಗಲಾಚಿದ್ದು….ಇತ್ಯಾದಿ) ಭಾರತವನ್ನು ಕಿರಿಯ ಪಾಲುದಾರ ಎಂದು ಪರಿಗಣಿಸುವ ಮೂಲಕ, ಅದರ ಕಾರ್ಯತಂತ್ರದ ಸ್ವಾಯತ್ತತೆಯನ್ನು ನಿರ್ಲಕ್ಷಿಸುವ ಮೂಲಕ ಮತ್ತು 500 ಶೇಕಡಾ ಸುಂಕಗಳ ಬೆದರಿಕೆ ಹಾಕುವ ಮೂಲಕ ಮತ್ತು ರಷ್ಯಾರಿಂದ ತೈಲ ಖರೀದಿಸದಂತೆ, ತನ್ನ ಕಾನೂನುಬಾಹಿರ ಹಸ್ತಕ್ಷೇಪಗಳಿಗೆ ಬೆಂಬಲವನ್ನು ನೀಡುವಂತೆ ಒತ್ತಡ ಹಾಕುವ ಮೂಲಕ  ಟ್ರಂಪ್- ಸ್ವಯಂ ಘೋಷಿತ “ವಿಶ್ವ ಗುರು” ಮೋದಿಯನ್ನು ನಾಚಿಕೆಗೇಡಾಗಿ ಗೇಲಿ ಮಾಡಿ ಅಣಕಿಸುತ್ತಿದ್ದಾರೆ. ಆದರೆ ಮೋದಿ ಒಮ್ಮೆಯೂ ಸಾರ್ವಜನಿಕವಾಗಿ “ಟ್ರಂಪ್ ಹೇಳುತ್ತಿರುವುದು ಸುಳ್ಳು” ಎಂದು ಹೇಳುವ ಎದೆಗಾರಿಕೆಯಾಗಲೀ, “ಲಾಲ್ ಆಂಕ್” ಆಗಲೀ ತೋರಿಸಿಲ್ಲ! ಜಾಗತಿಕ ದಕ್ಷಿಣದ ಸಹ ನಾಯಕನೊಬ್ಬನ ಅಪಹರಣವನ್ನು ಖಂಡಿಸಲೂ ಹಿಂಜರಿಯುವ ಮೋದಿಯ ಅಸಮರ್ಥತೆಯು ಅಮೆರಿಕದ ಆರ್ಥಿಕ ಮತ್ತು ರಾಜಕೀಯ ಒತ್ತಡದ ಎದುರು ಭಾರತದ ದುರ್ಬಲತೆಯನ್ನು ತೋರಿಸುತ್ತಿದೆ.

“ಮಾಫಿಯಾ” ಸಿದ್ಧಾಂತ
​ಮಡುರೊ ಅವರ ಅಪಹರಣವು ಅಂತರರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಯುಎಸ್ಎಯ “ಮಾಫಿಯಾ” ಮನೋಭಾವವನ್ನು ಚಿತ್ರಿಸುತ್ತದೆ. ಅಲ್ಲಿ ಮಿತ್ರರಾಷ್ಟ್ರಗಳನ್ನು ಕೇವಲ ಬಾಸ್ ಹೇಳಿದಂತೆ ಕೇಳುವ “ಸಹಚರರು” ಎಂದು ಪರಿಗಣಿಸಲಾಗುತ್ತದೆ ಮತ್ತು ಸಂಪನ್ಮೂಲ-ಸಮೃದ್ಧ ರಾಷ್ಟ್ರಗಳನ್ನು ಮಣಿಸಬೇಕಾದ, ವಶಪಡಿಸಿಕೊಳ್ಳಬೇಕಾದ ಗುರಿಗಳಾಗಿ ಒಪ್ಪದ ನಾಯಕರನ್ನು ಶತ್ರುಗಳಾಗಿ ಪರಿಗಣಿಸಲಾಗುತ್ತದೆ. ಯುಎಸ್‌‌ಎ ಆಡಳಿತವು ಒಳಗಿನ ಸ್ವಂತ ಜನರ ಪ್ರತಿಭಟನೆಗಳ ನಡುವೆಯೇ, ಅವುಗಳನ್ನು ದಮನಿಸುತ್ತಲೇ ಜಾಗತಿಕ ಸ್ಥಿರತೆಗಿಂತ ಹೆಚ್ಚಾಗಿ ಬೇರೆಯವರ ಸ್ವತ್ತುಗಳನ್ನು ವಶಪಡಿಸಿಕೊಳ್ಳುವುದನ್ನು ಆದ್ಯತೆ ನೀಡುತ್ತಲೇ ಇದೆ. “ಭೂರಾಜಕೀಯ ಸುಲಿಗೆ”ಯ ಈ ಯುಗವು- ಅಂತರರಾಷ್ಟ್ರೀಯ ಕಾನೂನು ಎಂಬುದು ಈಗ ಸಂಪನ್ಮೂಲಗಳ ದರೋಡೆಕೋರ ಮತ್ತು ಸರ್ವಾಧಿಕಾರಿ ದೈತ್ಯ ಶಕ್ತಿಯ ಎದುರು ಮಂಡಿಯೂರಿದೆ ಎಂದು ಸೂಚಿಸುತ್ತದೆ. ಇಡೀ ವಿದ್ಯಮಾನವು ಜಗತ್ತು ಶೀಘ್ರದಲ್ಲೇ ಇನ್ನೊಬ್ಬ ಹಿಟ್ಲರ್ ಮತ್ತು ಇನ್ನೊಂದು ಮಹಾಯುದ್ಧವನ್ನು ಎದುರಿಸಬೇಕಾದೀತು ಎಂಬ ಮುನ್ನೆಚ್ಚರಿಕೆಯನ್ನು ನೀಡುತ್ತಿದೆ. ಹಾಗಾದಲ್ಲಿ ಅದುವೇ ಮಾನವ ಕುಲದ, ಭೂಮಿಯ ಅಂತ್ಯವಾಗಬಹುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page