ಲೆಬನಾನ್ ಗಡಿಭಾಗದಲ್ಲಿ ಮತ್ತೆ ಇಸ್ರೇಲ್ ಭಯಾನಕ ದಾಳಿ : ಹಳ್ಳಿಗಳು ನೆಲಸಮ, ಆತಂಕದಲ್ಲಿ ಜನಜೀವನ
ಲಿಂಕ್ ನಕಲಿಸಲಾಗಿದೆ ✓
ಮಧ್ಯಪ್ರಾಚ್ಯದಲ್ಲಿ ಯುದ್ಧದ ತಾತ್ಕಾಲಿಕ ಅಲ್ಪ ವಿರಾಮ ಘೋಷಣೆಯಾಗಿದ್ದರೂ, ಗಡಿಭಾಗದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಮುಂದುವರಿಸಿರುವುದು ವರದಿಯಾಗಿದೆ.
ಮಾಧ್ಯಮ ಮೂಲಗಳ ಪ್ರಕಾರ, ಗಾಜಾ ಪ್ರದೇಶದಲ್ಲಿ ಹಿಂದಿನಿಂದ ಅನುಸರಿಸಿದ್ದ ಕಾರ್ಯಪದ್ದತಿಯನ್ನೇ ಆಧರಿಸಿ ಗಡಿ ಹಳ್ಳಿಗಳನ್ನು ಸಂಪೂರ್ಣ ಖಾಲಿ ಮಾಡಿ ಧ್ವಂಸಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ತೈಬೆಹ್, ನಕೌರಾ ಮತ್ತು ಡೀರ್ ಸೆರಿಯನ್ ಸೇರಿದಂತೆ ಹಲವಾರು ಹಳ್ಳಿಗಳು ಭಾರೀ ಹಾನಿಗೊಳಗಾಗಿ, ಕೆಲವು ಪ್ರದೇಶಗಳು ಸಂಪೂರ್ಣ ನೆಲಸಮವಾಗಿವೆ.
ದಾಳಿಯಿಂದ ಉಂಟಾದ ಸಾವು-ನೋವಿನ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗದಿದ್ದರೂ, ಸ್ಥಳೀಯ ನಿವಾಸಿಗಳು ಭೀತಿಯಲ್ಲಿದ್ದು, ಅನೇಕರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿರುವ ಬಗ್ಗೆ ವರದಿಗಳು ತಿಳಿಸಿವೆ.
ಇದೇ ವೇಳೆ, ಇತ್ತೀಚಿನ ದಾಳಿಗಳ ಹಿನ್ನೆಲೆ ಲೆಬನಾನ್‌ನಲ್ಲಿ ಸಾವಿನ ಸಂಖ್ಯೆ 2,000 ದಾಟಿದೆ ಎಂಬ ಅಂದಾಜು ಹೊರಬಿದ್ದಿದೆ. ನಿರಂತರ ದಾಳಿಗಳಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಸ್ಥಿತಿ ತೀವ್ರವಾಗಿ ಉದ್ವಿಗ್ನವಾಗಿದೆ.
Peepal Media Desk
Peepal Media · ವಿದೇಶ ವಿಭಾಗ