Friday, June 14, 2024

ಸತ್ಯ | ನ್ಯಾಯ |ಧರ್ಮ

ಹವಾಮಾನದ ಹದಗೆಟ್ಟ ಬದಲಾವಣೆ – ರೈತಾಪಿ ಕಸುಬು ಉಳಿದೀತೆ?

ಉತ್ತರ ಭಾರತಕ್ಕೆ ಹವಾಮಾನ ವೈಪರೀತ್ಯ ಹೊಸದೇನಲ್ಲ. ಆದರೆ, ಅಚ್ಚರಿ ಮತ್ತು ಆತಂಕ ಮೂಡಿಸಿದ ವಿಚಾರವೇನೆಂದರೆ ಒಂದೇ ವಾರದಲ್ಲಿ ಎರಡು ಸುಂಟರಗಾಳಿಗಳು ಎರಗಿದ್ದು. ಬರುವ ದಿನಗಳಲ್ಲಿ ಅವುಗಳ ಉಪಟಳ ನಮ್ಮಲ್ಲೂ ಹೆಚ್ಚಲಾರದು ಎಂದು ಹೇಳುವಂತಿಲ್ಲ. ನಮ್ಮಲ್ಲಿ ಚುನಾವಣೆಯ ಬಿರುಗಾಳಿ ಎಬ್ಬಿಸುತ್ತಿರುವ ನಮ್ಮ ರಾಜಕಾರಣಿಗಳಾರೂ ಹವಾಮಾನ ಬದಲಾವಣೆಯ ಬಗ್ಗೆ ತುಟಿ ಪಿಟ್ಟೆನ್ನುತ್ತಿಲ್ಲ; ಪ್ರಣಾಳಿಕೆಯಲ್ಲಿ ಚಕಾರವಿಲ್ಲ- ಕೆ.ಎಸ್.ರವಿಕುಮಾರ್, ಹಾಸನ

ಕಳೆದ ಮಾರ್ಚ್ 24ರ ಶುಕ್ರವಾರ ಸಂಜೆ ಪಂಜಾಬಿನ ಫಾಜಿಲ್ಕ ಜಿಲ್ಲೆಯ ಗಡಿಹಳ್ಳಿ ಬುಕೇನ್‍ವಾಲಾದಲ್ಲಿ ಒಂದು ಸುಂಟರಗಾಳಿ (Tornado, twister) ಎದ್ದಿತು. ಜನ ಹವ್ವಳಿಸಿ ನೋಡುನೋಡುತ್ತಿದ್ದಂತೆ ಸುಂಟರಗಾಳಿಯ ಉರುಟು ಕಂಬ ನೆಲಕ್ಕಿಳಿದು ತಿರುಗುತ್ತ ಹಳ್ಳಿಯ ಕಡೆಗೇ ದೌಡಾಯಿಸಿ ಬಂತು. ಮನೆ, ಕೊಟ್ಟಿಗೆಗಳ ಮಾಡು ತಡಿಕೆ ಎಲ್ಲ ಹಾರಿ ಹೋದವು. ಬೊಡ್ಡೆ ಕಿತ್ತು ಗಿಡಮರಗಳು ಗಿರಗಿಟ್ಟೆ ಆಡಿದವು. ಹೊತ್ತೊಯ್ಯಬಲ್ಲ ಎಲ್ಲ ವಸ್ತುಗಳನ್ನು ಅದು ತನ್ನೊಂದಿಗೆ ಒಯ್ಯಿತು. ಹಳ್ಳಿಯಲ್ಲಿ ಸಾಕಷ್ಟು ಗಂಡಾಗುಂಡಿ ಮಾಡಿದ ಮೇಲೆ ಹೊಲಗಳ ಕಡೆಗೆ ನುಗ್ಗಿತು. ರೈತರ ತಿಂಗಳುಗಳ ದುಡಿಮೆಯಿಂದ ಕಟಾವಿನ ದಿನಗಳನ್ನು ಎದುರು ನೋಡುತ್ತ ತೆನೆದುಂಬಿ ತೊನೆದಾಡುತ್ತಿದ್ದ ಗೋಧಿಯ ಪೈರುಗಳು ಸುಂಟರಗಾಳಿಯ ಹುಚ್ಚು ಕಸುವಿಗೆ ಸಿಕ್ಕು ಹೊರೆ ಕಟ್ಟಿ ಎಸೆದಂತೆ ಕಸಕ್ಕನೆ ಕಿತ್ತೆದ್ದು ಹೋದವು. ಹಾರಿಹೋಗದವು ಇನ್ನೇಳದಂತೆ ನೆಲಕ್ಕೊರಗಿದವು. ಗೋಧಿ ಫಸಲಿಗೆ ಒದಗಿದ ಹಾನಿ ಎದೆಗೆಡಿಸುವಂತಿತ್ತು. ಬುಕೇನ್‍ವಾಲಾದ ಹಲವು ರೈತರು ಮನೆಯನ್ನೂ ಕಳಕೊಂಡರು, ಕೈಯಾರೆ ಬೆಳೆದ ಗೋಧಿ ಬೆಳೆಯನ್ನೂ ಕಳಕೊಂಡರು. ಭಾರತದ ಭಾಗದಲ್ಲಿ ತನ್ನಿಂದಾದಷ್ಟು ಅವಾಂತರ ಮಾಡಿದ ಮೇಲೆ ಈ ಸುಂಟರಗಾಳಿ ಗಡಿದಾಟಿ ಪಾಕಿಸ್ತಾನದ ಕಡೆ ಸಾಗಿತು. ಯಾವ ಪಾಸ್‍ಪೋರ್ಟ್ ವೀಸಾಗಳ ಗೊಡವೆಯಿಲ್ಲದೆ, ಗಡಿಭದ್ರತಾಪಡೆಗಳ ಕಾವಲನ್ನು ಲೆಕ್ಕಿಸದೆ, ರಾಷ್ಟ್ರೀಯತೆ ದೇಶಭಕ್ತಿಯ ನಾಟಕೀಯ ವಿವರಣೆಗಳಿಗೆ ದಕ್ಕದೆ ‘ನಿಮ್ಮ ಪಾಡನ್ನು ನೀವಿನ್ನು ನೋಡಿಕೊಳ್ಳಿ’ ಎಂದು ಕಣ್ಮರೆಯಾಯಿತು.

ಒಂದು ಸುಂಟರಗಾಳಿಗೆ ಇಷ್ಟೊಂದು ತಲೆಕೆಡಿಸಿಕೊಳ್ಳಬೇಕೆ ಎಂದು ಕೆಲವರಿಗಾದರೂ ಅನಿಸಬಹುದು. ಭಾರತದಿಂದ ಹೊರನಡೆದ ಈ ಸುಂಟರಗಾಳಿ ಹೇಳಬೇಕೆಂದರೆ ಪಂಜಾಬಿನಲ್ಲಿ ಒಂದೇ ವಾರದಲ್ಲಿ ಕಾಣಿಸಿಕೊಂಡ ಎರಡನೆಯ ಪ್ರಕರಣವಾಗಿತ್ತು. ಮೊದಲನೆಯದು ಕಾಣಿಸಿಕೊಂಡಾಗ ಸಾಮಾನ್ಯ ಎಂದು ಅದನ್ನು ಕಡೆಗಣಿಸಲಾಗಿತ್ತು. ಆದರೆ ನಾಲ್ಕೈದು ದಿನದಲ್ಲೆ ಎರಡನೆಯದನ್ನು ಕಂಡಾಗ ಜನ, ಹವಾಮಾನ ಇಲಾಖೆ, ಮಾಧ್ಯಮಗಳು ಮತ್ತು ಅಧಿಕಾರಿಗಳು ಎಲ್ಲರೂ ದಿಗ್ಗನೆಚ್ಚತ್ತರು. ಹಾಗೆ ನೋಡಿದರೆ ಪಂಜಾಬಿನ ಭಾಗದಲ್ಲಿ ಸುಂಟರಗಾಳಿಗಳು ಅಪರೂಪವೇ. ದಾಖಲೆಗಳ ಪ್ರಕಾರ 2007ರಿಂದ ಈಚೆಗೆ ಬುಕೇನ್‍ವಾಲಾದಲ್ಲಿ ಕಂಡ ಸುಂಟರಗಾಳಿಯೇ ನಾಲ್ಕನೆಯದು. ಕಳೆದ 119 ವರುಷಗಳ ದಾಖಲೆಯ ಪುಟಗಳನ್ನು ತಿರುವಿದರೆ ಇದು 15ನೆಯದು. ಅಚ್ಚರಿ ಮತ್ತು ಆತಂಕ ಮೂಡಿಸಿದ ವಿಚಾರವೇನೆಂದರೆ ಒಂದೇ ವಾರದಲ್ಲಿ ಎರಡು ಸುಂಟರಗಾಳಿಗಳು ಎರಗಿದ್ದು. ಹಾಗಿದ್ದರೆ ಬರುವ ದಿನಗಳಲ್ಲಿ ಅವುಗಳ ಉಪಟಳ ಹೆಚ್ಚಬಹುದೇ? ಉತ್ತರ ನಿಸರ್ಗಕ್ಕೆ ಮಾತ್ರ ಗೊತ್ತು.

ಸುಂಟರಗಾಳಿಗಳು ಮುನ್ಸೂಚನೆ ನೀಡದೆ ಜರುಗಿ ಬಿಡುವಂತಹವು. ಮೂರ್ನಾಲ್ಕು ತಾಸುಗಳಲ್ಲಿ ರೂಪುಗೊಂಡು ತಮ್ಮ ಕೆಲಸ ಮುಗಿಸಿ ಜಾಗ ಖಾಲಿ ಮಾಡುತ್ತವೆ. ಹವಾಮಾನ ಇಲಾಖೆ ಸುಂಟರಗಾಳಿಗಳೇಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗದ ತನ್ನ ಪೇಚಾಟವನ್ನು ಆಗಾಗ ತೋಡಿಕೊಳ್ಳುತ್ತದೆ. ತೀರಾ ಸರಳವಾಗಿ ವಿವರಿಸುವುದಾದರೆ ತೇವಭರಿತ ಬಿಸಿಯಾದ ಗಾಳಿ ನೆಲಮಟ್ಟದಲ್ಲಿರುವಾಗ ಮೇಲೆ ಆಕಾಶದಲ್ಲಿ ಗುಡುಗು ಸಿಡಿಲಿನ ಮಳೆ (Thunderstorm)  ತರಬಲ್ಲ ಮೋಡಗಳು ದಟ್ಟವಾಗಿ ಕವಿದಿರುತ್ತವೆ. ಈ ಮೋಡಗಳ ಕೂಡಿಕೆಯಲ್ಲಿರುವ ಥಂಡಿ ಒಣಗಾಳಿಯು ನೆಲದ ಕಡೆಗಿಳಿಯಲು ತವಕಿಸುವಾಗ ನೆಲಮಟ್ಟದ ಹಗುರ ಬಿಸಿಗಾಳಿಯು ವಾತಾವರಣದ ಮೇಲಿನ ಸ್ತರಗಳಿಗೆ ಏರಲು ತವಕಿಸುತ್ತದೆ. ಈ ಎರಡೂ ಗಾಳಿಗಳ ನಡುವೆ ತೀವ್ರ ತಿಕ್ಕಾಟ (Collision) ಜರುಗಿ ಸುಂಟರಗಾಳಿಗಳೆದ್ದು ಕುಣಿಯುತ್ತವೆ. ಇಂತಹ ಸನ್ನಿವೇಶಗಳು ಹೆಚ್ಚೆಚ್ಚು ಜರುಗಲು ಹವಾಮಾನ ಬದಲಾವಣೆಯು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಮೊನ್ನೆ ಏಪ್ರಿಲ್ 1ರ ರಾತ್ರಿ ಅಮೆರಿಕಾದ ಏಳು ರಾಜ್ಯಗಳಲ್ಲಿ 40 ಕಡೆ ಸುಂಟರಗಾಳಿಗಳೆದ್ದು ಸಾಕಷ್ಟು ಹಾನಿ ಮಾಡಿರುವುದನ್ನು ನೋಡಿದರೆ ಹವಾಮಾನ ಪರಿಣಿತರ ಅನಿಸಿಕೆ ಸರಿಯೆನಿಸುತ್ತದೆ.

ನಾನಿಲ್ಲಿ ಹೆಚ್ಚು ಒತ್ತು ಕೊಟ್ಟು ಹೇಳಹೊರಟಿರುವುದು ಸುಂಟರಗಾಳಿಗಳು ಆಸ್ತಿಪಾಸ್ತಿಗೆ ಮಾಡುವ ಹಾನಿಯ ಜೊತೆಗೆ ಬೆಳೆಗಳಿಗೆ ಎಸಗುವ ಹಾನಿಯೂ ಮುಖ್ಯ ಎಂದು. ಈ ವರುಷ 11.218 ಕೋಟಿ ಟನ್ನುಗಳ ದಾಖಲೆ ಗೋಧಿಬೆಳೆಯನ್ನು ಕಾಣಬಹುದು ಎಂದು ಭಾರತ ಕಾತರದಿಂದ ಕಾಯುತ್ತಿರುವಾಗಲೇ ನಮ್ಮ ರೈತರಿಗೆ ಅದೆಷ್ಟು ಸವಾಲುಗಳು ಎದುರಾಗಬೇಕೊ ತಿಳಿಯದು.

ಪಡುವಣದ ಅಡಚಣೆ

ಪ್ರತೀ ವರುಷ ‘ಪಡುವಣದ ಅಡಚಣೆ’ (Western disturbance) ಎಂದು ಕರೆಯಲ್ಪಡುವ ವಿದ್ಯಮಾನವೊಂದು ಡಿಸೆಂಬರ್‌ ನಿಂದ ಮಾರ್ಚಿಯ ತನಕ ಜರುಗುತ್ತದೆ. ಆರ್ಕಟಿಕ್ ಕಡೆಯಿಂದ ಬೀಸಿ ಬರುವ ತಂಪು ಗಾಳಿ ಮತ್ತು ಉಷ್ಣವಲಯದಿಂದ ಬೀಸಿ ಬರುವ ಬಿಸಿ ಗಾಳಿ ಎರಡೂ ಬೆರೆತು ಹುಟ್ಟಿದ ಪಡುವಣ ಅಡಚಣೆಯ jet stream ಗಳು ತಿಂಗಳಿಗೆ ನಾಲ್ಕರಿಂದ ಆರು ಬಾರಿ (ನಾಲ್ಕು ತಿಂಗಳ ಗಡುವಿನಲ್ಲಿ ಒಟ್ಟು 16ರಿಂದ 24ರವರೆಗೆ) ಮೆಡಿಟರೇನಿಯನ್ ಕಡಲು, ಕಪ್ಪು ಕಡಲು ಮತ್ತು ಕ್ಯಾಸ್ಪಿಯನ್ ಕಡಲಿನಿಂದ ನೀರಾವಿಯ ಹೇರಳ ತೇವಾಂಶವನ್ನು ಪಡೆದುಕೊಂಡು ಇರಾನ್, ಅಫಘಾನಿಸ್ತಾನಗಳ ಮೇಲೆ ಹಾದು ಬಂದು ಪಶ್ಚಿಮ ಹಿಮಾಲಯದ ಹೆಬ್ಬೆಟ್ಟಗಳಿಗೆ ಮಂಜನ್ನು ತಂದು ಸುರಿದರೆ ಪಶ್ಚಿಮ, ವಾಯುವ್ಯ ಹಾಗೂ ಮಧ್ಯ ಭಾರತದ ರಾಜ್ಯಗಳಿಗೆ ಮಳೆಯನ್ನು ತರುತ್ತವೆ. ಚಳಿಗಾಲದ ಈ ಮಳೆ ಗೋಧಿ ಬೆಳೆಗೆ ಹಸನಾಗಿರುತ್ತದೆ. ಆದರೆ 2020ರಿಂದ ಈಚೆಗೆ ಬೆಚ್ಚಗಾಗುತ್ತಿರುವ ಆರ್ಕಟಿಕ್ ಪ್ರದೇಶದಿಂದ ಬರುವ ಗಾಳಿ ತಂಪಾಗಿರುವ ಬದಲು ಬಿಸಿಯಾಗತೊಡಗಿದ್ದು ಈ ಪಡುವಣ ಅಡಚಣೆಯ ಗಾಳಿಗಳ ವಲಸೆಯಲ್ಲಿ ಹಿಂದಿದ್ದ ಹದವನ್ನು ತಪ್ಪಿಸಿದೆ. ಈ ಚಳಿಗಾಲದಲ್ಲಂತೂ ಡಿಸೆಂಬರ್ ಮತ್ತು ಫೆಬ್ರವರಿಗಳಲ್ಲಿ ಪಡುವಣ ಅಡಚಣೆಯ ಗಾಳಿಯು ಒಂದೇ ಒಂದು ಮೋಡವನ್ನು ಭಾರತಕ್ಕೆ ತರಲಿಲ್ಲ. ಮಾರ್ಚ್ ಕೂಡಾ ಫೆಬ್ರವರಿಯಂತೆ ವಿಪರೀತ ತಾಪವನ್ನು ದಾಖಲಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೆ ಈ ಎಚ್ಚರಿಕೆಯನ್ನು ಅಣಕಿಸುವಂತೆ ಮಾರ್ಚಿಯಲ್ಲಿ ಪಡುವಣ ಅಡಚಣೆಯ ಗಾಳಿಗಳು ತಂದದ್ದು ದಂಡಿ ಮಳೆ. ಮಾರ್ಚಿಯಲ್ಲಿ ಸಾಮಾನ್ಯವಾಗಿ ಉತ್ತರ ಮತ್ತು ವಾಯುವ್ಯ ಭಾರತ ಮಳೆ ಕಾಣುವುದಿಲ್ಲ. ಆದರೆ ಈ ಬಾರಿ ಬಂದ ಮಳೆ ಬರಿಯ ಮಳೆಯಾಗಿರದೆ ಮತ್ತೆ ಮತ್ತೆ ಆಲಿಕಲ್ಲಿನೊಂದಿಗೆ ಎರಗಿದ ಹುಚ್ಚು ಮಳೆಯಾಗಿದ್ದಿತು. ಜಾಗತಿಕ ತಾಪ ಏರಿಕೆಗೆ ಬರುಬರುತ್ತ ಚಳಿಗಾಲ ಮೊಟಕುಗೊಂಡು ಬೇಸಗೆ ಹಿಗ್ಗುತ್ತಿರುವುದರಿಂದ ಉತ್ತರ ಆಫ್ರಿಕಾ, ಮಧ್ಯ ಏಷ್ಯಾ ಮತ್ತು ದಕ್ಷಿಣ ಯುರೋಪುಗಳ ಮೇಲಿನ ಪಡುವಣ ಅಡಚಣೆಯ ಗಾಳಿಯು ವಿಪರೀತ ಕಾದು ಮೆಡಿಟರೇನಿಯನ್, ಕಪ್ಪು ಮತ್ತು ಕ್ಯಾಸ್ಪಿಯನ್ ಕಡಲುಗಳಿಂದ ಹೆಚ್ಚೆಚ್ಚು ನೀರಾವಿಯ ತೇವಾಂಶವನ್ನು ಭಾರತದ ಕಡೆ ಹೊತ್ತು ತರುತ್ತಿದೆ. ಹೆಚ್ಚುವರಿ ನೀರಾವಿಯೆಂದರೆ ಹೆಚ್ಚು ಮಳೆ ಮತ್ತು ಹೆಚ್ಚು ಆಲಿಕಲ್ಲುಗಳು ತಾನೆ?

ಮಾರ್ಚಿಯಲ್ಲಿ ಬಿಸಿಯಲೆಗಳ ಕಾವನ್ನು ದಿಗಿಲುಗೊಂಡು ಎದುರು ನೋಡುತ್ತಿದ್ದ ಉತ್ತರ ಭಾರತೀಯರಿಗೆ ಸಿಕ್ಕಿದ್ದು ಮಳೆಯ ಮಾರಕ ಪೆಟ್ಟು. ಮಾರ್ಚ್ ಕಡೆಯ ಹೊತ್ತಿಗೆ ಇಲ್ಲವೆ ಏಪ್ರಿಲ್ ಮೊದಲ ವಾರದಲ್ಲಿ ಕಟಾವಾಗಬೇಕಿದ್ದ ಗೋಧಿಯ ಪೈರನ್ನು ಬಿರುಗಾಳಿಗಳ ಮುಂದಾಳ್ತನದಲ್ಲಿ ಬಿರುಸು ಮಳೆ ಮತ್ತು ಆಲಿಕಲ್ಲಿಗಳು ಮೇಲೇಳದಂತೆ ಜಪ್ಪಿ ಹಾಕಿದವು.

ಮಳೆಯ ಸಾಧ್ಯತೆ ಹೆಚ್ಚಿದಂತೆ ಹವಾಮಾನ ಇಲಾಖೆಯು ರೈತರಿಗೆ ಗೋಧಿ ಕಟಾವನ್ನು ಮುಂದೂಡಲು ಸೂಚಿಸಿತು. ನವೆಂಬರ್ ಮೊದಲಲ್ಲೆ ಬಿತ್ತನೆ ಮಾಡಿದವರು ಅದಾಗಲೆ ಮಾರ್ಚಿಯ ಶುರುವಿನಲ್ಲಿ ಕಟಾವು ಮುಗಿಸಿದ್ದರು. ಕಟಾವಾದ ಬಹುಪಾಲು ಬೆಳೆ  ಹೊಲದಲ್ಲೆ ಇತ್ತು. ಇನ್ನೊಂದಷ್ಟು ಒಕ್ಕಲಾಟ ಮುಗಿಸಿ ಮಂಡಿಗೆ ತಲುಪಿಯಾಗಿತ್ತು. ಕಟಾವಾಗದೆ ಉಳಿದವು ಮಳೆಯ ತೇವಾಂಶ ಹೀರಿಕೊಂಡು ಬಲಿತ ಗೋಧಿಕಾಳಿನ ಗುಣಮಟ್ಟವನ್ನು ಕುಗ್ಗಿಸಿದವು. ನವೆಂಬರ್ ಕಡೆಯಲ್ಲಿ ಬಿತ್ತನೆಯಾದ ಗೋಧಿ ಮಾರ್ಚ್ ಕಡೆಯಲ್ಲಿ ಅಥವಾ ಏಪ್ರಿಲಿನ ಶುರುವಿನಲ್ಲಿ ಕಟಾವಾಗಬೇಕಿತ್ತು. ಒಟ್ಟು ಎಲ್ಲವೂ ಗೋಜಲಾಗಿತ್ತು. ಮಾರ್ಚಿಯ ಮಳೆ ರೈತರ ಸುಗ್ಗಿಯ ಸಂತೋಷವನ್ನು ಕಿತ್ತುಕೊಂಡಿತ್ತು. ಬಹುಶಃ ಉತ್ತರ ಭಾರತದ ಗೋಧಿ ಬೆಳೆಗಾರರು ತಮ್ಮ ಸಾಗುವಳಿಯ ಚರಿತ್ರೆಯಲ್ಲೆ ಮಾರ್ಚಿಯಲ್ಲಿ ಇಷ್ಟು ಆತಂಕ, ಅಂಜಿಕೆಗೆ ಈಡಾದದ್ದೇ ಇರಲಿಲ್ಲವೇನೊ. ಪಂಜಾಬ್, ಹರ್ಯಾಣ ಮತ್ತು ರಾಜಸ್ತಾನಗಳಲ್ಲಂತೂ ರೈತರು ಬಹಳ ಉದ್ವಿಗ್ನದಲ್ಲೆ ಮಾರ್ಚಿಯ ದಿನಗಳನ್ನು ಕಳೆದರು.

ಸರಣಿ ಸಿಕ್ಕುಗಳು

ಮಾರ್ಚಿಯ ಮೊದಲ ವಾರದಲ್ಲೆ ಪಡುವಣ ಅಡಚಣೆಯಿಂದ ಪುಸಲಾಯಿಸಲ್ಪಟ್ಟ, ತಾಸಿಗೆ 30 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಬೀಸುತ್ತಿದ್ದ ನೆಲಮಟ್ಟದ ಹೊಯ್ಗಾಳಿ ಪಂಜಾಬ್, ಹರ್ಯಾಣದ ಹಲವು ಜಿಲ್ಲೆಗಳಲ್ಲಿ ಹಾಲುಗಟ್ಟುತ್ತಿದ್ದ ಗೋಧಿತೆನೆಗಳನ್ನು ಒಣಗಿಸತೊಡಗಿತು. ಒಣಗಿದ ಕಾಳುಗಳು ಸಿಪ್ಪೆಯಲ್ಲೆ ಬಿರುಕುಬಿಟ್ಟವು.

ಹೊಯ್ಗಾಳಿಯ ನಂತರ ಹವಾಮಾನ ಇಲಾಖೆ ಆಲಿಕಲ್ಲಿನ ಮಳೆಗಳ ಬಗ್ಗೆ ಮುನ್ಸೂಚನೆ ನೀಡಿತು (ಈ ವರುಷ ವಿಪರೀತ ತಾಪವನ್ನು ಕಂಡ ಫೆಬ್ರವರಿಯಲ್ಲಿ ಹದ ಮಳೆಯಾಗಿದ್ದಿದ್ದರೆ ಬೆಳವಣಿಗೆಯ ನಡುಹಂತದಲ್ಲಿದ್ದ ಗೋಧಿ ಪೈರಿಗೆ ಒಳಿತಾಗುತ್ತಿತ್ತೇನೊ. ಆದರೆ ಹಾಗಾಗಲಿಲ್ಲ). ಮುಂದೆ ಹಲವು ದಿನ ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ತಾನಗಳಲ್ಲಿ ವ್ಯಾಪಕ ಮಳೆಯೊಂದಿಗೆ ಸುರಿದ ಆಲಿಕಲ್ಲು 24 ತಾಸಿಗೂ ಹೆಚ್ಚು ಕಾಲ ನೆಲವನ್ನು ಅಚ್ಚ ಬಿಳಿಯಾಗಿಸಿಬಿಟ್ಟಿತ್ತು. ಆಲಿಕಲ್ಲಿನಡಿ ಜಜ್ಜಿಹೋದ ಗೋಧಿ ಬೆಳೆಯ ‘ಅಳು’ವನ್ನು ಬೆಳೆದ ರೈತ ಮಾತ್ರ ಕೇಳಿಸಿಕೊಳ್ಳಬಹುದಿತ್ತು. ಹರ್ಯಾಣದ ಚೌರಮಸ್ತಪುರ ಹಳ್ಳಿಯ ಗುರುವಿಂದರ್ ಸಿಂಗ್ 35 ಎಕರೆಯಲ್ಲಿ ಗೋಧಿ ಬೆಳೆದಿದ್ದರು. ಮಳೆ ಗಾಳಿಗಳು ಅವರ ಕಠಿಣ ದುಡಿಮೆಯ 20 ಎಕರೆಯಲ್ಲಿದ್ದ ಅರೆ ಬಲಿತು ನಿಂತಿದ್ದ ಗೋಧಿಬೆಳೆಯನ್ನು ಮುರಿದು ಮಲಗಿಸಿದವು. ಇನ್ನುಳಿದಿದ್ದರಲ್ಲಿ ಬರುವ ಇಳುವರಿಯು ಸಾಗುವಳಿಯ ಪೂರ್ತಿ ವೆಚ್ಚವನ್ನು ತುಂಬಿಕೊಡುವುದೊ ಇಲ್ಲವೊ ಗೊತ್ತಿಲ್ಲ. ಮತ್ತೊಬ್ಬ ರೈತ ಕುರ್ಬಾನಪುರದ ಕರಮ್ ಸಿಂಗ್ ಬೆಳೆದ ಬಹುಪಾಲು ಗೋಧಿ ನೆಲಕ್ಕೊರಗಿದ್ದಲ್ಲದೆ ಈಗಾಗಲೆ ಕಟಾವು ಮಾಡಿ ಒಂದೆಡೆ ಒಟ್ಟಿದ್ದ ಸಾಸಿವೆಯ ಗುಪ್ಪೆಗಳು ಪೂರ್ತಿ ಮಳೆಯಲ್ಲಿ ತೊಯ್ದು ನಿರುಪಯುಕ್ತವಾಗಿ ಹೋದವು. ಅಖೇರಿ ಮದನಪುರದ ರೈತ ಮಹಿಳೆ ಪರ್ವೀನ್ ʼನನ್ನ 12 ಎಕರೆಯಲ್ಲಿ ಬೆಳೆದಿದ್ದ ಅಷ್ಟೂ ಗೋಧಿ ನಾಶವಾಗಿದೆ. ಸರ್ಕಾರ ನೆರವಾಗದಿದ್ದರೆ ನಾನೂ ಬರ್ಬಾದ್ ಆದಂತೆ’ ಎಂದು ಕಣ್ಣೀರಿಟ್ಟಿದ್ದಾರೆ. ಕನಿನಾ ಹೋಬಳಿಯ ಎಲ್ಲ 53 ಹಳ್ಳಿಗಳ ಗೋಧಿ ಹೊಲಗಳಿಗೆ ಪೂರ್ತಿ ಹಾನಿಯಾಗಿದೆ. ಕರ್ನಾಲ್ ಜಿಲ್ಲೆಯಲ್ಲಿ 1.5 ಲಕ್ಷ ಹೆಕ್ಟೇರ್ ಪ್ರದೇಶದ ಗೋಧಿ ಹೊಲ ನಾಶವಾಗಿದ್ದರೆ, ಅಂಬಾಲ, ಮಹೇಂದ್ರಘರ್, ಪಾನಿಪತ್ ಜಿಲ್ಲೆಗಳಲ್ಲಿ ಒಟ್ಟು 56 ಸಾವಿರ ಹೆಕ್ಟೇರ್ (1.4 ಲಕ್ಷ ಎಕರೆಗಳು) ಪ್ರದೇಶದ ಗೋಧಿಪೈರು ಹಾಗೂ ಸಾಸಿವೆ ನೆಲಸಮವಾಗಿರುವುದರ ಕುರಿತು The Tribune ಪತ್ರಿಕೆ ಹಾನಿಯ ತಾಣಗಳಿಂದಲೇ ನೇರ ವರದಿಗಳನ್ನು ನೀಡಿದೆ. ಮಹೇಂದ್ರಘರ್ ಜಿಲ್ಲೆಯೊಂದೆ ಶೇಕಡಾ 50ರಷ್ಟು ಗೋಧಿ ಮತ್ತು ಶೇಕಡಾ 75ರಷ್ಟು ಸಾಸಿವೆ ಬೆಳೆ ನಾಶವನ್ನು ದಾಖಲಿಸಿದೆ.

ಸಾಧುಸಿಂಗ್

ನೀರಾವರಿ ಕಾಲುವೆಯೆ ಸಾವಿಗೆ ಸಾಕ್ಷಿಯಾದಾಗ

ಇದೇ ಏಪ್ರಿಲ್ 8ರಂದು ಪಂಜಾಬಿನ ಮುಕ್ತಸರ್ ಜಿಲ್ಲೆಯ ಭಲ್ಲಾಯಿನ ಹಳ್ಳಿಯ 65 ವರುಷದ  ಸಾಧುಸಿಂಗ್ ಸಂಜೆಯಿಂದ ಕಾಣೆಯಾದರು. ಮಾರನೇ ದಿನ ಅವರ ಕಳೇಬರ ಮತ್ತು ಅವರು ಓಡಿಸುತ್ತಿದ್ದ ಮೋಟಾರ್ ಬೈಕು ಎರಡೂ ರಾಜಸ್ತಾನಕ್ಕೆ ಅವರ ಹಳ್ಳಿಯ ಮೂಲಕ ಹಾದುಹೋಗುವ Rajasthan Feeder Canal (ಇಂದಿರಾ ಗಾಂಧಿ ಕಾಲುವೆ)ನಲ್ಲಿ ಸಿಕ್ಕವು. ಕಣ್ಣಾರೆ ಕಂಡವರ ಹೇಳಿಕೆಯನ್ನು ಉಲ್ಲೇಖಿಸುವ ಪೊಲೀಸ್ ದಾಖಲೆಗಳ ಪ್ರಕಾರ ಸಾಧುಸಿಂಗ್ ಮೋಟಾರ್‌ ಬೈಕನ್ನು ನೇರವಾಗಿ ಕಾಲುವೆಯ ನೀರಿಗೇ  ಚಲಾಯಿಸಿ ಮುಳುಗಿ ಕೊನೆಯುಸಿರೆಳೆದಿದ್ದರು. ಇದು ಆಕಸ್ಮಿಕ ಸಾವಾಗಿರಲಿಲ್ಲ. ಆತ್ಮಹತ್ಯೆಯಾಗಿತ್ತು. ಆತ್ಮಹತ್ಯೆಗೆ ಕಾರಣ ಅವರ ಗೋಧಿಹೊಲಗಳಲ್ಲಿ ಬಿತ್ತನೆಯಾಗಿತ್ತು. ಸಾಧುಸಿಂಗ್ 12 ಎಕರೆಗಳ ಜಮೀನಿನ ಮಾಲೀಕ. ಜೊತೆಗೆ ಈ ಬಾರಿ 25 ಎಕರೆಗಳಷ್ಟು ಜಮೀನನ್ನು ಬೇರೆಯವರಿಂದ ಗೇಣಿಗೆ ಪಡೆದು ಒಟ್ಟು 37 ಎಕರೆಯಲ್ಲಿ ಗೋಧಿ ಬೆಳೆದಿದ್ದರು. ಇಷ್ಟು ಜಮೀನಿನಲ್ಲಿ ಗೋಧಿ ಬೆಳೆಯಲು 7 ಲಕ್ಷ ಸಾಗುವಳಿ ಸಾಲವನ್ನು ಪಡೆದಿದ್ದರು. ಹುಚ್ಚು ಮಳೆ ಮತ್ತು ಆಲಿಕಲ್ಲುಗಳು ಬಹುತೇಕ ಅವರ ಗೋಧಿ ಬೆಳೆಯ ಹುಟ್ಟಡಗಿಸಿದವು. ಕಂಗಾಲಾದ ಸಾಧುಸಿಂಗ್ ಆತ್ಮಹತ್ಯೆಗೆ ಶರಣಾದರು. ಪಂಜಾಬ್ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಗೋಧಿಬೆಳೆ ಹಾನಿಯನ್ನು ದಾಖಲಿಸಿದೆ. ರಾಜ್ಯದ ಎಲ್ಲೆಡೆ  ರೈತಾಪಿ ಜನರ ನಡುವೆ ನಿರುತ್ಸಾಹ ಮಡುಗಟ್ಟಿದೆ. ಈ ವರುಷದ ಬೈಶಾಖಿ ಹಬ್ಬ ಕಳೆಗುಂದಿದೆ. ಬೈಶಾಖಿ ಉಲ್ಲಾಸದ ಸುಗ್ಗಿಯ ಜೊತೆ ತಳುಕು ಹಾಕಿಕೊಂಡ ಹಬ್ಬ.

ಇತ್ತ ಹರ್ಯಾಣ ಕಳೆದ ವರುಷದಂತೆ ಈ ವರುಷವೂ ವಿಫಲ ಇಳುವರಿಯ ಕಡೆ ಜಾರುತ್ತಿರುವಾಗ ಅತ್ತ ಪಂಜಾಬ್ ಕೂಡಾ ಹಾನಿಯ ಮೇಲೆ ಹಾನಿಯನ್ನು ದಾಖಲಿಸಿತು. ಪಂಜಾಬಿನಲ್ಲಿ ಈ ವರುಷ 34.9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿಯನ್ನು ಬೆಳೆಯಲಾಗಿದೆ. ಸುಂಟರಗಾಳಿಗಳು ನರ್ತಿಸಿದ ಫಾಜಿಲ್ಕ ಜಿಲ್ಲೆ ಹೆಚ್ಚು ಹಾನಿಯನ್ನು ಕಂಡಿದೆ. ಮುಕ್ತಸರ್ ಜಿಲ್ಲೆಯಲ್ಲಿ 90 ಸಾವಿರ ಹೆಕ್ಟೇರ್ ಗೋಧಿಹೊಲ ನೆಲಕಚ್ಚಿದ್ದರೆ ರೊಪಾರ್ ಜಿಲ್ಲೆಯಲ್ಲಿ ಬೆಳೆನಾಶ 30 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹರಡಿಹೋಗಿದೆ. ಲೂಧಿಯಾನ ಜಿಲ್ಲೆಯಲ್ಲಿ ಕಾಳು ಹಿಟ್ಟುಗಟ್ಟುತ್ತಿದ್ದ ನಿರ್ಣಾಯಕ ಹಂತದಲ್ಲೆ 25 ಸಾವಿರ ಹೆಕ್ಟೇರ್ ನಲ್ಲಿದ್ದ ಗೋಧಿಬೆಳೆ ನಾಶವಾಗಿದೆ. ಜಲಂಧರ್ ಜಿಲ್ಲೆಯಲ್ಲಿ ಒಟ್ಟು ಬೇಸಾಯಕ್ಕೆ ಒಳಪಟ್ಟ ಗೋಧಿಬೆಳೆಯಲ್ಲಿ ಶೇಕಡಾ 30ರಷ್ಟು ನಾಶವಾಗಿದೆ. ತಗ್ಗಿರುವ ಹೊಲಗಳಲ್ಲಿ ಮಳೆಯ ನೀರು ದಿನಗಟ್ಟಲೆ ನಿಂತು ಗೋಧಿ ಗಿಡಗಳು ಕೊಳೆತು ಹೋಗಿವೆ. ಒಟ್ಟಾರೆ ಈ ವರುಷ ಪಂಜಾಬಿನಲ್ಲಿ ಅಂದಾಜಿಸಿದ ಇಳುವರಿಯಲ್ಲಿ ಶೇಕಡಾ 10-15ರಷ್ಟು ಕಡಿಮೆಯಾಗ ಬಹುದಾಗಿದೆ (ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಸರ್ಕಾರದಿಂದ ಪರಿಹಾರ ಕೋರಿ ಪೋರ್ಟಲ್‍ನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ರೈತರು ಕೋರಿಕೆ ಸಲ್ಲಿಸುತ್ತಿದ್ದಾರೆ).

ಮಾರ್ಚ್ ಮೂರನೇ ವಾರದಲ್ಲಿ ರಾಜಸ್ತಾನದ ಗೋಧಿ ಹೊಲಗಳು ದಾಳಿಗೊಳಗಾದವು. ಹಾನಿ ಎಷ್ಟರ ಮಟ್ಟಿಗಿತ್ತೆಂದರೆ ಬುಂದಿ ಜಿಲ್ಲೆಯ ಬಜಾಡ್ ಹಳ್ಳಿಯ ರೈತ ಪೃಥ್ವಿರಾಜ್ ಬೇರ್ವಾ ಮೂರ್ನಾಲ್ಕು ದಿನ ತಾಸಿಗೆ 40 ಕಿ.ಮೀ.ಗಿಂತಲೂ ವೇಗವಾಗಿ ಬೀಸಿದ ಬಿರುಗಾಳಿ ಮತ್ತು ಮಳೆಗೆ ತಮ್ಮ ಗೋಧಿ ಬೆಳೆ ಮಕಾಡೆ ಮಲಗಿದ್ದನ್ನು ಕಂಡು ಕುಸಿದು ಹೋದರು. ಮಳೆ ನಿಂತ ಮಾರನೇ ದಿನ ಕಡೆಯ ಬಾರಿ ಹೊಲಕ್ಕೊಮ್ಮೆ ಭೇಟಿಕೊಟ್ಟು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡರು. ರಾಜಸ್ತಾನದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಒಂದು ಅಡಿಯಷ್ಟು ದಪ್ಪನಾಗಿ ಬಿದ್ದಿತ್ತು. ಹೊಲಗಳೆಲ್ಲ ಬೆಳ್ಳಗೆ ಬೆಳಗುತ್ತಿದ್ದವು. ರಾಜಸ್ತಾನದಲ್ಲಿ ಗೋಧಿಯಲ್ಲದೆ ಬಾರ್ಲಿ, ಸಾಸಿವೆ, ಕಡಲೆಗಳಿಗೂ ಬಹಳ ಹಾನಿಯಾಗಿದೆ. ಈ ನಡುವೆ ರಾಜಸ್ತಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಒಟ್ಟು ನೆಲಕಚ್ಚಿ ನಾಶವಾದ ಗೋಧಿಹೊಲಗಳ ವಿಸ್ತೀರ್ಣ 5.23 ಲಕ್ಷ ಹೆಕ್ಟೇರ್ ಗಳಷ್ಟು ಎಂದು ಸರ್ಕಾರಿ ಸರ್ವೆಗಳು ಲೆಕ್ಕಹಾಕಿವೆ. ಹೆಚ್ಚು ಹಾನಿಗೊಳಗಾದ ಪಂಜಾಬ್ ಮತ್ತು ಹರ್ಯಾಣಗಳಿಂದ ಆಖೈರಾದ ಲೆಕ್ಕ ಇನ್ನೂ ಬರಬೇಕಿದೆ.

ಹವಾಮಾನದ ನಾಟಕೀಯ ತ್ವರಿತ ಬದಲಾವಣೆಗಳು ಇನ್ನೂ ಏನೇನು ಆಘಾತಗಳನ್ನು ನಮ್ಮ ರೈತರಿಗೆ ತರಲಿಕ್ಕಿದೆಯೊ ಗೊತ್ತಿಲ್ಲ.

(ಈ ಲೇಖನದ ಮುಂದಿನ ಭಾಗ ನಾಳೆ (25) ಪ್ರಕಟವಾಗಲಿದೆ)

ಕೆ.ಎಸ್.ರವಿಕುಮಾರ್, ಹಾಸನ

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊ : 9964604297

ಇದನ್ನೂ ಓದಿ-http://ಅಮೆರಿಕಾ ಎಂಬ ಬಲೂನಿಗೆ ಹವಾಮಾನದ ಮಿಸೈಲುಗಳು| ಬಾಂಬ್ ಸೈಕ್ಲೋನ್

Related Articles

ಇತ್ತೀಚಿನ ಸುದ್ದಿಗಳು