Wednesday, September 24, 2025

ಸತ್ಯ | ನ್ಯಾಯ |ಧರ್ಮ

ಹಗಲು ಹೊತ್ತು ದೇವರ ಪೂಜೆ, ರಾತ್ರಿ ವೇಳೆ ಕಳ್ಳತನ: ಇಬ್ಬರು ಅರ್ಚಕರ ಬಂಧನ!

ಬೆಂಗಳೂರು: ಹಗಲಿನಲ್ಲಿ ದೇವಾಲಯಗಳಲ್ಲಿ ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬ ರಾತ್ರಿಯಲ್ಲಿ ಅದೇ ದೇವಾಲಯಗಳಲ್ಲಿ ಕಳ್ಳತನದಲ್ಲಿ ತೊಡಗಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೈಲಿನಲ್ಲಿ ಪರಿಚಯವಾದ ಮತ್ತೊಬ್ಬ ಆರೋಪಿಯ ಸಹವಾಸದಲ್ಲಿ, ಈ ಇಬ್ಬರು ಪ್ರತಿ ಕಳ್ಳತನದ ನಂತರ ದೇವರ ಮುಂದೆ ಕ್ಷಮೆ ಯಾಚಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಅರ್ಚಕ ಪ್ರವೀಣ್ ಭಟ್ ಮತ್ತು ಆತನ ಸಹಚರ ಸಂತೋಷ್ ಎಂದು ಗುರುತಿಸಲಾಗಿದೆ. ಪ್ರವೀಣ್ ಭಟ್ ಶಿವಮೊಗ್ಗ ಮತ್ತು ಉಡುಪಿಯ ಪ್ರತಿಷ್ಠಿತ ದೇವಾಲಯಗಳಲ್ಲಿ ಬೆಳಗ್ಗೆ ಪೂಜೆ, ಹೋಮ, ಹವನಗಳನ್ನು ನೆರವೇರಿಸುತ್ತಿದ್ದ. ಆದರೆ, ರಾತ್ರಿಯಾಗುತ್ತಿದ್ದಂತೆ ಅದೇ ದೇವಾಲಯಗಳಲ್ಲಿನ ದೇವರ ಬೆಳ್ಳಿ ಸಾಮಾನುಗಳು, ಹಿತ್ತಾಳೆ ವಸ್ತುಗಳು ಮತ್ತು ಚಿನ್ನಾಭರಣಗಳನ್ನು ಕದ್ದು ಮಾರಾಟ ಮಾಡುತ್ತಿದ್ದ.

ಅರ್ಚಕನಾಗಿದ್ದರಿಂದ, ಇವನಿಂದ ವಸ್ತುಗಳನ್ನು ಖರೀದಿಸುವವರು ಯಾವುದೇ ಅನುಮಾನ ಪಡುತ್ತಿರಲಿಲ್ಲ. ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆ ಅಥವಾ ತಮ್ಮ ಮನೆಯಲ್ಲಿ ಇಂತಹ ವಸ್ತುಗಳು ಹೆಚ್ಚಾಗಿವೆ ಎಂದು ಹೇಳಿ ಜನರನ್ನು ನಂಬಿಸುತ್ತಿದ್ದ.

ಹೀಗೆ ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾಗ ಪ್ರವೀಣ್‌ಗೆ ಸಂತೋಷ್ ಪರಿಚಯವಾಗಿ, ಇಬ್ಬರೂ ಹೊರಬಂದ ನಂತರ ಕಳ್ಳತನದ ಪಾಲುದಾರರಾಗಿದ್ದರು. ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಅರ್ಚಕನಾಗಿದ್ದಾಗ ಕೂಡ ಕಳ್ಳತನ ಮಾಡಿದ್ದು, ದೇವಾಲಯದ ಆಡಳಿತ ಮಂಡಳಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದೆ.

ಬನ್ನೇರುಘಟ್ಟದ ಸಮೀಪದ ಗೊಟ್ಟಿಗೇರೆ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಪ್ರವೀಣ್ ಮತ್ತು ಸಂತೋಷ್ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ, ರಾಜ್ಯದ ಹಲವು ದೇವಾಲಯಗಳಲ್ಲಿ ಕಳ್ಳತನ ಮಾಡಿರುವುದು ಬಯಲಾಗಿದೆ. ಇವರು ಕದ್ದ ಸಾಮಗ್ರಿಗಳನ್ನು ಒಂದು ಅಂಗಡಿಗೆ ಮಾರಾಟ ಮಾಡಿದರೆ, ಮತ್ತೆ ಆ ಅಂಗಡಿಯ ಕಡೆ ಹೋಗುತ್ತಿರಲಿಲ್ಲ. ಹೀಗೆ ಎಲ್ಲಿಯೂ ಸಿಕ್ಕಿಬೀಳದಂತೆ ಪಕ್ಕಾ ಯೋಜನೆ ರೂಪಿಸಿದ್ದರು.

ಬಂಧಿತರಿಂದ ಒಟ್ಟು 14 ಲಕ್ಷ ರೂಪಾಯಿ ಮೌಲ್ಯದ ಕಳವು ಮಾಡಿದ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ, ಈ ಇಬ್ಬರ ವಿರುದ್ಧ ಬನಶಂಕರಿ, ಜಯನಗರ, ಕುಮಾರಸ್ವಾಮಿ ಲೇಔಟ್, ಜೆಪಿ ನಗರ ಸೇರಿದಂತೆ ಸುಮಾರು 11 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page