Friday, February 6, 2026

ಸತ್ಯ | ನ್ಯಾಯ |ಧರ್ಮ

ಡೆಲ್ಲಿ ದಾಖಲೆಯ ಸವಾಲು ಗೆದ್ದ ಆರ್‌ಸಿಬಿ; ಎರಡನೇ ಬಾರಿಯೂ ಡಬ್ಲ್ಯುಪಿಎಲ್‌ ಚಾಂಪಿಯನ್‌

ಕೊತಂಬಿ ಕ್ರೀಡಾಂಗಣ: ಡೆಲ್ಲಿ ಕ್ಯಾಪಿಟಲ್ಸ್‌ ಒಡ್ಡಿದ ದಾಖಲೆ ಮೊತ್ತದ ಗುರಿಯನ್ನು ಲೀಲಾಜಾಲವಾಗಿ ಬೆನ್ನಟ್ಟಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ), ಈ ಬಾರಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌, ನಾಯಕಿ ಜೆಮಿಮಾ ರಾಡ್ರಿಗಸ್‌ (57), ಅನುಭವಿ ಲೌರಾ ವೊಲ್ವಾರ್ಡ್ತ್‌ (44) ಹಾಗೂ ಚಿನೆಲ್ಲೆ ಹೆನ್ರಿ (35) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 203 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು.

ಈ ದೊಡ್ಡ ಗುರಿ ಎದುರಿಸಿದ ಆರ್‌ಸಿಬಿ, ಆರಂಭದಲ್ಲೇ ಕೇವಲ 9 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡರೂ, ನಾಯಕಿ ಸ್ಮೃತಿ ಮಂದಾನ ಹಾಗೂ ಜಾರ್ಜಿಯಾ ವೋಲ್‌ ಅವರ ಅದ್ಭುತ ಜೊತೆಯಾಟದಿಂದ ಪಂದ್ಯದ ನಿಯಂತ್ರಣವನ್ನು ಕೈಗೆತ್ತಿಕೊಂಡಿತು. ಎರಡನೇ ವಿಕೆಟ್‌ಗೆ ಈ ಜೋಡಿ 165 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದ್ದು, ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿತು.

ವೋಲ್‌ 54 ಎಸೆತಗಳಲ್ಲಿ 79 ರನ್‌ ಗಳಿಸಿ ಔಟ್‌ ಆದರೆ, ಮಂದಾನ 41 ಎಸೆತಗಳಲ್ಲಿ 87 ರನ್‌ ಗಳಿಸಿ ನಿರ್ಗಮಿಸಿದರು. ರಿಚಾ ಘೋಷ್‌ ಕೇವಲ 6 ರನ್‌ ಗಳಿಸಿ ಬೇಗನೆ ಪೆವಿಲಿಯನ್‌ ಸೇರಿದ ಕಾರಣ ಪಂದ್ಯವು ಕೊನೆಯ ಓವರ್‌ವರೆಗೂ ತೀವ್ರ ರೋಮಾಂಚನದಿಂದ ಸಾಗಿತು.

ಆದರೆ, ಕೊನೆಯ ಹಂತದಲ್ಲಿ ನದೀನ್ ಡಿ ಕ್ಲರ್ಕ್‌ ಅನುಭವದ ಆಟವಾಡಿ, ರಾಧಾ ಯಾದವ್‌ ಜೊತೆಗೂಡಿ ಜಯದ ರನ್‌ ಗಳಿಸುವ ಮೂಲಕ ಆರ್‌ಸಿಬಿಯನ್ನು ಎರಡನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದರು.

ಇದರೊಂದಿಗೆ, ಸತತ ನಾಲ್ಕು ಆವೃತ್ತಿಗಳಲ್ಲೂ ಫೈನಲ್‌ ತಲುಪಿದ ಸಾಧನೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌, ಮತ್ತೊಮ್ಮೆ ಟ್ರೋಫಿ ಕೈತಪ್ಪಿಸಿಕೊಂಡು ನಿರಾಸೆಗೆ ಒಳಗಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page