Monday, June 17, 2024

ಸತ್ಯ | ನ್ಯಾಯ |ಧರ್ಮ

ಯಾತ್ರೆಗಳ ದೇಶ ಭಾರತ

ಭಾರತಕ್ಕೂ ಯಾತ್ರೆಗಳಿಗೂ ಹತ್ತಿರದ ಸಂಬಂಧವಿದೆ. ಮಾತ್ರವಲ್ಲ, ಭಾರತದ ಯಾತ್ರೆಗಳಿಗೆ ಬಹು ದೊಡ್ಡದೊಂದು ಇತಿಹಾಸವೂ ಇದೆ. ಇಲ್ಲಿ ಬಹುಬಗೆಯ, ಬಹು ಉದ್ದೇಶದ ಯಾತ್ರೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಯಾತ್ರೆ ಎಂದಾಕ್ಷಣ ನಮಗೆ ದಂಡಯಾತ್ರೆಯೂ ನೆನಪಾಗುತ್ತದೆ. ಈ ದೇಶವನ್ನು ರಾಜ ಮಹಾರಾಜರು ಅನೇಕ ಶತಮಾನಗಳ ಕಾಲ ಆಳಿದುದರಿಂದ ಆಗ ದಂಡಯಾತ್ರೆಗಳೂ ನಡೆಯುತ್ತಿದ್ದವು. ಹೆಸರೇ ಹೇಳುವಂತೆ ಅದು ದಂಡು ಸಹಿತವಾದ ಯಾತ್ರೆ. ಅಂದರೆ ಇನ್ನೊಂದು ರಾಜ್ಯದ ಮೇಲಿನ ಆಕ್ರಮಣ. ಉಳಿದವುಗಳಿಗೆ ಹೋಲಿಸಿದರೆ ಇದು ಕೊಂಚ ಹಿಂಸಾತ್ಮಕವಾಗಿ ಭಿನ್ನವಾದ ಯಾತ್ರೆ.

ಭಾರತ ಭೌಗೋಳಿಕವಾಗಿ ಒಂದು ಪುಟ್ಟ ದೇಶವಲ್ಲ; ಉಪಖಂಡದಂತಹ ಬೃಹತ್ ದೇಶ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿಯ ದೇಶ. ಕನ್ಯಾಕುಮಾರಿ ಮತ್ತು ಕಾಶ್ಮೀರ, ಹಾಗೆಯೇ ಗುಜರಾತ್ ಮತ್ತು ಪೂರ್ವಾಂಚಲದ ಭೂಪ್ರದೇಶ, ಜನರ ರೂಪ, ಭಾಷೆ, ಉಡುಗೆ ತೊಡುಗೆ, ಆಹಾರ ಸಂಸ್ಕೃತಿ ಹೋಲಿಸಿ ನೋಡಿದರೆ ಇಲ್ಲಿನ ಭಿನ್ನತೆಗಳು ಅರ್ಥವಾದಾವು. ವೈವಿಧ‍್ಯತೆಗಳ ಜತೆಗೇ ಅಪಾರ ವೈರುಧ್ಯಗಳನ್ನೂ ಹೊಂದಿರುವ ದೇಶ ನಮ್ಮದು.  ಸಾಮಾಜಿಕ ಅನಿಷ್ಠಗಳು ಇದಕ್ಕೆ ಒಂದು ಉತ್ತಮ ಉದಾಹರಣೆ. ಅನೇಕ ಮತಧರ್ಮಗಳು, ಬಹುದೊಡ್ಡ ಸಂಖ್ಯೆಯಲ್ಲಿ ಧಾರ್ಮಿಕ ಶ್ರದ್ಧಾಳುಗಳು ಇರುವ ದೇಶ. ಹಾಗಾಗಿಯೇ ಭಾರತದ ಉದ್ದಗಲಕ್ಕೂ ಸಾವಿರ ಸಾವಿರ ಶ್ರದ್ಧಾಕೇಂದ್ರಗಳು, ತೀರ್ಥಕ್ಷೇತ್ರಗಳನ್ನು ಕಾಣಬಹುದು. ಇನ್ನು ಕಳೆದ ಸುಮಾರು ಒಂದು ಶತಮಾನದಿಂದ ವಸಾಹತುಶಾಹಿಯ ವಿರುದ್ಧದ ಹೋರಾಟದ ಸಹಿತ ಭಾರತ ಸ್ವಾತಂತ್ರ್ಯಗೊಂಡ ನಂತರವೂ ಅಪಾರ ರಾಜಕೀಯ ಸಂಚಲನಗಳಿಗೆ ಸಾಕ್ಷಿಯಾದ ದೇಶ. ಈ ಎಲ್ಲ ಕಾರಣಗಳಿಂದಾಗಿಯೇ ಇಲ್ಲಿ ಕಾಲ ಕಾಲಕ್ಕೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಉದ್ದೇಶದ ನಾನಾ ಯಾತ್ರೆಗಳು, ಪಾದಯಾತ್ರೆಗಳು ನಡೆಯುತ್ತಲೇ ಬಂದಿವೆ.

ಯಾತ್ರೆಗಳ ಉದ್ದೇಶ

ಧಾರ್ಮಿಕ ಯಾತ್ರೆಗಳ ಉದ್ದೇಶ ಬಹಳ ದೊಡ್ಡದೇನೂ ಇರುವುದಿಲ್ಲ. ತೀರ್ಥಕ್ಷೇತ್ರಗಳ ಸಂದರ್ಶನ, ಮತಪ್ರಚಾರ ಹೀಗೆ ಸೀಮಿತ. ಇನ್ನು ನಾವು ಬಹಳ ಹಿಂದಿನಿಂತಲೂ ಕೇಳುತ್ತಿದ್ದ ಕಾಶಿಯಾತ್ರೆಗಳು, ಹಾಗೆಯೇ ಮಹಾರಾಷ್ಟ್ರದ ಅನೇಕ ಕಡೆ ವಾರ್ಷಿಕ ನೆಲೆಯಲ್ಲಿ ನಡೆಯುವ ಧಾರ್ಮಿಕ ಯಾತ್ರೆಗಳೂ ಇಲ್ಲಿ ಸಾಮಾನ್ಯ. ಇಂದಿನಂತೆ ಸಾರಿಗೆ ಸೌಲಭ್ಯಗಳು ಇಲ್ಲದ ಹಿಂದಿನ ದಿನಗಳಲ್ಲಿ ಕಾಶಿಗೆ ನಡೆದೇ ಹೋಗಬೇಕಾಗುತ್ತಿತ್ತು. ಕಾಲ್ನಡಿಗೆಯಲ್ಲಿ ಹೋಗಿ ಬರುವುದು ಸುಲಭವಲ್ಲ. ಹೋದವರು ವಾಪಸ್ ಬರುವ ಸಾಧ್ಯತೆಗಳೂ ಇರಲಿಲ್ಲ. ಹಾಗಾಗಿ ಅವರಿಗೆ ಸಾವಿನ ನಂತರದ ಕ್ರಮಗಳನ್ನು ಮಾಡುವ ರೀತಿಯಲ್ಲಿಯೇ ಮಾಡಿ ಕಳುಹಿಸುವ ಕ್ರಮವೂ ಇತ್ತು. ಸಾಮಾಜಿಕ ಪಾದಯಾತ್ರೆಗಳದ್ದು ಜನರ ಸಮಸ್ಯೆಗಳನ್ನು ಆಲಿಸುವುದು, ಅವರಲ್ಲಿ ಅರಿವು ಮೂಡಿಸುವುದು ಇತ್ಯಾದಿಗಳೇ ಮುಖ್ಯ ಉದ್ದೇಶ. ಇನ್ನು ರಾಜಕೀಯ ಯಾತ್ರೆಗಳಲ್ಲಿ ಸಾಮಾಜಿಕ ಯಾತ್ರೆಗಳ ಗುಣ ಸ್ವಲ್ಪ ಮಟ್ಟಿಗೆ ಇದ್ದರೂ, ಬಹುವಾಗಿ ಅಧಿಕಾರ ಹಿಡಿಯುವ ರಾಜಕಾರಣದ ಒಂದು ಮುಖ್ಯ ಗುರಿ ಇದ್ದೇ ಇರುತ್ತದೆ. ಹೀಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿ ನೋಡಿದರೆ ನಮ್ಮಲ್ಲಿ ಅಸಂಖ್ಯ ಯಾತ್ರೆಗಳು ನಡೆಯುತ್ತ ಬಂದಿರುವುದನ್ನು ನೋಡಬಹುದು.

ಮೂರು ರಾಷ್ಟ್ರಗಳ ಅಹಿಂಸಾ ಯಾತ್ರೆ

ಈಗಾಗಲೇ ಉಲ್ಲೇಖಿಸಿದ ಹಾಗೆ ಧಾರ್ಮಿಕ ಸ್ವರೂಪದ ಸಣ್ಣ ಪುಟ್ಟ ಯಾತ್ರೆಗಳು ನಮ್ಮಲ್ಲಿ ಶತ ಶತಮಾನಗಳಿಂದಲೂ ನಡೆಯುತ್ತಲೇ ಬಂದಿವೆ. ಆದರೆ ಕೆಲ ಸಮಯದ ಹಿಂದೆ ಮೂರು ದೇಶಗಳನ್ನು ಒಳಗೊಂಡ ಒಂದು ಬಹಳ ದೊಡ್ಡ ಪಾದಯಾತ್ರೆ ನಡೆದುದು ನಮ್ಮಲ್ಲಿ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ತೆರಪಂಥ್ ಧರ್ಮಸಂಘದ 11ನೇ ಆಚಾರ್ಯ, ಆಚಾರ್ಯ ಮಹಶ‍್ರಾಮಣ್, 2014 ರಲ್ಲಿ, 50,000 ಕಿ.ಮೀ. ಗಳ ಪಾದಯಾತ್ರೆ ನಡೆಸಿದರು. ಇಂಡಿಯಾ, ನೇಪಾಳ, ಭೂತಾನ್ ಮೂಲಕ ನಡೆದ ಈ ಪಾದಯಾತ್ರೆಯ ಮೂಲ ಉದ್ದೇಶ ಅಹಿಂಸೆಯ ಅನಂತ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವುದು. ಹಾಗೆಯೇ ಸೌಹಾರ್ದ, ಭ್ರಾತೃತ್ವ, ಮಾದಕ ದ್ರವ್ಯ ವ್ಯಸನ ಮುಕ್ತಿ.

ಸಾಮಾಜಿಕ ಉದ್ದೇಶದ ಯಾತ್ರೆಗಳು

1934 ರಲ್ಲಿ ಮೋಹನ್ ದಾಸ್ ಕರಮಚಂದ ಗಾಂಧಿ ಅಸ್ಪೃಶ್ಯತೆಯ ವಿರುದ್ಧ ಒರಿಸ್ಸಾದಿಂದ ಹರಿಜನ ಯಾತ್ರೆ ಆರಂಭಿಸಿ ದೇಶದಾದ್ಯಂತ ಪಾದ ಯಾತ್ರೆ ನಡೆಸಿದರು. ಗಾಂಧೀಜಿಯ ಬದುಕೇ ಒಂದು ಯಾತ್ರೆಯಾಗಿತ್ತು ಎಂದರೆ ಅತಿಶಯದ ಮಾತಾಗಲಾರದೇನೋ. ಅಸ್ಪೃಶ್ಯತೆಯ ವಿರುದ್ಧ, ಮದ್ಯಪಾನದ ವಿರುದ್ಧ, ವಸಾಹತುಶಾಹಿ ಆಡಳಿತದ ವಿರುದ್ಧ ಹೀಗೆ ಸಾಮಾಜಿಕ, ರಾಜಕೀಯ ಜಾಗೃತಿಗಾಗಿ ಅವರು ದೇಶದಾದ್ಯಂತ ದಶಕ ದಶಕಗಳ ಕಾಲ ತಿರುಗಾಡಿದರು.

ಗಾಂಧಿವಾದಿ ವಿನೋಭಾ ಭಾವೆಯವರು 1951 ರಲ್ಲಿ ಭೂದಾನ ಚಳುವಳಿಯ ಅಂಗವಾಗಿ ಪಾದಯಾತ್ರೆ ನಡೆಸಿದರು. ಈ ಯಾತ್ರೆ ತೆಲಂಗಾಣದಿಂದ ಬೋಧ ಗಯಾ ತನಕ ನಡೆಯಿತು.

ಪುತನ್ ವೀಟಿಲ್ ರಾಜಗೋಪಾಲ್ ಅವರು 2007 ರಲ್ಲಿ 25 ಸಾವಿರ ಭೂರಹಿತರನ್ನು ಕರೆದುಕೊಂಡು

ಗ್ವಾಲಿಯರ್ ನಿಂದ ದಿಲ್ಲಿಯ ತನಕ 28 ದಿನಗಳ ಯಾತ್ರೆ ನಡೆಸಿದರು.

ರೇಮನ್ ಮ್ಯಾಗ್ಸೆಸೆ ಪುರಸ್ಕೃತ ರಾಜೇಂದ್ರ ಸಿಂಗ್ ಅವರು ಜೊಹಾಡ್ ಗಳು ಮತ್ತು ಚೆಕ್ ಡ್ಯಾಮ್ ಗಳ ನಿರ್ಮಾಣವನ್ನು ಉತ್ತೇಜಿಸಲು ರಾಜಸ್ಥಾನದ ಹಳ್ಳಿಗಳಲ್ಲಿ 1986 ರಲ್ಲಿ ಸುದೀರ್ಘ ಪಾದಯಾತ್ರೆ ನಡೆಸಿದರು.

1987 ರಲ್ಲಿ ಕನ್ಯಾಕುಮಾರಿಯಿಂದ ಮುಂಬಯಿ ತನಕ ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ ನಡೆದಾಗ ಅದರಲ್ಲಿ ಕರ್ನಾಟಕದ ಪರಿಸರವಾದಿಗಳು ಬಹುದೊಡ್ಡ ಪಾತ್ರ ವಹಿಸಿದರು.

ಗಾಂಧೀಜಿಯ ಪ್ರಸಿದ್ಧ ದಂಡಿ ಯಾತ್ರೆ

ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಮುಖ್ಯ ಸ್ಥಾನ ಪಡೆದಿರುವ ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಯಾತ್ರೆಯನ್ನು ತನ್ನ 78 ಮಂದಿ ನಂಬಿಗಸ್ತ ಸ್ವಯಂಸೇವಕರೊಂದಿಗೆ ಗಾಂಧೀಜಿ, ಮಾರ್ಚ್ 12, 1930 ರಂದು ಸಬರಮತಿ ಆಶ‍್ರಮದಿಂದ ಶುರು ಮಾಡಿದರು. ಉಪ್ಪಿನ ತಯಾರಿಯ ಮೇಲಿನ ನಿರ್ಬಂಧಗಳ ವಿರುದ್ಧ ನಡೆದ ಹೋರಾಟವಿದು. 385 ಕಿಲೋಮೀಟರ್ ದೂರದ ಈ ಯಾತ್ರೆ ಎಪ್ರಿಲ್ 6, 1930 ರ ವರೆಗೆ ನಡೆದು ದಂಡಿಯಲ್ಲಿ, (ಆಗ ಅದನ್ನು ನವಸಾರಿ ಎಂದು ಕರೆಯಲಾಗುತ್ತಿತ್ತು. ಈಗ ಗುಜರಾತ್ ರಾಜ್ಯದಲ್ಲಿದೆ) ಕೊನೆಗೊಂಡಿತು. ಸೀಮಿತ ಸಂಖ್ಯೆಯ ಸ್ವಯಂಸೇವಕರೊಂದಿಗೆ ಶುರು ಮಾಡಿದ್ದರೂ ಯಾತ್ರೆ ಮುಂದುವರಿದಂತೆ ಸಾವಿರಾರು ಮಂದಿ ಅದನ್ನು ಸೇರಿಕೊಂಡರು. ಎಪ್ರಿಲ್ 6, 1930 ರ ಬೆಳಗ್ಗೆ 8.30 ರ ಸಮಯ ದಂಡಿಯಲ್ಲಿ ಗಾಂಧೀಜಿ ಸ್ವತಃ ಉಪ್ಪು ತಯಾರಿಸುವ ಮೂಲಕ ಬ್ರಿಟಿಷರ ಉಪ್ಪಿನ ಕಾನೂನು ಮುರಿದರು. ಇದು ದೊಡ್ಡ ಪ್ರಮಾಣದ ಅಸಹಕಾರ ಆಂದೋಳನಕ್ಕೆ ಮುನ್ನುಡಿ ಬರೆಯಿತು.

ಚಂದ್ರಶೇಖರ್ ರ ಭಾರತಯಾತ್ರೆ

ಜನತಾ ಪಕ್ಷದ ಆಗಿನ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರು ಜನವರಿ 6, 1983 ರಿಂದ ಜೂನ್ 25, 1983 ರ ವರೆಗೆ ಕನ್ಯಾಕುಮಾರಿಯಿಂದ ದೆಹಲಿಯ ರಾಜಘಾಟ್ ತನಕ ನಡೆಸಿದ 4,260 ಕಿಲೋಮೀಟರ್ ಗಳ ಪಾದಯಾತ್ರೆ (ಭಾರತ ಯಾತ್ರೆ) ಚಾರಿತ್ರಿಕವಾದುದು. ಅವರ ಮೂಲ ಉದ್ದೇಶವಿದ್ದುದು ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಎತ್ತಿತೋರಿಸುವುದು, ಸಾಮಾಜಿಕ ಅಸಮಾನತೆ, ಅಂತರಗಳನ್ನು ನಿವಾರಿಸುವುದು. ತನ್ನ ಯಾತ್ರೆಯ ತರುವಾಯ ಅವರು ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರಪ್ರದೇಶ, ಮತ್ತು ಹರ್ಯಾಣಗಳಲ್ಲಿ 15 ಭಾರತ ಯಾತ್ರಾ ಕೇಂದ್ರಗಳನ್ನು ಸ್ಥಾಪಿಸಿದರು.

ಭಾರತ ಯಾತ್ರೆಯು ಚಂದ್ರಶೇಖರ್ ಅವರಿಗೆ ಇನ್ನಿಲ್ಲದ ಜನಪ್ರಿಯತೆಯನ್ನು ತಂದುಕೊಟ್ಟಿತು. ಹಳ್ಳಿಗಾಡಿನ ತೀರಾ ಸಾಮಾನ್ಯರೂ ಯಾತ್ರೆಯ ಉದ್ದಕ್ಕೂ ಅವರಿಗೆ ಬೆಂಬಲ ಮತ್ತು ನೆರವು ನೀಡಿದರು. ಮುಂದೆ ನವೆಂಬರ್ 10, 1990 ರಲ್ಲಿ ಚಂದ್ರಶೇಖರ್ ದೇಶದ ಒಂಬತ್ತನೇ ಪ್ರಧಾನಿಯಾದರು.

ವೈ ಎಸ್ ಆರ್

ಇನ್ನೊಂದು ಪ್ರಸಿದ್ಧ ಪಾದಯಾತ್ರೆ ನಡೆದುದು ಆಂಧ್ರದಲ್ಲಿ. ಆಂಧ್ರದ ಕಾಂಗ್ರೆಸ್ ನಾಯಕ ಡಾ. ವೈ ಎಸ್ ರಾಜಶೇಖರ ರೆಡ್ಡಿಯವರು ಬರ ದ ಸಮಸ್ಯೆಗಳನ್ನು ಮತ್ತು ಆಗಿನ ತೆಲುಗು ದೇಶಂ ಪಕ್ಷವು ರೈತರ ಬಗ್ಗೆ ಕಾಳಜಿ ವಹಿಸದಿರುವುದನ್ನು ಎತ್ತಿ ತೋರಿಸುವ ಉದ್ದೇಶದಿಂದ ಎಪ್ರಿಲ್ 9, 2003ರಂದು ಅವರು ಪಾದಯಾತ್ರೆ ಶುರು ಮಾಡಿದರು. 60 ದಿನಗಳ ಕಾಲ ನಡೆದ ಈ ಯಾತ್ರೆ. 1,500 ಕಿಲೋಮೀಟರ್ ದೂರವನ್ನು ಕ್ರಮಿಸಿತು. ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ದಿಂದ ಹೊರಟು 11 ಜಿಲ್ಲೆಗಳಲ್ಲಿ ಹಾದು ಶ್ರೀಕಾಕುಳಂನ ಇಚ್ಚಾಪುರಂ ನಲ್ಲಿ ಅದು ಕೊನೆಗೊಂಡಿತು. ಈ ಪಾದಯಾತ್ರೆ ಎಷ್ಟು ಜನಪ್ರಿಯವಾಯಿತೆಂದರೆ ಕಾಂ‍ಗ್ರೆಸ್ ಪಕ್ಷಕ್ಕೆ ಹೊಸ ಜೀವ ಬಂತು ಮತ್ತು 2004 ರಲ್ಲಿ ಅದು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿತು. ವೈ ಎಸ್ ಆರ್ ಮುಖ್ಯಮಂತ್ರಿಯಾದರು.

ಪ್ರಜಾಸಂಕಲ್ಪ ಪಾದಯಾತ್ರೆ

ಡಾ ವೈಎಸ್ ಆರ್ ಪುತ್ರ ಜಗನ್ ಮೋಹನ್ ರೆಡ್ಡಿಯವರು ತಂದೆಯ ಹಾದಿಯನ್ನೇ ಅನುಸರಿಸಿದರು. ಪ್ರಜಾಸಂಕಲ್ಪ ಪಾದಯಾತ್ರೆ ಎಂಬ ಹೆಸರಿನಲ್ಲಿ 2017 ರ ನವೆಂಬರ್ 6 ರಂದು ಅವರ ಊರು, ವೈ ಎಸ್ ಆರ್ ಜಿಲ್ಲೆಯ ಇಡುಪಾಲಪಾಯದಿಂದ ಈ ಯಾತ್ರೆ ಆರಂಭವಾಯಿತು. 13 ಜಿಲ್ಲೆಗಳಲ್ಲಿ ಹಾದು 341 ದಿನಗಳಲ್ಲಿ ಅದು 3,648 ಕಿಲೋಮೀಟರ್ ಕ್ರಿಮಿಸಿತು. ಈ ಪಾದಯಾತ್ರೆಯ ಪರಿಣಾಮ ಜಗನ್ ಅವರು ಅಭೂತಪೂರ್ವ ಜಯದೊಂದಿಗೆ ಅಧಿಕಾರ ಹಿಡಿದರು. ಅವರೂ ಮುಖ್ಯಮಂತ್ರಿಯಾದರು.

ಬಳ್ಳಾರಿ ಪಾದಯಾತ್ರೆ

ಕರ್ನಾಟಕದ ಗಣಿ ದಣಿಗಳು ಸಿದ್ದರಾಮಯ್ಯರಿಗೆ ಸವಾಲು ಹಾಕಿದುದನ್ನೇ ನೆಪ ಮಾಡಿಕೊಂಡು, ಅಕ್ರಮ ಗಣಿಗಾರಿಕೆಗೆ ಪ್ರತಿಭಟನೆಯಾಗಿ ಜುಲೈ 2010 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿಗೆ 320 ಕಿಲೋಮಿಟರ್ ಗಳ ಪಾದಯಾತ್ರೆ ನಡೆಸಿತು. ಕರ್ನಾಟಕ ರಾಜಕೀಯದ ಮಟ್ಟಿಗೆ ಅಪಾರ ಸಂಚಲನ ಸೃಷ್ಟಿಸಿದ ಒಂದು ಐತಿಹಾಸಿಕ ಪಾದಯಾತ್ರೆಯಿದು.

ಭಾರತ್ ಜೋಡೋ ಯಾತ್ರೆ

ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೆಪ್ಟಂಬರ್ 7, 2022 ರಂದು ಕನ್ಯಾಕುಮಾರಿಯಿಂದ ತಮ್ಮ ‘ಭಾರತ ಐಕ್ಯತಾ ಯಾತ್ರೆ’ ಆರಂಭಿಸಿದ್ದಾರೆ. ದ್ವೇಷದ ರಾಜಕಾರಣದ ಮೂಲಕ ಭಾರತವನ್ನು ವಿಭಜಿಸಲಾಗಿದೆ. ಅದನ್ನು ಪ್ರೀತಿಯ ಮೂಲಕ ಜೋಡಿಸುವುದು ನಮ್ಮ ಯಾತ್ರೆಯ ಉದ್ದೇಶ ಎಂದು ರಾಹುಲ್ ಹೇಳಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ 12 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದುಹೋಗಲಿರುವ ಇದು, 150 ದಿನಗಳ ಕಾಲ ನಡೆದು 3,500 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ (ಇದೀಗ ಚುನಾವಣಾ ತಂತ್ರ ಪರಿಣತ ಪ್ರಶಾಂತ ಕಿಶೋರ್ ಬಿಹಾರದಲ್ಲಿ 3,500 ಕಿಲೋಮೀಟರ್ ಗಳ ಪಾದಯಾತ್ರೆ ಶುರುಮಾಡಲಿದ್ದಾರೆಂದು ವರದಿಯಾಗಿದೆ).

“ಭಾರತ ಜೋಡೋ ಯಾತ್ರೆಗೆ  ಐತಿಹಾಸಿಕ ಮಹತ್ವವಿದೆ. ಇಲ್ಲಿನ ಯಾತ್ರೆ ಪದಕ್ಕೆ ಯಾವುದೇ ಧಾರ್ಮಿಕ ಅರ್ಥ ನೀಡುವ ಅವಶ್ಯಕತೆ ಇಲ್ಲ. ಅದೊಂದು ಸುದೀರ್ಘ ಕಾಲ್ನಡಿಗೆಯ  ಪಯಣ.  ದೇಶದ ವಿವಿಧ ಭಾಷೆಗಳನ್ನು, ಜನರನ್ನು‌, ಭೂ ಪ್ರದೇಶಗಳನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯುವ ಮತ್ತು ತಿಳಿಸುವ ಕೆಲಸ. ಸದ್ಯದ‌ ಸ್ಥಿತಿಯಲ್ಲಿ  ಇದು ಬಹಳ ಅಗತ್ಯದ ಕೆಲಸ,  ಏಕೆಂದರೆ ಇವತ್ತು ಭಾರತದ ವ್ಯಾಖ್ಯೆಯನ್ನು ಬದಲಿಸುವ ಕೆಲಸಗಳು ಅಧಿಕೃತವಾಗಿಯೇ ನಡೆಯುತ್ತಿವೆ.  ಬದುಕುವ ಮಣ್ಣಿಗೆ, ಉಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ  ವಿಷ ಬೆರೆಸಲಾಗುತ್ತಿದೆ. ಚರಿತ್ರೆಯನ್ನು ತಿದ್ದುವ ಕೆಲಸವನ್ನು ಇತಿಹಾಸಕಾರರ ಬದಲು ರಾಜಕಾರಣಿಗಳು ಮಾಡುತ್ತಿದ್ದಾರೆ. ವಿಶ್ವದ ಶ್ರೇಷ್ಠ ಸಂವಿಧಾನವೆಂಬ ಮನ್ನಣೆಗೆ ಪಾತ್ರವಾದ ಭಾರತೀಯ ಸಂವಿಧಾನವನ್ನು ಗೌಣಗೊಳಿಸಲಾಗುತ್ತಿದೆ. ಇಂದಿರಾಗಾಂಧಿಯನ್ನೇ ಜೈಲಿಗೆ ತಳ್ಳಿದ‌ ನ್ಯಾಯ ವ್ಯವಸ್ಥೆಯ ಮೇಲೆ ಅನುಮಾನಗಳು ಹುಟ್ಟುತ್ತಿವೆ.  ಸಮಾಜವನ್ನೇ ಆಕ್ರಮಣಕಾರಿಯಾಗಿ ಪರಿವರ್ತಿಸಲಾಗಿದೆ. ನಕಲಿಗಳು ಬಣ್ಣದ ವೇಷ ತೊಟ್ಟು ಎಲ್ಲೆಲ್ಲೂ ಕುಣಿದಾಡುತ್ತಾ ಭಾರತದ ಭವಿಷ್ಯವನ್ನೇ ಗಂಡಾಂತರಕ್ಕೆ ತಳ್ಳಿವೆ. ದೇಶ  ಮತ್ತು ಧರ್ಮವನ್ನು ಬಂಡವಾಳ ಮಾಡಿಕೊಂಡವರ ನಿಜವಾದ ಸ್ವರೂಪ ಹೇಗಿರುತ್ತದೆ ಎಂಬುದನ್ನು ನಾವು ಸ್ಪಷ್ಟವಾಗಿ   ಕಾಣುತ್ತಿದ್ದೇವೆ.  ಇಂಥ ಸಂದರ್ಭದಲ್ಲಿ ದೇಶವನ್ನು ಜೋಡಿಸ ಬಯಸುವ ಉದ್ದೇಶವುಳ್ಳ  ರಾಹುಲ್ ಗಾಂಧಿ ನೇತೃತ್ವದ ಮಹಾಪಯಣವನ್ನು ನಾನು ಬೆಂಬಲಿಸುತ್ತೇನೆ” ಎನ್ನುತ್ತಾರೆ ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆ.

ನಿಜ. ಭಾರತ ಗಾಯಗೊಂಡಿದೆ. ಶತಮಾನಗಳಿಂದ ತಕ್ಕಮಟ್ಟಿಗಾದರೂ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ದೇಶವನ್ನು ರಾಜಕೀಯ ಅಧಿಕಾರ ಹಿಡಿಯುವ ಉದ್ದೇಶದಿಂದ ಗಾಯಗೊಳಿಸಲಾಗಿದೆ. ಹಿಡಿದ ಅಧಿಕಾರ ಮುಂದುವರಿಸುವುದಕ್ಕಾಗಿ ಆ ಗಾಯ ಒಣಗದಂತೆ ನೋಡಿಕೊಳ್ಳಲಾಗುತ್ತಿದೆ ಮತ್ತು ದಿನೇ ದಿನೇ ಗಾಯವನ್ನು ದೊಡ್ಡದು ಮಾಡಲಾಗುತ್ತಿದೆ. ಸಮಾಜದಲ್ಲಿ ಮತೀಯ ನೆಲೆಯಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಹರಿದುದು ಸಾಕು, ಈಗ ಹೊಲಿಯವ ಅಗತ್ಯವಿದೆ. ಒಡೆದುದು ಸಾಕು. ಈಗ ಜೋಡಿಸುವುದು ಅಗತ್ಯವಿದೆ. ಗಾಯಗೊಂಡ ದೇಶಕ್ಕೆ ಹೀಲಿಂಗ್ ಟಚ್ ನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಕ್ಷಣಕ್ಷಣಕ್ಕೂ ಪರಿಸ್ಥಿತಿಗಳು ಬದಲಾಗುವ ಭಾರತದಂತಹ ದೇಶದಲ್ಲಿ ಸಾವಿರಾರು ಕಿಲೋಮೀಟರ್ ಗಳ ಕಾಲ್ನಡಿಗೆ ಯಾತ್ರೆ ನಡೆಸುವುದು ಅಷ್ಟು ಸುಲಭವಲ್ಲ. ಪ್ರಸ್ತುತ ಭಾರತ ಯಾತ್ರೆಯ ಮೂಲ ಉದ್ದೇಶ ಏನಿದೆಯೋ ಗೊತ್ತಿಲ್ಲ, ಅದು ಅಂತಿಮವಾಗಿ ಏನನ್ನು ಸಾಧಿಸುತ್ತದೆಯೋ ಕಾಲವೇ ಹೇಳಬೇಕು. ಆದರೆ ಘೋಷಿತ ಉದ್ದೇಶವಂತೂ ಒಳ್ಳೆಯದಿದೆ. ತಮ್ಮ ದಂತಗೋಪುರಗಳಿಂದ ಹೊರಬಂದು ಇಂತಹ ಪಾದಯಾತ್ರೆಗಳನ್ನು ದೇಶದ ಎಲ್ಲ ರಾಜಕೀಯ ನಾಯಕರು ನಡೆಸುವುದು ಅತ್ಯಗತ್ಯ. ಇದರಿಂದ ದೇಶವನ್ನು ತಿಳಿಯಲು ಅವರಿಗೆ ಸಾಧ್ಯವಾಗುತ್ತದೆ. ಜತೆಯಲ್ಲಿ ಜನರಿಗೂ ಅವರನ್ನು ಹತ್ತಿರದಿಂದ ಕಂಡು ಅವರಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳಲೂ ಸಾಧ್ಯವಾಗುತ್ತದೆ. ಆದ್ದರಿಂದಲೇ, ಇಂತಹ ಪಾದಯಾತ್ರೆ ಯಾರು ಮಾಡಿದರೂ ಅದು ಸ್ವಾಗತಾರ್ಹ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶ್ರೀನಿವಾಸ ಕಾರ್ಕಳ 
ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ದಲಿತ ಮಕ್ಕಳಿಗೆ ಶಿಕ್ಷಣ ನೀಡದೆ ವಂಚಿಸುತ್ತಿದೆ ಬಿಜೆಪಿ ಸರ್ಕಾರ – ವಾಸುದೇವ ರೆಡ್ಡಿ, ವಿದ್ಯಾರ್ಥಿ ಮುಖಂಡ

ನಿಮ್ಮ ಪೀಪಲ್ ಟೀವಿ ಯೂಟ್ಯೂಬ್ ಚಾನಲ್ ಅನ್ನು subscribe ಮಾಡಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ

ಯೂಟ್ಯೂಬ್
https://youtu.be/UZaFgJiL7q4

ಫೇಸ್‌ಬುಕ್
https://www.facebook.com/watch?v=1496357877453671

Related Articles

ಇತ್ತೀಚಿನ ಸುದ್ದಿಗಳು