ಪಕ್ಷದಲ್ಲೇ ಅನಾಥರಾದ ಪ್ರತಾಪ್ ಸಿಂಹ? ಟಿ ನರಸೀಪುರದಲ್ಲಿ ಅವರು ನೀಡಿದ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದ ಯದುವೀರ್ ಒಡೆಯರ್

ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ್ದ ಎಚ್ಚರಿಕೆಯನ್ನು ಖಂಡಿಸಿ ನಡೆದ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆನ್ನುವ ಆರೋಪದಡಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಪ್ರಕರಣದಲ್ಲಿ ಬಿಜೆಪಿ ಪಕ್ಷವು ಅವರ ಹೇಳಿಕೆಯಿಂದ ಸ್ಪಷ್ಟ ಅಂತರ ಕಾಯ್ದುಕೊಂಡಿದೆ. ಪ್ರತಾಪ್ ಸಿಂಹ ನೀಡಿರುವುದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಅದು ಪಕ್ಷದ ಅಭಿಪ್ರಾಯವಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು, “ಪ್ರತಾಪ್ ಸಿಂಹ ಭಾಷಣ ಉಲ್ಲೇಖಿಸಿ ಎಫ್‌ಐಆರ್ ಆಗಿರುವ ವಿಚಾರದಲ್ಲಿ ಪಕ್ಷ ಅವರ ಪರವಾಗಿ ನಿಲ್ಲುತ್ತದೆಯೇ?” ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯದುವೀರ್ ಒಡೆಯರ್, ಪ್ರಕರಣವನ್ನು ಅವರು ಕಾನೂನಾತ್ಮಕವಾಗಿಯೇ ಎದುರಿಸಲಿದ್ದಾರೆ ಎಂದಿದ್ದಾರೆ.

“ಕಾನೂನಿನಲ್ಲಿ ಕ್ರಮವಿದ್ದರೆ ಪೊಲೀಸರು ತಗೊಂಡಿರುತ್ತಾರೆ. ಇದು ಬರೀ ಪ್ರಾರಂಭ ಅಷ್ಟೇ. ಕಾನೂನಾತ್ಮಕವಾಗಿ ಎದುರಿಸುವುದಕ್ಕೆ ನಮಗೂ ಕೂಡ ಅವಕಾಶವಿದೆ, ಅವರು ಕಾನೂನು ಹೋರಾಟ ಮಾಡ್ತಾರೆ” ಎಂದು ಹೇಳಿದರು.

ಪಕ್ಷದ ನಿಲುವಿನ ಬಗ್ಗೆ ಪುನರುಚ್ಚರಿಸಿದ ಅವರು, “ವ್ಯಕ್ತಿ ತಮ್ಮ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ, ಪಕ್ಷದ ಅಧಿಕೃತ ಅಭಿಪ್ರಾಯ ಅಲ್ವೇ ಅಲ್ಲ. ಹಾಗಾಗಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ, ಅದನ್ನು ಅವರು ಕಾನೂನಾತ್ಮಕವಾಗಿ ಎದುರಿಸುತ್ತಾರೆ” ಎಂದು ತಿಳಿಸಿದರು.

ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ್ದ ಎಚ್ಚರಿಕೆಯನ್ನು ಖಂಡಿಸಿ ನಡೆದ ಶೋಭಾಯಾತ್ರೆಯಲ್ಲಿ ಪ್ರತಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಸೇರಿದಂತೆ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 132, 191, 194, 196(1)(ಎ)(ಬಿ), 299, 353(1)(ಬಿ)(ಸಿ) ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕ ಸೇವಕರು ಹಾಗೂ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ, ವಿವಿಧ ಗುಂಪುಗಳು ಮತ್ತು ಜಾತಿಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪ, ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿದ ಆರೋಪ, ಪ್ರಚೋದನಕಾರಿ ಭಾಷಣ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು