ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ಅಡಿಯಲ್ಲಿ ಡಿ.ಕೆ.ಶಿವಕುಮಾರ್ ಮೇಲಿದ್ದ ಪ್ರಕರಣ ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆ ಮುಂದುವರೆಸಬೇಕು ಎಂದು ಯತ್ನಾಳ್ ಪಟ್ಟು ಹಿಡಿದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಅಡಿಯಲ್ಲಿ ಅಂದಿನ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಕಳೆದ ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಕರಣವನ್ನು ಹಿಂಪಡೆಯಲು ನಿರ್ಣಯಿಸಿದೆ.
ಈ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ತಾವು ಸರ್ಕಾರದ ಕ್ರಮವನ್ನು ಕೋರ್ಟ್ ನಲ್ಲಿ ಪ್ರಶ್ನಿಸೋದಾಗಿಯೂ ತಿಳಿಸಿದ್ದರು. ಅದರಂತೆ ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಿಬಿಐ ತನಿಖೆಗೆ ಒಪ್ಪಿಗೆ ಹಿಂಪಡೆದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಕ್ರಮವಾಗಿಲ್ಲ ಎಂದು ಸೂಚಿಸಿ ಹೈಕೋರ್ಟ್ ಗೆ ಪ್ರಕರಣದ ತನಿಖೆ ಮುಂದುವರೆಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐಗೆ ನೀಡಲಾಗಿದ್ದಂತ ಡಿ.ಕೆ ಶಿವಕುಮಾರ್ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮವದ ಬಗ್ಗೆ ಸೂಕ್ತ ನಿರ್ದೇಶವನ್ನು ಸರ್ಕಾರಕ್ಕೆ ನೀಡುವಂತೆ ಕೋರಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಗೆ ಬಿಗ್ ಶಾಕ್ ಅನ್ನು ನೀಡಿದ್ದಾರೆ.