Thursday, June 20, 2024

ಸತ್ಯ | ನ್ಯಾಯ |ಧರ್ಮ

ಯತ್ನಾಳನನ್ನು ಖರೀದಿಸಲು ಸಾಧ್ಯವಿಲ್ಲ. ಶಾಸಕಾಂಗ ಸಭೆಯಲ್ಲಿ ನನ್ನ ಅಭಿಪ್ರಾಯ ತಿಳಿಸಲಿದ್ದೇನೆ: ಬಸನಗೌಡ ಪಾಟೀಲ ಯತ್ನಾಳ

ಬೆಂಗಳೂರು: ವಿಧಾನಸಭಾ ಚುನಾವಣೆಯಿಂದ ಖಾಲಿಯಿದ್ದ ಪ್ರತಿಪಕ್ಷ ನಾಯಕನ ಸ್ಥಾನವನ್ನು ತುಂಬುವಲ್ಲಿ ಬಿಜೆಪಿ ಬಹುತೇಕ ಯಶಸ್ವಿಯಾಗಿದ್ದು, ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್‌ ಅಶೋಕ್‌ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ನಿಟ್ಟಿನಲ್ಲಿ ಬೊಮ್ಮಾಯಿ, ಅಶ್ವತ್ಥನಾರಾಯಣ ಇತ್ಯಾದಿ ನಾಯಕರು ಈ ವಿಷಯದಲ್ಲಿ ಒಮ್ಮತಕ್ಕೆ ಬಂದಿದ್ದಾರೆ. ಸುನೀಲ ಕುಮಾರ್‌ ಕೂಡಾ ಒಪ್ಪಿಕೊಂಡಿರುವುದಾಗಿ ಬಿಜೆಪಿ ಮೂಲಗಳು ಪೀಪಲ್‌ ಮೀಡಿಯಾಕ್ಕೆ ತಿಳಿಸಿವೆ.

ಆದರೆ ಸದಾ ಊರ ದಾರಿ ಒಂದಾದರೆ ತನ್ನ ದಾರಿ ಇನ್ನೊಂದು ಎನ್ನುವ ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್‌ ಭಿನ್ನಸ್ವರ ತೆಗೆದಿದ್ದಾರೆ. ಶಾಸಕಾಂಗ ಸಭೆಗೂ ಮೊದಲು ನನ್ನ ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗಿದೆ, ಆದರೆ ನಾನು ಶಾಸಕಾಂಗ ಸಭೆಯಲ್ಲಿ ನನಗೆ ಹೇಳಲಿಕ್ಕಿರುವುದನ್ನು ಹೇಳಿಯೇ ತೀರುತ್ತೇನೆ ಎಂದಿದ್ದಾರೆ.

ಈ ವಿಜಯೇಂದ್ರ ಆಯ್ಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಸಭೆಯಲ್ಲಿ ನನ್ನ ವಿಚಾರ ಮುಂದಿಡುತ್ತೇನೆ ಎಂದ ಯತ್ನಾಳ್ ಸ್ಪಷ್ಟವಾಗಿ ತಿಳಿಸಿದ್ದಾರೆ. ನನ್ನನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ. ನಿನ್ನೆ ಒಬ್ಬ ಬಂದಿದ್ದ ಆದರೆ ಅದೆಲ್ಲ ಆಗದ ಕೆಲಸ ಎಂದು ಅವರು ಹೇಳಿದ್ದಾರೆ.

ಪಕ್ಷ ಕೇವಲ ಒಂದು ಕುಟುಂಬದ ಸ್ವತ್ತಾಗಬಾರದು. ಉತ್ತರಕರ್ನಾಟಕಕ್ಕೂ ಪ್ರಾಮುಖ್ಯತೆ ದೊರಕಬೇಕೆಂದು ಕೇಳಿದ್ದೇನೆ. ನನ್ನ ಮನೆಗೆ ಬಂದ ಉಸ್ತುವಾರಿಗಳಿಗೂ ಇದೇ ಮಾತನ್ನು ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಕೆಲವರಿಗೆ ತಮ್ಮ ಮಕ್ಕಳಿಗೆ ಟಿಕೆಟ್‌ ಬೇಕು ಹೀಗಾಗಿ ಇನ್ನೊಬ್ಬರ ಮುಲಾಜಿಗೆ ಒಳಗಾಗುತ್ತಾರೆ. ನನಗೆ ಅಂತಹ ಯಾವುದೇ ಹಿತಾಸಕ್ತಿಗಳಿಲ್ಲ ಎಂದು ಅವರು ಹೇಳಿದ್ದಾರೆ.

ವಿಧಾನ ಪರಿಷತ್‌ ನಾಯಕನಾಗಿ ಬಹುತೇಕ ಶ್ರೀನಿವಾಸ ಪೂಜಾರಿಯವರ ಹೆಸರು ಫೈನಲ್‌ ಆಗಿದೆ ಎನ್ನಲಾಗುತ್ತಿದೆ

Related Articles

ಇತ್ತೀಚಿನ ಸುದ್ದಿಗಳು