Home ರಾಜಕೀಯ ಸಿದ್ದರಾಮಯ್ಯನವರ ತೇಜೋವಧೆ ಮಾಡಲು ಅವರ ಪಕ್ಷದಲ್ಲೇ ಒಂದು ಗ್ಯಾಂಗ್ ಸಕ್ರಿಯವಾಗಿದೆ: ಸಿ.ಡಿ. ಫ್ಯಾಕ್ಟರಿ ಮಾಫಿಯಾ ವಿರುದ್ಧ...

ಸಿದ್ದರಾಮಯ್ಯನವರ ತೇಜೋವಧೆ ಮಾಡಲು ಅವರ ಪಕ್ಷದಲ್ಲೇ ಒಂದು ಗ್ಯಾಂಗ್ ಸಕ್ರಿಯವಾಗಿದೆ: ಸಿ.ಡಿ. ಫ್ಯಾಕ್ಟರಿ ಮಾಫಿಯಾ ವಿರುದ್ಧ ಯತ್ನಾಳ್ ಕಿಡಿ

0

ಬೆಂಗಳೂರು: ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಹಿಂದುಳಿದ ವರ್ಗದ ನಾಯಕನನ್ನು ರಾಜಕೀಯವಾಗಿ ಹಣಿಯಲು ಮತ್ತು ತೇಜೋವಧೆ ಮಾಡಲು ಅವರದ್ದೇ ಪಕ್ಷದೊಳಗಿನ ಒಂದು ಗ್ಯಾಂಗ್ ಹಾಗೂ ‘ಸಿ.ಡಿ. ಫ್ಯಾಕ್ಟರಿ ಮಾಫಿಯಾ’ ಸಕ್ರಿಯವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಯತ್ನಾಳ್, ಆಡಳಿತದಲ್ಲಿರುವ ಸರ್ಕಾರಕ್ಕೆ ಅಧಿಕಾರದ ಹಪಾಹಪಿ ಮತ್ತು ಕುರ್ಚಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಿತಿಮೀರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ವೈರಿಗಳನ್ನು ಸದೆಬಡಿಯಲು ‘ಸ್ಟಿಂಗ್ ಆಪರೇಷನ್’ ಎಂಬ ಅಸ್ತ್ರವನ್ನು ಬಳಸಿಕೊಳ್ಳುತ್ತಿರುವುದು ಹೇಯ ಹಾಗೂ ಖಂಡನೀಯ ಎಂದಿರುವ ಅವರು, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಈ ‘ಸಿ.ಡಿ. ಫ್ಯಾಕ್ಟರಿ ಮಾಫಿಯಾ’ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಎದುರಾಳಿಗಳನ್ನು ಮಟ್ಟಹಾಕಲು ಚಾರಿತ್ರ್ಯಹನನ ಮಾಡುವ ಇಂತಹ ಅನೈತಿಕ ಪ್ರಯತ್ನಗಳು ಮೌಲ್ಯಯುತ ರಾಜಕಾರಣದ ಅಧಃಪತನದ ಸಂಕೇತವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳು ಹಾಗೂ ಬಡವರು, ರೈತರು, ಶೋಷಿತರು ಮತ್ತು ಶ್ರಮಿಕರ ಪರವಾಗಿ ಕೆಲಸ ಮಾಡಬೇಕಾಗಿದ್ದ ಸರ್ಕಾರ ಹಾಗೂ ನಾಯಕರು, ತಮ್ಮ ರಾಜಕೀಯ ವೈರಿಗಳನ್ನು ಸದೆಬಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. “ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತದೆ ಎಂಬುದನ್ನು ‘ಸಿ.ಡಿ. ಫ್ಯಾಕ್ಟರಿ’ಯ ಸಂಸ್ಥಾಪಕರು ಹಾಗೂ ಅದರ ಸದಸ್ಯರು ಮರೆಯಬಾರದು,” ಎಂದು ಯತ್ನಾಳ್ ಮಾರ್ಮಿಕವಾಗಿ ಎಚ್ಚರಿಕೆ ನೀಡಿದ್ದಾರೆ.

ಹಿಂದುಳಿದ ವರ್ಗಗಳ ನಾಯಕನಿಗೆ ಎಸಗಿದ ಈ ಅವಮಾನಕ್ಕೆ ಅದೇ ಸಮುದಾಯದ ಜನರು ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಬೆದರಿಕೆ, ಅನೈತಿಕ ಹಾಗೂ ಹುರುಳಿಲ್ಲದ ಆರೋಪಗಳು, ತೇಜೋವಧೆ ಮತ್ತು ಚಾರಿತ್ರ್ಯಹನನದ ರಾಜಕಾರಣಕ್ಕೆ ಜನರೇ ‘ಇತಿಶ್ರೀ’ ಹಾಡಲಿದ್ದಾರೆ. ಇಂತಹ ಕುಟಿಲ ಮಾರ್ಗ ಅನುಸರಿಸುವ ರಾಜಕಾರಣಿಗಳಿಗೆ ಹಾಗೂ ಅವರ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರಿಗೆ ಹಿಂದುಳಿದ ಸಮುದಾಯದವರು ಮತ್ತು ಪ್ರಜ್ಞಾವಂತ ಮತದಾರರು ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಯತ್ನಾಳ್ ಗುಡುಗಿದ್ದಾರೆ.

You cannot copy content of this page

Exit mobile version