Thursday, March 27, 2025

ಸತ್ಯ | ನ್ಯಾಯ |ಧರ್ಮ

ಸಧ್ಯದಲ್ಲೇ ಯತ್ನಾಳ್ ಬಿಜೆಪಿಗೆ ವಾಪಸ್ ; “ಉಚ್ಛಾಟನೆ”, “ರದ್ದು” ಯತ್ನಾಳ್ ಗೆ ಇದೇನು ಹೊಸತಲ್ಲ

ಪಕ್ಷದ ನಾಯಕರ ವಿರುದ್ಧವೇ ನಿರಂತರವಾಗಿ ಮಾತನಾಡಿದ ಕಾರಣಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆಯಾಗಿದ್ದಾರೆ. ಆದರೆ ಬಲ್ಲ ಮೂಲಗಳ ಪ್ರಕಾರ ಅವರು ಪಕ್ಷಕ್ಕೆ ಸಧ್ಯದಲ್ಲೇ ವಾಪಸ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಕ್ಕೆ ಬಲವಾದ ಕಾರಣಗಳೂ ಇವೆ.

ಹಾಗೆ ನೋಡಿದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಅಮಾನತು, ಉಚ್ಛಾಟನೆ ಹೊಸತೇನಲ್ಲ. ಈ ಹಿಂದೆ ಹಲವು ಬಾರಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಬಿಜೆಪಿಯಿಂದ ಉಚ್ಛಾಟನೆ ಆದವರೇ.. ನಂತರ ಕೆಲವು ವರ್ಷಗಳ ಬಳಿಕ ಪಕ್ಷವೇ ಅವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿದ ಉದಾಹರಣೆ ಹಲವಷ್ಟು ಇವೆ.

2019 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೂ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆ ಆಗಿದ್ದರು. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ಸದಾನಂದಗೌಡ ವಿರುದ್ಧ ಮಾತನಾಡಿದ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆಗಲೂ 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಶಿಕ್ಷೆಗೆ ಒಳಗಾಗಿದ್ದರು.

ನಂತರ ಜೆಡಿಎಸ್ ಪಕ್ಷ ಸೇರಿ 2013 ರಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ 2014 ರಲ್ಲಿ ಯಡಿಯೂರಪ್ಪ ಪಕ್ಷ ತೊರೆದು ಹೊಸ ಪಕ್ಷ ರಚನೆ ಮಾಡಿದ ಸಂದರ್ಭದಲ್ಲಿ ಬಿಜೆಪಿ ಪಕ್ಷ ಯತ್ನಾಳ್​ ಮೇಲಿನ ಅಮಾನತು ಶಿಕ್ಷೆ ರದ್ದು ಮಾಡಿ ಪಕ್ಷಕ್ಕೆ ಕರೆತರಲಾಗಿತ್ತು.

2016 ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಸಿಗದ ಕಾರಣ ಬಿಜೆಪಿಯಲ್ಲಿ ಇದ್ದಾಗಲೇ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದೇ ಕಾರಣ ಮತ್ತೆ 2016ರಲ್ಲಿ 6 ವರ್ಷಗಳ ಕಾಲ ಎರಡನೇ ಬಾರಿ ಯತ್ನಾಳ್​ ಉಚ್ಚಾಟನೆ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ವಿಧಾನಪರಿಷತ್​ ಗೆ ಆಯ್ಕೆಯಾಗಿ ಹೈಕಮಾಂಡ್​ಗೆ ತಮ್ಮ ಶಕ್ತಿ ತೋರಿಸಿದ್ದರು.

ಯತ್ನಾಳ್ ಶಕ್ತಿಯನ್ನು ಮನಗಂಡು ಬಿಜೆಪಿ ಮತ್ತೊಮ್ಮೆ 2018 ರಲ್ಲಿ ಕೇಂದ್ರದ ವರಿಷ್ಟರು ಹಾಗೂ ಯಡಿಯೂರಪ್ಪ ಸೇರಿಕೊಂಡು ಯತ್ನಾಳ್​ ವಿರುದ್ಧ ಅಮಾನತ್ತು ಶಿಕ್ಷೆ ರದ್ದು ಮಾಡಿ ವಾಪಸ್ ಬಿಜೆಪಿಗೆ ಕರೆ ತಂದರು. ಬಳಿಕ 2018 ರಲ್ಲಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಅಲ್ಲಿಂದ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸಮರ ಸಾರಲು ಶುರು ಮಾಡಿದರು.

ಆದರೆ ಈಗ ಯತ್ನಾಳ್ ಉಚ್ಛಾಟನೆ ಹಿಂದೆ ಬಹಳ ಗಂಭೀರ ಕಾರಣಗಳಿದ್ದು ಪಕ್ಷಕ್ಕೆ ಈ ಹಿಂದಿಗಿಂತ ಹೆಚ್ಚು ಮುಜುಗರ ತರಿಸುವಂತೆ ನಡೆದುಕೊಂಡಿದ್ದಾರೆ. ಈ ಬಾರಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗುವುದಾದರೆ ಪಕ್ಷಕ್ಕೆ ಎರಡೂವರೆ ಸಾವಿರ ಕೋಟಿ ರೂಪಾಯಿ ಕೊಟ್ಟರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬಹುದು ಎಂದು ಬಿಜೆಪಿ ಪಕ್ಷದ ಹೈಕಮಾಂಡ್ ಮೇಲೆಯೇ ದೊಡ್ಡ ಆರೋಪ ಹೊರಿಸಿದ್ದು ಯತ್ನಾಳ್ ಅವರ ಗಂಭೀರ ತಪ್ಪು.

ಆ ನಂತರ ತನ್ನ ಹಳೆಯ ಚಾಳಿಯಂತೆ ಯಡಿಯೂರಪ್ಪ ಕುಟುಂಬ ಎದುರು ಹಾಕಿಕೊಂಡದ್ದು ಮತ್ತೊಂದು ತಪ್ಪು. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಅವರ ಆಯ್ಕೆ ನಂತರ ಬಸನಗೌಡ ಪಾಟೀಲ್ ಯತ್ನಾಳ್ ಆರ್ಭಟ ಇನ್ನಷ್ಟು ಹೆಚ್ಚಾಗಿತ್ತು. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಿ ತಮ್ಮ ಬಣದಿಂದ ಒಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಪಟ್ಟು ಬಿಜೆಪಿಗೆ ಮತ್ತಷ್ಟು ಮುಜುಗರ ಹುಟ್ಟಿಸುವಂತಿತ್ತು.

ಬಸವರಾಜ ಬೊಮ್ಮಾಯಿ ಅವರು ಸಿಎಂ ಆದಾ ಕೂಡ ಯತ್ನಾಳ್ ಅವರಿಗೆ ಸಂಪುಟದಲ್ಲಿ ಯಾವುದೇ ಸ್ಥಾನಮಾನ ಸಿಗುವುದಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಯತ್ನಾಳ್ ತನಗೆ ಅಧಿಕಾರ ಸಿಗದಿರರಲು ಕಾರಣ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಎಂದು ನೇರವಾಗಿ ಅವರ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದ್ದರು.

ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಅಬ್ಬರಿಸಿದ್ದ ಯತ್ನಾಳ್ ಅವರಿಗೆ ಕೇಂದ್ರ ಹೈಕಮಾಂಡ್​ಗ ನೋಟಿಸ್ ನೀಡಿ 72 ಗಂಟೆಗಳ ಒಳಗಾಗಿ ವಿವರಣೆ ಕೇಳಿತ್ತು. ಇದಕ್ಕೂ ಮುನ್ನ ಬಿಜೆಪಿ ಪಕ್ಷ ಎರಡು ಬಾರಿ ನೋಟಿಸ್​ ನೀಡಿದಾಗಲೂ ಆ ನೋಟೀಸ್ ನ್ನು ಯಾವ ಕಿಮ್ಮತ್ತು ನೀಡದಿರುವುದು ಯತ್ನಾಳ್ ಮಾಡಿದ ಮತ್ತೊಂದು ತಪ್ಪು.

ವಿಶೇಷ ಎಂದರೆ ಈ ಬಾರಿ ಯತ್ನಾಳ್ ನೇತೃತ್ವದಲ್ಲಿ ಒಂದು ಬಲವಾದ ಬಣ ಸೃಷ್ಟಿಯಾಗಿದ್ದು ಯತ್ನಾಳ್ ಸಹಿತ ಬೇರೆ ಯಾರನ್ನೇ ಮುಟ್ಟಿದರೂ ಪಕ್ಷಕ್ಕೆ ಮತ್ತೆ ದೊಡ್ಡ ಹೊಡೆತ ಬೀಳುವ ಮುನ್ಸೂಚನೆ ಎದುರಾಗಿದೆ. ಈಗಾಗಲೇ ಯಡಿಯೂರಪ್ಪ ಕುಟುಂಬಕ್ಕೆ ವಿರುದ್ಧ ಇರುವ ಎಲ್ಲರನ್ನೂ ಈ ಬಣದಲ್ಲಿ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ಯತ್ನಾಳ್ ಈ ಹಿಂದಿಗಿಂತ ಹೆಚ್ಚು ಬಲ ಪ್ರದರ್ಶನ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೀಗಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲಿರುವ ಈ ಉಚ್ಛಾಟನೆ ಶಿಕ್ಷೆ ಕೇವಲ ತಾತ್ಕಾಲಿಕ ಎನ್ನಲಾಗಿದೆ. ಯಡಿಯೂರಪ್ಪ ಬಣದ ಸಿಟ್ಟಿಗೆ ಹೈಕಮಾಂಡ್ ಗುರಿಯಾಗಿರಬಾರದು ಎಂಬ ಕಾರಣಕ್ಕೆ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಇದು ಇಲ್ಲಿಗೆ ತಣ್ಣಗಾದರೆ ಪರವಾಗಿಲ್ಲ. ಆದರೆ ಯತ್ನಾಳ್ ಸೇಡು ತೀರಿಸಿಕೊಳ್ಳಲು ಬಣವನ್ನು ಗಟ್ಟಿಗೊಳಿಸಲು ಮುಂದಾದರೆ ಮಾತ್ರ ಬಿಜೆಪಿ ಪಕ್ಷ ಇಬ್ಭಾಗ ಆಗುವ ಎಲ್ಲಾ ಮುನ್ಸೂಚನೆ ಸಿಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page